ಬೆಂಗಳೂರು: ʻʻಮದುವೆಯಾದಾಗ ನನ್ನ ಹೆಂಡತಿಗೆ ಕೇವಲ ೧೭ ವರ್ಷವೂ ತುಂಬಿರಲಿಲ್ಲ. ಹೀಗಾಗಿ ಮದುವೆಯನ್ನು ಅನೂರ್ಜಿತಗೊಳಿಸಿʼ ಎಂದು ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು (Marital dispute) ಕೌಟುಂಬಿಕ ನ್ಯಾಯಾಲಯ ಒಪ್ಪಿಕೊಂಡು ವಿವಾಹವನ್ನೇ ಅನೂರ್ಜಿತಗೊಳಿಸಿತ್ತು. ಆದರೆ, ಹೈಕೋರ್ಟ್ ಈ ಆದೇಶವನ್ನು ರದ್ದುಗೊಳಿಸಿದೆ. ಮದುವೆಯಾದಾಗ ೧೮ ವರ್ಷ ಆಗಿಲ್ಲ ಎಂಬ ಕಾರಣಕ್ಕೆ ಆಗಿರುವ ಮದುವೆಯನ್ನು ರದ್ದುಪಡಿಸುವಂತಿಲ್ಲ ಎಂದು ತನ್ನ ತೀರ್ಪಿನಲ್ಲಿ ತಿಳಿಸಿದೆ.
ಕೌಟುಂಬಿಕ ನ್ಯಾಯಾಲಯದ ಆದೇಶದಿಂದ ನನಗೆ ಅನ್ಯಾಯವಾಗಿದೆ. ಹೀಗಾಗಿ ಅದನ್ನು ರದ್ದುಪಡಿಸಿ ಎಂದು ಕೋರಿ ಆ ವಿವಾಹಿತ ಯುವತಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಲೋಕ್ ಅರಾಧೆ ಅವರ ನೇತೃತ್ವದ ವಿಭಾಗೀಯ ಪೀಠವು ಈ ಆದೇಶವನ್ನು ನೀಡಿದೆ.
ಏನಿದು ಮದುವೆ ವಿವಾದ?
ಮಂಡ್ಯ ಜಿಲ್ಲೆಯ ಸುಶೀಲಾ ಮತ್ತು ಮಂಜುನಾಥ್ ಅವರ ವಿವಾಹ ಹಿಂದೂ ವಿವಾಹ ಕಾಯಿದೆ ಪ್ರಕಾರ 2012ರ ಜೂನ್ 15ರಂದು ನಡೆದಿತ್ತು. ಈ ನಡುವೆ, ಮದುವೆಯಾಗುವಾಗ ತಮ್ಮ ಪತ್ನಿಗೆ ೧೮ ವರ್ಷ ತುಂಬಿರಲಿಲ್ಲ. ಆಕೆಯ ಜನ್ಮ ದಿನಾಂಕ 06.09.1995 ಆಗಿತ್ತು ಎಂಬ ವಿಷಯ ಪತಿಗೆ ತಿಳಿದು ಬಂತು. ಆಗ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಪತಿ, ತಮ್ಮ ಮದುವೆಯನ್ನು ಅಸಿಂಧುಗೊಳಿಸಬೇಕು ಎಂದು ಮನವಿ ಮಾಡಿದ್ದರು.
ಹಿಂದೂ ವಿವಾಹ ಕಾಯಿದೆ-1955ರ ಸೆಕ್ಷನ್ 5(3)ರಂತೆ ಮದುವೆಯಾಗಲು ಮಧುವಿಗೆ 18 ವರ್ಷ ಆಗಿರಬೇಕು. ಪ್ರಕರಣದಲ್ಲಿ ಮದುವೆ ಆದ ಸಮಯದಲ್ಲಿ ಪತ್ನಿಗೆ 16 ವರ್ಷ 11 ತಿಂಗಳು 8 ದಿನ ಆಗಿತ್ತು. ಅಂದರೆ ಮದುವೆಯಾದಾಗ ಆಕೆ ಅಪ್ತಾಪ್ತರಾಗಿದ್ದರು. ಆ ಕಾರಣಕ್ಕೆ ವಿವಾಹ ಕಾಯಿದೆಯ ಸೆಕ್ಷನ್ 11ರ ಪ್ರಕಾರ ಊರ್ಜಿತವಾಗುವುದಿಲ್ಲ ಎಂದು ಕೌಟುಂಬಿಕ ನ್ಯಾಯಾಲಯ ತಿಳಿಸಿ ಮದುವೆಯನ್ನು ಅನೂರ್ಜಿತಗೊಳಿಸಿತ್ತು.
ಅಲ್ಲದೆ, ಸುಶೀಲಾ ಮತ್ತು ಮಂಜುನಾಥ್ ಅವರ ಮದುವೆಯನ್ನು ಅನೂರ್ಜಿತಗೊಳಿಸಿ 2015ರ ಜನವರಿ 8ರಂದು ಆದೇಶಿಸಿತ್ತು. ಈ ಆದೇಶ ರದ್ದುಪಡಿಸಲು ಕೋರಿ ಸುಶೀಲಾ ಹೈಕೋರ್ಟ್‌ಗೆ ಮನವಿ ಮಾಡಿದ್ದರು.
ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠವು ಹಿಂದೂ ವಿವಾಹ ಕಾಯಿದೆಯ ಸೆಕ್ಷನ್ 5(3) ಪ್ರಕಾರ ಮದುವೆ ಸಂದರ್ಭದಲ್ಲಿ ವರನ ವಯಸ್ಸು 21 ಮತ್ತು ವಧುವಿನ ವಯಸ್ಸು 18 ಇರಬೇಕು. ಆದರೆ, ಸೆಕ್ಷನ್ 11ರ ಅಡಿ ವಿವಾಹವನ್ನು ರದ್ದುಪಡಿಸಬೇಕಾದರೆ ಕಾಯಿದೆಯ ಸೆಕ್ಷನ್ 5ರ ನಿಯಮ 1, 4 ಮತ್ತು 5ಕ್ಕೆ ವಿರುದ್ಧವಾಗಿರಬೇಕು. ಮದುವೆಯಾದಾಗ 18 ವರ್ಷ ಆಗಿರಬೇಕು ಎಂಬ ನಿಯಮವನ್ನು ಸೆಕ್ಷನ್ 11ರ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಆದ್ದರಿಂದ ಅಪ್ರಾಪ್ತೆ ಎಂಬ ಕಾರಣಕ್ಕೆ ಸೆಕ್ಷನ್ 11 ಪ್ರಕಾರ ವಿವಾಹ ಅನೂರ್ಜಿತಗೊಳಿಸುವುದು ಈ ಪ್ರಕರಣಕ್ಕೆ ಅನ್ವಯಿಸದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಇದನ್ನೂ ಓದಿ | High court | ಸಂತ್ರಸ್ತೆಯನ್ನೇ ಮದುವೆಯಾದ ಅತ್ಯಾಚಾರ ಆರೋಪಿ: ಎಚ್ಚರಿಕೆ ನೀಡಿ ಪ್ರಕರಣಕ್ಕೆ ತೆರೆ ಎಳೆದ ಕೋರ್ಟ್