Site icon Vistara News

Manjamma in Cinema | ಚಿತ್ರರಂಗ ಪ್ರವೇಶ ಮಾಡಿದ ಮಂಜಮ್ಮ ಜೋಗತಿ, ಶಿವಲೀಲಾ ಚಿತ್ರದಲ್ಲಿ ಮುಖ್ಯಪಾತ್ರ

manjamma jogathi

ವಿಜಯನಗರ: ಕನ್ನಡ ಜಾನಪದ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ, ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ ಅವರು ಸಿನಿಮಾವೊಂದರಲ್ಲಿ ನಟಿಸಿದ್ದು ಈ ಚಿತ್ರ ಸದ್ಯವೇ ಬಿಡುಗಡೆ ಆಗಲಿದೆ.

ಉತ್ತರ ಕರ್ನಾಟಕದ ಜಾನಪದ ನೃತ್ಯ ರೂಪವಾದ ಜೋಗತಿ ನೃತ್ಯದಲ್ಲಿ ಖ್ಯಾತಿ ಪಡೆದ ಮಂಜಮ್ಮ ಅವರು ರಂಗಭೂಮಿ ನಟಿಯಾಗಿ, ಗಾಯಕಿಯಾಗಿ, ನರ್ತಕಿಯಾಗಿ ಗಮನ ಸೆಳೆದವರು. ಮಂಗಳಮುಖಿಯಾಗಿದ್ದರೂ ಆತ್ಮವಿಶ್ವಾಸ ಕಳೆದುಕೊಳ್ಳದೆ ಮಹಾಸಾಧನೆ ಮಾಡಿ ಮಾದರಿಯಾದವರು. ಜನಪದ ಕಲಾಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಮಂಜಮ್ಮ ಅವರು ಈಗ ಶಿವಲೀಲಾ ಎಂಬ ಚಿತ್ರದಲ್ಲಿ ನಟಿಸುತ್ತಿದ್ದು, ಇದು ಪಂಚ ಭಾಷೆಗಳಲ್ಲಿ ನಿರ್ಮಾಣವಾಗಿದೆ. ಮಂಗಳ ಮುಖಿಯವರ ಕಷ್ಟ ಸುಖಗಳ ಜೀವನಾಧಾರಿತ ಚಿತ್ರ ಇದಾಗಿದ್ದು, ಮಂಜಮ್ಮ ಜೋಗತಿಯವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಶಿವಲೀಲಾ ಸಿನಿಮಾ ಕನ್ನಡ, ಹಿಂದಿ, ಮಲೆಯಾಳಂ ತೆಲಗು ಮತ್ತು ತಮಿಳು ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರಕ್ಕೆ ಅಶೋಕ್ ಜಯರಾಮ ನಿರ್ದೇಶನ ಮಾಡಿದ್ದು, ಅವರು ನಿರ್ಮಾಪಕರೂ ಹೌದು. ಜತೆಗೆ ನಟನೆಯನ್ನೂ ಮಾಡಿದ್ದಾರೆ. ನಾಯಕ ನಟರಾಗಿ ಆರ್ಯನ್ ನಟಿಸಿದ್ದು, ಕನಕ ವಾಲ್ಮೀಕಿ ಅವರ ಕಲಾ ನಿರ್ದೇಶನವಿದೆ.

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯವರಾಗಿರುವ ಮಂಜಮ್ಮ ಜೋಗತಿ ಅವರು ಬಾಲ್ಯದಲ್ಲಿ ಭಾರಿ ಸಂಕಟಗಳನ್ನು ಅನುಭವಿಸಿದವರು. ಮಂಗಳಮುಖಿಯರ ಎಲ್ಲ ಕಷ್ಟ ಸುಖಗಳನ್ನು ಬಲ್ಲವರು ಮತ್ತು ಅನುಭವಿಸಿದವರು. ಹಾಗಾಗಿ ಅವರೇ ಮಂಗಳಮುಖಿಯರ ಬದುಕಿನ ಮುಖ್ಯಪಾತ್ರಕ್ಕೆ ಅವರೇ ಸೂಕ್ತ ಎಂದು ನಿರ್ದೇಶಕರು ನಿರ್ಧರಿಸಿದ್ದರು.

ಮಂಜಮ್ಮ ಜೋಗತಿ ಹೇಳಿದ್ದೇನು?
ನನ್ನ ಖುಷಿಯ ದಿನಗಳನ್ನು ಕಾಣುತ್ತಿದ್ದೇನೆ. ಮೂರು ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಅದರಲ್ಲಿ ಒಂದು ಚಿತ್ರ ಶಿವಲೀಲಾ. ಈ ಚಿತ್ರದಲ್ಲಿ ನಾನು ಐದು ಮಕ್ಕಳ ತಾಯಿಯಾಗಿ ನಟಿಸುತ್ತಿದ್ದೇನೆ. ಮಂಗಳಮುಖಿಯರ ಬದುಕು ಬವಣೆ, ಅವರ ಬೇಕು ಬೇಡಗಳು, ಆಸೆ, ನಿರೀಕ್ಷೆಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ. ತೃತೀಯ ಲಿಂಗಿಗಳು ಸಮಾಜದಿಂದ ಏನನ್ನು ಬಯಸುತ್ತಾರೆ, ಸಮಾಜ ಅವರನ್ನು ಹೇಗೆ ನೋಡಿಕೊಳ್ಳಬೇಕು ಎಂಬುದನ್ನು ಚಿತ್ರದಲ್ಲಿ ಹೃದಯಕ್ಕೆ ತಟ್ಟುವ ಹಾಗೆ ತೋರಿಸಲಾಗಿದೆ ಎಂದು ಮಂಜಮ್ಮ ಜೋಗತಿ ಹೇಳಿದರು.

Exit mobile version