Site icon Vistara News

Murder case| 24 ಬಾರಿ ಕಲ್ಲಿನಿಂದ ಜಜ್ಜಿ ಕೊಲೆ: ಹತ್ಯೆ ಹಿಂದಿನ ನಿಜ ರಹಸ್ಯ ಏನು? ಹಂತಕಿ ಸರೋಜಾ ಈಗ ಎಲ್ಲಿ?

Manjunath murder- saroja

ಬೆಂಗಳೂರು: ರಾಜಧಾನಿಯ ಕೆ.ಪಿ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ಬಾದಾಮಿಯ ತಾಲೂಕಿನ ಮಂಜುನಾಥ ಬಾಳಪ್ಪ ಜಮಖಂಡಿ ಎಂಬ ಯುವಕನನ್ನು ಆತನ ಪ್ರೇಯಸಿಯ ನೇತೃತ್ವದಲ್ಲಿ ಗುಂಪೊಂದು ೨೪ ಬಾರಿ ಕಲ್ಲಿನ ಜಜ್ಜಿ ಕೊಲೆ (Murder Case) ಮಾಡಿದ ಪ್ರಕರಣದ ಪ್ರಧಾನ ಆರೋಪಿ ಸರೋಜ ಇನ್ನೂ ನಾಪತ್ತೆಯಾಗಿದ್ದಾಳೆ. ಡಿಸೆಂಬರ್‌ ೪ರಂದು ರಾತ್ರಿ ಈ ಘಟನೆ ನಡೆದಿದ್ದು ಸರೋಜನ ಅಕ್ಕ ಅಕ್ಕಮಹಾದೇವಿ, ಬಂಧುಗಳಾದ ಪ್ರೇಮವ್ವ, ಮಂಜುನಾಥ್‌, ಕಿರಣ್‌, ಚೆನ್ನಪ್ಪ, ಕಾಶಿನಾಥ್‌ ಅವರನ್ನು ಈಗಾಗಲೇ ಬಂಧಿಸಲಾಗಿದೆ.

ಬಾಗಲಕೋಟೆ ಮೂಲದವಳಾಗಿರುವ ಸರೋಜ ಮೊಬೈಲ್‌ ಬಳಸದ ಹಿನ್ನೆಲೆಯಲ್ಲಿ ಆಕೆಯನ್ನು ಟ್ರ್ಯಾಕ್‌ ಮಾಡಲು ಕಷ್ಟವಾಗಿದೆ. ಜತೆಗೆ ಆಕೆಯ ಜತೆಗಾರರೆಲ್ಲ ಜೈಲು ಸೇರಿದ್ದಾರೆ. ಹೀಗಾಗಿ ಆಕೆ ಎಲ್ಲಿದ್ದಾಳೆ ಎನ್ನುವುದೇ ಪೊಲೀಸರಿಗೆ ಯಕ್ಷ ಪ್ರಶ್ನೆಯಾಗಿದೆ. ಆಕೆ ನಗರದಲ್ಲಿ ಇಲ್ಲವೇ ಆಂಧ್ರ ಪ್ರದೇಶದಲ್ಲಿ ತಲೆಮರೆಸಿಕೊಂಡಿರಬಹುದು ಎನ್ನುವುದು ಪೊಲೀಸರ ಲೆಕ್ಕಾಚಾರ.

ಮಂಜುನಾಥ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದವರು
ಮಂಜುನಾಥ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರು

ಭೀಕರ ಕೊಲೆಯ ಹಿಂದೆ ಹಲವು ಕಥೆಗಳು
ಸರೋಜಾ ಮತ್ತು ಮಂಜುನಾಥ್‌ ಬಹುಕಾಲದಿಂದ ಪರಿಚಿತರಾಗಿದ್ದು, ಹಣದ ವಿಚಾರದಲ್ಲಿ ತಗಾದೆ ಎದ್ದು ಸರೋಜಾಳನ್ನು ಕಾಡುತ್ತಿದ್ದ ಎನ್ನಲಾಗಿದೆ. ಹೀಗಾಗಿ ಬೆಂಗಳೂರಿನ ಅಕ್ಕನ ಮನೆಗೆ ಬಂದಿದ್ದ ಸರೋಜಾ ಅಲ್ಲಿ ವಿಚಾರ ತಿಳಿಸಿದ್ದಾಳೆ. ಜತೆಗೆ ಹಣ ಕೊಡುತ್ತೇನೆ ಬಾ ಎಂದು ಮಂಜುನಾಥನನ್ನು ಕರೆಸಿಕೊಂಡು ಕೊಲೆ ಮಾಡಲಾಗಿದೆ ಎನ್ನುವುದು ಪ್ರಾಥಮಿಕ ಮಾಹಿತಿಗಳು ತಿಳಿಸಿವೆ. ಹೀಗಾಗಿ ಇದೊಂದು ವ್ಯವಸ್ಥಿತ ಕೊಲೆ ಎಂದು ಪೊಲೀಸರು ಮೊದಲೇ ಶಂಕಿಸಿದ್ದರು. ಆರಂಭದಲ್ಲಿ ಕೊಲೆಯಾದವನು ಯಾರು ಎನ್ನುವುದು ಸ್ಪಷ್ಟವಾಗಿರಲಿಲ್ಲ. ಆದರೆ, ಮಂಜುನಾಥ ಸರೋಜಾಳನ್ನು ಭೇಟಿಯಾಗುವ ಮುನ್ನ ಪಕ್ಕದ ಮೆಡಿಕಲ್‌ ಸ್ಟೋರ್‌ನಲ್ಲಿ ತನ್ನ ಮೊಬೈಲನ್ನು ಜಾರ್ಜ್‌ಗೆ ಹಾಕಲು ಕೊಟ್ಟಿದ್ದರಿಂದ ಅವನ ಹಿನ್ನೆಲೆಯನ್ನು ಅರಿಯುವುದು ಸುಲಭವಾಯಿತು. ಕೊಲೆಯ ಸಿಸಿ ಟಿವಿ ದೃಶ್ಯ ಆಧರಿಸಿ ಎರಡೇ ದಿನದಲ್ಲಿ ಕೊಲೆಗಾರರ ಬಂಧನವೂ ಆಯಿತು. ಆದರೆ, ಸರೋಜ ಮಾತ್ರ ನಾಪತ್ತೆಯಾಗಿದ್ದಾಳೆ.

ಎಲ್ಲಿಂದ ಶುರುವಾಯಿತು ಸರೋಜಾ-ಮಂಜುನಾಥನ ಪ್ರೇಮ ಕಥೆ
ಮಂಜುನಾಥ ಮತ್ತು ಸರೋಜಾ ಇಬ್ಬರೂ ಒಂದೇ ಊರಿನವರು. ಮಂಜುನಾಥ ಬಾಳಪ್ಪ ಜಮಖಂಡಿ ಬಾಗಲಕೋಟೆಯ ಬಾದಾಮಿ ತಾಲೂಕಿನಲ್ಲಿ ಒಂದು ಖಾನಾವಳಿ ನಡೆಸುತ್ತಿದ್ದ. ಸರೋಜಾಳಿಗೆ ಮದುವೆಯಾಗಿ ಪತಿ ದುಬೈಯಲ್ಲಿದ್ದಾನೆ. ಟೈಮ್‌ ಪಾಸ್‌ಗೆಂದು ಸರೋಜಾ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದಳು. ಆಗ ಮಂಜುನಾಥ್‌ -ಸರೋಜಾರಿಗೆ ಪರಿಚಯವಾಗಿತ್ತು. ಅದು ಪ್ರೇಮಕ್ಕೆ ತಿರುಗಿ ದೈಹಿಕ ಸಂಬಂಧಗಳನ್ನು ದಾಟಿ ಹೋಗಿತ್ತು. ಕೊನೆಗೆ ಅವರಿಬ್ಬರು ಲಿವಿಂಗ್‌ ಟುಗೆದರ್‌ ಮಾದರಿಯಲ್ಲಿ ಜತೆಯಾಗಿ ವಾಸಿಸಲು ಶುರು ಮಾಡಿದ್ದರು. ಇದು ಇಬ್ಬರ ಕುಟುಂಬಕ್ಕೂ ಗೊತ್ತಿತ್ತು.

ಈ ವಿಚಾರ ದುಬೈಯಲ್ಲಿರುವ ಸರೋಜಾಳ ಗಂಡನಿಗೆ ಗೊತ್ತಾಗಿತ್ತು. ಆತ ಸರೋಜಾಳ ತಾಯಿ ಪ್ರೇಮವ್ವನಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದ. ಇದೆಲ್ಲದರ ನಡುವೆ ಮಂಜುನಾಥ ತನ್ನ ಖಾನಾವಳಿ ಮಾರಾಟ ಮಾಡಿ ಅದರಿಂದ ಬಂದ ಹಣದಲ್ಲಿ ದೊಡ್ಡ ಮೊತ್ತವನ್ನು ಸರೋಜಾಳಿಗೆ ನೀಡಿದ್ದ.

ಈ ನಡುವೆ, ಕೆಲವು ಸಮಯದ ಹಿಂದೆ ಮಂಜುನಾಥ ಮತ್ತು ಸರೋಜಾಳ ಸಂಬಂಧದಲ್ಲಿ ಬಿರುಕು ಬಿಟ್ಟಿತ್ತು. ವೈಮನಸ್ಸಿನಿಂದ ಅವರು ದೂರಾಗಿದ್ದರು. ಆತ ಮಂಜುನಾಥ ತಾನು ಕೊಟ್ಟ ಹಣದ ವಿಚಾರವನ್ನು ಮುಂದೆ ಮಾಡಿದ್ದ. ದುಡ್ಡು ವಾಪಸ್‌ ಕೊಡು ಎಂದು ಪೀಡಿಸಲು ಆರಂಭಿಸಿದ. ಈ ಬಗ್ಗೆ ಕುಟುಂಬದವರು ಮಂಜುನಾಥನ ಮೇಲೆ ಪೊಲೀಸರಿಗೆ ದೂರು ಕೂಡಾ ನೀಡಿದ್ದರು.

ಮಂಜುನಾಥನ ಕಿರಿಕಿರಿ ತಾಳಲಾರದೆ ಸರೋಜಾ ದಾವಣಗೆರೆಗೆ ಶಿಫ್ಟ್‌ ಆಗಿದ್ದಳು. ಆದರೆ, ಮಂಜುನಾಥ ಅಲ್ಲಿಯೂ ಬಿಡದೆ ಕಾಡಿದ್ದ ಎನ್ನಲಾಗಿದೆ. ಅಲ್ಲಿನ ಅಂಗಡಿಗೆ ಹೋಗಿ ಹಣಕ್ಕಾಗಿ ಪೀಡಿಸುತ್ತಿದ್ದ ಎಂದು ಹೇಳಲಾಗಿದೆ. ಅಲ್ಲೂ ಪೊಲೀಸರಿಗೆ ದೂರು ನೀಡಲಾಗಿತ್ತು.

ಈ ನಡುವೆ ಸರೋಜಾ ಮಂಜುನಾಥನಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಬೆಂಗಳೂರಿಗೆ ಹೊರಟಿದ್ದಳು. ಅಲ್ಲಿ ಆಕೆಯ ಅಕ್ಕ ಅಕ್ಕಮಹಾದೇವಿ ಇದ್ದಾಳೆ. ನವೆಂಬರ್‌ ಕೊನೆಯ ವಾರದಲ್ಲಿ ಆಕೆಯ ಬೆಂಗಳೂರಿಗೆ ಬಂದು ಅಕ್ಕನ ಮನೆಯಲ್ಲಿದ್ದಳು. ಒಂದು ಕೆಲಸ ಮತ್ತು ಒಂದು ಮನೆ ಹುಡುಕುತ್ತಿದ್ದಳು. ಆಗ ಮತ್ತೆ ಮಂಜುನಾಥನ ಕಿರಿಕಿರಿ ಆರಂಭವಾಗಿತ್ತು.

ಈ ವಿಚಾರವನ್ನು ಆಕೆ ಅಕ್ಕಮಹಾದೇವಿ ಮತ್ತು ಇತರರ ಜತೆ ಹೇಳಿಕೊಂಡಿದ್ದಳು. ಅವರೆಲ್ಲ ಸೇರಿ ಮಂಜುನಾಥನಿಗೆ ಒಂದು ಪಾಠ ಕಲಿಸಬೇಕು ಎಂದು ನಿರ್ಧರಿಸಿದ್ದರು. ಆಕೆಯನ್ನು ಬೆನ್ನು ಹತ್ತಿ ಬೆಂಗಳೂರಿಗೂ ಬಂದಿದ್ದ ಆತನನ್ನು ಡಿಸೆಂಬರ್‌ ನಾಲ್ಕರಂದು ರಾತ್ರಿ ಫೋನ್‌ ಮಾಡಿ ಕರೆಸಿಕೊಳ್ಳಲಾಗಿತ್ತು.

ಆವತ್ತು ಮಾತುಕತೆಗೆಂದು ಕರೆದಿದ್ದರೂ ಮಾತು ವಾಗ್ವಾದಕ್ಕೆ ತಿರುಗಿ ಆಕ್ರೋಶ ಹೆಚ್ಚಾಗಿತ್ತು. ಮಂಜುನಾಥ ಯಾವ ಕಾರಣಕ್ಕೂ ಬಿಡುವುದಿಲ್ಲ ಎಂದೆಲ್ಲ ಹೇಳಿದ್ದರಿಂದ ಸರೋಜಾ ಮತ್ತು ಇತರರು ಆತನನ್ನು ನೆಲಕ್ಕೆ ಉರುಳಿಸಿ ಹಲ್ಲೆ ಮಾಡಿದ್ದರು. ಬಳಿಕ ೨೪ ಬಾರಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಪರಾರಿಯಾಗಿದ್ದರು.

ನಿಜವೆಂದರೆ, ಮಂಜುನಾಥ ತಾನು ಸರೋಜಾಳನ್ನು ನೋಡಲು ಹೋಗುತ್ತಿರುವುದಾಗಿ ತಾಯಿಗೆ ಫೋನ್‌ ಮಾಡಿ ತಿಳಿಸಿದ್ದ. ತನಗೆ ಏನಾದರೂ ಆದರೆ ಮಾಗಡಿ ರಸ್ತೆಯಲ್ಲಿರುವ ಸರೋಜಾಳನ್ನೇ ಸಂಪರ್ಕಿಸಿ ಎಂದು ವಿಳಾಸ ಕೂಡಾ ಕೊಟ್ಟಿದ್ದ. ಹೀಗಾಗಿ ಇದೊಂದು ಅಕ್ರಮ ಸಂಬಂಧ, ಹಣಕಾಸು ವ್ಯವಹಾರ, ಮಾನಸಿಕ ಹಿಂಸೆ ಸೇರಿದ ವ್ಯವಸ್ಥಿತ ಕೊಲೆ ಎಂಬ ತೀರ್ಮಾನಕ್ಕೆ ಪೊಲೀಸರು ಬಂದಿದ್ದಾರೆ. ಸರೋಜಾಳನ್ನು ಹುಡುಕುವುದು ಈಗ ಅವರ ಮುಂದಿರುವ ಸವಾಲು.

ಇದನ್ನೂ ಓದಿ | Murder Case | 24 ಬಾರಿ ಕಲ್ಲು ಎತ್ತಿಹಾಕಿ ಯುವಕನ ಕೊಲೆ; ಆರೋಪಿಗಳನ್ನು ಬಂಧಿಸಿದ ಪೊಲೀಸರು

Exit mobile version