EXPLAINER
ವಿಸ್ತಾರ Explainer | ಅಮಾಯಕರ ಜೀವ ತೆಗೆಯುತ್ತಿರುವ ಚೈನೀಸ್ ಮಾಂಜಾ ದಾರ, ನಿಷೇಧ ಇದ್ದರೂ ಸಿಗೋದು ಹೇಗೆ?
ಏನಿದು ಚೈನೀಸ್ ಮಾಂಜಾ ದಾರ? ಏಕಿದು ದೇಶದಲ್ಲಿ ಜನರ ಪ್ರಾಣವನ್ನು ಕಸಿಯುತ್ತಿದೆ? ಏಕಿಷ್ಟು ಅಪಾಯಕಾರಿ ಆಗುತ್ತಿದೆ? ಮಾಂಜಾ ದಾರದ ಕುರಿತು ಕಾನೂನು ಏನು ಹೇಳುತ್ತಿದೆ? ಜನರು ಗಾಳಿಪಟದ ದಾರ ಬಳಸುವುದೇ ತಪ್ಪೇ? ಇಲ್ಲಿದೆ ಸಂಕ್ಷಿಪ್ತ (ವಿಸ್ತಾರ Explainer) ಮಾಹಿತಿ ಇಂತಿದೆ…
ನವದೆಹಲಿ: ಭಾರತದಲ್ಲಿ ಗಾಳಿಪಟವು ಅದೊಂದು ಮನರಂಜನೆಯ ಹವ್ಯಾಸವಾಗಿರದೆ ಸಂಸ್ಕೃತಿಯ ಭಾಗವೇ ಆಗಿದೆ. ಮಕರ ಸಂಕ್ರಾಂತಿಯಿಂದ ಕೃಷ್ಣ ಜನ್ಮಾಷ್ಟಮಿವರೆಗೆ ದೇಶಾದ್ಯಂತ ಗಾಳಿಪಟ ಹಾರಿಸಲಾಗುತ್ತದೆ. ಮಕ್ಕಳಿಂದ ಹಿಡಿದು, ಹಿರಿಯವರೆಗೆ ಆಗಸದಲ್ಲಿ ಹಾರಾಡುವ ಗಾಳಿಪಟ್ಟವನ್ನು ತದೇಕಚಿತ್ತದಿಂದ ನೋಡುವ ಖುಷಿಯನ್ನು ಅನುಭವಿಸುತ್ತಾರೆ. ಆದರೆ, ಇತ್ತೀಚೆಗೆ ಗಾಳಿಪಟ ಹಾರಿಸುವ ದಾರದಿಂದಾಗಿ ಜನ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಮಕ್ಕಳು, ಯುವಕರ ಕುತ್ತಿಗೆಗೆ ಗಾಳಿಪಟದ ದಾರವು ಉರುಳಾಗಿ ಪರಿಣಮಿಸಿದೆ. ಇದಕ್ಕೆಲ್ಲ ‘ಚೈನೀಸ್ ಮಾಂಜಾ’ ದಾರವೇ ಕಾರಣವಾಗಿದೆ.
ಹಾಗಾದರೆ, ಏನಿದು ಚೈನೀಸ್ ಮಾಂಜಾ ದಾರ? ಏಕಿದು ದೇಶದಲ್ಲಿ ಜನರ ಪ್ರಾಣವನ್ನು ಕಸಿಯುತ್ತಿದೆ? ಏಕಿಷ್ಟು ಅಪಾಯಕಾರಿ ಆಗುತ್ತಿದೆ? ಮಾಂಜಾ ದಾರದ ಕುರಿತು ಕಾನೂನು ಏನು ಹೇಳುತ್ತಿದೆ? ಜನರು ಗಾಳಿಪಟದ ದಾರ ಬಳಸುವುದೇ ತಪ್ಪೇ? ಗಾಳಿಪಟ ಹಾರಿಸುವುದರ ಜತೆಗೆ ನಮ್ಮ ಪ್ರಾಣವನ್ನೂ ರಕ್ಷಣೆ ಮಾಡಿಕೊಳ್ಳುವುದು, ಬೇರೆಯವರ ಪ್ರಾಣಪಕ್ಷಿ ಹಾರದಂತೆ ನೋಡಿಕೊಳ್ಳುವುದು ಹೇಗೆ? ಅಷ್ಟಕ್ಕೂ, ಮಾಂಜಾ ದಾರ ವಿವಾದಕ್ಕೀಡಾಗುತ್ತಿರುವುದೇಕೆ ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಏನಿದು ಮಾಂಜಾ ದಾರ ವಿವಾದ?
ಖುಷಿಗಾಗಿ, ಆ ಕ್ಷಣದ ಸಂತಸಕ್ಕಾಗಿ ಗಾಳಿಪಟ ಹಾರಿಸುತ್ತೇವೆ. ಆದರೆ, ಇದೇ ಗಾಳಿಪಟವು ನೆಮ್ಮದಿ ಕಳೆಯುತ್ತಿದೆ. ಚೈನೀಸ್ ಮಾಂಜಾ ದಾರವನ್ನು ಬಳಸುತ್ತಿರುವ ಕಾರಣ ಇದು ಮಕ್ಕಳು, ಯುವಕರ ಕುತ್ತಿಗೆಗೆ ಸಿಲುಕಿ ಅವರ ಜೀವವನ್ನು ತೆಗೆಯುತ್ತಿದೆ. ಇದೇ ಕಾರಣಕ್ಕಾಗಿ ಮಾಂಜಾ ದಾರದ ಉತ್ಪಾದನೆ, ಮಾರಾಟ ಹಾಗೂ ಸಾಗಣೆಯನ್ನು ನಿಷೇಧಿಸಬೇಕು ಎಂದು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ದೇಶಾದ್ಯಂತ ಸಂಪೂರ್ಣವಾಗಿ ನಿಷೇಧಿಸಬೇಕು ಎಂಬ ಮಾತುಗಳು ಕೇಳಿಬರುತ್ತಿವೆ. ಹಾಗೆಯೇ, ದಾರವನ್ನು ಬಳಸಬಾರದು ಎಂಬ ಕುರಿತು ಸಾಮಾಜಿಕ ಜಾಲತಾಣಗಳು ಸೇರಿ ಹಲವು ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.
ಮಾರಣಾಂತಿಕ ದಾರ
ದುರಂತ 1: ಕೆಲ ತಿಂಗಳ ಹಿಂದೆ ದೆಹಲಿಯಲ್ಲಿ ಬೈಕ್ ಮೇಲೆ ಹೋಗುವಾಗ ಮಾಂಜಾ ದಾರವು 35 ವರ್ಷದ ವ್ಯಕ್ತಿಯೊಬ್ಬರ ಕುತ್ತಿಗೆ ಸಿಲುಕಿ, ಅವರ ಪ್ರಾಣವನ್ನೇ ಕಸಿಯಿತು. ಪತ್ನಿ ಹಾಗೂ ಮಗಳನ್ನು ಕೂರಿಸಿಕೊಂಡು ಸಂಬಂಧಿಕರ ಮನೆಗೆ ತೆರಳುವ ವೇಳೆ ಮಾಂಜಾ ದಾರವು ಕುತ್ತಿಗೆ ಗಾಯ ಮಾಡಿದೆ. ಹೆಲ್ಮೆಟ್ ತೆಗೆದು ನೋಡುತ್ತಲೇ ರಕ್ತ ಬಂದಿದ್ದು, ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.
ದುರಂತ 2: ಇತ್ತೀಚೆಗೆ ದೆಹಲಿಯ 26 ವರ್ಷದ ಉದ್ಯಮಿಯೊಬ್ಬರು ನೆಹರು ಕಾಲೊನಿಯಲ್ಲಿರುವ ಫ್ಲೈಓವರ್ ಮೇಲೆ ಬೈಕ್ ಸವಾರಿ ಮಾಡುತ್ತಿದ್ದಾಗ ಇದೇ ಚೈನೀಸ್ ದಾರ ಕುತ್ತಿಗೆ ಸಿಲುಕಿ, ಕುತ್ತಿಗೆಗೆ ಗಾಯವಾದ ಕಾರಣ ರಸ್ತೆ ಮೇಲೆ ಬಿದ್ದಿದ್ದರು. ಜನ ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.
ದುರಂತ 3: ದೆಹಲಿಯ ಬದಾರ್‌ಪುರ ಫ್ಲೈಓವರ್ ಮೇಲೆ ತೆರಳುವಾಗ 28 ವರ್ಷದ ಫುಡ್ ಡೆಲಿವರಿ ಬಾಯ್ ಮೃತಪಟ್ಟವರು. ಬೈಕ್ ವೇಗವಾಗಿ ಚಲಿಸುತ್ತಿರುವಾಗ ದಾರ ಅಡ್ಡ ಬಂದ ಕಾರಣ ಬೈಕ್ ಮೇಲಿಂದ ಬಿದ್ದು ನಿಧನರಾದರು. ಬೈಕ್‌ಗೆ ದಾರ ಸುತ್ತಿಕೊಂಡಿದ್ದನ್ನು ಕಂಡಾಗಲೇ ಪೊಲೀಸರಿಗೆ ಇದು ಚೀನಾ ದಾರದಿಂದ ಉಂಟಾದ ಅಪಘಾತ ಎಂದು ಗೊತ್ತಾಯಿತು.
ದುರಂತ 4: ದೆಹಲಿಯಲ್ಲಿಯೇ ಕಳೆದ ಸ್ವಾತಂತ್ರ್ಯ ದಿನದಂದು ಮೂರು ಹಾಗೂ ನಾಲ್ಕು ವರ್ಷದ ಇಬ್ಬರು ಮಕ್ಕಳು ಮಾಂಜಾ ದಾರಕ್ಕೆ ಸಿಲುಕಿ ಬಲಿಯಾಗಿದ್ದಾರೆ. ಆಗಸ್ಟ್ 14ರಂದೂ ಬೈಕ್ ಸವಾರರೊಬ್ಬರು ಮೃತಪಟ್ಟಿದ್ದರು. ಇದೆಲ್ಲ ಗಮನಿಸಿದ ದೆಹಲಿ ಸರ್ಕಾರವು ಆಗಸ್ಟ್ 18ರಂದು ದಾರವನ್ನು ನಿಷೇಧಿಸಿತು. ಇಂತಹ ಉದಾಹರಣೆಗಳು ದೇಶದ ಹಲವೆಡೆಯೂ ಕಾಣಸಿಗುತ್ತವೆ.
ಹಾಗಂತ ಇದು ಚೀನಾದಲ್ಲಿ ಉತ್ಪಾದಿಸುವ ದಾರವಲ್ಲ
ದೇಶದಲ್ಲಿ ಇಷ್ಟೆಲ್ಲ ಭಾನಗಡಿ ಸೃಷ್ಟಿಸಿರುವ ಚೈನೀಸ್ ಮಾಂಜಾ ದಾರವು ಚೀನಾದಲ್ಲಿ ಉತ್ಪಾದಿಸುವುದಿಲ್ಲ ಹಾಗೂ ಚೀನಾದಿಂದ ಆಮದು ಮಾಡಿಕೊಳ್ಳುವುದಿಲ್ಲ. ಇದರ ಹೆಸರಷ್ಟೇ ಚೈನೀಸ್ ಮಾಂಜಾ ಆಗಿದೆ. ಚೈನೀಸ್ ಮಾಂಜಾ ದಾರವನ್ನು ಉತ್ತರ ಪ್ರದೇಶದ ಬರೇಲಿ, ಮಧ್ಯಪ್ರದೇಶ, ನೊಯ್ಡಾ, ಬೆಂಗಳೂರು ಸೇರಿ ದೇಶದ ಹಲವೆಡೆ ಉತ್ಪಾದಿಸಲಾಗುತ್ತಿದೆ. ಇದನ್ನೇ ದೇಶಾದ್ಯಂತ ಪೂರೈಕೆ ಮಾಡಲಾಗುತ್ತದೆ. ಹಾಗಾಗಿ, ಇದನ್ನು ಚೀನಾದ ದಾರವೆಂದು ಪರಿಗಣಿಸಬೇಕಿಲ್ಲ. ಹಾಗಂತ, ಇದೇ ಚೈನೀಸ್ ಮಾಂಜಾ ದಾರವು ಹತ್ತಿಯಿಂದಲೂ ತಯಾರಿಸಲಾಗುತ್ತದೆ. ಇದು ಬೇಗನೆ ಹರಿಯುವುದರಿಂದ ಹಾಗೂ ದುಬಾರಿ ಆಗಿರುವುದರಿಂದ ಜನ ಹೆಚ್ಚಾಗಿ ಖರೀದಿಸುವುದಿಲ್ಲ. ಉತ್ತರ ಪ್ರದೇಶದ ಬರೇಲಿಯಲ್ಲಿ ಮಾತ್ರ ಚೈನೀಸ್ ಮಾಂಜಾ ದಾರವನ್ನು ಹತ್ತಿಯಿಂದ ತಯಾರಿಸಲಾಗುತ್ತದೆ. ಇದನ್ನೇ ಒರಿಜಿನಲ್ ಎಂದು ಪರಿಗಣಿಸಲಾಗುತ್ತಿದೆ.
ಏಕಿಷ್ಟು ಅಪಾಯಕಾರಿ?
ಚೈನೀಸ್ ಮಾಂಜಾ ದಾರವನ್ನು ನೈಲಾನ್‌ನಿಂದ ಉತ್ಪಾದಿಸಲಾಗುತ್ತದೆ. ಇದಕ್ಕೆ ಚೀನಾ ಹಾಗೂ ತೈವಾನ್‌ನಿಂದ ಆಮದು ಮಾಡಿಕೊಂಡ ಕೆಲ ಕಚ್ಚಾ ವಸ್ತುಗಳನ್ನು ಬಳಸಲಾಗುತ್ತದೆ. ದಾರವನ್ನು ಬಲಿಷ್ಠವಾಗಿಸುವ ಹಾಗೂ ಅದು ಹಗುರವಾಗಿಯೂ ಇರುವಂತೆ ಉತ್ಪಾದಿಸುವುದರಿಂದ ಗಾಳಿಪಟವು ಎತ್ತರದಲ್ಲಿ ಹಾರುತ್ತದೆ. ಆದರೆ, ಇದು ಸುಲಭಕ್ಕೆ ಹರಿಯದ ಕಾರಣ ಜನರ ಕುತ್ತಿಗೆಗೆ ಉರುಳಾಗಿ ಪರಿಣಮಿಸುತ್ತಿದೆ. ಇದು ಬರೇಲಿಯ ಕಾಟನ್ (ಹತ್ತಿ) ದಾರಕ್ಕಿಂತ ಕಡಿಮೆ ಬೆಲೆಗೆ ಸಿಗುವುದರಿಂದ ಹೆಚ್ಚಿನ ಖರೀದಿಸುತ್ತಿದ್ದಾರೆ.
ಕರ್ನಾಟಕ ಸೇರಿ ಎಲ್ಲೆಲ್ಲಿ ಚೈನೀಸ್ ಮಾಂಜಾ ನಿಷೇಧ?
ಚೈನೀಸ್ ಮಾಂಜಾವು ಜನರಿಗೆ ಮಾರಣಾಂತಿಕವಾಗಿ ಪರಿಣಮಿಸಿದ ಕಾರಣ ಕರ್ನಾಟಕ ಸೇರಿ ದೇಶದ ಹಲವೆಡೆ ಇದನ್ನು ನಿಷೇಧಿಸಿದೆ. ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಆಯಾ ರಾಜ್ಯ ಸರ್ಕಾರಗಳು ಮಾಂಜಾ ದಾರದ ಉತ್ಪಾದನೆ ಹಾಗೂ ಮಾರಾಟವನ್ನು ನಿಷೇಧಿಸಿವೆ. ರಾಷ್ಟ್ರೀಯ ಹಸಿರು ನ್ಯಾಯಾಧೀಕರಣವೂ (NGT) ಚೈನೀಸ್ ಮಾಂಜಾವನ್ನು ನಿಷೇಧಿಸಿದೆ. ಕಟಕ್, ಮುಂಬೈ, ಅಲಹಾಬಾದ್ ನಗರಗಳಲ್ಲಿ ಹಾಗೂ ಕಳೆದ ಆಗಸ್ಟ್ 18ರಂದು ದೆಹಲಿ ಸರ್ಕಾರವು ದಾರವನ್ನು ನಿಷೇಧಿಸಲಾಗಿದೆ. ಆದರೆ, ಇತ್ತೀಚೆಗೆ ದೆಹಲಿ ಹೈಕೋರ್ಟ್, ದಾರದ ಉತ್ಪಾದನೆ, ಮಾರಾಟ ನಿಷೇಧಕ್ಕೆ ಇನ್ನಷ್ಟು ಮಾಹಿತಿ ಬೇಕು ಎಂದು ಹೇಳಿದೆ. ಆದರೆ, ಇಷ್ಟೆಲ್ಲ ಸಾವಿನ ನಿದರ್ಶನಗಳು ಇರುವ ಕಾರಣ ದೇಶಾದ್ಯಂತ ನಿಷೇಧಿಸಬೇಕು ಎಂಬ ಹಕ್ಕೊತ್ತಾಯ ಕೇಳಿಬಂದಿದೆ. ಇದರ ಜತೆಗೆ ಜನರೂ ಚೈನೀಸ್ ಮಾಂಜಾ ದಾರದ ಕುರಿತು ಎಚ್ಚರಿಕೆಯಿಂದ ಇರಬೇಕು. ಈ ದಾರವನ್ನು ಬಳಸಬಾರದು ಎಂದು ತಜ್ಞರು ಸಲಹೆ ನೀಡಿದ್ದಾರೆ. ಸರ್ಕಾರಗಳೂ ಅಷ್ಟೇ ಅಕ್ರಮವಾಗಿ ದಾರದ ಉತ್ಪಾದನೆ ಹಾಗೂ ಮಾರಾಟವನ್ನು ತಡೆಯಬೇಕಿದೆ.
ಇದನ್ನೂ ಓದಿ | ವಿಸ್ತಾರ Explainer | ಭಾರತವನ್ನು ಎದುರು ಹಾಕಿಕೊಂಡರೆ ಪಾಕಿಸ್ತಾನ ಕ್ರಿಕೆಟ್ ಬರ್ಬಾದ್; ಯಾಕೆ ಗೊತ್ತೆ?
EXPLAINER
ವಿಸ್ತಾರ Explainer: Disease X: ಏನಿದು ʼಎಕ್ಸ್ʼ ಸೋಂಕು? 5 ಕೋಟಿ ಜನರ ಬಲಿ ತೆಗೆದುಕೊಳ್ಳಲಿದೆಯಾ?
ಮುಂದಿನ ದಿನಗಳಲ್ಲಿ ಆಗಮಿಸಬಹುದಾದ ಸಾಂಕ್ರಾಮಿಕ ರೋಗವು (Disease X) ಸುಮಾರು 5 ಕೋಟಿ ಜನರ ಜೀವವನ್ನು ಅಪಹರಿಸಬಹುದು ಎಂದು ಯುಕೆ ಲಸಿಕೆ ಕಾರ್ಯಪಡೆಯ ಅಧ್ಯಕ್ಷರಾದ ಡೇಮ್ ಕೇಟ್ ಬಿಂಗ್‌ಹ್ಯಾಮ್ ಅವರು ಹೇಳಿದ್ದಾರೆ.
ಹೊಸದಿಲ್ಲಿ: ವೈದ್ಯಕೀಯ ವಿಜ್ಞಾನಿಗಳ ಆತಂಕ ಇದೀಗ ಡಿಸೀಸ್ ಎಕ್ಸ್ ಎಂಬ (Disease X) ಭವಿಷ್ಯದ ಸೋಂಕುರೋಗವೊಂದರತ್ತ (Pandemic) ಕೇಂದ್ರೀಕೃತವಾಗಿದೆ. ಅದು ಜೀವಹಾನಿಯಲ್ಲಿ ಕೋವಿಡ್‌ಗಿಂತಲೂ (Corona virus, Covid – 19) ಭೀಕರವಾಗಿರಬಹುದು ಎಂಬ ಭವಿಷ್ಯವನ್ನೂ ಅವರು ಈಗಾಗಲೇ ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಆಗಮಿಸಬಹುದಾದ ಸಾಂಕ್ರಾಮಿಕ ರೋಗವು ಸುಮಾರು 5 ಕೋಟಿ ಜನರ ಜೀವವನ್ನು ಅಪಹರಿಸಬಹುದು ಎಂದು ಯುಕೆ ಲಸಿಕೆ ಕಾರ್ಯಪಡೆಯ ಅಧ್ಯಕ್ಷರಾದ ಡೇಮ್ ಕೇಟ್ ಬಿಂಗ್‌ಹ್ಯಾಮ್ ಅವರು ಹೇಳಿದ್ದಾರೆ. ಅದು ಈಗಾಗಲೇ ಪ್ರಾರಂಭವಾಗಿರಲೂಬಹುದು; ಕೋವಿಡ್‌ಗಿಂತಲೂ ಅದು ಭೀಕರವಾಗಿರಲಿದೆ ಎಂದು ಹೇಳಿದ್ದಾರೆ.
ಹೊಸ ಸಾಂಕ್ರಾಮಿಕ ರೋಗವನ್ನು ವಿಶ್ವ ಆರೋಗ್ಯ ಸಂಸ್ಥೆ (world health organization – WHO) `ಡಿಸೀಸ್ ಎಕ್ಸ್’ (Disease X) ಎಂದು ಹೆಸರಿಸಿದೆ. ಇದು ಕೊರೊನಾವೈರಸ್‌ಗಿಂತ 20 ಪಟ್ಟು ಮಾರಕವಾಗಬಹುದು ಎಂಬುದು ಬಿಂಗ್‌ಹ್ಯಾಮ್ ಭವಿಷ್ಯ. “ಜಗತ್ತು ಇದನ್ನು ಎದುರಿಸಲು ಸಾಮೂಹಿಕ ವ್ಯಾಕ್ಸಿನೇಷನ್‌ಗೆ ತಯಾರಾಗಬೇಕು. ದಾಖಲೆಯ ಸಮಯದಲ್ಲಿ ಡೋಸ್‌ಗಳನ್ನು ತಲುಪಿಸಬೇಕಾಗುತ್ತದೆ. ಈ ಡಿಸೀಸ್ ಎಕ್ಸ್ ಅನ್ನು ದಡಾರದಂತೆ ಸಾಂಕ್ರಾಮಿಕವಾಗಿ ಹಾಗೂ ಎಬೋಲಾದಂತೆ ಪ್ರತಿಶತ 67 ಸಾವಿನ ಪ್ರಮಾಣದೊಂದಿಗೆ ಕಲ್ಪಿಸಿಕೊಂಡು ನೋಡಿ. ಜಗತ್ತಿನ ಯಾವುದೋ ಮೂಲೆಯಲ್ಲಿ ಅದು ಸೃಷ್ಟಿಯಾಗುವ ಹಂತದಲ್ಲಿದೆ, ಸದ್ಯದಲ್ಲೇ ಇದರ ರೋಗಿಗಳು ಕಂಡುಬರಬಹುದುʼʼ ಎಂದು ಅವರು ಎಚ್ಚರಿಸಿದ್ದಾರೆ.
ಬಿಂಗ್‌ಹ್ಯಾಮ್ ಪ್ರಕಾರ ವಿಜ್ಞಾನಿಗಳು 25 ಅಪಾಯಕಾರಿ ವೈರಸ್ ಕುಟುಂಬಗಳನ್ನು ಗುರುತಿಸಿದ್ದಾರೆ. ಇದು ಸಾವಿರಾರು ವೈರಸ್‌ಗಳನ್ನು ಹೊಂದಿದೆ. ಇನ್ನೂ ಲಕ್ಷಾಂತರ ವೈರಸ್‌ಗಳನ್ನು ಕಂಡುಹಿಡಿಯಬೇಕಾಗಿದೆಯಂತೆ.
“COVID-19 ಮತ್ತು ಅದರ ರೂಪಾಂತರಗಳು ಪುನರಾವರ್ತಿತ ಮತ್ತು ಪರಿಚಿತ ಆರೋಗ್ಯ ಸಮಸ್ಯೆಗಳ ವಿಷಯದಲ್ಲಿ ಪರಿಣಾಮ ಬೀರುತ್ತವೆ. ಆರೋಗ್ಯ ವೃತ್ತಿಪರರು ಈಗ ಡಿಸೀಸ್ X ಎಂಬ ಸಂಭಾವ್ಯ ಹೊಸ ಸಾಂಕ್ರಾಮಿಕ ರೋಗಕ್ಕೆ ತಯಾರಿ ನಡೆಸುತ್ತಿದ್ದಾರೆ. ಆರೋಗ್ಯ ತಜ್ಞರು ಈ ಹೊಸ ವೈರಸ್ ಸ್ಪ್ಯಾನಿಷ್ ಜ್ವರದಂತೆಯೇ ವಿನಾಶಕಾರಿಯಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, X ಎಲ್ಲೂ ಇನ್ನೂ ಕಂಡುಬಂದಿಲ್ಲ. ಆದರೆ ಇದು ದೊಡ್ಡ ಪ್ರಮಾಣದ, ಗಂಭೀರವಾದ ಸಾಂಕ್ರಾಮಿಕ ರೋಗವನ್ನು ಉಂಟುಮಾಡಬಹುದು. ಸಾಮೂಹಿಕ ಸಾವುನೋವಿಗೆ ಕಾರಣವಾಗಬಹುದು.
ಡಿಸೀಸ್ X ಎಂದರೇನು?
ಡಿಸೀಸ್ X ಪ್ರಾಯಶಃ ʼರೋಗಕಾರಕ X’ನಿಂದ ಉಂಟಾಗುತ್ತದೆ. ಇದು ಸಾಂಕ್ರಾಮಿಕ ರೋಗಗಳಿಗೆ ಅನುಕೂಲವಾದ ಪರಿಸರದಿಂದ ಹೊರಹೊಮ್ಮಬಹುದು. ಇದರ ಝೂನೋಟಿಕ್ ಕಾಯಿಲೆಗೆ ಸಂಬಂಧಿಸಿದ ಆರ್‌ಎನ್ಎ ವೈರಸ್‌ನಿಂದ ಉಂಟಾಗಬಹುದು. ದಿಲ್ಲಿಯ ಫೋರ್ಟಿಸ್ ಅಧ್ಯಯನ ಸಂಸ್ಥೆಯ ತಜ್ಞ ಡಾ. ನೇಹಾ ರಸ್ತೋಗಿ ಹೇಳಿದ್ದಾರೆ.
ಇದೊಂದು ಮಾನವ ನಿರ್ಮಿತ ಸೋಂಕೂ ಆಗಿರಬಹುದು. ಪ್ರಯೋಗಾಲಯದಲ್ಲಿ ಆಗುವ ಆಕಸ್ಮಿಕಗಳು ಅಥವಾ ಜೈವಿಕ ಭಯೋತ್ಪಾದನೆಯ ಫಲವಾಗಿ ಇದು ಹೊಮ್ಮಬಹುದು. ಇದು ಜಾಗತಿಕ ದುರಂತದ ಅಪಾಯವನ್ನು ಉಂಟುಮಾಡಬಹುದು ಎಂದೂ ತಜ್ಞರು ಹೇಳುತ್ತಾರೆ.
ತಡೆಗಟ್ಟುವುದು ಹೇಗೆ?
ನಿಯಂತ್ರಣ ಮತ್ತು ಪ್ರಸರಣ ತಗ್ಗಿಸುವಿಕೆಯ ತಂತ್ರಗಳನ್ನು ಅನುಸರಿಸಬೇಕು. ಜೈವಿಕ ಭಯೋತ್ಪಾದನೆಯನ್ನು ನಿಯಂತ್ರಿಸಲು ಏಕರೂಪದ ಅಂತಾರಾಷ್ಟ್ರೀಯ ಮಾರ್ಗಸೂಚಿಗಳ ಅಭಿವೃದ್ಧಿ ಮತ್ತು ಅನುಷ್ಠಾನ ಬೇಕು. ಕಟ್ಟುನಿಟ್ಟಾದ ವಿಮಾನ ನಿಲ್ದಾಣದ ಸ್ಕ್ರೀನಿಂಗ್ ಸೇರಿದಂತೆ ತಕ್ಷಣದ ಮತ್ತು ಸೂಕ್ತವಾದ ಪ್ರಯಾಣದ ನಿರ್ಬಂಧಗಳನ್ನು ಅಳವಡಿಸಬೇಕು. ಇದಕ್ಕೆ ಜಾಗತಿಕ ನಾಯಕರು, ವಿಜ್ಞಾನಿಗಳ ಸಹಯೋಗದ ಅಗತ್ಯವಿದೆ. ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಮತ್ತು ಸಾಂಕ್ರಾಮಿಕ ರೋಗ ತಜ್ಞರು ರೋಗ X ಅನ್ನು ತನಿಖೆ ಮಾಡಲು, ನಿಯಂತ್ರಿಸಲು ಮತ್ತು ತೊಡೆದುಹಾಕಲು ವ್ಯಾಪಕವಾದ ಮತ್ತು ಸಾಮೂಹಿಕ ಪರೀಕ್ಷೆ, ಕಣ್ಗಾವಲು ತೆಗೆದುಕೊಳ್ಳಬೇಕು ಎಂದು ತಜ್ಞರು ಹೇಳುತ್ತಾರೆ.
ಇದೊಂದು ಕಲ್ಪಿತ ಭಯವೇ?
ಆದರೆ ಕೆಲವು ತಜ್ಞರು ಈ ಸೋಂಕಿನ ಕಲ್ಪನೆಯನ್ನೇ ಅಲ್ಲಗಳೆದಿದ್ದಾರೆ. ಸದ್ಯಕ್ಕೆ ಇದೊಂದು ಕಲ್ಪಿತ ವೈರಸ್ ಹಾಗೂ ಕಲ್ಪಿತ ಸೋಂಕು ಮಾತ್ರ ಆಗಿದೆ. ಇದು ಸಂಭಾವ್ಯ ಎನ್ನುವುದಕ್ಕೆ ಯಾವುದೇ ಸಾಕ್ಷಿ ಇದುವರೆಗೂ ದೊರೆತಿಲ್ಲ. ಜನತೆಯನ್ನು ಊಹೆ ಮಾತ್ರದಿಂದ ಭಯಪಡಿಸವುದು ವೈಜ್ಞಾನಿಕ ವೈದ್ಯಕೀಯ ವಿಧಾನಕ್ಕೆ ಅಪಚಾರ ಎಂದು ಕೆಲವು ತಜ್ಞರು ಆಕ್ಷೇಪಿಸಿದ್ದಾರೆ.
ಇದನ್ನೂ ಓದಿ: Nipah Virus: ಕೇರಳದಲ್ಲಿ ಮತ್ತೊಂದು ನಿಫಾ ಕೇಸ್, ಸೋಂಕಿತರ ಸಂಖ್ಯೆ 6; ಶಾಲೆಗಳಿಗೆ ರಜೆ ಘೋಷಣೆ
EXPLAINER
ವಿಸ್ತಾರ Explainer: Google Birthday: ಗೂಗಲ್‌ನ 25 ವರ್ಷದ ಇತಿಹಾಸ ಹೇಗಿತ್ತು? ಒಂದು ನೋಟ ಇಲ್ಲಿದೆ
ಟೆಕ್ ದೈತ್ಯ ಗೂಗಲ್ (Google search Engine) 25ನೇ ವರ್ಷದ ಜನ್ಮದಿನ (Google birthday) ಆಚರಿಸಿಕೊಂಡಿದೆ. ಈ ಕಂಪನಿ ಸಾಗಿ ಬಂದ ಇತಿಹಾಸದ (Google history) ಕೆಲವು ಮೈಲಿಗಲ್ಲುಗಳು ಇಲ್ಲಿವೆ.
ನ್ಯೂಯಾರ್ಕ್: ತಂತ್ರಜ್ಞಾನದ ದೈತ್ಯ ಗೂಗಲ್ ಕಂಪನಿ (Google search engine) ಇಂದು (ಸೆಪ್ಟೆಂಬರ್ 27) 25ನೇ ವರ್ಷದ ಜನ್ಮದಿನ (Google 25th Birthday) ವರ್ಷಗಳನ್ನು ಪೂರೈಸಿದೆ. ಈ ವಿಶೇಷ ಈವೆಂಟ್‌ನ (Google Birthday) ಸಂದರ್ಭದಲ್ಲಿ Google ಹೊಸ ಡೂಡಲ್ ಅನ್ನು ಪ್ರದರ್ಶಿಸಿತು. ಅದರಲ್ಲಿ ಕಳೆದ ವರ್ಷಗಳಲ್ಲಿ Google ಲೋಗೋ ನಡೆದುಬಂದ ಇತಿಹಾಸವನ್ನು ತೋರಿಸಿತು.
“ಇಪ್ಪತ್ತೈದು ವರ್ಷಗಳ ಹಿಂದೆ, ದೊಡ್ಡ ಮತ್ತು ಚಿಕ್ಕ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕಲು ನಿಮಗೆ ಸಹಾಯ ಮಾಡಲು ನಾವು Google search ಪ್ರಾರಂಭಿಸಿದೆವು. ಅಂದಿನಿಂದ, ಶತಕೋಟಿ ಜನರು ತಮ್ಮ ಕುತೂಹಲವನ್ನು ತಿಳಿಗೊಳಿಸಲು ನಮ್ಮತ್ತ ಮುಖ ಮಾಡಿದರು” ಎಂದು ಗೂಗಲ್ ಹೇಳಿದೆ.
ಆರಂಭದಲ್ಲಿ ʼಬ್ಯಾಕ್‌ರಬ್ʼ ಎಂದು ಕರೆಯಲ್ಪಟ್ಟಿದ್ದ ಈ ಸ್ಟಾರ್ಟ್‌ಅಪ್ ಈಗ ವಿಶ್ವದ ಅತ್ಯಂತ ಮೌಲ್ಯಯುತ ಮತ್ತು ಪ್ರಭಾವಶಾಲಿ ಕಂಪನಿಗಳಲ್ಲಿ ಒಂದಾಗಿದೆ. Gmail ಮತ್ತು Search ಸೇರಿದಂತೆ Googleನ ಅನೇಕ ಸೇವೆಗಳನ್ನು ಈಗ ನೂರು ಕೋಟಿ ಜನ ಬಳಸುತ್ತಿದ್ದಾರೆ. ಅದರ ಸಂಸ್ಥಾಪಕರಾದ ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್ ಅವರು ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಸ್ಥಾನ ಪಡೆದಿದ್ದಾರೆ.
ಟೆಕ್ ದೈತ್ಯ ಗೂಗಲ್ ಸಾಗಿ ಬಂದ ಇತಿಹಾಸದ ಕೆಲವು ಮೈಲಿಗಲ್ಲುಗಳು ಇಲ್ಲಿವೆ.
- 1995-1996ರಲ್ಲಿ ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದಲ್ಲಿ ಭೇಟಿಯಾದರು. ಬ್ಯಾಕ್‌ರಬ್ ಹೆಸರಿನಲ್ಲಿ ಸರ್ಚ್ ಎಂಜಿನ್ ಅನ್ನು ಹುಟ್ಟುಹಾಕಿದರು.
- 1998ರಲ್ಲಿ ಈ ಸ್ಟಾರ್ಟಪ್ ಗೂಗಲ್ ಎಂದು ಮರುನಾಮಕರಣಗೊಂಡಿತು. ಸನ್ ಮೈಕ್ರೋಸಿಸ್ಟಮ್ಸ್ ಸಹ-ಸಂಸ್ಥಾಪಕ ಆಂಡಿ ಬೆಚ್ಟೋಲ್‌ಶೀಮ್‌ನಿಂದ $100,000 ನಿಧಿಯನ್ನು ಪಡೆಯಿತು.
- 1999ರಲ್ಲಿ ಗೂಗಲ್ ತನ್ನ ಮೊದಲ ಪತ್ರಿಕಾ ಪ್ರಕಟಣೆ ನೀಡಿ, ಸಿಕ್ವೊಯಾ ಕ್ಯಾಪಿಟಲ್ ಮತ್ತು ಕ್ಲೀನರ್ ಪರ್ಕಿನ್ಸ್‌ನಿಂದ $25 ಮಿಲಿಯ ಹಣ ಪಡೆದುದನ್ನು ಘೋಷಿಸಿತು. ಅಧಿಕೃತವಾಗಿ “ಗೂಗ್ಲರ್ಸ್” ಪದವನ್ನು ಜಗತ್ತಿಗೆ ಘೋಷಿಸಿತು.
- ಜೂನ್ 2000ದಲ್ಲಿ, ಆ ಕಾಲದ ಅತ್ಯಂತ ಜನಪ್ರಿಯ ವೆಬ್‌ಸೈಟ್‌ಗಳಲ್ಲಿ ಒಂದಾದ Yahooಗೆ Google ಡೀಫಾಲ್ಟ್ ಸರ್ಚ್ ಎಂಜಿನ್ ಪೂರೈಕೆದಾರನಾಯಿತು. 2000ದ ಅಕ್ಟೋಬರ್‌ನಲ್ಲಿ ಆನ್‌ಲೈನ್ ಜಾಹೀರಾತು ಪ್ಲಾಟ್‌ಫಾರ್ಮ್ ಆಡ್‌ವರ್ಡ್ಸ್ ಅನ್ನು ಪ್ರಾರಂಭಿಸಿತು. ಇದು Googleನ ವ್ಯವಹಾರಕ್ಕೆ ಪ್ರಮುಖವಾಗಿತ್ತು.
- 2001ರಲ್ಲಿ ಎರಿಕ್ ಸ್ಮಿತ್ ಅವರು Googleನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ನಿರ್ದೇಶಕರ ಮಂಡಳಿಯ ಅಧ್ಯಕ್ಷರಾಗಿ ಹೆಸರಿಸಲ್ಪಟ್ಟರು.
- ಏಪ್ರಿಲ್ 2004ರಲ್ಲಿ 1 GB ವರೆಗಿನ ಸಂಗ್ರಹ ಸಾಮರ್ಥ್ಯದೊಂದಿಗೆ Gmail ಅನ್ನು ಬಿಡುಗಡೆ ಮಾಡಿತು.
- 2004ರ ಆಗಸ್ಟ್‌ನಲ್ಲಿ ಪ್ರತಿ ಷೇರಿಗೆ $85 ಆರಂಭಿಕ ಬೆಲೆಯಲ್ಲಿ ಸರಿಸುಮಾರು 19.6 ಮಿಲಿಯ ಷೇರುಗಳ ಆರಂಭಿಕ ಸಾರ್ವಜನಿಕ ಕೊಡುಗೆಯನ್ನು ನೀಡಿತು.
- 2004ರ ಫೆಬ್ರವರಿಯಲ್ಲಿ ಡೆಸ್ಕ್‌ಟಾಪ್‌ಗಾಗಿ ಗೂಗಲ್ ಮ್ಯಾಪ್ ಅನ್ನು ಪ್ರಾರಂಭಿಸಿತು.
- 2005ರ ಆಗಸ್ಟ್‌ನಲ್ಲಿ ಮೊಬೈಲ್ ಸ್ಟಾರ್ಟ್ಅಪ್ ಆಂಡ್ರಾಯ್ಡ್ ಅನ್ನು ಖರೀದಿಸಿತು. Google Talk ತ್ವರಿತ ಸಂದೇಶ ಸೇವೆಯನ್ನು ಪ್ರಾರಂಭಿಸಿತು.
- 2006ರಲ್ಲಿ ಆನ್‌ಲೈನ್ ವೀಡಿಯೊ ಸೇವೆ YouTube ಅನ್ನು $1.65 ಶತಕೋಟಿಗೆ ಖರೀದಿಸಿತು. 2007 ಏಪ್ರಿಲ್‌ನಲ್ಲಿ $3.1 ಶತಕೋಟಿಗೆ ವೆಬ್ ಜಾಹೀರಾತು ಪೂರೈಕೆದಾರ DoubleClick ಅನ್ನು ಸ್ವಾಧೀನಪಡಿಸಿಕೊಂಡಿತು.
- ಮೇ 2007 ಯುನಿವರ್ಸಲ್ ಸರ್ಚ್ ಅನ್ನು ಪರಿಚಯಿಸಿತು. ಇದು ಬಳಕೆದಾರರಿಗೆ ಚಿತ್ರಗಳು, ವೀಡಿಯೊಗಳು ಮತ್ತು ಸುದ್ದಿಗಳಂತಹ ಎಲ್ಲಾ ವಿಷಯ ಪ್ರಕಾರಗಳಲ್ಲಿ ಹುಡುಕಾಟ ಫಲಿತಾಂಶಗಳನ್ನು ಏಕಕಾಲದಲ್ಲಿ ಒದಗಿಸಿತು.
- ಸೆಪ್ಟೆಂಬರ್‌ನಲ್ಲಿ ಮೊದಲ Android ಫೋನ್, T-Mobile G1 ಅಥವಾ 2008 HTC ಡ್ರೀಮ್ ಅನ್ನು ಪ್ರಾರಂಭಿಸಿತು.
- Google Chrome ವೆಬ್ ಬ್ರೌಸರ್ ಅನ್ನು ಪ್ರಾರಂಭಿಸಿತು. ಜನವರಿ 2010ರಲ್ಲಿ HTCಯೊಂದಿಗೆ ಸಹ-ಅಭಿವೃದ್ಧಿಪಡಿಸಿದ Nexus One ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿತು.
- ಮಾರ್ಚ್ 2010ರಲ್ಲಿ ಚೀನಾದಲ್ಲಿ ಗೂಗಲ್ ಬ್ಯಾನ್ ಮಾಡಲಾಯಿತು.
- ಅಕ್ಟೋಬರ್‌ನಲ್ಲಿ ಗೂಗಲ್ ಕ್ಯಾಲಿಫೋರ್ನಿಯಾದಲ್ಲಿ ಟೊಯೋಟಾ ಪ್ರಿಯಸ್ ಕಾರುಗಳ ಸಣ್ಣ ಸಮೂಹದೊಂದಿಗೆ ತನ್ನ ಮೊದಲ ಸ್ವಯಂ-ಚಾಲನಾ 2010 ವಾಹನಗಳನ್ನು ಪರೀಕ್ಷಿಸಿತು.
- ಜೂನ್ 2011ರಲ್ಲಿ Google+ ಎಂಬ ಸಾಮಾಜಿಕ ನೆಟ್‌ವರ್ಕಿಂಗ್ ಸೇವೆಯನ್ನು ಪ್ರಾರಂಭಿಸಿತು. ಇದನ್ನು 2018ರಲ್ಲಿ ಮುಚ್ಚಲಾಯಿತು.
- ಮೊಟೊರೊಲಾ ಮೊಬಿಲಿಟಿಯನ್ನು ಸ್ವಾಧೀನಪಡಿಸಿಕೊಂಡಿತು. ಮೊಟೊರೊಲಾದ ಸೆಲ್‌ಫೋನ್, ಟಿವಿ ಸೆಟ್-ಟಾಪ್ ಬಾಕ್ಸ್ ವ್ಯವಹಾರಗಳನ್ನು $12.5 ಬಿಲಿಯನ್‌ಗೆ ಹೊಂದಿತು.
- 2012ರಲ್ಲಿ ಗೂಗಲ್ ಗ್ಲಾಸ್ ಅನ್ನು ಪ್ರಾರಂಭಿಸಿತು. 2013ರಲ್ಲಿ ಇಸ್ರೇಲಿ ಮ್ಯಾಪಿಂಗ್ ಸ್ಟಾರ್ಟ್ಅಪ್ Waze ಅನ್ನು ಸುಮಾರು $1 ಶತಕೋಟಿಗೆ ಸ್ವಾಧೀನಪಡಿಸಿಕೊಂಡಿತು. 2014ರ ಜನವರಿಯಲ್ಲಿ AI ಸಂಸ್ಥೆ DeepMind ಅನ್ನು ಸ್ವಾಧೀನಪಡಿಸಿಕೊಂಡಿತು.
- 2015ರಲ್ಲಿ ಹೊಸದಾಗಿ ಆಲ್ಫಾಬೆಟ್ ಕಂಪನಿಯಾಗಿ ಪಬ್ಲಿಕ್ ಆಯಿತು. ಇದು YouTube, Google ಮತ್ತು ಇತರ ಘಟಕಗಳನ್ನು ಹೊಂದಿದೆ. ಸುಂದರ್ ಪಿಚೈ ಗೂಗಲ್ ಸಿಇಒ ಆಗಿ ನೇಮಕಗೊಂಡರು.
- ಅಕ್ಟೋಬರ್‌ನಲ್ಲಿ ಮೊದಲ ಪಿಕ್ಸೆಲ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿತು. 2016ರ ನವೆಂಬರ್‌ನಲ್ಲಿ ಗೂಗಲ್ ಹೋಮ್ ಸ್ಮಾರ್ಟ್ ಸ್ಪೀಕರ್ ಅನ್ನು ಪ್ರಾರಂಭಿಸಿತು.
- ಜೂನ್ 2017ರಲ್ಲಿ ಯುರೋಪಿಯನ್ ಕಮಿಷನ್ ನಿಯಮ ಉಲ್ಲಂಘನೆಗಾಗಿ Googleಗೆ 2.42 ಶತಕೋಟಿ ಯುರೋ ದಂಡ ವಿಧಿಸಿತು. 2018ರಲ್ಲಿ ಮತ್ತೆ 4.34 ಶತಕೋಟಿ ಯುರೋ, 2019ರಲ್ಲಿ 1.49 ಬಿಲಿಯನ್ ಯುರೋ ದಂಡ ವಿಧಿಸಿತು.
- 2019ರ ಡಿಸೆಂಬರ್‌ನಲ್ಲಿ ಸಂಸ್ಥಾಪಕರಾದ ಪೇಜ್ ಮತ್ತು ಬ್ರಿನ್ ಅವರು CEO ಮತ್ತು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದರು. ಪಿಚೈ ಆಲ್ಫಾಬೆಟ್‌ನ CEO ಆದರು.
- 2020ರಲ್ಲಿ ಆಲ್ಫಾಬೆಟ್ ಮಾರುಕಟ್ಟೆ ಬಂಡವಾಳೀಕರಣದಲ್ಲಿ $1 ಟ್ರಿಲಿಯನ್‌ಗೆ ತಲುಪಿತು. 2023ರ ಜನವರಿಯಲ್ಲಿ ಕಂಪನಿ 12,000 ಉದ್ಯೋಗಗಳನ್ನು ಕಡಿತಗೊಳಿಸಿತು. ಇದು ಉದ್ಯೋಗಿಗಳ ಪ್ರಮಾಣದ 6%.
- ಫೆಬ್ರವರಿಯಲ್ಲಿ ಗೂಗಲ್ ಬಾರ್ಡ್ ಅನ್ನು ಪ್ರಕಟಿಸಿತು. ಇದು AI-ಚಾಲಿತ ಚಾಟ್‌ಬಾಟ್. ಆದರೆ ಇದರಲ್ಲಿದ್ದ ದೋಷದಿಂದಾಗಿ ಕಂಪನಿಯ ಷೇರು ಮೌಲ್ಯದಲ್ಲಿ $100 ಶತಕೋಟಿ ನಷ್ಟವಾಯಿತು.
- Googleನ ಮೊದಲ ಉದ್ಯೋಗಿಗಳಲ್ಲಿ ಒಬ್ಬರಾದ ಸುಸಾನ್ ವೊಜ್ಸಿಕಿ, YouTube CEO ಹುದ್ದೆಯಿಂದ ಕೆಳಗಿಳಿದರು. ನೀಲ್ ಮೋಹನ್ ಆ ಸ್ಥಾನಕ್ಕೆ ಬಂದರು. 2023 ಮಾರ್ಚ್‌ನಲ್ಲಿ ಕೆಲವು ಬಳಕೆದಾರರಿಗೆ ಬಾರ್ಡ್ ಅನ್ನು ಬಳಕೆಗೆ ಬಿಟ್ಟಿತು.
ಇದನ್ನೂ ಓದಿ: Google birthday: ಗೂಗಲ್‌ಗೆ 25 ವರ್ಷ; ಚಂದದ ಡೂಡಲ್‌ನೊಂದಿಗೆ ಸ್ವಾಗತಿಸಿದ ಕಂಪನಿ
EXPLAINER
Asian Games 2023 : ಏಷ್ಯನ್ ಗೇಮ್ಸ್ಗೆ ಅರುಣಾಚಲ ಪ್ರದೇಶದ ಅಥ್ಲಿಟ್ಗೆ ಚೀನಾ ಪ್ರವೇಶ ನಿರಾಕರಣೆ, ಭಾರತದ ಖಂಡನೆ; ಏನಿದು ಹೊಸ ವಿವಾದ?
ಏಷ್ಯನ್ ಗೇಮ್ಸ್ ಕ್ರೀಡಾಕೂಟದ (Asian Games 2023) ಸ್ಫೂರ್ತಿ ಮತ್ತು ಸದಸ್ಯ ರಾಷ್ಟ್ರಗಳ ಸ್ಪರ್ಧಿಗಳ ವಿರುದ್ಧ ತಾರತಮ್ಯವನ್ನು ನಿಷೇಧಿಸುವ ನಿಯಮಗಳನ್ನು ಚೀನಾ ಉಲ್ಲಂಘಿಸಿದೆ ಎಂದು ವಿದೇಶಾಂಗ ಸಚಿವಾಲಯ ಟೀಕಿಸಿದೆ.
ನವ ದೆಹಲಿ: ಚೀನಾದ ಆತಿಥ್ಯದಲ್ಲಿ ನಡೆಯುವ ಏಷ್ಯನ್ ಗೇಮ್ಸ್ನಲ್ಲಿ (Asian Games 2023) ಗಡಿ ರಾಜಕೀಯ ಮುನ್ನೆಲೆಗೆ ಬಂದಿದೆ. ಅರುಣಾಚಲ ಪ್ರದೇಶದ ಮೂವರು ವುಶ್ ಸ್ಪರ್ಧಿಗಳಿಗೆ ಚೀನಾದ ಅಧಿಕಾರಿಗಳು ಪ್ರವೇಶ ನಿರಾಕರಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಅರುಣಾಚಲ ಪ್ರದೇಶ ವಿಚಾರದಲ್ಲಿ ಭಾರತ ಹಾಗೂ ಚೀನಾ ನಡುವೆ ವಿವಾದವಿದೆ. ಹೀಗಾಗಿ ವುಶು ಸ್ಪರ್ಧಿಗಳಿಗೆ ಅಲ್ಲಿನ ಅಧಿಕಾರಿಗಳು ಪ್ರವೇಶ ನಿರಾಕರಿಸಿದ್ದರು. ಅವರಿಗೆ ಮಾನ್ಯತಾ ಪತ್ರಗಳನ್ನು ಡೌನ್ಲೋಡ್ ಮಾಡಲು ಸಾಧ್ಯವಾಗದ ಕಾರಣ ದೆಹಲಿಯಲ್ಲೇ ಉಳಿದಿದ್ದಾರೆ. ಚೀನಾದ ಈ ನೀತಿಗೆ ಭಾರತ ಖಂಡನೆ ವ್ಯಕ್ತಪಡಿಸಿದ್ದು, ಕ್ರೀಡಾ ಸಚಿವ ಅನುರಾಗ್ ಠಾಕೂರ್ ಕ್ರೀಡಾಕೂಟದ ಹಿನ್ನೆಲೆಯಲ್ಲಿ ಚೀನಾಗೆ ಪ್ರವಾಸ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಆತಿಥೇಯರ ಆಹ್ವಾನವನ್ನು ಖಡಾಖಂಡಿತವಾಗಿ ತಿರಸ್ಕರಿಸಿದ್ದಾರೆ.
ಚೀನಾ ತಾರತಮ್ಯವನ್ನು ವಿರೋಧಿಸಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ತಮ್ಮ ಚೀನಾ ಭೇಟಿಯನ್ನು ರದ್ದುಗೊಳಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ಶುಕ್ರವಾರ ತಿಳಿಸಿದೆ.
Our response to media queries on some Indian sportspersons being denied entry into 19th Asian Games:https://t.co/wtoQA8zaDH pic.twitter.com/cACRspcQkD
— Arindam Bagchi (@MEAIndia) September 22, 2023
ಚೀನಾದ ಹ್ಯಾಂಗ್ಝೌನಲ್ಲಿ ನಡೆಯಲಿರುವ 19 ನೇ ಏಷ್ಯನ್ ಕ್ರೀಡಾಕೂಟಕ್ಕೆ ಮಾನ್ಯತೆ ಮತ್ತು ಪ್ರವೇಶ ನಿರಾಕರಿಸುವ ಮೂಲಕ ಚೀನಾದ ಅಧಿಕಾರಿಗಳು ಅರುಣಾಚಲ ಪ್ರದೇಶದ ಕೆಲವು ಭಾರತೀಯ ಕ್ರೀಡಾಪಟುಗಳಿಗೆ ಪೂರ್ವನಿಯೋಜಿತ ತಾರತಮ್ಯ ಎಸಗಿದೆ ಎಂದು ಭಾರತ ಸರ್ಕಾರ ತಿಳಿದುಕೊಂಡಿದೆ ಎಂದು ಗೃಹ ಸಚಿವಾಲಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ವಾಸಸ್ಥಳ ಅಥವಾ ಜನಾಂಗೀಯತೆಯ ಆಧಾರದ ಮೇಲೆ ಭಾರತೀಯ ನಾಗರಿಕರನ್ನು ವಿಭಿನ್ನವಾಗಿ ಪರಿಗಣಿಸುವುದನ್ನು ಭಾರತ ವಿರೋಧಿಸುತ್ತದೆ. ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿದೆ ಎಂದು ಗೃಹ ಸಚಿವಾಲಯ ಹೇಳಿದೆ.
ಭಾರತವು ಕುರಿತು ತಮ್ಮ ಬಲವಾದ ಪ್ರತಿಭಟನೆ ದಾಖಲಿಸಿದೆ. ಏಷ್ಯನ್ ಕ್ರೀಡಾಕೂಟದ ಸ್ಫೂರ್ತಿ ಮತ್ತು ಸದಸ್ಯ ರಾಷ್ಟ್ರಗಳ ಸ್ಪರ್ಧಿಗಳ ವಿರುದ್ಧ ತಾರತಮ್ಯವನ್ನು ನಿಷೇಧಿಸುವ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಚೀನಾವನ್ನು ತರಾಟೆಗೆ ತೆಗೆದುಕೊಳ್ಳುತ್ತೇವೆ ಎಂದು ಭಾರತ ಹೇಳಿದೆ.
ಚೀನಾದ ಕ್ರಮದ ವಿರುದ್ಧ ನಮ್ಮ ಪ್ರತಿಭಟನೆಯ ಸಂಕೇತವಾಗಿ, ಭಾರತದ ಮಾಹಿತಿ ಮತ್ತು ಪ್ರಸಾರ ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವರು ಚೀನಾಕ್ಕೆ ನಿಗದಿಯಾಗಿದ್ದ ಭೇಟಿಯನ್ನು ರದ್ದುಗೊಳಿಸಿದ್ದಾರೆ. ನಮ್ಮ ಹಿತಾಸಕ್ತಿಗಳನ್ನು ರಕ್ಷಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಭಾರತ ಸರ್ಕಾರ ಕಾಯ್ದಿರಿಸಿದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇಡೀ ಅರುಣಾಚಲ ಪ್ರದೇಶ ಚೀನಾದ ವಾದವನ್ನು ತಿರಸ್ಕರಿಸಿದೆ: ಕೇಂದ್ರ ಸಚಿವ ಕಿರಣ್ ರಿಜಿಜು
ಅರುಣಾಚಲ ಪ್ರದೇಶದ ಕ್ರೀಡಾಪಟುಗಳಿಗೆ ವೀಸಾ ನಿರಾಕರಿಸುವ ಚೀನಾದ ನಿರ್ಧಾರವನ್ನು ಕೇಂದ್ರ ಭೂ ವಿಜ್ಞಾನ ಸಚಿವ ಕಿರಣ್ ರಿಜಿಜು ಮಂಗಳವಾರ ಬಲವಾಗಿ ಖಂಡಿಸಿದ್ದಾರೆ. ರಾಜ್ಯದ ಜನರು ತಮ್ಮ ಭೂಮಿಯ ಮೇಲಿನ ಚೀನಾದ ಹಕ್ಕನ್ನು ದೃಢವಾಗಿ ವಿರೋಧಿಸುತ್ತದೆ. ಹೀಗಾಗಿ ಚೀನಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಗೆ (ಐಒಸಿ) ಕರೆ ನೀಡಿದರು.
ಹ್ಯಾಂಗ್ಝೌನಲ್ಲಿ ನಡೆಯಲಿರುವ 19 ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸಬೇಕಿದ್ದ ಅರುಣಾಚಲ ಪ್ರದೇಶದ ನಮ್ಮ ವುಶು ಕ್ರೀಡಾಪಟುಗಳಿಗೆ ವೀಸಾ ನಿರಾಕರಿಸಿದ ಚೀನಾದ ಈ ಕ್ರಮವನ್ನು ನಾನು ಬಲವಾಗಿ ಖಂಡಿಸುತ್ತೇನೆ. ಇದು ಕ್ರೀಡಾ ಸ್ಫೂರ್ತಿ ಮತ್ತು ಏಷ್ಯನ್ ಕ್ರೀಡಾಕೂಟದ ನಡವಳಿಕೆಯನ್ನು ನಿಯಂತ್ರಿಸುವ ನಿಯಮಗಳನ್ನು ಉಲ್ಲಂಘಿಸುತ್ತದೆ, ಇದು ಸದಸ್ಯ ರಾಷ್ಟ್ರಗಳ ಸ್ಪರ್ಧಿಗಳ ವಿರುದ್ಧ ತಾರತಮ್ಯವನ್ನು ಸ್ಪಷ್ಟವಾಗಿ ನಿಷೇಧಿಸುತ್ತದೆ” ಎಂದು ಅವರು ರಿಜಿಜು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
I strongly condemn this act by China to deny visas to our Wushu Athletes from Arunachal Pradesh who were to participate in the 19th Asian Games in Hangzhou. This violates both the spirit of Sports & also the Rules governing the conduct of Asian Games, which explicitly prohibits…
— Kiren Rijiju (@KirenRijiju) September 22, 2023
ಅರುಣಾಚಲ ಪ್ರದೇಶವು ವಿವಾದಿತ ಪ್ರದೇಶವಲ್ಲ. ಅದು ಭಾರತದ ಅವಿಭಾಜ್ಯ ಅಂಗವಾಗಿದೆ. ಅರುಣಾಚಲ ಪ್ರದೇಶದ ಸಂಪೂರ್ಣ ಜನರು ತನ್ನ ಭೂಮಿ ಮತ್ತು ಜನರ ಮೇಲೆ ಚೀನಾದ ಯಾವುದೇ ಕಾನೂನುಬಾಹಿರ ಹಕ್ಕನ್ನು ದೃಢವಾಗಿ ವಿರೋಧಿಸುತ್ತಾರೆ. ಚೀನಾದ ಕಾನೂನುಬಾಹಿರ ಕ್ರಮವನ್ನು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ನಿಯಂತ್ರಿಸಬೇಕು ಎಂದು ಅವರು ಹೇಳಿದರು.
ಈ ವಿಷಯವನ್ನು ಎರಡೂ ಸರ್ಕಾರಗಳೊಂದಿಗೆ ತೆಗೆದುಕೊಳ್ಳಲಾಗುತ್ತಿದೆ: ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ
ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾದ ಹಂಗಾಮಿ ಅಧ್ಯಕ್ಷ ರಣಧೀರ್ ಸಿಂಗ್ ಪ್ರತಿಕ್ರಿಯೆ ನೀಡಿ, ಈ ವಿಷಯವನ್ನು ಆಯೋಜಕರ ಕಾರ್ಯಕಾರಿ ಗುಂಪಿನೊಂದಿಗೆ ಚರ್ಚಿಸಲಾಗುವುದು. ಎರಡೂ ದೇಶಗಳ ಸರ್ಕಾರಗಳೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ನಾವು ನಿನ್ನೆ ಕಾರ್ಯಕಾರಿ ಗುಂಪಿನೊಂದಿಗೆ ಸಭೆ ನಡೆಸಿದ್ದೇವೆ. ಅವರು ಇದನ್ನು ಸರ್ಕಾರದ ಗಮನಕ್ಕೆ ತರುತ್ತಿದ್ದಾರೆ. ಇದು ನಮ್ಮೊಳಗೂ ಚರ್ಚೆಯಲ್ಲಿದೆ. ನಾವು ಅದರ ಒಸಿಎ ಕಡೆಯಿಂದ ಬಂದಿದ್ದೇವೆ. ನಾವು ಅದನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ಹೇಳಿದರು.
ಏನಿದು ವಿವಾದ?
ಅರುಣಾಚಲ ಪ್ರದೇಶದ ವುಶು ಅಥ್ಲೀಟ್ಗಳು ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ಗಾಗಿ ಚೀನಾಕ್ಕೆ ಪ್ರಯಾಣಿಸಲು ಸಾಧ್ಯವಾಗಿಲ್ಲ ಎಂದು ವರದಿಯಾಗಿದೆ. ನೈಮನ್ ವಾಂಗ್ಸು, ಒನಿಲು ಟೆಗಾ ಮತ್ತು ಮೆಪುಂಗ್ ಲಮ್ಗು ಅವರನ್ನೊಳಗೊಂಡ ಮೂವರು ತಂಡದ ಸದಸ್ಯರಿಗೆ ಚೀನಾ ಪ್ರವೇಶಕ್ಕೆ ಅವಕಾಶ ಸಿಗಲಿರಲಿಲ್ಲ. ಅವರು ದೆಹಲಿಯಲ್ಲೇ ಉಳಿದುಕೊಂಡಿದ್ದಾರೆ
ವರದಿಗಳ ಪ್ರಕಾರ, ಹ್ಯಾಂಗ್ಝೌ ಏಷ್ಯನ್ ಗೇಮ್ಸ್ ಸಂಘಟನಾ ಸಮಿತಿಯು ಮೂವರು ಕ್ರೀಡಾಪಟುಗಳಿಗೆ ಮಾನ್ಯತಾ ಪತ್ರ ನೀಡಿದೆ. ಆದರೆ ಅವರ ಪತ್ರಗಳನ್ನು ಮೌಲ್ಯಮಾಪನಕ್ಕಾಗಿ ಡೌನ್ಲೋಡ್ ಮಾಡಲು ಸಾಧ್ಯವಾಗಲಿಲ್ಲ. ಇತರ ಕ್ರೀಡಾಪಟುಗಳಿಗೆ ಯಾವುದೇ ಸಮಸ್ಯೆ ಉಂಟಾಗಿಲ್ಲ. ಐಜಿಐ ವಿಮಾನ ನಿಲ್ದಾಣದಿಂದ ಬುಧವಾರ ರಾತ್ರಿ ಚೀನಾಕ್ಕೆ ತೆರಳಲು ಸಜ್ಜಾಗಿದ್ದ 11 ಸದಸ್ಯರ ವುಶು ತಂಡದ ಭಾಗವಾಗಿದ್ದರು ಅವರೆಲ್ಲರೂ.
ಏಷ್ಯನ್ ಗೇಮ್ಸ್ ಗಾಗಿ ಭಾರತದ ಚೆಫ್-ಡಿ-ಮಿಷನ್ ಭೂಪೇಂದ್ರ ಸಿಂಗ್ ಬಜ್ವಾ ಈ ವಿಷಯವನ್ನು ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ ಮತ್ತು ಹ್ಯಾಂಗ್ ಝೌ ಏಷ್ಯನ್ ಗೇಮ್ಸ್ ಸಂಘಟನಾ ಸಮಿತಿಯ ಗಮನಕ್ಕೆ ತಂದರು. ಇದಕ್ಕೂ ಮುನ್ನ ಚೆಂಗ್ಡುವಿನಲ್ಲಿ ನಡೆಯಲಿರುವ ವಿಶ್ವ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಭಾಗವಹಿಸಲು 12 ಸದಸ್ಯರ ತಂಡ ಪ್ರಯಾಣಿಸುತ್ತಿದ್ದಾಗ ದೆಹಲಿಯ ಚೀನಾದ ರಾಯಭಾರ ಕಚೇರಿ ಮೂವರು ಕ್ರೀಡಾಪಟುಗಳಿಗೆ ಸ್ಟೇಪಲ್ಡ್ ವೀಸಾಗಳನ್ನು (ಅಧಿಕೃತ ಮುದ್ರೆಯೊತ್ತದ ಅನುಮತಿ ಪತ್ರ) ನೀಡಿತ್ತು. ಆ ಸಮಯದಲ್ಲಿ ಭಾರತವು ಬಲವಾದ ಪ್ರತಿಭಟನೆಯನ್ನು ದಾಖಲಿಸಿದ ನಂತರ ಪ್ರವಾಸ ರದ್ದುಗೊಳಿಸಲಾಯಿತು.
ಅರುಣಾಚಲ ಪ್ರದೇಶದ ಕ್ರೀಡಾಪಟುಗಳಿಗೆ ಈ ಹಿಂದೆಯೂ ಸ್ಟಾಂಪ್ ವೀಸಾ ನೀಡಲು ಚೀನಾ ನಿರಾಕರಿಸಿದೆ . 2011ರಲ್ಲಿ ಅರುಣಾಚಲ ಪ್ರದೇಶದ ಐವರು ಕರಾಟೆ ಪಟುಗಳಿಗೆ ಕ್ವಾನ್ಝೌನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಲು ಸ್ಟೇಪಲ್ಡ್ ವೀಸಾ ನೀಡಲಾಗಿತ್ತು. ಏಪ್ರಿಲ್‌ನಲ್ಲಿ ಅರುಣಾಚಲ ಪ್ರದೇಶದ ಕೆಲವು ಸ್ಥಳಗಳ ಮರುನಾಮಕರಣವನ್ನು ಚೀನಾ ಸಾರಾಸಗಟಾಗಿ ತಿರಸ್ಕರಿಸಿತ್ತು.
ಚೀನಾದ ಹೊಸ ‘ಕಾನೂನುಬಾಹಿರ’ ನಕ್ಷೆ
ಈ ತಿಂಗಳ ಆರಂಭದಲ್ಲಿ, ಚೀನಾ ತನ್ನ ದೇಶದ ಹೊಸ ನಕ್ಷೆಯನ್ನು ಪ್ರಕಟಿಸಿ ಅರುಣಾಚಲ ಪ್ರದೇಶ ತನ್ನ ಭಾಗವೆಂದು ಹೇಳಿತ್ತು. ಇದು ಭಾರತವನ್ನು ಕೆರಳಿಸಿತ್ತು. ಚೀನಾದ ನೈಸರ್ಗಿಕ ಸಂಪನ್ಮೂಲ ಸಚಿವಾಲಯದ ವೆಬ್ಸೈಟ್ ಮತ್ತು ಅಲ್ಲಿನ ಗ್ಲೋಬಲ್ ಟೈಮ್ಸ್ ಹೊಸ ನಕ್ಷೆಯನ್ನು ಹಂಚಿಕೊಂಡಿತ್ತು. ಅರುಣಾಚಲ ಪ್ರದೇಶ, ಅಕ್ಸಾಯ್ ಚಿನ್ ಪ್ರದೇಶ, ತೈವಾನ್ ಮತ್ತು ದಕ್ಷಿಣ ಚೀನಾ ಸಮುದ್ರ ಪ್ರದೇಶದಗಳನ್ನು ತಮ್ಮ ಭೂಪ್ರದೇಶದ ಅಡಿಯಲ್ಲಿ ಸೇರಿಸಿಕೊಳ್ಳಲಾಗಿದೆ.
ಈ ನಕ್ಷೆಯನ್ನು ಯುನೈಟೆಡ್ ಸ್ಟೇಟ್ಸ್, ತೈವಾನ್ ಮತ್ತು ವಿಯೆಟ್ನಾಂ ಸೇರಿದಂತೆ ಹಲವಾರು ದೇಶಗಳು ವ್ಯಾಪಕವಾಗಿ ಟೀಕಿಸಿದವು. ಹಲವಾರು ಪ್ರತಿಭಟನೆಗಳ ಹೊರತಾಗಿಯೂ, ಚೀನಾ ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಆಧಾರರಹಿತ ಪ್ರಾದೇಶಿಕ ಹಕ್ಕುಗಳನ್ನು ಸ್ಥಾಪಿಸುವುದನ್ನು ಮುಂದುವರಿಸಿದೆ.
ಇದನ್ನೂ ಓದಿ : G20 Summit 2023: ಭಾರತ ಸೂಪರ್ ಪವರ್ ರಾಷ್ಟ್ರ, ಚೀನಾಕ್ಕಿಂತ ಮುಂದಿದೆ; ಆಫ್ರಿಕನ್ ಯೂನಿಯನ್ ಶ್ಲಾಘನೆ
ಏಪ್ರಿಲ್‌ನಲ್ಲಿ ಅರುಣಾಚಲ ಪ್ರದೇಶದ 11 ಸ್ಥಳಗಳ ಹೆಸರುಗಳನ್ನು ಪ್ರಮಾಣೀಕರಿಸುವುದಾಗಿ ಚೀನಾ ಸರ್ಕಾರ ಹೇಳಿತ್ತು. ಆ ಸಮಯದಲ್ಲಿ, ಅರುಣಾಚಲ ಪ್ರದೇಶ ದಕ್ಷಿಣ ಟಿಬೆಟ್ ಎಂದಿತ್ತು. ಅಲ್ಲಿನ ಸರ್ಕಾರವು ಜಾಂಗ್ನಾನ್ ಎಂದು ಹೇಳಿಕೊಂಡಿತ್ತು. ಇದಲ್ಲದೆ, ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು ಅರುಣಾಚಲ ಪ್ರದೇಶದ ರಾಜಧಾನಿ ಇಟಾನಗರಕ್ಕೆ ಹತ್ತಿರ ಪಟ್ಟಣವೊಂದನ್ನು ನಿರ್ಮಿಸಿದೆ.
ಇತ್ತ , ಅರುಣಾಚಲ ಪ್ರದೇಶ ಎಂದೆಂದಿಗೂ ಭಾರತ ಅವಿಭಾಜ್ಯ ಅಂಗ ಎಂದು ಹೇಳಿದೆ ನವದೆಹಲಿಯಲ್ಲಿ ನಡೆಯಲಿರುವ ಬಹುನಿರೀಕ್ಷಿತ ಜಿ 20 ಶೃಂಗಸಭೆಗೆ ಸುಮಾರು ಹತ್ತು ದಿನಗಳ ಮೊದಲು ಭಾರತ ಮತ್ತೊಂದು ಬಾರಿ ಇದನ್ನು ದೃಢಪಡಿಸಿತ್ತು.
EXPLAINER
ವಿಸ್ತಾರ Explainer: ಕೆನಡಾದ ಜಸ್ಟಿನ್ ಟ್ರುಡೋ ಸರ್ಕಾರ ಖಲಿಸ್ತಾನಿಗಳಿಗೆ ಬೆಂಬಲ ನೀಡುತ್ತಿರುವುದೇಕೆ? ಇಲ್ಲಿದೆ ಇನ್‌ಸೈಡ್ ಸ್ಟೋರಿ!
ವಿಸ್ತಾರ Explainer: ಭಾರತ ಹಾಗೂ ಕೆನಡಾ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ತಾರಕಕ್ಕೇರಿದೆ. ಭಾರತದ ವಿರುದ್ಧ ಕೆನಡಾ ಆರೋಪ ಮಾಡುವುದು, ಭಾರತದ ರಾಯಭಾರಿಯನ್ನು ಉಚ್ಚಾಟಿಸುವುದು ಸೇರಿ ಹಲವು ಉದ್ಧಟತನ ಮಾಡುತ್ತಿದೆ. ಇದಕ್ಕೆ ಭಾರತವೂ ತಕ್ಕ ತಿರುಗೇಟು ನೀಡುತ್ತಿದೆ. ಆದರೆ, ಬಿಕ್ಕಟ್ಟಿನ ಹಿಂದೆ ಏನಿದೆ ಕಾರಣ?
“ಕೆನಡಾದಲ್ಲಿರುವ ಭಾರತ ವಿರೋಧಿ ಚಟುವಟಿಕೆಗಳನ್ನು ನಿಗ್ರಹಿಸಿ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳವವರೆಗೆ ಭಾರತ ಹಾಗೂ ಕೆನಡಾ ಮಧ್ಯೆ ಎಲ್ಲವೂ ಚೆನ್ನಾಗಿತ್ತು. ಖುಷಿಯಿಂದಲೇ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಜಿ20 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದರು. ಭಾರತದ ಆತಿಥ್ಯ ಸ್ವೀಕರಿಸಿದ್ದರು. ಆದರೆ, ಯಾವಾಗ ಮೋದಿ ಅವರು ಭಾರತ ವಿರೋಧಿ ಚಟುವಟಿಕೆಗಳು ಎಂದರೋ, ಆಗ ಜಸ್ಟಿನ್ ಟ್ರುಡೋ ವಿಚಲಿತರಾದರು. ವಿಮಾನ ಕೆಟ್ಟು ನಿಂತಾಗ ಭಾರತದ ವಿಐಪಿ ಕೋಣೆಗಳಲ್ಲಿ ಇರಿ ಎಂದರೆ ಒಲ್ಲೆ ಎಂದರು. ನಮ್ಮದೇ ದೇಶದ ವಿಮಾನದಲ್ಲಿ (ಏರ್ ಇಂಡಿಯಾ ಒನ್) ಕೆನಡಾಗೆ ತೆರಳಿ ಎಂದಾಗಲೂ ಜಸ್ಟಿನ್ ಟ್ರುಡೋ ಬೇಡ ಎಂದು ತಲೆ (ವಿಸ್ತಾರ Explainer) ಅಲ್ಲಾಡಿಸಿದರು.
ಭಾರವಾದ ಮನಸ್ಸಿನಿಂದ ಭಾರತದಿಂದ ಹಿಂತಿರುಗಿದ ಕೆಲವೇ ದಿನಗಳಲ್ಲಿ ಭಾರತದ ಜತೆ ನಡೆಯಬೇಕಿದ್ದ ವ್ಯಾಪಾರ ಒಪ್ಪಂದವನ್ನು ಕೆನಡಾ ರದ್ದುಪಡಿಸಿತು. ಕೆನಡಾದಲ್ಲಿರುವ ಭಾರತದ ರಾಯಭಾರಿಯನ್ನು ಉಚ್ಚಾಟಿಸಿತು. ಭಾರತದ ವಿರುದ್ಧ ಹಲವು ಆರೋಪ ಮಾಡಿತು. ಜಮ್ಮು-ಕಾಶ್ಮೀರ, ಮಣಿಪುರದಲ್ಲಿ ಹಿಂಸೆ ನಡೆಯುತ್ತಿದೆ, ಅಲ್ಲಿಗೆ ತೆರಳಬೇಡಿ ಎಂದು ಭಾರತದಲ್ಲಿರುವ ಕೆನಡಾ ನಾಗರಿಕರಿಗೆ ಸೂಚಿಸಿತು. ಹಾಗಾದರೆ, ಭಾರತದ ಮೇಲೆ ಕೆನಡಾ ಇಷ್ಟೊಂದು ಮುರಕೊಂಡು ಬೀಳಲು ಕಾರಣವೇನು? ನರೇಂದ್ರ ಮೋದಿ ಅವರು “ಭಾರತ ವಿರೋಧಿ ಚಟುವಟಿಕೆ” ಎಂದು ಹೇಳಿದ್ದು ಜಸ್ಟಿನ್ ಟ್ರುಡೋ ಅವರಿಗೇಕೆ ಅಷ್ಟೊಂದು ಆಳವಾಗಿ ನಾಟಿತು? ಜಸ್ಟಿನ್ ಟ್ರುಡೋ ಅವರೇಕೆ ಖಲಿಸ್ತಾನಿಗಳ ಪರ ನಿಲ್ಲುತ್ತಿದ್ದಾರೆ? ಅವರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಪರೋಕ್ಷವಾಗಿ ಸೂಚಿಸಿದರೂ ಏಕೆ ಜಸ್ಟಿನ್ ಟ್ರುಡೋ ಕೆರಳಿ ಕೆಂಡವಾಗಿದ್ದಾರೆ? ಇದರ ಹಿಂದೆ ಯಾವ ರಾಜಕೀಯ, ಅಧಿಕಾರದ ದಾಹ ಅಡಗಿದೆ? ಅಷ್ಟಕ್ಕೂ, ಖಲಿಸ್ತಾನಿಗಳ ಬೆಂಬಲ ಇಲ್ಲದಿದ್ದರೆ ಜಸ್ಟಿನ್ ಟ್ರುಡೋ ಅಧಿಕಾರವನ್ನೇ ಕಳೆದುಕೊಳ್ಳಲಿದ್ದಾರೆಯೇ? ಇಲ್ಲಿದೆ ಮಾಹಿತಿ.
ಖಲಿಸ್ತಾನಿ ಪಕ್ಷದ ಬೆಂಬಲವೇ ಜಸ್ಟಿನ್ ಟ್ರುಡೋ ಬಲ
ಒಂದೇ ಮಾತಿನಲ್ಲಿ ಹೇಳುವುದಾದರೆ, ಜಸ್ಟಿನ್ ಟ್ರುಡೋ ಸರ್ಕಾರ ನಿಂತಿರುವುದೇ ಖಲಿಸ್ತಾನಿಗಳ ಪರವಾಗಿರುವ ಪಕ್ಷದ ಬೆಂಬಲದ ಮೇಲೆ. ಹೌದು, 2021ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಜಸ್ಟಿನ್ ಟ್ರುಡೋ ಅವರ ಲಿಬರಲ್ ಪಕ್ಷವು ಬಹುಮತ ಪಡೆದು ಅಧಿಕಾರ ಪಡೆದಿಲ್ಲ. ಮ್ಯಾಜಿಕ್ ನಂಬರ್ ಆದ 170 ಸೀಟುಗಳ ಬದಲು ಜಸ್ಟಿನ್ ಟ್ರುಡೋ ಅವರ ಪಕ್ಷವು 157 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆಗ, ಖಲಿಸ್ತಾನಿಗಳ ಪರ ಒಲವಿರುವ, ಜಗಮೀತ್ ಸಿಂಗ್ ನೇತೃತ್ವದ ನ್ಯೂ ಡೆಮಾಕ್ರಟಿಕ್ ಪಕ್ಷವು ಜಸ್ಟಿನ್ ಟ್ರುಡೋ ಅವರಿಗೆ ಬೆಂಬಲ ಸೂಚಿಸಿತು. ಜಗಮೀತ್ ಸಿಂಗ್ ತನ್ನ ಪಕ್ಷದ 25 ಸಂಸದರ ಬೆಂಬಲವನ್ನು ಜಸ್ಟಿನ್ ಟ್ರುಡೋ ಅವರಿಗೆ ಘೋಷಿಸಿದ. 182 ಸಂಸದರ ಬಲದೊಂದಿಗೆ ಜಸ್ಟಿನ್ ಟ್ರುಡೋ ಕೆನಡಾ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಈಗ ನರೇಂದ್ರ ಮೋದಿ ಅವರ ಕರೆಗೆ ಓಗೊಟ್ಟು ಕೆನಡಾದಲ್ಲಿರುವ ಖಲಿಸ್ತಾನಗಳ ವಿರುದ್ಧ ಕ್ರಮ ತೆಗೆದುಕೊಂಡರೆ, ಖಲಿಸ್ತಾನ ಚಳವಳಿ ಹಿನ್ನೆಲೆಯ ಜಗಮೀತ್ ಸಿಂಗ್ ಪಕ್ಷವು ಬೆಂಬಲ ವಾಪಸ್ ಪಡೆಯುತ್ತದೆ. ಆಗ, ಜಸ್ಟಿನ್ ಟ್ರುಡೋ ಅಧಿಕಾರ ಕಳೆದುಕೊಳ್ಳುತ್ತಾರೆ.
#JustinTrudeau
— Kadak (@kadak_chai_) September 19, 2023
Justin Trudeau blamed Bharat for k!lling of Khalistani Hardeep Singh Nijjar who was actually k!lled in an internal gang fight
How low can this Joker stoop for votes? pic.twitter.com/u8o4IjmBCa
ಯಾರು ಈ ಜಗಮೀತ್ ಸಿಂಗ್?
ಪಂಜಾಬ್ ಮೂಲದ ದಂಪತಿಗೆ ಕೆನಡಾದ ಒಂಟಾರಿಯೋದ ಸ್ಕಾರ್‌ಬೊರಫ್‌ನಲ್ಲಿ 1979ರಲ್ಲಿ ಜನಿಸಿದ ಜಗಮೀತ್ ಸಿಂಗ್ ಈಗ ಕೆನಡಾದ ಮೂರನೇ ಅತಿದೊಡ್ಡ ಪಕ್ಷದ ನಾಯಕನಾಗಿದ್ದಾನೆ. ವಕೀಲನಾಗಿ ವೃತ್ತಿ ಆರಂಭಿಸಿ, ಕೆನಡಾದಲ್ಲಿರುವ ಸಿಖ್ ಸಮುದಾಯದ ನಾಯಕನಾಗಿ, ಶಾಸಕನಾಗಿ, ಸಂಸದನಾಗಿ, ಖಲಿಸ್ತಾನ ಪರ ಹೋರಾಟಕ್ಕೆ ಬೆಂಬಲ ಸೂಚಿಸಿ ಈಗ ಸರ್ಕಾರದ ಭಾಗವೇ ಆಗಿದ್ದಾನೆ. ಅಷ್ಟೇ ಅಲ್ಲ, ಜಸ್ಟಿನ್ ಟ್ರುಡೋ ಅವರಿಗೇ ಆಗಾಗ ತನ್ನ ಬೇಡಿಕೆಗಳನ್ನು ಇಡುತ್ತ, ಅವುಗಳನ್ನು ಈಡೇರಿಸಿಕೊಳ್ಳುತ್ತ, ಪರೋಕ್ಷವಾಗಿ ಖಲಿಸ್ತಾನಿಗಳಿಗೆ ಬೆಂಬಲಿಸುತ್ತ ‘ಪವರ್ ಕಂಟ್ರೋಲರ್’ ಆಗಿ ಹೊರಹೊಮ್ಮಿದ್ದಾನೆ.
ಭಾರತದಲ್ಲಿ ಖಲಿಸ್ತಾನ ವಿಷ ಬೀಜ ಬಿತ್ತಿದ ಭಿಂದ್ರನ್‌ವಾಲೆಯ ಪೋಸ್ಟರ್‌ಗಳುಳ್ಳ ಖಲಿಸ್ತಾನಿ ಹೋರಾಟದಲ್ಲಿ ಜಗಮೀತ್ ಸಿಂಗ್ ಭಾಗವಹಿಸುತ್ತಾನೆ. ಆ ಮೂಲಕ ಖಲಿಸ್ತಾನಿ ಹೋರಾಟಕ್ಕೆ ಬೆಂಬಲ ಸೂಚಿಸುತ್ತಾನೆ. ಕೃಷಿ ಕಾಯ್ದೆಗಳ ವಿರುದ್ಧ ಭಾರತದಲ್ಲಿ ನಡೆದ ಪ್ರತಿಭಟನೆಯ ಹಿಂದೆ ಖಲಿಸ್ತಾನಿಗಳ ಕೈವಾಡ ಇದೆ ಎಂಬ ಮಾಹಿತಿ ಹರಿದಾಡುತ್ತಲೇ, ಭಾರತದ ರೈತರ ಪರ ಕಾಳಜಿ ತೋರುತ್ತಾನೆ. ಅವಕಾಶ ಸಿಕ್ಕಾಗಲೆಲ್ಲ ಭಾರತ ವಿರೋಧಿ ಮನಸ್ಥಿತಿ ತೋರುತ್ತಾನೆ. ಅಷ್ಟೇ ಏಕೆ, 2013ರಲ್ಲಿ ಈತ ಪಂಜಾಬ್‌ಗೆ ಆಗಮಿಸುತ್ತಾನೆ ಎಂದಾಗ ಆಗಿನ ಯುಪಿಎ ಸರ್ಕಾರವು ಈತನಿಗೆ ವೀಸಾ ನೀಡಿರಲಿಲ್ಲ.
ಇದನ್ನೂ ಓದಿ: India Canada Row: ಏಟಿಗೆ ಎದುರೇಟು; ಕೆನಡಾದಲ್ಲಿರುವ ಭಾರತೀಯರಿಗೆ ಕೇಂದ್ರ ಅಡ್ವೈಸರಿ
ಜಸ್ಟಿನ್ ಟ್ರುಡೋಗೆ ಅಧಿಕಾರವೇ ಮುಖ್ಯ
ತಂದೆಯ (ಪಿಯರ್ ಟ್ರುಡೋ) ಕಾಲದಿಂದಲೂ ಕೆನಡಾ ಅಧಿಕಾರದ ಪಡಸಾಲೆಯಲ್ಲಿ ಓಡಾಡಿಕೊಂಡಿರುವ ಜಸ್ಟಿನ್ ಟ್ರುಡೋ ಅವರಿಗೆ ಈಗ ಅಧಿಕಾರವೇ ಮುಖ್ಯ. ಯಾವುದೇ ಪಕ್ಷಕ್ಕೆ ಅಧಿಕಾರವೇ ಮುಖ್ಯವಾದರೂ, ಆ ಪಕ್ಷ ಯಾವ ನೀತಿಗಳ ಆಧಾರದ ಮೇಲೆ ನಿಲ್ಲುತ್ತದೆ ಎಂಬುದು ಮುಖ್ಯವಾಗುತ್ತದೆ. ಆದರೆ, ಖಲಿಸ್ತಾನಿಗಳಿಗೆ ಬೆಂಬಲ ನೀಡುವುದು ಪಿಯರ್ ಟ್ರುಡೋ ಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಈ ಸಂಪ್ರದಾಯವನ್ನು ಮುರಿಯುವುದು, ಮುರಿದು ಅಧಿಕಾರ ಕಳೆದುಕೊಳ್ಳುವುದು ಜಸ್ಟಿನ್ ಟ್ರುಡೋ ಅವರಿಗೆ ಸುತಾರಾಂ ಇಷ್ಟವಿಲ್ಲ. ಹಾಗಾಗಿಯೇ, ಜೂನ್‌ನಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೀಡಾಗಿದ್ದಕ್ಕೆ ಸೆಪ್ಟೆಂಬರ್‌ನಲ್ಲಿ ಭಾರತದ ವಿರುದ್ಧ ಮಾತನಾಡಿದರು. ಭಾರತ ವಿರೋಧಿ ಚಟುವಟಿಕೆ ನಿಯಂತ್ರಿಸಿ ಎಂದಿದ್ದಕ್ಕೇ ಭಾರತದ ರಾಯಭಾರಿಯನ್ನು ವಜಾಗೊಳಿಸಿದರು. ಈಗ ಭಾರತದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನೆನಪಿರಲಿ, 1982ರಲ್ಲಿ ಕೆನಡಾ ಪ್ರಧಾನಿಯಾಗಿದ್ದ ಪಿಯರ್ ಟ್ರುಡೋ, ಉಗ್ರ ತಲವಿಂದರ್ ಪಾರ್ಮರ್‌ನನ್ನು ಭಾರತಕ್ಕೆ ಹಸ್ತಾಂತರಿಸಲು ಒಪ್ಪಿರಲಿಲ್ಲ.
ಭಾರತ ವಿರುದ್ಧ ಜಸ್ಟಿನ್ ಟ್ರುಡೋ ಆರೋಪ
Canada is a rule of law country & the protection of our citizens & the defence of our sovereignty are fundamental.
— Kamal Khera (@KamalKheraLib) September 18, 2023
Allegations that the Indian gov. was involved in the killing of a Canadian citizen, Hardeep Singh Nijjar, on Canadian soil is extremely concerning & unacceptable. pic.twitter.com/oXYgOEJCBI
ಇದನ್ನೂ ಓದಿ: India Canada Row: ಕೆನಡಾಗೆ ಭಾರತ ಮತ್ತೊಂದು ಗುದ್ದು; ವೀಸಾ ಸೇವೆಯೇ ರದ್ದು
ಹೇಗಿದೆ ಭಾರತ-ಕೆನಡಾ ಸಂಬಂಧ?
ಕೆನಡಾದಲ್ಲಿ ಭಾರತೀಯ ಮೂಲದ 14 ಲಕ್ಷ ಜನ ವಾಸಿಸುತ್ತಿದ್ದಾರೆ. ಸುಮಾರು 2.26 ಲಕ್ಷ ವಿದ್ಯಾರ್ಥಿಗಳು ಕೆನಡಾದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಭಾರತ ಹಾಗೂ ಕೆನಡಾ ಮಧ್ಯೆ 8 ಶತಕೋಟಿಗೂ ಅಧಿಕ ಡಾಲರ್ ಮೊತ್ತದ ವ್ಯಾಪಾರ ಇದೆ. ಭಾರತವು 4 ಶತಕೋಟಿ ಡಾಲರ್ ಮೊತ್ತದ ಉತ್ಪನ್ನಗಳನ್ನು ಕೆನಡಾಗೆ ರಫ್ತು ಮಾಡುತ್ತದೆ. ಕೆನಡಾ ಭಾರತಕ್ಕೆ 4 ಶತಕೋಟಿ ಡಾಲರ್ ಮೊತ್ತದ ಉತ್ಪನ್ನಗಳನ್ನು ರಫ್ತು ಮಾಡುತ್ತದೆ. ಇಷ್ಟಿದ್ದರೂ 2010ಕ್ಕಿಂತ ಮೊದಲಿನಿಂದಲೂ ಭಾರತ ಹಾಗೂ ಕೆನಡಾ ವ್ಯಾಪಾರ ಸಂಬಂಧವು ಅಷ್ಟಕ್ಕಷ್ಟೇ ಇದೆ. 2010ರಿಂದಲೂ ಬೃಹತ್ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಮಾತುಕತೆ ನಡೆಸಲಾಗುತ್ತಿದೆ. ಆದರೆ, ಇತ್ತೀಚೆಗೆ ಒಪ್ಪಂದ ಮಾಡಿಕೊಳ್ಳಲು ಎರಡೂ ದೇಶ ಒಪ್ಪಿಕೊಂಡಿದ್ದವು. ಈಗ ಜಸ್ಟಿನ್ ಟ್ರುಡೋ ಅವರ ಅಧಿಕಾರದ ದಾಹದಿಂದಾಗಿ ಒಪ್ಪಂದವನ್ನು ಮುಂದೂಡಲಾಗಿದೆ. ಭಾರತ ಕೂಡ ಸರಿಯಾಗಿಯೇ ತಿರುಗೇಟು ನೀಡಿರುವುದರಿಂದ ಶೀಘ್ರದಲ್ಲಿ ಒಪ್ಪಂದ ಮಾಡಿಕೊಳ್ಳುವ ಲಕ್ಷಣಗಳೂ ಕಾಣಿಸುತ್ತಿಲ್ಲ.
-
ದೇಶ20 hours ago
Viral Video: ಫ್ರಿಡ್ಜ್ ಡೋರ್ ತೆಗೆಯಲು ಹೋದ 4 ವರ್ಷದ ಬಾಲಕಿಗೆ ಕರೆಂಟ್ ಶಾಕ್, ಸ್ಥಳದಲ್ಲೇ ಸಾವು
-
ಪ್ರಮುಖ ಸುದ್ದಿ15 hours ago
Dina Bhavishya : ಈ ರಾಶಿಯವರಿಗೆ ಮಾತೇ ಮುತ್ತು, ಮಾತೇ ಮೃತ್ಯು!
-
ಟಾಪ್ 10 ನ್ಯೂಸ್22 hours ago
VISTARA TOP 10 NEWS : ನಮಗೆ ರಕ್ಷಣೆ ಇಲ್ಲವೇ ಎಂದ ಹಿಂದೂಗಳು, ಸಿದ್ದರಾಮಯ್ಯ ವಿರುದ್ಧ ಮತ್ತೆ ಗುಡುಗಿದ ಶಾಮನೂರು ಇತರ ದಿನದ ಪ್ರಮುಖ ಸುದ್ದಿಗಳು
-
ದೇಶ24 hours ago
Plane Crash: ಜಿಂಬಾಬ್ವೆಯಲ್ಲಿ ವಿಮಾನ ಪತನ, ಭಾರತದ ಉದ್ಯಮಿ ಹಾಗೂ ಅವರ ಪುತ್ರ ದುರ್ಮರಣ
-
ದೇಶ21 hours ago
K Annamalai: ಲೇಡಿ ರಿಪೋರ್ಟರ್ ಜತೆ ಅಣ್ಣಾಮಲೈ ಕಿರಿಕ್! ಆಕೆ ಕೇಳಿದ ಪ್ರಶ್ನೆಗೆ ರೇಗಿದ ಬಿಜೆಪಿ ನಾಯಕ
-
ಕ್ರಿಕೆಟ್23 hours ago
ICC World Cup 2023 : ಭಾರತದ ಮಾಜಿ ಆಟಗಾರ ಅಫಘಾನಿಸ್ತಾನ ತಂಡದ ಮೆಂಟರ್
-
ದೇಶ11 hours ago
Raid On NewsClick: ನ್ಯೂಸ್ಕ್ಲಿಕ್ನ 30 ಪತ್ರಕರ್ತರ ಮನೆಗಳ ಮೇಲೆ ಪೊಲೀಸರ ದಾಳಿ, ಏನಿದು ಕೇಸ್?
-
ಕಿರುತೆರೆ5 hours ago
BBK Season 10 : ಅಕ್ಟೋಬರ್ 8 ರಿಂದ ಬಿಗ್ ಬಾಸ್ ಆಟ; ಚಾರ್ಲಿ ಎಂಟ್ರಿ ಕನ್ಫರ್ಮ್, ಉಳಿದವರು ಯಾರು ?