ಬೆಂಗಳೂರು: ಯಾವುದೇ ತನಿಖೆ ಮಾಡದೆ ಮಂಗಳೂರು ಕುಕ್ಕರ್ ಬ್ಲಾಸ್ಟ್ ಆರೋಪಿಯನ್ನು ಹೇಗೆ ಭಯೋತ್ಪಾದಕ ಎಂದು ಪೊಲೀಸರು ಘೋಷಿಸಿದರು ಎನ್ನುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ (DK Shivakumar) ಅವರು ವಿವಾದಕ್ಕೆ ತುತ್ತಾಗಿದ್ದಾರೆ.
ಮಂಗಳೂರಿನಲ್ಲಿ ನಡೆದಿದ್ದು ಮುಂಬೈನಲ್ಲಿ ನಡೆದಂಥ ಟೆರರಿಸ್ಟ್ ದಾಳಿಯೇ? ಕಾಶ್ಮೀರದ ಪುಲ್ವಾಮಾ ದಾಳಿಯಂಥ ಘಟನೆಯಾ ಅದು? ಪೊಲೀಸ್ ಅಧಿಕಾರಿಗಳು ಅಷ್ಟು ಬೇಗ ಟ್ವೀಟ್ ಮಾಡಿ ಮಾಹಿತಿ ನೀಡಿದ್ದರ ಹಿನ್ನೆಲೆ ಏನು ಎಂದು ಡಿ.ಕೆ ಶಿವಕುಮಾರ್ ಪ್ರಶ್ನಿಸಿದ್ದರು.
ವೋಟರ್ ಐಡಿ ಪ್ರಕರಣವನ್ನು ಮುಚ್ಚಿ ಹಾಕಲು ಬಿಜೆಪಿ ಸರ್ಕಾರ ಕುಕ್ಕರ್ ಬಾಂಬ್ ಘಟನೆಯನ್ನು ದೊಡ್ಡದಾಗಿ ಬಿಂಬಿಸಿತು ಎಂಬರ್ಥದಲ್ಲಿ ಶಿವಕುಮಾರ್ ಆರೋಪಿಸಿದ್ದರು. ಶಿವಕುಮಾರ್ ಅವರ ಈ ಹೇಳಿಕೆಗೆ ಬಿಜೆಪಿ ಮುಖಂಡರು ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
ಡಿಕೆಶಿ ಬಾಂಬ್ ಹೇಳಿಕೆಗೆ ಬಿಜೆಪಿ ಆಕ್ರೋಶ
ಡಿ ಕೆ ಶಿವಕುಮಾರ್ ಅವರು ಕುಕ್ಕರ್ ಬಾಂಬ್ ಸ್ಫೋಟದ ಕುರಿತು ನೀಡಿರುವ ಹೇಳಿಕೆಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ದೇಶದಲ್ಲಿ ಭಯೋತ್ಪಾದಕರನ್ನು ಬೆಳೆಸಿದ್ದೇ ಕಾಂಗ್ರೆಸ್. ಮತಗಳಿಗಾಗಿ ಅಲ್ಪಸಂಖ್ಯಾತರನ್ನು ಓಲೈಸಲು ಅದು ಭಯೋತ್ಪಾದನೆ ಬಗ್ಗೆ ಮೃದು ಧೋರಣೆ ತಾಳಿತು. ಈಗ ಕುಕ್ಕರ್ ಬಾಂಬ್ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ಲಘುವಾಗಿ ಮಾತನಾಡಿರುವುದು ನಾಚಿಕೆಗೇಡು ಎಂದು ಬಿಜೆಪಿ ಶಾಸಕ ಪಿ. ರಾಜೀವ್ ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯಿಸಿದ್ದಾರೆ.
ರೈಲು, ಬಸ್ ನಿಲ್ದಾಣ ಇತ್ಯಾದಿ ಸಾರ್ವಜನಿಕ ಸ್ಥಳಗಳಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸುವುದು ಆರೋಪಿಯ ಸಂಚಾಗಿತ್ತು. ಅದೃಷ್ಟವಶಾತ್ ಅದು ಸ್ಫೋಟಿಸಲಿಲ್ಲ. ಆದರೆ ಬಾಂಬ್ ಸಾರ್ವಜನಿಕ ಸ್ಥಳದಲ್ಲಿ ಸ್ಫೋಟ ಆಗದಿರುವುದು ಶಿವಕುಮಾರ್ ಅವರಿಗೆ ಬೇಸರ ಆದಂತಿದೆ. ಬಾಂಬ್ ಸ್ಫೋಟವಾಗಿದ್ದರೆ ಹತ್ತಾರು ಜನ ಸಾಯುತ್ತಿದ್ದರು ಎಂದು ರಾಜೀವ್ ಹೇಳಿದ್ದಾರೆ.
ದೇಶ ನಾಶವಾದರೂ ಚಿಂತೆ ಇಲ್ಲ, ಭಯೋತ್ಪಾದನೆಯಿಂದ ದೇಶದ ಜನ ಬಲಿಯಾದರೂ ಚಿಂತೆ ಇಲ್ಲ. ತಾನು ಮಾತ್ರ ಅಧಿಕಾರದಲ್ಲಿರಬೇಕು ಎಂಬ ನೀಚ ರಾಜಕೀಯವನ್ನು ಕಾಂಗ್ರೆಸ್ ಈ ದೇಶದಲ್ಲಿ ಮಾಡುತ್ತ ಬಂದಿದೆ. ಹಾಗಾಗಿ ದೇಶದ ಜನ ಕಾಂಗ್ರೆಸ್ ಪಕ್ಷಕ್ಕೆ ಈಗಾಗಲೇ ತಕ್ಕ ಪಾಠ ಕಲಿಸಿದ್ದಾರೆ. ಆದರೂ ಅದು ಬುದ್ಧಿ ಕಲಿತಿಲ್ಲ ಎಂದು ರಾಜೀವ್ ಟೀಕಿಸಿದ್ದಾರೆ.
ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ, ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಭಯೋತ್ಪಾದಕರನ್ನು ಬೆಂಬಲಿಸುವ ಮೂಲಕ ಕಾಂಗ್ರೆಸ್ ದೇಶದ್ರೋಹದ ಕೆಲಸ ಮಾಡುತ್ತಿದೆ. ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ ಎಂದು ಆಪಾದಿಸಿದರು. ಕುಕ್ಕರ್ ಬಾಂಬ್ ಆರೋಪಿಯ ಗುರಿ ಸಾರ್ವಜನಿಕರನ್ನು ಸಾಯಿಸುವುದೇ ಆಗಿತ್ತು ಎನ್ನುವುದು ಮೇಲ್ನೋಟಕ್ಕೆ ತಿಳಿದು ಬರುತ್ತದೆ. ಆದರೆ ಕಾಂಗ್ರೆಸ್ ಅಧ್ಯಕ್ಷರು ಆರೋಪಿಯನ್ನು ರಕ್ಷಿಸುವ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಭರತ್ ಶೆಟ್ಟಿ ಟೀಕಿಸಿದರು.
ಪುಲ್ವಾಮಾ ದಾಳಿ ಕಾಂಗ್ರೆಸ್ ಕೂಸು: ಆರಗ
ಕುಕ್ಕರ್ ಬಾಂಬ್ ಪ್ರಕರಣದ ಕುರಿತು ಡಿಜಿ ಅವರು ಟ್ವೀಟ್ ಮಾಡಿದ್ದನ್ನು ನಾನು ಸಮರ್ಥಿಸುತ್ತೇನೆ. ಪುಲ್ವಾಮಾ ದಾಳಿ ಕಾಂಗ್ರೆಸ್‌ನವರ ಕೂಸು. ಡಿ ಕೆ ಶಿವಕುಮಾರ್ ಹೇಳಿಕೆ ನೋಡಿ ನನಗೆ ನೋವಾಯಿತು. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಆಡುವ ಮಾತಲ್ಲ ಇದು. ಇದು ದೇಶದ ಆಂತರಿಕ ಭದ್ರತೆಯ ವಿಚಾರ ಇದು. ಮುಸ್ಲಿಮರನ್ನು ಓಲೈಸಲು ಡಿಕೆಶಿ ಈ ಮಾತು ಹೇಳಿದ್ದಾರೆ. ನಮ್ಮ ಪೊಲೀಸರನ್ನು ಈ ರೀತಿ ದುರ್ಬಲಗೊಳಿಸುವುದು ಸರಿಯಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಇದನ್ನೂ ಓದಿ | Karnataka Election | ಡಿಕೆಶಿ ಬೇಡ ಅಂದ್ರೂ ಅಭ್ಯರ್ಥಿ ಘೋಷಣೆ ಮಾಡಲು ಸಿದ್ದರಾಮಯ್ಯಗೆ ಯಾರು ಅಧಿಕಾರ ಕೊಟ್ರು: ಈಶ್ವರಪ್ಪ