Site icon Vistara News

Praveen Nettaru | ಹತ್ಯೆ ವಿರೋಧಿಸಿ ಬಿಜೆಪಿಯಲ್ಲಿ ರಾಜೀನಾಮೆ ಅಭಿಯಾನ?

praveen nettaru

ಬೆಂಗಳೂರು/ಚಿಕ್ಕಮಗಳೂರು: ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟಾರ್‌ ಹತ್ಯೆ (Praveen Nettaru) ಪ್ರಕರಣ ಸಂಬಂಧ ಬಿಜೆಪಿಯ ಕಾರ್ಯಕರ್ತರು ಹಾಗೂ ಹಿಂದು ಸಂಘಟನೆಗಳಲ್ಲಿ ಆಕ್ರೋಶವನ್ನು ಹೆಚ್ಚಿಸಿದ್ದು, ಬಿಜೆಪಿ ಪ್ರಮುಖ ಹುದ್ದೆಗಳಿಗೆ ರಾಜೀನಾಮೆ ಪರ್ವ ಆರಂಭವಾಗಿದೆ. ಈಗಾಗಲೇ ಚಿಕ್ಕಮಗಳೂರು ಜಿಲ್ಲೆಯ ಹಲವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿ ತಮ್ಮ ಅಸಮಾಧಾನ ಹಾಗೂ ಆಕ್ರೋಶವನ್ನು ಹೊರಹಾಕಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಚಿಕ್ಕಮಗಳೂರು ಜಿಲ್ಲಾ ಯುವ ಮೋರ್ಚಾದ ಮಾಧ್ಯಮ ಪ್ರಮುಖ ಹುದ್ದೆಗೆ ಪ್ರೀತಮ್‌ ಹೆಬ್ಬಾರ್‌ ರಾಜೀನಾಮೆ ನೀಡಿರುವ ಕಾರಣವನ್ನು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ | Praveen Nettaru | ಬೆಳ್ಳಾರೆಯತ್ತ ತೆರಳುತ್ತಿರುವ ಸಚಿವ ಸುನಿಲ್, ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್‌

ಪ್ರೀತಮ್‌ ಹೆಬ್ಬಾರ್ ಪ್ರಕಟಣೆಯಲ್ಲೇನಿದೆ?

“ತಮಗೆ ತಿಳಿಸುವುದೇನೆಂದರೆ ಹಿಂದುತ್ವದ ಆಧಾರದ ಮೇಲೆ ಅಧಿಕಾರಕ್ಕೆ ಬಂದ ಬಿಜೆಪಿಗೆ ಹಿಂದು ಪರ ಕಾರ್ಯಕರ್ತರನ್ನು, ಪಕ್ಷದ ಕಾರ್ಯಕರ್ತರನ್ನು ಉಳಿಸಿಕೊಳ್ಳಲು ಆಗದೆ ಇರುವುದು ಅತ್ಯಂತ ಖೇದಕರ ಸಂಗತಿ. ಯಾವುದೇ ಹತ್ಯೆ ಆದಾಗಲೂ ಕಠಿಣ ಕ್ರಮದ ಭರವಸೆ ನೀಡಲಾಗುತ್ತಿದೆ. ಆದರೆ ಆ ಭರವಸೆ ಕೇವಲ ಭರವಸೆಯಾಗಿಯೇ ಉಳಿದಿದೆ.

ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಆಡ್ವಾಣಿ ಅವರಂತಹ ಮಹಾನ್ ನಾಯಕರು ಕಟ್ಟಿದ ಪಕ್ಷಕ್ಕೆ ಅವಮಾನ ಮಾಡದೆ ಇನ್ನು ಮುಂದಾದರೂ ಹಿಂದುಗಳನ್ನು, ಬಿಜೆಪಿ ಕಾರ್ಯಕರ್ತರನ್ನು ಉಳಿಸಿಕೊಂಡು ಹತ್ಯೆ ಮಾಡುವವರ ವಿರುದ್ಧ ರಾಜ್ಯದಲ್ಲಿ ಕಠಿಣ ಕಾನೂನು ಜಾರಿಗೊಳಿಸಬೇಕೆಂದು ಆಗ್ರಹಿಸಿ ನಾನು ನನ್ನ ಜವಾಬ್ದಾರಿಗೆ ರಾಜಿನಾಮೆ ನೀಡುತ್ತಿದ್ದು, ನನ್ನ ರಾಜೀನಾಮೆಯನ್ನು ಅಂಗೀಕರಿಸಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ.

ಮತ್ತೆ ಹಲವರ ರಾಜೀನಾಮೆ

ಪ್ರವೀಣ್‌ ಹೆಬ್ಬಾರ್‌ ರಾಜೀನಾಮೆ ಬೆನ್ನಲ್ಲೇ ಶೃಂಗೇರಿ ಮಂಡಲ ಅಧ್ಯಕ್ಷ ಸುನಿಲ್‌ ಸಂಪೆಕೊಳಲು ರಾಜೀನಾಮೆ ಸಲ್ಲಿಸಿದ್ದಾಗಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟರ್‌ ಮೂಲಕ ತಿಳಿಸಿದ್ದಾರೆ. ಇನ್ನು ಕೊಪ್ಪ ಮಂಡಲ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ವಿಜಯಾನಂದ ಸಿ. ರಾಜೀನಾಮೆ ಸಲ್ಲಿಸಿದ್ದರೆ, ಪ್ರಸಾದ್‌ ಗೌಡ ಎಂಬುವರು ಮೂಡಿಗೆರೆ ಬಿಜೆಪಿ ಯುವ ಮೋರ್ಚಾ ಸಾಮಾಜಿಕ ಜಾಲತಾಣ ಸಂಚಾಲಕನ ಜವಾಬ್ದಾರಿಯಿಂದ ಹಿಂದೆ ಸರಿಯುತ್ತಿರುವುದಾಗಿ ವಾಟ್ಸ್‌ಆ್ಯಪ್‌ ಮೂಲಕ ತಿಳಿಸಿದ್ದಾರೆ.

ಇದನ್ನೂ ಓದಿ | Praveen Nettaru | ಪ್ರವೀಣ್ ಹತ್ಯೆ ಖಂಡಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

Exit mobile version