Site icon Vistara News

Mangalore Jail: ಮಂಗಳೂರು ಜೈಲಲ್ಲಿ 2 ಗುಂಪುಗಳ ನಡುವೆ ಮಾರಾಮಾರಿ; ಇಬ್ಬರಿಗೆ ಗಾಯ

Mangalore Jail

ಮಂಗಳೂರು: ಮಂಗಳೂರು ಜೈಲಿನಲ್ಲಿ (Mangalore Jail) ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದ್ದು, ಇಬ್ಬರು ವಿಚಾರಣಾಧೀನ ಕೈದಿಗಳಿಗೆ ಗಾಯಗಳಾಗಿವೆ. ಹರಿತವಾದ ವಸ್ತುಗಳಿಂದ ಹಲ್ಲೆ ಮಾಡಿದ್ದರಿಂದ ಗಂಭೀರವಾಗಿ ಗಾಯಗೊಂಡ ಇಬ್ಬರು ಆರೋಪಿಗಳನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉಳ್ಳಾಲ ನಿವಾಸಿ ಮುಹಮ್ಮದ್ ಸಮೀರ್ ಅಲಿಯಾಸ್ ಕಡಪರ ಸಮೀರ್(33) ಹಾಗೂ ಬೋಳಿಯಾರ್ ನಿವಾಸಿ ಮುಹಮ್ಮದ್ ಮನ್ಸೂರ್ (30) ಗಾಯಾಳುಗಳು. ಮುಫದ್ ರಿಫಾತ್ (28), ಮುಹಮ್ಮದ್ ರಿಜ್ವಾನ್ (34), ಇಬ್ರಾಹಿಂ ಕಲ್ಲೆಲ್ (30), ಉಮರ್ ಫಾರೂಕ್ ಇರ್ಫಾನ್, ಅಲ್ತಾಫ್, ನೌಫಲ್, ಜೈನುದ್ದೀನ್ ಹಲ್ಲೆ ಅರೋಪಿಗಳು.

ಉಳ್ಳಾಲ ಠಾಣಾ ವ್ಯಾಪ್ತಿಯ ಕೇಸ್‌ನಲ್ಲಿ ವಿಚಾರಣಾಧೀನ ಕೈದಿಗಳಾಗಿರುವ ಇಬ್ಬರ ಮೇಲೆ ಟೋಪಿ ನೌಫಲ್ ಮತ್ತು ಗ್ಯಾಂಗ್‌ನಿಂದ ದಾಳಿ ನಡೆಸಲಾಗಿದೆ. ಟೋಪಿ ನೌಫಲ್ ತಂಡದವರು ರೌಡಿ ಶೀಟರ್‌ಗಳಾಗಿದ್ದು, ಸಂಜೆ 6:30 ರಿಂದ 6:45 ರ ನಡುವೆ ವಿಚಾರಣಾಧೀನ ಕೈದಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಇಬ್ಬರಿಗೆ ತಲೆ, ಭುಜ ಮತ್ತು ದೇಹದ ಇತರ ಭಾಗಗಳಿಗೆ ಗಾಯಗಳಾಗಿವೆ.

ಅಡುಗೆ ಮನೆಯಲ್ಲಿದ್ದ ಕೆಲವು ಹರಿತವಾದ ವಸ್ತುಗಳಿಂದ ಹಲ್ಲೆ ಮಾಡಿದ್ದರಿಂದ ಇಬ್ಬರು ಗಾಯಗೊಂಡಿದ್ದಾರೆ. ಅವರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸದ್ಯ ಅಪಾಯದಿಂದ ಪಾರಾಗಿದ್ದಾರೆ. ಹಲ್ಲೆ ಆರೋಪಿಗಳು ಮತ್ತು ಹಲ್ಲೆಗೊಳಗಾದ ಇಬ್ಬರೂ ಅನೇಕ ಪ್ರಕರಣಗಳಲ್ಲಿ ಬಂಧನವಾದವರು. ಅಲ್ಲದೇ ರೌಡಿ ಶೀಟರ್‌ಗಳಾಗಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಇದನ್ನೂ ಓದಿ | Viral News: ಇದೆಂಥಾ ಹುಚ್ಚಾಟ! ಎನ್‌ಡಿಎ ಕಳಪೆ ಪ್ರದರ್ಶನದಿಂದ ಖಿನ್ನತೆ; ವ್ಯಕ್ತಿ ಆತ್ಮಹತ್ಯೆಗೆ ಶರಣು

ಇಡೀ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಬಗ್ಗೆ ಕಮಿಷನರ್ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಕಾರಾಗೃಹದ ಅಧಿಕಾರಿಗಳ ದೂರಿನ ಮೇರೆಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಬ್ಬಳ್ಳಿಯಲ್ಲಿ ಪುಡಿ ರೌಡಿಗಳ ಗ್ಯಾಂಗ್ ವಾರ್! ನಡುರಸ್ತೆಯಲ್ಲೆ ಹೊಡಿಬಡಿ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಪುಡಿ ರೌಡಿಗಳ ನಡುವೆ ಗ್ಯಾಂಗ್ ವಾರ್ (Gang War) ನಡೆದಿದ್ದು, ಎರಡು ಗ್ಯಾಂಗ್‌ಗಳಿಂದ ದೂರು ಪ್ರತಿದೂರು ದಾಖಲಾಗಿದೆ. ಗನ್ ತೋರಿಸಿ‌ ಕೊಲೆ ಮಾಡಲು ಯತ್ನಿಸಿರುವ ಆರೋಪದಡಿ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ (Assault case) ದಾಖಲಾಗಿದೆ.

ಸುಂದರ್, ಪಿಲೋಮಿನ್, ಚಂದ್ರ ಪೌಲ್ ಎಂಬುವವರ ವಿರುದ್ಧ ಹುಬ್ಬಳ್ಳಿಯ ಸೆಟ್ಲಮೆಂಟ್ ನಿವಾಸಿ ಅಭಿಷೇಕ್ ಜಾಧವ್ ದೂರು ನೀಡಿದ್ದಾರೆ. ಕಾಂಗ್ರೆಸ್ ಮುಖಂಡ ಶಾಮ್ ಜಾಧವ ಹಾಗೂ ಪಾಲಿಕೆ ಸದಸ್ಯೆ ಮಂಜುಳಾ ಜಾಧವ ಅವರ ಪುತ್ರ ಅಭಿಷೇಕ್ ಜಾಧವ್‌ಗೆ ಈ ಆರೋಪಿಗಳು ಹುಬ್ಬಳ್ಳಿಗೆ ನಾವೇ ಡಾನ್‌ಗಳು ಎಂದು‌ ಧಮ್ಕಿ ಹಾಕಿದ್ದರಂತೆ.

ಇತ್ತ ಸುಂದರ ಪೌಲ್ ಆ್ಯಂಡ್ ಟೀಮ್ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿದ್ದಾರೆ. ಅಭಿಷೇಕ್‌ ಜಾಧವ್ ಗ್ಯಾಂಗ್‌ನವರು ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ನಾಲ್ವರ ವಿರುದ್ಧ ದೂರು ನೀಡಿದ್ದಾರೆ. ಹಲವು ಕ್ರಿಮಿನಲ್ ಆರೋಪ ಹೊತ್ತಿರುವ ಈ ಎರಡು ಗ್ಯಾಂಗ್‌ಗಳ ನಡುವೆ ಕಲಹ ಶುರುವಾಗಿದೆ. ಈ ಮಧ್ಯೆ ಪರಸ್ಪರ ಅವಾಜ್ ಹಾಕಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Exit mobile version