ಮೈಸೂರು/ಬೆಂಗಳೂರು: ಮೈಸೂರಿನ ಮೊಬೈಲ್ ಟ್ರೈನಿಂಗ್ ಸೆಂಟರ್‌ವೊಂದರಲ್ಲಿ (mobile training center) ತರಬೇತಿ ಪಡೆಯುತ್ತಿದ್ದ ಮಂಗಳೂರು ಸ್ಫೋಟ (Mangalore Blast) ಪ್ರಕರಣದ ಶಂಕಿತ ಉಗ್ರ ಶಾರಿಕ್ (Shariq), ಈ ವೇಳೆ ಯಾವಾಗಲೂ ಭಯದಿಂದಲೇ ಬಾಗಿಲ ಕಡೆ ನೋಡುತ್ತಿದ್ದ. ಆತ ಎಂದೂ ಸಹ ಮುಸ್ಲಿಂ ಐಡೆಂಟಿಟಿಯನ್ನು ಹೊರಗೆ ಹಾಕಿರಲಿಲ್ಲ. ತನ್ನನ್ನು ಹಿಂದು ಎಂದೇ ಬಿಂಬಿಸಿಕೊಂಡಿದ್ದ. ಅದೇ ರೀತಿಯಾಗಿ ತರಬೇತಿ ಪಡೆಯುವ ವೇಳೆ ನಡೆದುಕೊಂಡಿದ್ದ ಎಂಬ ಮಾಹಿತಿಯನ್ನು ಟ್ರೈನಿಂಗ್ ಸೆಂಟರ್ ಮಾಲೀಕ ಪ್ರಸಾದ್ ವಿಸ್ತಾರ ನ್ಯೂಸ್‌ಗೆ ತಿಳಿಸಿದ್ದಾರೆ.
ಈ ಬಗ್ಗೆ ವಿಸ್ತಾರ ನ್ಯೂಸ್‌ಗೆ ಮಾಹಿತಿ ನೀಡಿದ ಪ್ರಮೋದ್, ಆತ ಮುಸ್ಲಿಂ ಯುವಕ ಆಗಿರಬಹುದು ಎಂಬ ಸಣ್ಣ ಅನುಮಾನವೂ ನಮಗೆ ಮೂಡಿರಲಿಲ್ಲ. ತನ್ನನ್ನು ಹಿಂದು ಯುವಕ ಎಂದೇ ಬಿಂಬಿಸಿಕೊಂಡಿದ್ದ. ಯಾವತ್ತೂ ಸಹ ಅವನು ಅನುಮಾನ ಬಾರದ ರೀತಿ ನಡೆದುಕೊಂಡೇ ಇಲ್ಲ. ಸೇರುವಾಗಲೂ ಪ್ರೇಮ್ ರಾಜ್ ಹೆಸರಿನ ದಾಖಲೆಯನ್ನು ನೀಡಿದ್ದ ಎಂದು ಪ್ರಸಾದ್ ತಿಳಿಸಿದರು.
ಮೈಸೂರಿನ ಕೆ.ಆರ್. ಮೊಹಲ್ಲಾದಲ್ಲಿರುವ ಶ್ರೀ ಮಲೈಮಹದೇಶ್ವರ ಮೊಬೈಲ್ ರಿಪೇರಿ ಟ್ರೈನಿಂಗ್ ಸೆಂಟರ್‌ಗೆ (ಎಸ್‌ಎಂಎಂ) ಸೇರಿಕೊಂಡಿದ್ದ ಶಾರಿಕ್, ತಾನು ಪ್ರೇಮ್ ರಾಜ್ (Prem Raj) ಎಂದು ಹೇಳಿಕೊಂಡಿದ್ದ. ಅಲ್ಲದೆ, ಈ ಸಂಬಂಧ ದಾಖಲೆಗಳನ್ನೂ ಸಲ್ಲಿಸಿ ಪ್ರೇಮ್‌ರಾಜ್ ಎಂದೇ ಸಹಿ ಮಾಡಿದ್ದ ಎಂಬ ಸಂಗತಿಯನ್ನು ತರಬೇತಿ ಕೇಂದ್ರದ ಮಾಲೀಕರು ತಿಳಿಸಿದರು.
ಅಂದರೆ, ಶಾರಿಕ್ ತಾನು ತಪ್ಪು ಮಾಡುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು (Police) ಬಂದರೆ ಎಂಬ ಭಯ ಮೊದಲೇ ಇತ್ತು. ಈ ಹಿನ್ನೆಲೆಯಲ್ಲಿ ಯಾರೇ ಮೊಬೈಲ್ ಟ್ರೈನಿಂಗ್ ಸೆಂಟರ್ ಕಚೇರಿಯನ್ನು ಪ್ರವೇಶ ಮಾಡಿದರೂ ಭಯದಲ್ಲಿಯೇ ನೋಡುತ್ತಿದ್ದ. ಆದರೆ, ಆತನ ನೋಟದಲ್ಲಿ ಈ ರೀತಿಯ ಭಯ ಇತ್ತು ಎಂಬುದು ಮಾತ್ರ ತರಬೇತಿ ಕೇಂದ್ರದ ಮಾಲೀಕರಿಗೆ ತಿಳಿದಿರಲಿಲ್ಲ.
ಇದನ್ನೂ ಓದಿ | ಮಂಗಳೂರು ಸ್ಫೋಟ | ಶಾರೀಕ್‌ನ ಆ ಒಂದು ಎಡವಟ್ಟು ತಪ್ಪಿಸಿತು ಭಾರಿ ಸ್ಫೋಟದ ಅನಾಹುತ; ಐಇಡಿ ಬ್ಲಾಸ್ಟ್ ಹಿಂದಿನ ಸತ್ಯವಿದು!
ಕೆಲಸದ ಆಫರ್ ನೀಡಿದ್ದ ಮಾಲೀಕ
ಪ್ರೇಮ್ ರಾಜ್ ಹೆಸರಿನಲ್ಲಿ ದಾಖಲಾಗಿದ್ದ ಶಾರಿಕ್, ತಾನು ಕೆಲಸ ಹುಡುಕುತ್ತಿದ್ದೇನೆ. ಕಾಲ್ ಸೆಂಟರ್‌ನಲ್ಲಿ ಅಪ್ಲೇ ಮಾಡಿದ್ದೇನೆ. ಕೆಲಸ ಸಿಗುವವರೆಗೆ ಮೊಬೈಲ್ ರಿಪೇರಿ ತರಬೇತಿಯನ್ನು ಪಡೆದುಕೊಳ್ಳುತ್ತೇನೆ ಎಂದು ಹೇಳಿಕೊಂಡು ಸೇರಿದ್ದ. ಆದರೆ, ಆತ ತರಬೇತಿಗೆ ಸರಿಯಾಗಿ ಬರುತ್ತಿದ್ದುದೇ ಅಪರೂಪ ಎಂಬಂತೆ ಇತ್ತು. ಆತ ಸರಿಯಾಗಿ ಕ್ಲಾಸ್‌ಗೆ ಬಂದಿದ್ದು 22 ದಿನ ಮಾತ್ರ. ಸಮರ್ಪಕವಾಗಿ ತರಬೇತಿ ಮುಗಿಸಿ ಕಲಿತುಕೊಂಡರೆ ನಾನೇ ಕೆಲಸ ಕೊಡಿಸುತ್ತೇನೆ ಎಂದು ಆತನಿಗೆ ಹೇಳಿದ್ದೆ. ಆದರೆ, ಅವನು ಮಾಡಿದ ಕೃತ್ಯದ ಬಗ್ಗೆ ಪೊಲೀಸರಿಂದ ತಿಳಿಯಿತು ಎಂದು ಹೇಳಿದರು.
ಭಯದಿಂದಲೇ ಬಾಗಿಲು ನೋಡುತ್ತಿದ್ದ
ತರಬೇತಿ ವೇಳೆ ಕಚೇರಿಯಲ್ಲಿ ಶಾರಿಕ್ ಇರುತ್ತಿದ್ದರೂ ಆತನ ಮುಖದಲ್ಲಿ ಭಯ ಕಾಣುತ್ತಿತ್ತು. ಆತ ಭಯದಲ್ಲಿಯೇ ಬಾಗಿಲು ಕಡೆಗೆ ನೋಡುತ್ತಿದ್ದ. ಅಲ್ಲದೆ, ಆತನ ನಡೆ-ನುಡಿ ನೋಡಿ ಹಿಂದು ಎಂದೇ ಅಂದುಕೊಂಡಿದ್ದೆ. ಆತ ಮುಸ್ಲಿಂ ಎಂಬ ಬಗ್ಗೆ ಸ್ವಲ್ಪವೂ ಅನುಮಾನ ಮೂಡಿಲ್ಲ ಎಂದು ಮಾಲೀಕ ಪ್ರಸಾದ್ ಹೇಳಿದರು.
ಅತ್ತ ತರಬೇತಿ, ಇತ್ತ ಸ್ಫೋಟಕ ತಯಾರಿ
ಮೈಸೂರಿನಲ್ಲಿ ಬಾಡಿಗೆ ಮನೆಯಲ್ಲಿದ್ದ ಶಾರಿಕ್ ಒಂದು ಕಡೆ ಮೊಬೈಲ್ ರಿಪೇರಿ ಟ್ರೈನಿಂಗ್‌ಗೆ ಹೋಗುತ್ತಲೇ ಮನೆಯಲ್ಲಿ ಸದ್ದಿಲ್ಲದೆ, ಸ್ಫೋಟಕಕ್ಕೆ (Explosive) ಬೇಕಿರುವ ಸಾಮಗ್ರಿಗಳನ್ನು ತರಿಸಿಕೊಳ್ಳುತ್ತಿದ್ದ. ಸ್ಫೋಟ ಮಾಡಲು ಬೇಕಾದ ಎಲ್ಲ ತಯಾರಿಯನ್ನೂ ಮಾಡಿಕೊಂಡಿದ್ದ. ಮೊಬೈಲ್ ಬಿಡಿಭಾಗಗಳನ್ನು ತರಿಸುವ ನೆಪದಲ್ಲಿ ಸ್ಫೋಟಕದ ವಸ್ತುಗಳನ್ನೂ ತರಿಸಿಕೊಂಡಿದ್ದ ಎನ್ನಲಾಗಿದೆ.
ಅಮೇಜಾನ್, ಫ್ಲಿಪ್‌ಕಾರ್ಟ್ (Amazon, Flip-kart) ಮೂಲಕ ಕೆಲ ಕಚ್ಚಾ ವಸ್ತುಗಳನ್ನು ಆರ್ಡರ್ ಮಾಡಿದ್ದ. ತಾನೇ ಹೋಗಿ ಹೊರಗಡೆಯಿಂದ ತಂದರೆ ಅನುಮಾನ ಬರಲಿದೆ ಎಂದು ಆನ್‌ಲೈನ್ ಮೂಲಕವೇ ಸ್ಫೋಟಕದ ಕೆಲವು ಕಚ್ಚಾ ವಸ್ತುಗಳನ್ನು ತರಿಸಿಕೊಳ್ಳುತ್ತಿದ್ದ. ಒಂದು ವೇಳೆ ಸ್ಫೋಟಕ ವಸ್ತುಗಳನ್ನು ತರುವಾಗ, ಇಲ್ಲವೇ ಅಂಗಡಿಗಳಲ್ಲಿ ವಿಚಾರಿಸುವಾಗ ಅವರಿಂದ ಪೊಲೀಸರಿಗೆ ಮಾಹಿತಿ ಹೋಗುವ ಸಾಧ್ಯತೆ ಇರಲಿದೆ. ಇಲ್ಲವೇ ಸ್ಫೋಟದ ಬಳಿಕ ತನ್ನ ಚಹರೆ ಲಭ್ಯವಾಗಬಹುದು ಎಂಬ ಭಯಕ್ಕೂ ಹೀಗೆ ಮಾಡಿದ್ದಾನೆಂದು ಶಂಕಿಸಲಾಗಿದೆ.
ಇದನ್ನೂ ಓದಿ | ಮಂಗಳೂರು ಸ್ಫೋಟ | ಶಾರಿಕ್‌ನ ಜತೆ ಬಂದಿದ್ನಾ ಇನ್ನೊಬ್ಬ? ಪಡೀಲ್ ಸಿಸಿ ಟಿವಿಯಲ್ಲಿ ದಾಖಲಾದ ಆ ಇಬ್ಬರು ಯಾರು?