Site icon Vistara News

Yathindra: ಮೋದಿ ಗೆದ್ದರೆ ಸ್ತ್ರೀಯರ ತಾಳಿ ಜತೆಗೆ ಮಕ್ಕಳೂ ಇರಲ್ಲ ಎಂದ ಯತೀಂದ್ರ ಸಿದ್ದರಾಮಯ್ಯ!

Yathindra

Mangalsutra And Your Sons Will Not Be Safe If Modi Comes To The Power: Says Yathindra Siddaramaiah

ಮೈಸೂರು: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ರಾಜಕೀಯ ನಾಯಕರ ಹೇಳಿಕೆಗಳು ದಿನೇದಿನೆ ತೀಕ್ಷ್ಣತೆ ಪಡೆದುಕೊಳ್ಳುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ನೀಡಿದ ಮಾಂಗಲ್ಯಸೂತ್ರ ಹೇಳಿಕೆಗೆ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ತಿರುಗೇಟು ನೀಡಿದ್ದಾರೆ. “ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದರೆ, ಹೆಣ್ಣುಮಕ್ಕಳ ಮಾಂಗಲ್ಯಸೂತ್ರದ ಜತೆಗೆ ಮಕ್ಕಳನ್ನೂ ಕಳೆದುಕೊಳ್ಳುತ್ತಾರೆ” ಎಂಬುದಾಗಿ ಹೇಳಿದ್ದಾರೆ.

“ರಾಜ್ಯದಲ್ಲಿ 70 ವರ್ಷಗಳಿಂದ ರಾಜ್ಯದಲ್ಲಿ ಹಲವು ಪಕ್ಷಗಳು ಆಡಳಿತ ನಡೆಸಿವೆ. ಆದರೂ, ಯಾವುದೇ ಹಿಂದುಗಳಿಗೆ ಅನ್ಯಾಯ ಆಗಿಲ್ಲ. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದರೆ, ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾದರೆ, ಮಹಿಳೆಯರು ಮಂಗಳಸೂತ್ರವನ್ನು ಮಾತ್ರವಲ್ಲ, ಗಂಡಂದಿರು ಹಾಗೂ ಮಕ್ಕಳನ್ನು ಕೂಡ ಕಳೆದುಕೊಳ್ಳುವಂತಹ ಪರಿಸ್ಥಿತಿ ಎದುರಾಗುತ್ತದೆ” ಎಂದು ಹೇಳುವ ಮೂಲಕ ಬಿಜೆಪಿಯು ಜನರ ಮಧ್ಯೆ ಸಂಘರ್ಷ ಸೃಷ್ಟಿ ಮಾಡುತ್ತದೆ ಎಂಬ ಸಂದೇಶ ರವಾನಿಸಿದ್ದಾರೆ.

Yathindra Siddaramaiah

“ಬಿಜೆಪಿಯು ಕೋಮುಗಲಭೆಗಳನ್ನು ಹುಟ್ಟುಹಾಕುತ್ತದೆ. ಇದರಿಂದ ಮಹಿಳೆಯರ ಮಕ್ಕಳು ಸಾಯುವಂತೆ ಮಾಡುತ್ತದೆ. ಒಬ್ಬರನ್ನೊಬ್ಬರು ಬಡಿದಾಡಿಕೊಂಡು ಜೀವನ ಸಾಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಸಮಾಜವನ್ನು ಅಧಃಪತನದತ್ತ ಕೊಂಡೊಯ್ಯುತ್ತಾರೆ. ಮಕ್ಕಳನ್ನು ಕೋಮುಗಲಭೆಗೆ ನೂಕಿ, ಅವರನ್ನು ನಿರುದ್ಯೋಗಿಗಳನ್ನಾಗಿ ಮಾಡುತ್ತಾರೆ. ನರೇಂದ್ರ ಮೋದಿ ಅವರು ತುಚ್ಚವಾಗಿ ಮಾತನಾಡುತ್ತಾರೆ. ಪ್ರಜಾಪ್ರಭುತ್ವದಲ್ಲಿ ಯಾರೂ ಈ ರೀತಿ ಮಾತನಾಡುವುದಿಲ್ಲ. ಇಷ್ಟೆಲ್ಲ ನಡೆದರೂ ಚುನಾವಣಾ ಆಯೋಗವು ಏಕೆ ಸುಮ್ಮನಿದೆಯೋ ಗೊತ್ತಿಲ್ಲ” ಎಂಬುದಾಗಿ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ನರೇಂದ್ರ ಮೋದಿ ಹೇಳಿದ್ದೇನು?

ಕಾಂಗ್ರೆಸ್‌ ಹೊರಡಿಸಿರುವ ಚುನಾವಣಾ ಪ್ರಣಾಳಿಕೆಯನ್ನು ಮುಂದಿಟ್ಟುಕೊಂಡು ನರೇಂದ್ರ ಮೋದಿ ಅವರು ವಾಗ್ದಾಳಿ ನಡೆಸಿದ್ದರು. “ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸಂಪತ್ತನ್ನು ಹಂಚಿಕೆ ಮಾಡುವುದಾಗಿ ಹೇಳಿದೆ. ಜನರ ಬಳಿ ಇರುವ ಬಂಗಾರದ ಕುರಿತು ಸಮೀಕ್ಷೆ ನಡೆಸಲಾಗುವುದು ಎಂದು ತಿಳಿಸಿದೆ. ಅಲ್ಲಿಗೆ, ನಿಮ್ಮ ಒಡವೆ, ಮಾಂಗಲ್ಯ ಸರಕ್ಕೆ ಕಾಂಗ್ರೆಸ್‌ ಬಂದರೆ ಗ್ಯಾರಂಟಿ ಇರುವುದಿಲ್ಲ. ನಿಮ್ಮ ಬಂಗಾರ, ಒಡವೆ, ತಾಳಿಯನ್ನು ಕಿತ್ತುಕೊಂಡು, ಕಾಂಗ್ರೆಸ್‌ ಬೇರೆಯವರಿಗೆ ಹಂಚುತ್ತದೆ” ಎಂಬುದಾಗಿ ನರೇಂದ್ರ ಮೋದಿ ಹೇಳಿದ್ದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್‌, ಮೋದಿ ಅವರಿಗೆ ಕಾಂಗ್ರೆಸ್‌ ಪ್ರಣಾಳಿಕೆ ಹಾಗೂ ಸಂವಿಧಾನದ ಪ್ರತಿ ಕಳುಹಿಸುವ ಅಭಿಯಾನ ಆರಂಭಿಸಿದೆ.

ಇದನ್ನೂ ಓದಿ: Fake Facebook: ಯತೀಂದ್ರ ಸಿದ್ದರಾಮಯ್ಯ ಹೆಸರಲ್ಲಿ ನಕಲಿ ಫೇಸ್‌ಬುಕ್‌; ಕಾಂಗ್ರೆಸ್‌ ಮುಖಂಡರ ವಿರುದ್ಧ ಅವಹೇಳನಕಾರಿ ಪೋಸ್ಟ್‌

Exit mobile version