ಮಂಗಳೂರು: ಮಂಗಳೂರಿನ ನಾಗುರಿಯಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟದ ವೇಳೆ ಉಗ್ರ ಶಾರಿಕ್ ಗಾಯಗೊಂಡು ಸಿಕ್ಕಿಬಿದ್ದಿದ್ದಾನೆ. ಆದರೆ, ಮೈಸೂರಿನಿಂದ ಅವನೊಬ್ಬನೇ ಬಂದಿದ್ದನಾ? ಅಥವಾ ಅವನ ಜತೆಗೆ ಬೇರೆ ಯಾರಾದರೂ ಇದ್ದರಾ ಎನ್ನುವ ಬಗ್ಗೆ ಸಂಶಯ ಮೂಡಿದೆ. ಈ ಸಂಶಯಕ್ಕೆ ಕಾರಣವಾಗಿರುವುದು ಪಡೀಲ್‌ನಲ್ಲಿ ದಾಖಲಾಗಿರುವ ಒಂದು ಸಿಸಿ ಟಿವಿ ಫೂಟೇಜ್.
ಮೈಸೂರಿನಿಂದ ಬೆಳಗ್ಗೆ ಹೊರಟಿದ್ದ ಶಾರುಕ್ ಸರ್ಕಾರಿ ಬಸ್‌ನಲ್ಲಿ ಬಂದು ಸಂಜೆ ೪.೨೦ರ ಹೊತ್ತಿಗೆ ಮಂಗಳೂರಿನ ಹೊರವಲಯದ ಪಡೀಲ್ ತಲುಪಿ ಅಲ್ಲಿ ಬಸ್‌ನಿಂದ ಇಳಿದಿದ್ದಾನೆ. ಅಲ್ಲಿಂದ ಆತ ರಿಕ್ಷಾ ಮಾಡಿಕೊಂಡು ಪಂಪ್‌ವೆಲ್ ಕಡೆಗೆ ಹೊರಟಿದ್ದಾನೆ.
ಶಾರಿಕ್ ಬಸ್‌ನಿಂದ ಇಳಿದು ರಿಕ್ಷಾಕ್ಕಾಗಿ ಹುಡುಕಾಟ ನಡೆಸುತ್ತಿರುವ ದೃಶ್ಯವೊಂದು ಪಡೀಲ್‌ನಲ್ಲಿರುವ ವೈನ್ ಶಾಪ್‌ನ ಸಿಸಿ ಟಿವಿಯಲ್ಲಿ ದಾಖಲಾಗಿದೆ. ಬ್ಯಾಗ್ ಹಾಕಿಕೊಂಡಿದ್ದ ಕೆಂಪು ಅಂಗಿಯ ಶಾರಿಕ್‌ನ ಜತೆಗೆ ಇನ್ನೊಬ್ಬ ವ್ಯಕ್ತಿ ಕೂಡಾ ಅವನ ಜತೆಗೆ ರಿಕ್ಷಾಕ್ಕೆ ಕಾಯುವಂತೆ ಕಾಣುತ್ತಿದೆ. ಆದರೆ, ಆತ ಶಾರಿಕ್‌ನ ಜತೆಗೆ ಬಂದವನೇ ಅಥವಾ ಸಂಬಂಧಪಡದ ವ್ಯಕ್ತೀನಾ ಎನ್ನುವುದು ತನಿಖೆಯಿಂದ ಬಯಲಾಗಬೇಕಾಗಿದೆ. ಒಂದೊಮ್ಮೆ ಅವನು ಶಾರಿಕ್‌ನ ಜತೆಗೆ ಬಂದವನಾಗಿದ್ದರೆ ಆತ ಎಲ್ಲಿಗೆ ಹೋಗಿದ್ದಾನೆ ಎನ್ನುವ ಪ್ರಶ್ನೆ ಗಂಭೀರವಾಗಿ ಕಾಡಲಿದೆ.
ನಗರದ ಕಡೆಗೆ ಹೊರಟಿದ್ದ
ಪಡೀಲ್‌ನಲ್ಲಿ ಬಸ್ ಇಳಿದ ಆರೋಪಿ ಶಾರಿಕ್ ಬಳಿಕ ಪುರುಷೋತ್ತಮ ಅವರ ರಿಕ್ಷಾ ಹತ್ತಿದ್ದಾನೆ. ಆತ ಎಲ್ಲಿಗೆ ಹೋಗಬೇಕು ಎಂದು ಹೇಳಿದ್ದಾನೆ ಎನ್ನುವುದು ಗೊತ್ತಿಲ್ಲ. ಆದರೆ, ಪಂಪ್‌ವೆಲ್‌ನಿಂದ ಒಂದುವರೆ ಕಿಮೀ. ದಾಟಿದ ಕೂಡಲೇ ಸಿಗುವ ನಾಗುರಿ ಬಳಿ ಬರುತ್ತಿದ್ದಂತೆಯೇ ರಿಕ್ಷಾದಲ್ಲೇ ಕುಕ್ಕರ್ ಬಾಂಬ್ ಸ್ಫೋಟಗೊಂಡಿದೆ. ಆದರೆ, ಅದು ಕಡಿಮೆ ತೀವ್ರತೆಯ ಅತ್ಯಾಧುನಿಕ ಸ್ಫೋಟಕವಾಗಿದ್ದರಿಂದ ಹೆಚ್ಚು ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಸಂಬಂಧವಿಲ್ಲ ಎಂದ ಕಮಿಷನರ್
ಈ ನಡುವೆ, ಮದ್ಯದಂಗಡಿ ಬಳಿ ಓಡಾಡಿದ ಇಬ್ಬರಿಗೂ ಈ ಪ್ರಕರಣಕ್ಕೂ ಸಂಬಂಧ ಇಲ್ಲ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸ್ಪಷ್ಟನೆ ನೀಡಿದ್ದಾರೆ. ʻʻಸಿಸಿಟಿವಿಯಲ್ಲಿ ಇರೋ ಆ ಇಬ್ಬರಲ್ಲಿ ಶಾರಿಕ್ ಇಲ್ಲ.
ಮಾಧ್ಯಮದಲ್ಲಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರೋ ಮಾಹಿತಿ ಆಧಾರ ರಹಿತʼʼ ಎಂದಿದ್ದಾರೆ.
ʻʻಇದನ್ನು ಜನರು ಸರ್ಕ್ಯುಲೇಟ್ ಮಾಡಬಾರದು. ಸಿಸಿಟಿವಿಯಲ್ಲಿ ಇರುವವರು ರೈಲ್ವೇ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರು. ಅವರಿಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲʼʼ ಎಂದಿದ್ದಾರೆ ಅವರು.
ಇದನ್ನೂ ಓದಿ | ಮಂಗಳೂರು ಸ್ಫೋಟ: ಶಾರಿಖ್ ಟೆಕ್ನಾಲಜಿ ಬಳಕೆಯಲ್ಲಿ ಪರಿಣತ; ತನಿಖಾಧಿಕಾರಿಗಳನ್ನೂ ಮೀರಿಸುವ ತಂತ್ರಗಾರಿಕೆ ಗೊತ್ತು!