Site icon Vistara News

Martin Movie: ವಿಎಫ್‌ಎಕ್ಸ್‌ಗೆ 50 ಲಕ್ಷ ಕಮಿಷನ್‌ ಆರೋಪ; ʻಮಾರ್ಟಿನ್‌ʼ ನಿರ್ದೇಶಕ ಎ.ಪಿ. ಅರ್ಜುನ್‌ಗೆ ಸಂಕಷ್ಟ!

Martin Movie

ಬೆಂಗಳೂರು: ಧ್ರುವ ಸರ್ಜಾ (Dhruva Sarja) ಅಭಿನಯದ ʻಮಾರ್ಟಿನ್‌ʼ ಸಿನಿಮಾ ಬಿಡುಗಡೆಗೆ ಸಜ್ಜಾಗಿರುವ ನಡುವೆ ಚಿತ್ರ ನಿರ್ದೇಶಕ ಎ.ಪಿ. ಅರ್ಜುನ್‌ಗೆ ಸಂಕಷ್ಟ ಎದುರಾಗಿದೆ. ಚಿತ್ರದ ವಿಎಫ್‌ಎಕ್ಸ್‌ಗಾಗಿ ಡಿಜಿಟಲ್ ಟೆರೇನ್ ಪ್ರೊಡಕ್ಷನ್ ಪ್ರೈ. ಲಿಮಿಟೆಡ್ ಕಂಪನಿಗೆ ನಿರ್ಮಾಪಕ ನೀಡಿದ್ದ 2.5 ಕೋಟಿ ರೂ.ಗಳಲ್ಲಿ ನಿರ್ದೇಶಕ ಎ.ಪಿ. ಅರ್ಜುನ್‌ 50 ಲಕ್ಷ ರೂ. ಕಮಿಷನ್‌ ಪಡೆದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹೀಗಾಗಿ ನಿರ್ದೇಶಕನ ಬಂಧನ ಸಾಧ್ಯತೆ ಇದೆ ಎಂಬ ಮಾತುಗಳು ಚಂದನವನದ ಅಂಗಳದಲ್ಲಿ ಕೇಳಿಬರುತ್ತಿವೆ.

ಅಕ್ಟೋಬರ್ 11ರಂದು 5 ಭಾಷೆಗಳಲ್ಲಿ ತೆರೆಗೆ ಬರಲಿರುವ ಈ ಚಿತ್ರಕ್ಕೆ ಧ್ರುವ ಸರ್ಜಾ ಅವರ ಸೋದರ ಮಾವ ಅರ್ಜುನ್‌ ಸರ್ಜಾ ಕತೆ ಕೊಟ್ಟು, ʻಮಾರ್ಟಿನ್‌ʼಗೆ ಬೆಂಬಲವಾಗಿ ನಿಂತಿದ್ದಾರೆ. ನಿರ್ಮಾಪಕ ಉದಯ್‌ ಮೆಹ್ತಾ ಸಾಕಷ್ಟು ಹಣ ಸುರಿದಿದ್ದಾರೆ. ಮೂರು ವರ್ಷವಾದರೂ ಸಿನಿಮಾ ನಾನಾ ಕಾರಣಕ್ಕೆ ತಡವಾಗುತ್ತಲೇ ಬಂತು. ಆ ಕಾರಣಗಳಲ್ಲಿ ಚಿತ್ರದ ವಿಎಫ್‌ಎಕ್ಸ್‌ ಕೆಲಸ ಕೂಡ ಒಂದು. ನಿರ್ಮಾಪಕ ಉದಯ್ ಮೆಹ್ತಾ ನಿರ್ದೇಶಕರ ಸೂಚನೆ ಮೇರೆಗೆ ಈ ಚಿತ್ರದ ವಿಎಫ್ಎಕ್ಸ್​ನ ಜವಾಬ್ಧಾರಿಗಳನ್ನೆಲ್ಲ ಡಿಜಿಟಲ್ ಟೆರೇನ್ ಪ್ರೊಡಕ್ಷನ್ ಪ್ರೈ. ಲಿಮಿಟೆಡ್ ಸಂಸ್ಥೆಗೆ ವಹಿಸಿದ್ದರು. ಆದರೆ ಅಲ್ಲಿ ಆಗಿದ್ದೇ ಬೇರೆ.

ಡಿಜಿಟಲ್ ಟೆರೇನ್ ಪ್ರೊಡಕ್ಷನ್ ಪ್ರೈ. ಲಿಮಿಟೆಡ್ ನ ಸತ್ಯ ರೆಡ್ಡಿ ಮತ್ತು ಸುನಿಲ್ ಕೇಳಿದಾಗೆಲ್ಲ ನಿರ್ಮಾಪಕ ಉದಯ್ ಮೆಹ್ತಾ ದುಡ್ಡು ಕೊಡುತ್ತಲೇ ಬಂದಿದ್ದರು. ಎರಡೂವರೆ ಕೋಟಿ ಹಣವನ್ನು ಈ ಸತ್ಯ ರೆಡ್ಡಿ ಮತ್ತು ಸುನಿಲ್ ಎಂಬುವರ ಮೇಲೆ ಸುರಿದರೂ ಕೆಲಸ ಮಾತ್ರ ಆಗಲಿಲ್ಲ. ಇತ್ತೀಚೆಗೆ ಹಣದ ವ್ಯವಹಾರದ ದಾಖಲೆ ಸಮೇತ ಬೆಂಗಳೂರಿನ ಬಸವೇಶ್ವರ ನಗರ ಠಾಣೆ ಮೆಟ್ಟಿಲೇರಿದ್ದ ನಿರ್ಮಾಪಕ ಉದಯ್ ಮೆಹ್ತಾ, ವಂಚಕರಾದ ಸತ್ಯ ರೆಡ್ಡಿ ಮತ್ತು ಸುನಿಲ್ ವಿರುದ್ದ ದೂರು ಸಲ್ಲಿಸಿದ್ದರು. ಆದರೆ, ಇದೀಗ ವಿಚಾರಣೆ ವೇಳೆ ನಿರ್ದೇಶಕ ಅರ್ಜುನ್‌ಗೆ ಕಮಿಷನ್ ನೀಡಿರುವುದಾಗಿ ಆರೋಪಿ ಸುನಿಲ್ ರೆಡ್ಡಿ ಹೇಳಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ | Samantha Ruth Prabhu: ಆ.1ಕ್ಕೆ ‘ಸಿಟಾಡೆಲ್’ ಬಿಗ್‌ ಅಪ್‌ಡೇಟ್‌ : ಸಮಂತಾ ಫ್ಯಾನ್ಸ್‌ಗೆ ಸಿಗಲಿದೆ ಗುಡ್‌ ನ್ಯೂಸ್‌!

ಉದಯ್ ಮೆಹ್ತಾ ನೀಡಿದ್ದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಸದ್ಯಕ್ಕೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ತಲೆಮರೆಸಿಕೊಂಡಿದ್ದ ಸತ್ಯ ರೆಡ್ಡಿಯನ್ನು ಬಂಧಿಸಿದ್ದರು. ಆದರೆ, ವಿಎಫ್‌ಎಕ್ಸ್ ಕೆಲಸವನ್ನು ತಮಗೆ ನೀಡಲು ನೀಡಲು ಅರ್ಜುನ್ ನಮ್ಮಿಬ್ಬರಿಂದ 50 ಲಕ್ಷ ರೂ. ಕಮಿಷನ್ ಪಡೆದಿದ್ದಾರೆ ಎಂದು ಸುನಿಲ್ ಆರೋಪಿಸಿದ್ದಾರೆ. ಇನ್ನು ಅಕ್ಟೋಬರ್ 11ಕ್ಕೆ ವಿಶ್ವದಾದ್ಯಂತ ‘ಮಾರ್ಟಿನ್’ ಬಿಡುಗಡೆಗೆ ತಯಾರಿ ನಡೆದಿದ್ದು, ನಟ ಧ್ರುವ ಸರ್ಜಾ ಡಬ್ಬಿಂಗ್ ಮಾಡುವಾಗಲೂ ನಿರ್ದೇಶಕ ಅರ್ಜುನ್ ಗೈರಾಗಿದ್ದರು. ಈ ಹಿಂದೆಯೂ ಮಾರ್ಟಿನ್ ಚಿತ್ರತಂಡದಲ್ಲಿ ಮನಸ್ತಾಪಗಳಿವೆ ಎಂಬ ಮಾತುಗಳು ಕೇಳಿಬಂದಿದ್ದವು. ಇದೀಗ ನಿರ್ಮಾಪಕ ಉದಯ್ ಮೆಹ್ತಾ ಹಾಗೂ ನಿರ್ದೇಶಕ ಎ.ಪಿ. ಅರ್ಜುನ್ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದಿದೆ ಎನ್ನಲಾಗಿದೆ.

ದರ್ಶನ್ ನಾಯಕನಾಗಿ ನಟಿಸಿದ ಐರಾವತ ಚಿತ್ರದ ಮೇಕಿಂಗ್ ಸೇರಿ ಅರ್ಜುನ್ ವಿರುದ್ಧ ಈ ಹಿಂದೆ ಇದೇ ರೀತಿಯ ಆರೋಪಗಳು ಕೇಳಿಬಂದಿತ್ತು. ಅರ್ಜುನ್ ಮತ್ತು ನಿರ್ಮಾಪಕ ಸಂದೇಶ್ ನಾಗರಾಜ್ ಮತ್ತು ದರ್ಶನ್ ನಡುವೆ ಭಿನ್ನಾಭಿಪ್ರಾಯದ ವದಂತಿಗಳು ಕೇಳಿಬಂದಿದ್ದವು.

ಇದನ್ನೂ ಓದಿ | Kannada New Movie: “ಪೌಡರ್” ತಂಡದಿಂದ ಹೊರ ಬಿತ್ತು ಹೊಸ ಹಾಡು; “ಪರಪಂಚವೇ ಘಮ ಘಮ”!

ಉದಯ್ ಮೆಹ್ತಾ, 2.5 ಕೋಟಿ ಲಾಸ್ ಆಗಿದ್ದಷ್ಟೇ ಅಲ್ಲದೇ ಸಿನಿಮಾ 6 ತಿಂಗಳಿಗೂ ಹೆಚ್ಚು ಕಾಲ ತಡವಾಗಿದೆ ಎಂದಿದ್ದರು. ಇಷ್ಟಾದರೂ ಇದೀಗ ಸಿನಿಮಾ ಅಕ್ಟೋಬರ್ 11ಕ್ಕೆ ಮಿಂಚಲು ರೆಡಿಯಾಗಿದೆ. ಮಾರ್ಟಿನ್ ಚಿತ್ರಕ್ಕೆ ಮಣಿ ಶರ್ಮಾ ಅವರ ಸಂಗೀತ ಮತ್ತು ಸತ್ಯ ಹೆಗಡೆ ಅವರ ಛಾಯಾಗ್ರಹಣವಿದೆ. ಮಾರ್ಟಿನ್‌ ಸಿನಿಮಾದಲ್ಲಿ ಕನ್ನಡದ ಕಲಾವಿದರ ಜತೆಗೆ ಹಿಂದಿ, ತೆಲುಗು, ತಮಿಳು ಚಿತ್ರರಂಗದ ಕಲಾವಿದರು ನಟಿಸಿದ್ದಾರೆ. ಅಚ್ಯುತ್‌ ಕುಮಾರ್‌, ನಿಕಿತನ್‌ ಧೀರ್‌, ನವಾಬ್‌ ಶಾ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿದ್ದಾರೆ. ‘ಧೀರನ್‌ ಅಧಿಕಾರಂ ಒಂಡ್ರು’ತಮಿಳು ಚಿತ್ರದ ಮೂಲಕ ಗಮನ ಸೆಳೆದಿದ್ದ ನಟ ರೋಹಿತ್‌ ಪಾಠಕ್‌ ಸಹ ‘ಮಾರ್ಟಿನ್‌’ನಲ್ಲಿ ಬಹು ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Exit mobile version