Site icon Vistara News

Manja Thread: ಯಾರೋ ಹಾರಿಸಿದ ಗಾಳಿಪಟದ ಮಾಂಜಾ ದಾರ ತೆಗೆಯಿತು ಅಮಾಯಕನ ಪ್ರಾಣ!

Manja Thread dead person

ಗದಗ: ಕಳೆದ ಜೂ.4ರಂದು ಕಾರ ಹುಣ್ಣಿಮೆ ವೇಳೆ ಹಾರಿಸಿದ ಗಾಳಿಪಟದ ಚೈನೀಸ್‌ ಮಾಂಜಾ ದಾರವು (Manja Thread) ಸವಾರನ ಕುತ್ತಿಗೆ ಸಿಲುಕಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಯುವಕ ಮೃತಪಟ್ಟಿರುವ ದಾರುಣ ಘಟನೆ ಗದಗದಲ್ಲಿ ನಡೆದಿದೆ. ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ನಾರಾಯಣ ದೇವರಕೆರೆ ನಿವಾಸಿ ರವಿ ಮೃತ ದುರ್ದೈವಿ.

ಉತ್ತರ‌ ಕರ್ನಾಟಕದಲ್ಲಿ ಕಾರ ಹುಣ್ಣಿಮೆ ವೇಳೆ ಗಾಳಿಪಟ ಹಾರಿಸುವ ಪರಿಪಾಠ ಇದೆ. ಆದರೆ ಇದೆ ಸಂಭ್ರಮವು ಬೈಕ್‌ ಸವಾರರಿಗೆ ಸಂಚಕಾರ ತಂದೊಡ್ಡಿದೆ. ಗದಗ ನಗರದ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ರವಿ, ಬೈಕ್‌ನಲ್ಲಿ ಹೋಗುವಾಗ ಗಾಳಿಪಟದ ದಾರ ಕತ್ತು ಸೀಳಿತ್ತು. ರಕ್ತದ ಮಡುವಿನಲ್ಲೇ ಸ್ಥಳೀಯರು ಆಟೋ ಮೂಲಕ ರವಿಯನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಹರಿತವಾದ ದಾರವು ರವಿಯ ಕತ್ತನ್ನು ಬಲವಾಗಿ ಸೀಳಿದ್ದರಿಂದ, ಆರು ದಿನ ಬಳಿಕ ನರಳಾಡಿ ಪ್ರಾಣ ಬಿಟ್ಟಿದ್ದಾರೆ.

Manja Thread Effected

ಕಾಳಸಂತೆಯಲ್ಲಿ ಸಿಗ್ತಿದೆ ಅಪಾಯಕಾರಿ ದಾರ

ರಾಜ್ಯದಲ್ಲಿ ಚೈನೀಸ್ ಮಾಂಜಾ ದಾರ ಮಾರಾಟವು ನಿಷೇಧ ಇದ್ದರೂ, ಗದಗ ಜಿಲ್ಲೆಯಲ್ಲಿ ಮಾತ್ರ ಇದಕ್ಕೆ ಕಡಿವಾಣ ಬಿದ್ದಿಲ್ಲ. ಕಾಳಸಂತೆಗಳಲ್ಲಿ ಈ ಅಪಾಯಕಾರಿ ದಾರ ಮಾರಾಟವಾಗುತ್ತಿದೆ. ಗದಗ ಬೆಟಗೇರಿ ಅವಳಿ ನಗರದಲ್ಲಿ ಕಳೆದ ಭಾನುವಾರ (ಜೂ.4) ಕಾರ ಹುಣ್ಣಿಮೆಯ ದಿನದಂದು ಹಾರಿಸಿದ ಗಾಳಿಪಟದ ದಾರದಿಂದಾಗಿ ರೈಲ್ವೆ ಪೊಲೀಸ್ ಸೇರಿ ನಾಲ್ಕೈದು‌ ಜನರಿಗೆ ಗಾಯವಾಗಿತ್ತು. ಬೈಕ್‌ನಲ್ಲಿ ಹೋಗುವಾಗ ಕತ್ತು, ಕೈ-ಕಾಲುಗಳಿಗೆ ಹರಿತವಾದ ದಾರದಿಂದ ಗಾಯಗಳಾಗಿತ್ತು. ಈ ರೀತಿಯ ಅವಘಡಗಳು ನಡೆಯುತ್ತಿದ್ದರೂ, ಸಂಬಂಧಪಟ್ಟವರು ಗಪ್ ಚುಪ್ ಆಗಿದ್ದಾರೆ.

ಇದನ್ನೂ ಓದಿ: Viral News: ಶಾಲೆಗೆ ನೀರು ಪೂರೈಸಲು ಹೊರಟಿದ್ದ ಟ್ಯಾಂಕರ್‌ ವಾಪಸ್‌; ನೀರು ಕೊಡ್ಬೇಡ ಎಂದು ಗ್ರಾಪಂ ಅಧ್ಯಕ್ಷ ಅವಾಜ್‌

ಅಪಾಯಕಾರಿ ಮಾಂಜಾ ದಾರಕ್ಕೆ ಕಡಿವಾಣ ಹಾಕುವಂತೆ ವಿಸ್ತಾರ ನ್ಯೂಸ್ ಸುದ್ದಿ ಬಿತ್ತರಿಸಿತ್ತು. ಆದರೆ ಅಧಿಕಾರಿ ವರ್ಗ ಮಾತ್ರ ಕೈ ಕಟ್ಟಿ ಕುಳಿತು ನಿರ್ಲಕ್ಷ್ಯತನ ತೋರಿತ್ತು. ಇದರ ಪರಿಣಾಮ ಈಗ ಕಾರ ಹುಣ್ಣಿಮೆ ವೇಳೆ ಮಾಂಜಾ ದಾರದಲ್ಲಿ ಗಾಳಿಪಟ ಹಾರಿಸಿದ ಕಾರಣದಿಂದಾಗಿ ಸವಾರರು ಗಂಭೀರ ಗಾಯಗೊಂಡಿದ್ದರು. ಅದರಲ್ಲಿ ಒಬ್ಬ ಸವಾರ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ 15 ದಿನಗಳ ಹಿಂದಷ್ಟೇ ಚೈನೀಸ್‌ ಮಾಂಜಾ ದಾರ ಮಾರಾಟವನ್ನು ತಡೆಯುವಂತೆ ವಿವಿಧ ಸಂಘಟನೆಗಳು ಜಿಲ್ಲಾಧಿಕಾರಿಗಳಿಗೆ ಮನವಿ‌ ಮಾಡಿದ್ದರು. ‌ಆದರೆ ಸಂಬಂಧಿಸಿದ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯತನ ತೋರಿಸಿದ್ದಾರೆಂದು ಕಿಡಿಕಾರಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version