ಬೆಂಗಳೂರು: ನವೆಂಬರ್ ೧೯ರಂದು ಸಂಜೆ ೪.೨೯ಕ್ಕೆ ಮಂಗಳೂರಿನ ಕಂಕನಾಡಿ ಗರೋಡಿ ಬಳಿ ನಡೆದ ಕುಕ್ಕರ್ ಬಾಂಬ್ ಸ್ಫೋಟದ (ಮಂಗಳೂರು ಸ್ಫೋಟ) ಪ್ರಧಾನ ಆರೋಪಿ, ಈ ಘಟನೆಯಲ್ಲಿ ಗಾಯಗೊಂಡು ಸಿಕ್ಕಿಬಿದ್ದಿರುವ ಶಂಕಿತ ಉಗ್ರ ಮೊಹಮ್ಮದ್ ಶಾರಿಕ್‌ನನ್ನು ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ.
ಕಳೆದ ೨೮ ದಿನಗಳಿಂದ ಕಂಕನಾಡಿಯ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾರಿಕ್‌ಗೆ ಸುಟ್ಟ ಗಾಯಗಳಾಗಿವೆ. ಆರಂಭದ ಕೆಲವು ದಿನಗಳ ಕಾಲ ಆತನಿಗೆ ಮಾತನಾಡುವುದಾಗಲೀ, ಯಾರನ್ನಾದರೂ ಪತ್ತೆ ಹಚ್ಚುವುದಾಗಲೀ ಸಾಧ್ಯವಾಗಿರಲಿಲ್ಲ. ಆತನ ಕಣ್ಣಿಗೆ ಸಮಸ್ಯೆಯಾಗಿತ್ತು ಮತ್ತು ಶ್ವಾಸಕೋಶದೊಳಗೂ ಹೊಗೆ ಆವರಿಸಿತ್ತು. ಅದಾಗಿ ಕೆಲವು ದಿನಗಳ ಬಳಿಕ ಆತ ಮಾತನಾಡುವ ಸ್ಥಿತಿಗೆ ಬಂದಾಗ ಪೊಲೀಸರು ವಿಚಾರಣೆ ನಡೆಸಿ ಹಲವು ಮಹತ್ವದ ಅಂಶಗಳನ್ನು ಹೊರಗೆಳೆದಿದ್ದರು.
ಅಷ್ಟಾದರೂ ಆತ ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಂಡಿಲ್ಲ. ಸ್ಥಳ ಮಹಜರು ಮತ್ತಿತರ ಪ್ರಕ್ರಿಯೆಗಳನ್ನು ನಡೆಸಲು ಕೂಡಾ ಸಾಧ್ಯವಾಗಿರಲಿಲ್ಲ. ಇದೀಗ ಆತನನ್ನು ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ.
ಶುಕ್ರವಾರ ರಾತ್ರಿಯೇ ಆತನನ್ನು ಮಂಗಳೂರಿನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಬರ್ನಿಂಗ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆತನನ್ನು ಆಂಬ್ಯುಲೆನ್ಸ್ ಮೂಲಕವೇ ಬೆಂಗಳೂರಿಗೆ ಕರೆ ತರಲಾಗಿದೆ.
ಸ್ಥಳಾಂತರದ ಉಸ್ತುವಾರಿಯನ್ನು ಎನ್‌ಐಎ ಅಧಿಕಾರಿಗಳ ಉಸ್ತುವಾರಿಯಲ್ಲಿ ಪೊಲೀಸರು ವಹಿಸಿಕೊಂಡಿದ್ದಾರೆ. ಬೆಂಗಳೂರಿಗೆ ಕರೆ ತರಲಾಗಿರುವ ಆತನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಕ್ಟೋರಿಯಾ ಆಸ್ಪತ್ರೆಯ ಬರ್ನಿಂಗ್ ಸೆಂಟರ್ ನಲ್ಲಿ ಚಿಕಿತ್ಸೆ ನೀಡಿ, ಹುಷಾರಾದ ಬಳಿಕ ಆತನನ್ನು ವಶಕ್ಕೆ ಪಡೆಯಲಿದ್ದಾರೆ. ಅದರ ನಡುವೆ ವಿಚಾರಣೆಗಳು ಕಾಲ ಕಾಲಕ್ಕೆ ನಡೆಯಲಿದೆ.
ಶಾರಿಕ್ ಉಗ್ರ ಸಂಘಟನೆಗಳ ಜತೆ ನಂಟು ಹೊಂದಿರುವುದು, ಆತನಿಗೆ ಮತೀನ್ ಖಾನ್ ಬೆಂಗಾವಲಾಗಿ ನಿಂತಿರುವುದು, ಈತನ ಜತೆಗಿದ್ದ ತಂಡವೊಂದು ಮಡಿಕೇರಿಯ ಹೋಮ್ ಸ್ಟೇ ಒಂದರಲ್ಲಿ ತಂಗಿದ್ದದ್ದು, ಶಾರಿಕ್ ಕೇರಳದ ಒಂದು ಲಾಡ್ಜ್‌ನಲ್ಲಿ ವಾಸವಾಗಿದ್ದು, ಅಲ್ಲಿಗೆ ಬಾಂಬ್ ತಯಾರಿಯ ಪರಿಕರಗಳನ್ನು ತರಿಸಿಕೊಂಡಿದ್ದು ಈಗಾಗಲೇ ಸುದ್ದಿಯಾಗಿದೆ. ಇದೀಗ ಮುಂದಿನ ವಿಚಾರಣೆ ಇನ್ನಷ್ಟು ಕುತೂಹಲ ಕೆರಳಿಸಿದೆ.
ಇದನ್ನೂ ಓದಿ | ಮಂಗಳೂರು ಸ್ಫೋಟ | ಕೊಚ್ಚಿಯ ಲಾಡ್ಜ್‌ಗಳಿಗೆ ಬಾಂಬ್ ಐಟಂ ತರಿಸಿದ್ದ ಶಾರೀಕ್!