ನವದೆಹಲಿ: ʻನೀವು ನಮ್ಮ ಪಕ್ಷಕ್ಕೆ ಬನ್ನಿ. ನಿಮ್ಮ ಮೇಲಿರುವ ಎಲ್ಲ ಸಿಬಿಐ ಮತ್ತು ಇ.ಡಿ ಕೇಸುಗಳನ್ನೆಲ್ಲ ಕ್ಲೋಸ್ ಮಾಡಿಸಲಾಗುವುದುʼʼ- ಹೀಗೆ ಬಿಜೆಪಿಯಿಂದ ತನಗೊಂದು ಸಂದೇಶ ಬಂದಿದೆ ಎಂದು ಹೇಳಿಕೊಂಡಿದ್ದಾರೆ ದಿಲ್ಲಿಯ ಉಪಮುಖ್ಯಮಂತ್ರಿ, ಆಮ್ ಆದ್ಮಿ ಪಾರ್ಟಿಯ ನಾಯಕ ಮನೀಷ್ ಸಿಸೋಡಿಯಾ.
ದಿಲ್ಲಿಯ ಅಬಕಾರಿ ನೀತಿಗೆ ಸಂಬಂಧಿಸಿ ಸಿಬಿಐ ತನಿಖೆಗೆ ಒಳಪಟ್ಟಿರುವ ಮನೀಷ್ ಸಿಸೋಡಿಯಾ ಅವರು ತಮ್ಮ ಟ್ವಿಟರ್‌ನಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ. ಒಂದು ವೇಳೆ ನೀವು ಬಿಜೆಪಿ ಸೇರಿದರೆ ಎಲ್ಲ ಕೇಸುಗಳನ್ನು ಮುಕ್ತಾಯಗೊಳಿಸಲಾಗುತ್ತದೆ ಎಂದು ನನಗೆ ಸಂದೇಶ ಬಂದಿದೆ. ಆದರೆ, ನನ್ನ ತಲೆ ಕಡಿದರೂ ಸರಿ ಬಿಜೆಪಿ ಸೇರುವುದಿಲ್ಲ ಎಂದು ಸಿಸೋಡಿಯಾ ಹೇಳಿದ್ದಾರೆ.
ಬಿಜೆಪಿ ಆಮಿಷಕ್ಕೆ ಸಿಸೋಡಿಯಾ ಉತ್ತರವೇನು?
ʻʻನಾನು ಮಹಾರಾಣಾ ಪ್ರತಾಪ್ ಅವರ ವಂಶಜ, ಒಬ್ಬ ರಜಪೂತ. ನಾನು ಯಾವತ್ತೂ ಭ್ರಷ್ಟರು ಮತ್ತು ಸಂಚುಕೋರರ ಮುಂದೆ ತಲೆ ಬಾಗುವುದಿಲ್ಲ. ಅಂಥ ಪರಿಸ್ಥಿತಿ ಬಂದರೆ ನನ್ನ ತಲೆಯನ್ನೇ ನಾನು ಕತ್ತರಿಸಿಕೊಳ್ಳುತ್ತೇನೆ. ನನ್ನ ಮೇಲಿರುವ ಎಲ್ಲ ಕೇಸುಗಳು ಸುಳ್ಳು. ಹಾಗಾಗಿ ಬಿಜೆಪಿಯವರು ಏನು ಬೇಕಾದರೂ ಮಾಡಿಕೊಳ್ಳಲಿʼʼ ಎಂದು ಮನೀಷ್ ಸಿಸೋಡಿಯಾ ಹೇಳಿದ್ದಾರೆ.
ಗುಜರಾತ್‌ಗೆ ಪಯಣಿಸಿದ ಸಿಸೋಡಿಯಾ
ಸಿಬಿಐ ದಾಳಿಯ ಘಟನೆಗಳ ನಡುವೆಯೇ ಸಿಸೋಡಿಯಾ ಅವರು ಸೋಮವಾರ ಗುಜರಾತ್‌ಗೆ ಪ್ರಯಾಣಿಸಿದ್ದಾರೆ. ಅಲ್ಲಿ ಅವರು ಚುನಾವಣಾ ಸಿದ್ಧತೆಯಲ್ಲಿ ಆಪ್ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರನ್ನು ಸೇರಿಕೊಳ್ಳಲಿದ್ದಾರೆ. ಸಿಬಿಐ ದಾಳಿ ನಡೆದ ಬಳಿಕ ಇದೇ ಮೊದಲ ಬಾರಿಗೆ ಸಿಸೋಡಿಯಾ ಅವರು ದಿಲ್ಲಿ ಬಿಟ್ಟು ಹೊರಹೋಗುತ್ತಿದ್ದಾರೆ.
ʻʻಜನರು ಕೇಜ್ರಿವಾಲ್ ಅವರಿಗೆ ಒಂದು ಅವಕಾಶ ನೀಡಬೇಕು. ಆಮ್ ಆದ್ಮಿ ಸರಕಾರ ದಿಲ್ಲಿ ಮತ್ತು ಪಂಜಾಬ್‌ನಲ್ಲಿ ಮಾಡಿರುವ ಕೆಲಸಗಳು, ಅದರಲ್ಲೂ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಕೆಲಸಗಳನ್ನು ಗಮನಿಸಬಹುದು. ಗುಜರಾತ್‌ನ ಜನರು ಕೂಡಾ ಇದರಿಂದ ಸ್ಫೂರ್ತಿ ಪಡೆದಿದ್ದಾರೆ. ಕಳೆದ ೨೭ ವರ್ಷಗಳಿಂದ ಆಡಳಿತ ನಡೆಸುತ್ತಿರುವ ಬಿಜೆಪಿ ಇಲ್ಲಿ ಏನೇನೂ ಮಾಡಿಲ್ಲʼʼ ಎಂದು ಸಿಸೋಡಿಯಾ ಹೇಳಿದ್ದಾರೆ. ಮೂಲಗಳ ಪ್ರಕಾರ, ಅರವಿಂದ ಕೇಜ್ರಿವಾಲ್ ಮತ್ತು ಸಿಸೋಡಿಯಾ ಅವರು ತಮ್ಮ ಎರಡು ದಿನಗಳ ಭೇಟಿಯ ವೇಳೆ, ಗುಜರಾತ್ ನಲ್ಲೂ ಆರೋಗ್ಯ ಮತ್ತು ಶಿಕ್ಷಣಕ್ಕೆ ಸಂಬಂಧಿಸಿ ಪ್ರಮುಖ ಚುನಾವಣಾ ಘೋಷಣೆಗಳನ್ನು ಮಾಡಲಿದ್ದಾರೆ.
ಇದನ್ನೂ ಓದಿ| ನೀವು ಬದಲಾಗುವುದನ್ನು ನೋಡಿ ಗಾಳಿಗೇ ದಿಗಿಲಾಗಿದೆ; ಮೋದಿ ಹಳೇ ವಿಡಿಯೋ ಶೇರ್ ಮಾಡಿದ ಸಿಸೋಡಿಯಾ