ಮಂಗಳೂರು: ನವೆಂಬರ್ ೧೯ರಂದು ಸಂಜೆ ೪.೧೯ಕ್ಕೆ ಮಂಗಳೂರಿನ ನಾಗುರಿಯಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಾಯಗೊಂಡ ಶಾರಿಕ್‌ಗೆ ಇನ್ನೊಬ್ಬ ಸಾಥ್ ನೀಡಿರುವುದು ನಿಜ ಎನ್ನುವುದು ಬಹುತೇಕ ಸ್ಪಷ್ಟವಾಗಿದೆ.
ಕಳೆದ ೧೦ ದಿನಗಳಿಂದಲೂ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾರಿಕ್‌ನನ್ನು ಕಳೆದ ಮೂರು ದಿನಗಳಿಂದ ವಿಚಾರಣೆಗೆ ಗುರಿಪಡಿಸಲಾಗುತ್ತಿದೆ. ಈ ವೇಳೆ ಆತ ಏನೇನು ಮಾಹಿತಿ ಬಹಿರಂಗಪಡಿಸಿದ್ದಾನೆ ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಈ ನಡುವೆ, ಆತನ ಚಿತ್ರಗಳು, ಆತನ ಉಡುಪು ಮತ್ತಿತರ ಸಂಗತಿಗಳ ಟೆಕ್ನಿಕಲ್ ಅನಾಲಿಸಿಸ್ ಕೂಡಾ ನಡೆಯುತ್ತಿದ್ದು, ಇದರಲ್ಲಿ ಕೆಲವೊಂದು ಮಹತ್ವದ ವಿಚಾರಗಳು ಬಯಲಿಗೆ ಬಂದಿವೆ.
ಅದರಲ್ಲೂ ಮುಖ್ಯವಾಗಿ ಆತ ಐಸಿಸ್ ಸಂಘಟನೆ ಜತೆ ಸಂಬಂಧ ಹೊಂದಿರುವುದಕ್ಕೆ ಸಾಕ್ಷ್ಯವಾಗಿ ಸಿಕ್ಕಿದ, ಐಸಿಸ್ ದಿರಸಿನಲ್ಲಿ ಕುಕ್ಕರ್ ಹಿಡಿದುಕೊಂಡ ಫೋಟೊದ ಹಿನ್ನೆಲೆಯನ್ನು ವಿಮರ್ಶೆಗೆ ಒಳಪಡಿಸುತ್ತಿದ್ದಾರೆ.
ಶಾರಿಕ್ ಕುಕ್ಕರ್ ಹಿಡಿದುಕೊಂಡಿದ್ದ ಫೋಟೊ ಪರಿಶೀಲನೆ ಮಾಡುತ್ತಿರುವ ತಾಂತ್ರಿಕ ಸಿಬ್ಬಂದಿಗೆ ಇದು ಸೆಲ್ಫಿ ಮೋಡ್ ಇಟ್ಕೊಂಡು ತೆಗೆದಿರುವ ಫೋಟೊ ಅಲ್ಲ, ಬ್ಯಾಕ್ ಕ್ಯಾಮೆರಾ ಮೂಲಕವೇ ತೆಗೆದಿರುವುದು ಎಂದು ಗೊತ್ತಾಗಿದೆ.
ಇಲ್ಲಿ ಎರಡು ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ತನಿಖೆ ನಡೆಯುತ್ತಿದೆ. ಬ್ಯಾಕ್ ಕ್ಯಾಮೆರಾದಲ್ಲಿ ಟೈಮರ್ ಇಟ್ಟು ಫೋಟೋ ಕ್ಲಿಕ್ ಮಾಡಿರುವ ಸಾಧ್ಯತೆಯೂ ಇದೆ. ಅಥವಾ ಮತ್ತೊಬ್ಬ ವ್ಯಕ್ತಿ ನಿಂತು ಫೋಟೊ ಕ್ಲಿಕ್ ಮಾಡಿರಬಹುದು ಎಂದು ಹೇಳಲಾಗುತ್ತಿದೆ. ತಜ್ಞರ ಮೂಲಕ ಹಲವಾರು ಸೂಕ್ಷ್ಮ ಮಾಹಿತಿ ಸಂಗ್ರಹಿಸಲಾಗಿದ್ದು, ಫೋಟೊ ಲೈಟಿಂಗ್, ಮತ್ತಿತರ ಅಂಶಗಳ ಬಗ್ಗೆ ಪರಿಶೀಲನೆ ನಡೆಯುತ್ತಿದೆ.
ಕುಕ್ಕರ್ ಮೇಲೆ ಇರುವ ಶೇಡ್ ಬಗ್ಗೆ ಟೆಕ್ನಿಕಲ್ ಅನಾಲಿಸಿಸ್ ನಡೆಯುತ್ತಿದೆ. ಇದರಲ್ಲಿ ಮತ್ತೊಬ್ಬ ವ್ಯಕ್ತಿ ನಿಂತಿರುವ ಶೇಡ್ ಪತ್ತೆಯಾಗಿದೆ. ಹಾಗಿದ್ದರೆ ಶಾರಿಕ್‌ಗೆ ಫೋಟೊ ತೆಗೆದು ಕೊಟ್ಟಿರುವ ವ್ಯಕ್ತಿ ಯಾರು ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ನಡುವೆ, ಆವತ್ತು ನವೆಂಬರ್ ೧೯ರಂದು ಬಾಂಬ್ ಹಿಡಿದುಕೊಂಡು ಮೈಸೂರಿನಿಂದ ಬಂದ ವೇಳೆ ಪಡೀಲ್ ಬಸ್ ನಿಲ್ದಾಣದಲ್ಲಿ ಆತನ ಜತೆ ಇನ್ನೊಬ್ಬ ವ್ಯಕ್ತಿ ಇದ್ದ ಎಂಬ ಮಾತೂ ಕೇಳಿಬಂದಿತ್ತು. ಆದರೆ, ಅದು ಶಾರಿಕ್ ಮತ್ತು ಜತೆಗಾರ ಅಲ್ಲ, ಸಿಸಿ ಟಿವಿ ಫೂಟೇಜ್‌ನಲ್ಲಿ ಇರುವುದು ರೈಲಿಗೆ ಹೋಗುತ್ತಿದ್ದ ಪ್ರಯಾಣಿಕರು ಎಂದು ಕಮಿಷನರ್ ಶಶಿಕುಮಾರ್ ಹೇಳಿದ್ದರು.
ಇದನ್ನೂ ಓದಿ | ಮಂಗಳೂರು ಸ್ಫೋಟ | ಉಗ್ರ ಶಾರಿಕ್ ಆರೋಗ್ಯ ಚೇತರಿಕೆ, ಪೊಲೀಸರಿಂದ ಆಸ್ಪತ್ರೆಯಲ್ಲೇ ವಿಚಾರಣೆ ಶುರು