ಮಂಗಳೂರು: ಮಂಗಳೂರಿನ ನಾಗುರಿಯಲ್ಲಿ ಶನಿವಾರ ಸಂಜೆ ೪.೩೦ರ ಹೊತ್ತಿಗೆ ಆಟೋ ರಿಕ್ಷಾ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಾಯಗೊಂಡವನು ತೀರ್ಥಹಳ್ಳಿಯ ಶಾರಿಕ್ ಎನ್ನುವುದನ್ನು ರಾಜ್ಯ ಎಡಿಜಿಪಿ ಅಲೋಕ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಶಿವಮೊಗ್ಗದಿಂದ ಪೊಲೀಸರು ಕರೆಸಿಕೊಂಡಿದ್ದ ಮಲತಾಯಿ ಶಬಾನಾ, ಸೋದರಿ ಆತಿಯಾ, ತಾಯಿಯ ತಂಗಿ ಯಾಸ್ಮಿನ್ ಅವರು ಈತನೇ ಶಾರಿಕ್ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಆಗಸ್ಟ್ ೧೫ರಂದು ಶಿವಮೊಗ್ಗದಲ್ಲಿ ಪ್ರೇಮ್ ಸಿಂಗ್‌ಗೆ ಚೂರಿ ಇರಿತ ಪ್ರಕರಣದಲ್ಲಿ ಜಬಿಯುಲ್ಲಾನನ್ನು ಬಂಧಿಸಿದ ಬೆನ್ನಿಗೇ ಅವನ ಜತೆ ಸಂಪರ್ಕ ಹೊಂದಿದ್ದ ಶಾರಿಕ್ ಪರಾರಿಯಾಗಿದ್ದ. ಆಗಸ್ಟ್ ೨೦ರಂದು ಶಿವಮೊಗ್ಗದಿಂದ ಪರಾರಿಯಾದ ಆತ ತಮಿಳುನಾಡು, ಕೇರಳದಲ್ಲಿ ಸುತ್ತಾಡಿ ಮೈಸೂರಿಗೆ ತಲುಪಿದ್ದ. ಅಲ್ಲಿಂದ ಮಂಗಳೂರಿಗೆ ಬರುವ ದಾರಿಯಲ್ಲಿ ನಾಗುರಿಯಲ್ಲಿ ಇಳಿದು ಎಲ್ಲೋ ಹೊರಟಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ ಎಂದು ಎಡಿಜಿಪಿ ಸ್ಪಷ್ಟಪಡಿಸಿದ್ದಾರೆ.
ಯಾರು ಈ ಉಗ್ರ ಶಾರಿಕ್?
ಎರಡು ತಿಂಗಳ ಹಿಂದೆ ಶಿವಮೊಗ್ಗದಲ್ಲಿ ನಡೆದ ದಾಳಿ ಮತ್ತು ವಿಚಾರಣೆಯ ವೇಳೆ ಶಿವಮೊಗ್ಗದ ಯಾಸಿನ್, ಮಂಗಳೂರಿನ ಮಾಜ್ ಮತ್ತು ತೀರ್ಥಹಳ್ಳಿಯ ಸೊಪ್ಪಿನಗುಡ್ಡೆಯ ಶಾರಿಕ್ ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿತ್ತು. ಯಾಸಿನ್ ಮತ್ತು ಮಾಜ್‌ನನ್ನು ಪೊಲೀಸರು ಬಂಧಿಸಿದ್ದರಾದರೂ ಶಾರಿಕ್ ತಪ್ಪಿಸಿಕೊಂಡಿದ್ದ.
ಶಾರಿಕ್ ತೀರ್ಥಹಳ್ಳಿಯ ಸೊಪ್ಪುಗುಡ್ಡೆ ನಿವಾಸಿಯಾಗಿದ್ದು, ತೀರ್ಥಹಳ್ಳಿಯಲ್ಲಿದ್ದ ತಂದೆಯ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಕೆಲವು ತಿಂಗಳ ಹಿಂದೆ ತಂದೆ ಮೃತಪಟ್ಟಿದ್ದು, ಬಳಿಕ ಶಾರಿಕ್‌ನೇ ಇದನ್ನು ಮುಂದುವರಿಸಿದ್ದ. ಈತ ತನ್ನ ಚಿಕ್ಕಮ್ಮನ ಮನೆಯಲ್ಲಿ ವಾಸವಾಗಿದ್ದ. ಶಿವಮೊಗ್ಗದ ಪೊಲೀಸರು ಉಗ್ರ ಚಟುವಟಿಕೆ ಮಾಡುತ್ತಿರುವವರ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಮಾಹಿತಿ ದೊರೆಯುತ್ತಿದ್ದಂತೆಯೇ ಶಾರಿಕ್ ತಲೆಮರೆಸಿಕೊಂಡಿದ್ದ. ಅಲ್ಲಿಂದ ಮುಂದೆ ಆತ ಯಾರ ಕೈಗೂ ಸಿಕ್ಕಿರಲಿಲ್ಲ.
ಈ ನಡುವೆ ಶಾರಿಕ್ ಅಕ್ಟೋಬರ್ ೨೩ರಂದು ನಡೆದ ಕಾರ್ ಬಾಂಬ್ ಸ್ಫೋಟದಲ್ಲೂ ಶಾಮೀಲಾಗಿದ್ದ ಎಂಬ ಮಾಹಿತಿ ಲಭಿಸಿದೆ. ಅದರಲ್ಲಿ ಮೃತಪಟ್ಟಿದ್ದ ಜಮೀಶಾ ಮುಬೀನ್ ಎಂಬ ಬೆಂಗಳೂರಿನ ಮೆಕ್ಯಾನಿಕಲ್ ಎಂಜಿನಿಯರ್ ಜತೆ ಶಾರಿಕ್‌ಗೆ ಮೊದಲಿನಿಂದಲೂ ಸಂಬಂಧ ಇತ್ತು.
ಇದನ್ನೂ ಓದಿ | ಮಂಗಳೂರು ಸ್ಫೋಟ | ಕೊಯಮತ್ತೂರು ಕಾರ್ ಬಾಂಬ್ ಸ್ಫೋಟಕ್ಕೂ ಮುನ್ನ ತಮಿಳುನಾಡಿಗೆ ಭೇಟಿ ನೀಡಿದ್ದ ಶಾರಿಕ್!