ಬೆಂಗಳೂರು: ರಾಜಧಾನಿಯ ಟ್ರಾಫಿಕ್ ಅದೆಷ್ಟೋ ಜನರಿಗೆ ತೊಂದರೆ ಕೊಟ್ಟಿರಬಹುದು, ಕೆಲವರ ಕೆಲಸವನ್ನೇ ಕಿತ್ತುಕೊಂಡಿರಬಹುದು, ಕೆಲವರಿಗೆ ಸಂದರ್ಶನಕ್ಕೇ ಅವಕಾಶ ಕೊಡದಿರಬಹುದು. ಆದರೆ, ಕೆಲವರಿಗಾದರೂ ಇದರಿಂದ ಅನುಕೂಲವಾಗಿದೆ. ಇಲ್ಲೊಂದು ವಿಚಿತ್ರವಾದ ಘಟನೆ ನಡೆದಿದೆ. ಆಗಷ್ಟೇ ಮದುವೆಯಾದ ಯುವಕನೊಬ್ಬ ತನ್ನ ಹೆಂಡತಿಯಿಂದ ಕಳಚಿಕೊಳ್ಳಲು ವಾಹನ ದಟ್ಟಣೆ ತುಂಬಿದ ರಸ್ತೆಯನ್ನೇ ಆಯ್ಕೆ ಮಾಡಿಕೊಂಡಿದ್ದಾನೆ. ಅವಳಿಗೆ ಕಾರು ಬಿಟ್ಟು ಹೋಗುವಂತೆಯೂ ಇಲ್ಲ, ಅವನನ್ನು ಚೇಸ್ ಮಾಡುವಂತೆಯೂ ಇಲ್ಲ. ಇದೊಂದು ಫ್ಯಾಮಿಲಿ ಮ್ಯಾಟರ್ ಕನೆಕ್ಟೆಡ್ ವಿದ್ ಟ್ರಾಫಿಕ್ ಅಷ್ಟೆ.
ಅಷ್ಟಕ್ಕೂ ಆಗಿದ್ದೇನು ಅಂತೀರಾ? ಈ ಸ್ಟೋರಿಯನ್ನು ಓದಿ..
ವಿಜಯ್ ಜಾರ್ಜ್ ಮತ್ತು ವೀಣಾ (ಇಬ್ಬರ ಹೆಸರನ್ನೂ ಬದಲಿಸಲಾಗಿದೆ) ಎಂಬವರಿಗೆ ಫೆಬ್ರವರಿ 15ರಂದು ಮದುವೆಯಾಗಿತ್ತು. ಅದ್ದೂರಿ ಮದುವೆಯ ಬಳಿಕ ಫೆಬ್ರವರಿ 16ರಂದು ಅವರಿಬ್ಬರೂ ಚರ್ಚ್ಗೆ ಹೋಗಿದ್ದರು. ಚರ್ಚ್ನಿಂದ ಕಾರಿನಲ್ಲಿ ಮರಳಿ ಬರುತ್ತಿದ್ದರು. ಕಾರು ಮಹದೇವಪುರ ಟೆಕ್ ಕಾರಿಡಾರ್ನಲ್ಲಿ ಸಿಕ್ಕಾಕಿಕೊಂಡಿತು. ಏನನಿಸಿತೋ ಏನೋ ಕಾರಿನ ಡೋರ್ ತೆಗೆದ ವಿಜಯ್ ಜಾರ್ಜ್ ಕಾರನ್ನು ಬಿಟ್ಟು ಓಡಲು ಆರಂಭಿಸಿದ.
ಕಾರಿನಲ್ಲಿ ಉಳಿದದ್ದು ವೀಣಾ ಮಾತ್ರ. ಆಕೆಗೆ ಕಾರನ್ನು ಟ್ರಾಫಿಕ್ನಲ್ಲಿ ಬಿಡುವುದೋ ಅಥವಾ ಅವನೆಲ್ಲಿ ಹೋದ ಎನ್ನುವುದನ್ನು ಹುಡುಕುವುದೋ ಅನ್ನುವ ಗೊಂದಲ. ಕೊನೆಗೂ ಆಕೆ ಟ್ರಾಫಿಕ್ ನಡುವೆ ಸಿಕ್ಕಾಕಿಕೊಂಡಿದ್ದ ಕಾರಿನಿಂದ ಹೇಗೋ ಇಳಿದು ಅವನ ಹಿಂದೆ ಓಡಲು ಶುರು ಮಾಡಿದಳು. ಆದರೆ, ಅವನು ಮಾತ್ರ ಸಿಗಲೇ ಇಲ್ಲ. ಹಿಂದಿನ ದಿನ ಮದುವೆಯಾದವನು ಮರುದಿನವೇ ಓಡಿ ಹೋಗಿದ್ದು ಯಾಕೆ? ಏನಾಗಿತ್ತು ಅಲ್ಲಿ ಅನ್ನೊದು ಇನ್ನೊಂದು ಕುತೂಹಲಕಾರಿ ಕಥೆ.
ಗಂಡ ಓಡಿಹೋದ ವಿಚಾರವನ್ನು ವೀಣಾ ಸಂಬಂಧಿಕರಿಗೆಲ್ಲ ತಿಳಿಸಿದರು. ಎಲ್ಲ ಕಡೆ ಹುಡುಕಿಸಿದರು. ಆದರೆ, 20 ದಿನ ಕಳೆದರೂ ವಿಜಯ್ ಜಾರ್ಜ್ ಪತ್ತೆಯಾಗದೆ ಹೋದಾಗ ಆಕೆ ಮಾರ್ಚ್ 5ರಂದು ಪೊಲೀಸರಿಗೆ ದೂರು ನೀಡಿದ್ದಾರೆ. ಈಗ ಪೊಲೀಸರಿಗೆ ಹುಡುಕೋ ಕೆಲಸ.
ಅಷ್ಟಕ್ಕೂ ಆ ಕುಟುಂಬದಲ್ಲಿ ಏನಾಗಿದೆ? ಅವರಿಬ್ಬರ ಮದುವೆ ಹೇಗೆ ನಡೆಯಿತು ಎಂದು ಕೇಳಿದರೆ, ನಿಜಕ್ಕಾದರೆ ಅವರಿಬ್ಬರು ಅಪರಿಚಿತರೇನೂ ಅಲ್ಲ. ಹಿಂದಿನಿಂದಲೂ ಪರಿಚಿತರೇ. ಲವ್ ಅಫೇರ್ ಇತ್ತಾ ಕೇಳಿದರೆ ಅದಕ್ಕೆ ಸ್ಪಷ್ಟ ಉತ್ತರವಿಲ್ಲ.
ಈ 22 ವರ್ಷದ ಯುವತಿಯನ್ನು ವಸ್ತುಶಃ ನಡು ರಸ್ತೆಯಲ್ಲಿ ಬಿಟ್ಟುಹೋಗಿರುವ ವಿಜಯ್ ಜಾರ್ಜ್ ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯವನು. ಅವನು ಹುಡುಗಿಯ ತಂದೆಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಕಂಪನಿಯ ಕರ್ನಾಟಕ ಮತ್ತು ಗೋವಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ. ವಿಜಯ್ ಕೆಲಸದ ಚಾತುರ್ಯ, ಒಳ್ಳೆಯತನಗಳನ್ನು ನೋಡಿ ಮಾಲೀಕರು ಮಗಳನ್ನೇ ಕೊಟ್ಟು ಮದುವೆ ಮಾಡಿದ್ದರು. ಆದರೆ, ಅದನ್ನು ಬಿಟ್ಟು ಅವನು ಓಡಿ ಹೋಗಿದ್ದ!
ಇಲ್ಲಿ ನಿಜವಾಗಿ ಆಗಿದ್ದೇನೆಂದರೆ, ಮಧ್ಯದಲ್ಲಿ ಇನ್ನೊಬ್ಬ ಹುಡುಗಿಯ ಎಂಟ್ರಿ ಆಗಿದೆ. ಕಂಪನಿಯ ವ್ಯವಹಾರಕ್ಕಾಗಿ ಗೋವಾಕ್ಕೆ ಹೋಗುತ್ತಿದ್ದಾಗ ವಿಜಯ್ ಜಾರ್ಜ್ಗೆ ಅಲ್ಲಿನ ಹುಡುಗಿಯೊಬ್ಬಳ ಜತೆ ಆತ್ಮೀಯ ಒಡನಾಟ ಶುರುವಾಗಿದೆ. ಆತ ಆಕೆಯನ್ನು ಮದುವೆಯಾಗಲು ಬಯಸಿದ್ದನೋ ಇಲ್ಲವೋ ಗೊತ್ತಿಲ್ಲ, ಆದರೆ ಅಕೆ ಮಾತ್ರ ಅವನೇನಾದರೂ ಬಿಟ್ಟು ಹೋದರೆ ಅವನ ಜನ್ಮ ಜಾಲಾಡಬೇಕು ಅಂತ ತೀರ್ಮಾನ ಮಾಡಿದಂತಿದ್ದಳು ಅನಿಸುತ್ತದೆ.
ಇತ್ತ ಕಂಪನಿಯ ಮಾಲೀಕರು ಮಗಳನ್ನೇ ಕೊಟ್ಟು ಮದುವೆ ಮಾಡಲು ನಿರ್ಧರಿಸಿ ಆಗಿತ್ತು. ವಿಜಯ್ ಜಾರ್ಜ್ ಅಡಕತ್ತರಿಯಲ್ಲಿ ಸಿಕ್ಕಿಬಿದ್ದ ಅನಿಸುತ್ತದೆ. ಈ ವಿಷಯ ವೀಣಾಗೂ ಮದುವೆಗೆ ಮೊದಲೇ ತಿಳಿದಿತ್ತು. ಆದರೆ ವಿಜಯ್ ತಾನು ಆಕೆಯ ಸಹವಾಸ ಬಿಡುವುದದಾಗಿ ಭರವಸೆ ಕೊಟ್ಟಿದ್ದರಿಂದ ಆಕೆಯೂ ಮದುವೆಗೆ ಒಪ್ಪಿದ್ದಳು.
ಹೀಗೆ ಮದುವೆಯೂ ಆಯಿತು, ಒಂದು ದಿನವೂ ಕಳೆಯಿತು. ಇತ್ತ ವಿಜಯ್ಗೆ ಮದುವೆಯಾದ ಸುದ್ದಿ ತಿಳಿದ ಗೋವಾದ ಹುಡುಗಿ ಕೆರಳಿದಳು. ಮೊದಲೇ ʻನನ್ನ ನಿನ್ನ ಆತ್ಮೀಯ ಕ್ಷಣಗಳ ವಿಡಿಯೊʼ ಸೋಷಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದವಳು ಮದುವೆಯಾದ ಬಳಿಕ ಹಾಕಿಯೇ ಬಿಡುತ್ತೇನೆ ನೋಡು ಎನ್ನುವಷ್ಟರ ಮಟ್ಟಿಗೆ ಕಾಡಲು ಶುರು ಮಾಡಿದಳು.
ಇದರಿಂದ ಭಯಗೊಂಡ ವಿಜಯ್ ಜಾರ್ಜ್ ತಲೆ ಹಾಳು ಮಾಡಿಕೊಂಡಿದ್ದ. ಫೋನ್ ಬಂದರೆ, ಯಾರಾದರೂ ಕರೆದರೆ ಭಯಗೊಳ್ಳುತ್ತಿದ್ದ ಎನ್ನುವುದು ವೀಣಾ ಅರಿವಿಗೂ ಬಂದಿತ್ತು. ಆದರೆ, ಈ ತುಮುಲವನ್ನು ತಾಳಿಕೊಳ್ಳಲಾಗದ ಆತ ಕೊನೆಗೆ ನಡುಬೀದಿಗೆ ಬಂದುಬಿಟ್ಟಿದ್ದ. ಹಾಗೆ ಬಂದವನೇ ಕಟ್ಟಿಕೊಂಡ ಹೆಂಡತಿಯನ್ನು ಟ್ರಾಫಿಕ್ ತುಂಬಿದ ರಸ್ತೆಯಲ್ಲಿ ಬಿಟ್ಟು ಅಕ್ಷರಶಃ ಓಡಿ ಹೋಗಿದ್ದ!
ಅವರಿಬ್ಬರ ಅಫೇರ್ ಬಗ್ಗೆ ನನಗೆ ಮದುವೆಗೆ ಮೊದಲೇ ಗೊತ್ತಿತ್ತು. ವಿಜಯ್ ಆಕೆಯ ಸಾಂಗತ್ಯ ಬಿಡುವುದಾಗಿ ಒಪ್ಪಿದ್ದರಿಂದ ಮದುವೆಯಾದೆ ಎಂದು ವೀಣಾ ಹೇಳುತ್ತಾರೆ. ಈಗಲೂ ವೀಣಾಗೆ ವಿಜಯ್ ಮೇಲೆ ಒಂದಿಷ್ಟು ಕರುಣೆ ಇದೆ.. ʻʻಹುಡುಗಿ ಬ್ಲ್ಯಾಕ್ ಮೇಲ್ ಮಾಡಲು ಶುರುಮಾಡಿದ್ದರಿಂದ ವಿಜಯ್ ಸಿಕ್ಕಾಪಟ್ಟೆ ಹೆದರಿಬಿಟ್ಟಿದ್ದ. ನಾನು ಗಮನಿಸಿದ ಹಾಗೆ ಕೆಲವೊಮ್ಮೆ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಆತಂಕ ಎದುರಿಸುತ್ತಿದ್ದ. ಬಹುಶಃ ಇದೇ ಕಾರಣಕ್ಕಾಗಿ ಓಡಿ ಹೋಗಿರಬಹುದು. ಅವನು ಸುರಕ್ಷಿತವಾಗಿದ್ದಾನೆ, ಮತ್ತೆ ಮರಳಿ ಬರುತ್ತಾನೆ ಅಂತ ಕಾಯುತ್ತಿದ್ದೇನೆʼʼ ಎನ್ನುತ್ತಾರೆ ವೀಣಾ.
ಈಗ ಪೊಲೀಸರಿಗೆ ಕೆಲಸ. ವಿಜಯ್ನನ್ನು ಹುಡುಕಿದರೆ, ಅವನು ಸಿಕ್ಕರೆ ಅವನ ಈಗಿನ ಪರಿಸ್ಥಿತಿ ತಿಳಿಯಬಹುದು. ಅವನು ಗೋವಾಕ್ಕೆ ಹೋಗಿ ಆ ಹುಡುಗಿ ಜತೆ ಸೆಟ್ಲ್ ಏನಾದರೂ ಆಗಿದ್ದಾನಾ? ಯಾರ ಸಹವಾಸವೂ ಬೇಡ ಎಂದು ಪರಾರಿಯಾಗಿದ್ದಾನಾ? ಜೀವನವೇ ಬೇಡ ಎನ್ನುವ ತೀರ್ಮಾನಕ್ಕೇನಾದರೂ ಬಂದಿದ್ದಾನಾ? ಈ ಪ್ರಶ್ನೆಗಳಿಗೆ ಉತ್ತರ ಬೇಕಾಗಿದೆ.
ಇದನ್ನೂ ಓದಿ : Viral Video: ಹೋಳಿಯಂದು ಬೈಕಿನಲ್ಲಿ ಜೋಡಿಯ ರೋಮಾನ್ಸ್ ಓಕುಳಿ!