ಬೆಂಗಳೂರು: ನವೆಂಬರ್ ೧೯ರಂದು ಸಂಜೆ ೪.೧೯ಕ್ಕೆ ಮಂಗಳೂರಿನ ನಾಗುರಿ ಬಳಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟದ (ಮಂಗಳೂರು ಸ್ಫೋಟ) ಆರೋಪಿ, ಶಂಕಿತ ಉಗ್ರ ಮೊಹಮ್ಮದ್ ಶಾರಿಕ್‌ನನ್ನು ಈಗ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗೆ ಒಳಪಡಿಸಲಾಗುತ್ತಿದೆ. ಇದರ ನಡುವೆಯೇ ಆತನ ವಿಚಾರಣೆಗೂ ಎನ್‌ಐಎ ಅಧಿಕಾರಿಗಳು ಸಿದ್ಧರಾಗಿದ್ದಾರೆ.
೨೮ ದಿನಗಳ ಕಾಲ ಮಂಗಳೂರಿನ ಫಾ. ಮುಲ್ಲರ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಾರಿಕ್‌ನ ಪೂರ್ಣ ವಿಚಾರಣೆ ಇನ್ನೂ ಸಾಧ್ಯವಾಗಿಲ್ಲ. ಆತ ಇನ್ನೂ ಪೂರ್ಣ ಪ್ರಮಾಣದಲ್ಲಿ ಚೇತರಿಕೆ ಕಾಣದಿರುವುದೇ ಇದಕ್ಕೆ ಕಾರಣ. ಆದರೆ, ಪ್ಲಾಸ್ಟಿಕ್ ಸೇರಿದಂತೆ ಕೆಲವು ಸರ್ಜರಿಗಳ ಅಗತ್ಯವಿದ್ದು, ಅದನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇನ್ನೊಂದೆರಡು ದಿನದಲ್ಲಿ ಮಾಡಲಾಗುತ್ತದೆ. ಈ ನಡುವೆ, ಆತನ ಹಿಂದಿನ ದುಷ್ಕೃತ್ಯಗಳಲ್ಲಿ ಸಹಾಯ ಮಾಡಿದ್ದ ಶಿವಮೊಗ್ಗದ ಮೊಹಮ್ಮದ್ ಯಾಸಿನ್ ಮತ್ತು ಮಂಗಳೂರಿನ್ ಮೊಹಮ್ಮದ್ ಮಾಜ್‌ನನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆಗೆ ಮುಂದಾಗಿದ್ದಾರೆ. ಯಾಕೆಂದರೆ, ಶಾರಿಕ್ ಒಂದಲ್ಲ, ೧೫ ಕುಕ್ಕರ್ ಬಾಂಬ್‌ಗಳನ್ನು ಸಿದ್ಧಪಡಿಸಲು ಮುಂದಾಗಿದ್ದ ಎಂಬ ಮಾಹಿತಿ ಅವರಿಗೆ ಸಿಕ್ಕಿದೆ!
ಮಾಜ್, ಯಾಸಿನ್ ಮತ್ತೆ ವಿಚಾರಣೆ
ಶಿವಮೊಗ್ಗದಲ್ಲಿ ನಡೆದ ಸಾವರ್ಕರ್ ವಿವಾದದ ಸಂದರ್ಭದಲ್ಲಿ ಬೆಳಕಿಗೆ ಬಂದ ಉಗ್ರ ಜಾಲದ ಲಿಂಕ್ ಆಧರಿಸಿ ಶಿವಮೊಗ್ಗ ಪೊಲೀಸರು ಶಿವಮೊಗ್ಗ ಮೊಹಮ್ಮದ್ ಯಾಸಿನ್ ಮತ್ತು ಮಂಗಳೂರಿನ ಮೊಹಮ್ಮದ್ ಮಾಜ್‌ನನ್ನು ಬಂಧಿಸಿದ್ದರು. ಈ ಜಾಲದಲ್ಲಿದ್ದ ಶಾರಿಕ್ ಇದೇ ಸಂದರ್ಭದಲ್ಲಿ ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದ. ಮಾಜ್ ಈ ಹಿಂದೆ ಮಂಗಳೂರಿನ ಗೋಡೆ ಬರಹ ಪ್ರಕರಣದಲ್ಲೂ ಶಾರಿಕ್‌ಗೆ ಸಹಕರಿಸಿದ್ದ.
ಹೀಗಾಗಿ ಕುಕ್ಕರ್ ಬಾಂಬ್ ಸ್ಫೋಟದ ಹಿಂದಿನ ಕೆಲವೊಂದು ರಹಸ್ಯಗಳು ಮಾಜ್ ಮತ್ತು ಯಾಸಿನ್‌ಗೂ ಗೊತ್ತಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಹೀಗಾಗಿ ಜೈಲಿನಲ್ಲಿರುವ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಎನ್‌ಐಎ ಮುಂದಾಗಿದೆ. ಹೀಗಾಗಿ ಮಂಗಳವಾರ ಎನ್ ಐ ಎ ವಿಶೇಷ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಲು ಎನ್‌ಐಎ ಮುಂದಾಗಿದೆ.
ಶಾರಿಕ್ ಕಳೆದ ಒಂದು ತಿಂಗಳಿನಿಂದ ಪೊಲೀಸರ ವಶದಲ್ಲೇ ಇದ್ದರೂ ಆತನಿಂದ ಹೆಚ್ಚಿನ ಮಾಹಿತಿ ಪಡೆಯುವುದು ಸಾಧ್ಯವಾಗಿಲ್ಲ. ಈ ನಡುವೆ, ಎಫ್‌ಎಸ್‌ಎಲ್ ಅಧಿಕಾರಿಗಳು ಮೈಸೂರಿನಲ್ಲಿ ಶಾರಿಕ್ ವಾಸಿಸುತ್ತಿದ್ದ ಕೋಣೆಯನ್ನು ಪರಿಶೀಲಿಸಿದಾಗ ಭಾರಿ ಮಹತ್ವದ ಕೆಲವು ಸಂಗತಿಗಳು ಬೆಳಕಿಗೆ ಬಂದಿವೆ. ಅಂದರೆ, ಶಾರಿಕ್ ಕೇವಲ ಒಂದಲ್ಲ ೧೫ ಕುಕ್ಕರ್ ಬಾಂಬ್ ತಯಾರಿಸಲು ಮುಂದಾಗಿದ್ದ. ಅಷ್ಟೊಂದು ಪ್ರಮಾಣದ ಸ್ಫೋಟಕ ಅಲ್ಲಿತ್ತು ಎಂದು ತಿಳಿದುಬಂದಿದೆ.
ಹಾಗಿದ್ದರೆ ಮುಂದಿನ ಟಾರ್ಗೆಟ್ ಏನಾಗಿತ್ತು ಎಂಬುದೂ ಸೇರಿದಂತೆ ಕೆಲವೊಂದು ಮಹತ್ವದ ಮಾಹಿತಿಗಳು ಯಾಸಿನ್ ಮತ್ತು ಮಾಜ್ ರಿಂದ ಸಿಗಬಹುದು ಎಂಬ ನಿರೀಕ್ಷೆ ಎನ್‌ಐಎಗಿದೆ. ಅದಕ್ಕಿಂತಲೂ ಮುಖ್ಯವಾಗಿ ಈ ಎಲ್ಲದರ ಹಿಂದಿರುವ ಇನ್ನೊಬ್ಬ ಕ್ರಿಮಿನಲ್ ಮತೀನ್ ಖಾನ್‌ನ ಮಾಹಿತಿ ಪಡೆಯುವುದು ಕೂಡಾ ಎನ್‌ಐಎಗೆ ಅತ್ಯಂತ ಮಹತ್ವದ್ದಾಗಿದೆ.
ಇದನ್ನೂ ಓದಿ | ಮಂಗಳೂರು ಸ್ಫೋಟ | ಕುಕ್ಕರ್ ಬಾಂಬ್ ಸ್ಫೋಟ ಆರೋಪಿ ಶಾರಿಕ್ ಬೆಂಗಳೂರಿಗೆ ಶಿಫ್ಟ್: ಯಾಕೆ ಈ ದಿಢೀರ್ ಸ್ಥಳಾಂತರ?