ಬೆಂಗಳೂರು: ದೇಶದ ವಿವಿಧೆಡೆ ಹಾಗೂ ರಾಜ್ಯದಲ್ಲೂ ಕೋವಿಡ್-19 (Covid-19) ಪ್ರಕರಣಗಳು ಏರಿಕೆ ಕಾಣುತ್ತಿರುವ ಬೆನ್ನಲ್ಲೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧಾರಣೆಯನ್ನು ರಾಜ್ಯ ಸರ್ಕಾರ ಕಡ್ಡಾಯ ಮಾಡಿ ಸೋಮವಾರ ಆದೇಶ ಹೊರಿಡಿಸಿದೆ. ಮಾಸ್ಕ್ ಧಾರಣೆ ಜತೆಗೆ, ಸಾರ್ವಜನಿಕ ಸ್ಥಳಗಳಲ್ಲಿ ಉಗಿಯುವುದಕ್ಕೂ ದಂಡ ವಿಧಿಸಲಾಗುವುದು ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಆದೇಶದಲ್ಲಿ ತಿಳಿಸಿದ್ದಾರೆ. ಆದರೆ ಸರ್ಕಾರದ ಆದೇಶಕ್ಕೆ ಮೊದಲ ದಿನವೇ ಸಾರ್ವಜನಿಕರಿಂದ ನೀರಸ ಪ್ರತಿಸ್ಪಂದನೆ ವ್ಯಕ್ತವಾಗಿದೆ.
ಕೊರೋನಾ ಸಂಖ್ಯೆ ತೀರಾ ಅಪಾಯಕಾರಿ ಹಂತಕ್ಕೆ ತಲುಪಿಲ್ಲ. ಇನ್ನೂ ಕೊರೋನಾದಿಂದ ಸಾವಿಗೀಡಾಗವ ಸಂಖ್ಯೆ ಕಾಣುತ್ತಿಲ್ಲ. ಅದರ ಜತೆಗೆ, ಐಸಿಯು ದಾಖಲಾಗುವವರ ಪ್ರಮಾಣ, ಪಾಸಿಟಿವಿಟಿ ದರವೂ ಅಪಾಯಕಾರಿ ಮಟ್ಟಕ್ಕಿಂತ ಕಡಿಮೆ ಇದೆ. ಆದರೆ ಸಂಖ್ಯೆ ದಿನೇದಿನೆ ಏರಿಕೆ ಕಾಣುತ್ತಿದೆ. ಇದೇ ಸಂಖ್ಯೆ ಹೆಚ್ಚಳವಾಗಿ 4ನೇ ಅಲೆ ಎದುರಾದರೆ ನಿಯಂತ್ರಣ ಕಷ್ಟ ಎಂಬ ಕಾರಣಕ್ಕೆ ಸರ್ಕಾರಗಳು ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿವೆ.
ವಿವಿಧ ರಾಜ್ಯಗಳಲ್ಲಿ ಕೋವಿಡ್ ಪರಿಸ್ಥಿತಿ ಅವಲೋಕನಕ್ಕೆ ಪ್ರಧಾನಿ ನರೇಮದ್ರ ಮೋದಿಯವರು ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರ ವಿಡಿಯೋ ಕಾನ್ಫರೆನ್ಸ್ ಸಭೆಯನ್ನು ಏಪ್ರಿಲ್ 27ರಂದು ಆಯೋಜಿಸಿದ್ದಾರೆ. ಇದಕ್ಕೂ ಪೂರ್ವಭಾವಿಯಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಸಭೆ ನಡೆಸಿದರು. ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಕಂದಾಯ ಸಚಿವ ಆರ್. ಅಶೊಕ್, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಈ ಸಭೆಯಲ್ಲಿದ್ದರು.
ಸಭೆಯ ನಂತರ ಮಾಹಿತಿ ನೀಡಿದ್ದ ಆರೋಗ್ಯ ಸಚಿವ ಸುಧಾಕರ್, ಮಾಸ್ಕ್ ಕಡ್ಡಾಯ, ಸಾರ್ವಜನಿಕ ಸ್ಥಳಗಳಲ್ಲಿ ವೈಯಕ್ತಿಕ ಅಂತರ ಕಡ್ಡಾಯ ಮಾಡಬೇಕೆಂದು ನಿರ್ಧರಿಸಲಾಗಿದೆ. ಆದರೆ ಸದ್ಯಕ್ಕೆ ದಂಡ ವಿಧಿಸಬಾರದು ಎಂದು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದ್ದರು.
ಆದರೆ ಸಂಜೆ ವೇಳೆಗೆ ಮುಖ್ಯ ಕಾರ್ಯದರ್ಶಿ ಹೊರಡಿಸಿದ ಆದೇಶದಲ್ಲಿ ದಂಡವನ್ನು ಪ್ರಸ್ತಾಪಿಸಲಾಗಿದೆ. ಕೋವಿಡ್ ಸೋಂಕು ಕಡಿಮೆಯಾದ ಹಿನ್ನೆಲೆಯಲ್ಲಿ ಫೆಬ್ರವರಿ 28ರಿಂದ ನಿಯಮಾವಳಿಗಳಲ್ಲಿ ಸಡಿಲಿಕೆ ಮಾಡಲಾಗಿದೆ. ಆದರೆ ಕೆಲ ದಿನಗಳಿಂದ ದೆಹಲಿ, ಹರ್ಯಾಣ, ತಮಿಳುನಾಡಿನಲ್ಲಿ ಕರೊನಾ ಸೋಂಕು ಉಲ್ಬಣಿಸುತ್ತಿದೆ. ಕರ್ನಾಟಕದಲ್ಲೂ ಪ್ರಕರಣಗಳು ಏರಿಕೆ ಹಂತದಲ್ಲಿವೆ.
ಇದನ್ನೂ ಓದಿ | Covid-19 | ಮತ್ತೆ ಮಾಸ್ಕ್ ದಂಡ ಜಾರಿ ಚಿಂತನೆ: ನವದೆಹಲಿಯಲ್ಲಿ ಏರಿಕೆಯತ್ತ ಸೋಂಕು
ಈ ಮೇಲೆ ತಿಳಿಸಿದ ರಾಜ್ಯಗಳು ಮುನ್ನೆಚ್ಚರಿಕಾ ಕ್ರಮವಾಗಿ ಮಾಸ್ಕ್ ಧಾರಣೆಯನ್ನು ಪುನಃ ಜಾರಿ ಮಾಡಿವೆ. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಏರಿಕೆಯನ್ನು ತಡೆಗಟ್ಟಲು ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಶಿಫಾರಸಿನ ಮೇರೆಗೆ ಈ ಆದೇಶ ಹೊರಡಿಸಲಾಗುತ್ತಿದೆ. ಎಲ್ಲ ಸಾರ್ವಜನಿಕ ಸ್ಥಳಗಳು, ಕಾರ್ಯ ಸ್ಥಳಗಳು ಹಾಗೂ ಸಾರಿಗೆ ವ್ಯವಸ್ಥೆಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ. ಈ ನಿಯಮ ಪಾಲನೆ ಮಾಡದಿದ್ದಲ್ಲಿ ನಿಯಮಾನುಸಾರ ಸ್ಥಳೀಯ ಸಂಸ್ಥೆಗಳು ದಂಡ ವಿಧಿಸುತ್ತವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಉಗಿದರೂ ದಂಡ
ಮಾಸ್ಕ್ ಧಾರಣೆಗೆ ದಂಡ ವಿಧಿಸುವ ಜತೆಗೆ ಈ ಬಾರಿಯ ಆದೇಶದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಉಗಿದರೂ ದಂಡ ವಿಧಿಸಲಾಗುತ್ತದೆ ಎಂದು ನಮೂದಿಸಲಾಗಿದೆ. ಆದೇಶದಲ್ಲಿ, ವೈಯಕ್ತಿಕ ಅಂತರವನ್ನೂ ಸೇರ್ಪಡೆ ಮಾಡಲಾಗಿದೆ. ಎಲ್ಲ ಜನರೂ ಪರಸ್ಪರ 2 ಅಡಿ ಅಂತರವನ್ನು ಸಾರ್ವಜನಿಕ ಸ್ಥಳಗಳಲ್ಲಿ ಕಾಪಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆಯಾದರೂ ಇದಕ್ಕೂ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿಲ್ಲ.
ಆದೇಶ ಪಾಲಿಸದ ಜನರು
ಸರ್ಕಾರದ ಕೋವಿಡ್ ನಿಯಮವನ್ನ ಗಾಳಿಗೆ ತೋರಿದ ಕೊಡಗಿನ ಜನತೆ, ಮಾಸ್ಕ್ ಧರಿಸದೆ ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸಿದರು. ಮಡಿಕೇರಿ ನಗರದ ಬಸ್ ನಿಲ್ದಾಣ, ಮತ್ತು ರಸ್ತೆಗಳಲ್ಲಿ ಮಾಸ್ಕ್ ಹಾಕದೆ , ಅಂತರ ಕಾಯ್ದುಕೊಳ್ಳದೆ ಜನರ ಓಡಾಟ ಕಂಡುಬಂದಿತು. ಕೆಲಸದ ಸ್ಥಳ, ಪ್ರಯಾಣದ ವೇಳೆ ಮಾಸ್ಕ್ ಧರಿಸುವುದು ಕಡ್ಡಾಯ ಎಂಬ ನಿಯಮವನ್ನೂ ಪಾಲನೆ ಮಾಡದಿರುವುದು ಕಂಡುಬಂದಿತು.
ಉತ್ತರ ಕನ್ನಡದ ಕಾರವಾರದಲ್ಲೂ ಇದೇ ಸ್ಥಿತಿ ಕಂಡುಬಂದಿತು. ಹೆಚ್ಚಿನ ಜನಸಂದಣಿಯುಳ್ಳ ಮಾರುಕಟ್ಟೆಯಲ್ಲಿ ಎಂದಿನಂತೆ ವ್ಯಾಪಾರ ನಡೆದವು, ಜನರು ಮಾಸ್ಕ್ ಧಾರಣೆ ಮತ್ತು ವೈಯಕ್ತಿಕ ಅಂತರದ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸ್ಥಳೀಯ ನಿವಾಸಿಯೊಬ್ಬರು, ಮೊದಲ ಮತ್ತು ಎರಡನೇ ಅಲೆಯಲ್ಲಿ ಕೋವಿಡ್‌ನಿಂದಾಗಿ ಸಾಕಷ್ಟು ಸಮಸ್ಯೆ ಎದುರಿಸಿದ್ದೇವೆ. ಆದರೆ ಈಗ ಜನರಿಗೆ ಕೊರೋನಾ ಬಗ್ಗೆ ಗಂಭೀರತೆ ಉಳಿದುಕೊಂಡಿಲ್ಲ. ಕೊರೋನಾ ಹೋಗೇಬಿಟ್ಟಿದೆ ಎಂದು ಭಾವಿಸಿ ಸುಮ್ಮನಿದ್ದಾರೆ. ಆದರೆ ಸರ್ಕಾರದ ಮುಂಜಾಗ್ರತಾ ಕ್ರಮಗಳನ್ನು ಗಂಭೀರವಾಗಿ ಪರಿಗಣಿಸಿ ಪಾಲನೆ ಮಾಡುವುದು ಸಾರ್ವಜನಿಕರ ಹಿತದೃಷ್ಟಿಯಿಂದ ಒಳ್ಳೆಯದು ಎಂದಿದ್ದಾರೆ.
ಸದ್ಯಕ್ಕೆ ರಾಜ್ಯದಲ್ಲಿ ಲಾಕ್‌ಡೌನ್ ವಿಧಿಸುವ ಯಾವುದೇ ಉದ್ದೇಶವನ್ನು ಸರ್ಕಾರ ಹೊಂದಿಲ್ಲ. ಸಾರ್ವಜನಿಕರು ಸರ್ಖಾರದ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲನೆ ಮಾಡಬೇಕು. ಪ್ರಕರಣಗಳು ಹೆಚ್ಚಾದರೆ ಭವಿಷ್ಯದಲ್ಲಿ ಲಾಕ್‌ಡೌನ್‌ನಂತಹ ಕ್ರಮ ಕೈಗೊಳ್ಳಬಾರದು ಎಂದರೆ ಜನರು ಜಾಗೃತರಾಗಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ | Covid-19 | ಇನ್ನೂ 2ನೇ ಡೋಸ್ ಲಸಿಕೆ ಪಡೆಯದ 30 ಲಕ್ಷ ಜನ: ರಾಜ್ಯದಲ್ಲಿ ಹೈ ಅಲರ್ಟ್