ಬೀದರ್: ಮಾನಸಿಕ ಕ್ಷೋಭೆಯೋ, ಕೌಟುಂಬಿಕ ಹಿಂಸೆಯೋ, ಬದುಕೇ ಭಾರವಾದ ಹತಾಶೆಯೋ ಗೊತ್ತಿಲ್ಲ.. ತಾಯಿಯೊಬ್ಬಳು ತನ್ನ ಇಬ್ಬರು ಕರುಳ ಕುಡಿಗಳಿಗೆ ವಿಷ ಉಣಿಸಿ ತಾನು ನೇಣಿಗೆ ಶರಣಾಗಿದ್ದಾಳೆ (Mass suicide).
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿ ನಿಲಮನಳ್ಳಿ ತಾಂಡದಲ್ಲಿ ಈ ಘಟನೆ ನಡೆದಿದೆ. 25 ವರ್ಷದ ಮೀರಾಬಾಯಿ ತನ್ನ ಮೂರು ಮತ್ತು ಎರಡು ವರ್ಷದ ಮಕ್ಕಳಾದ ನಚ್ಚುಬಾಯಿ ಮತ್ತು ಗೋಲುಬಾಯಿಗೆ ವಿಷ ಉಣಿಸಿದ್ದಾರೆ. ಅವೆರಡೂ ನಿದ್ದೆಯಲ್ಲೇ ಉಸಿರು ನಿಲ್ಲಿಸುತ್ತಿದ್ದಂತೆಯೇ ಮೀರಾಬಾಯಿ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ತಾಯಿಯ ಈ ಅತಿರೇಕದ ಕ್ರಮಕ್ಕೆ ಕೌಟುಂಬಿಕ ಕಲಹ ಕಾರಣ ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಧನ್ನೂರು ಪೊಲೀಸರು ದೌಡಾಯಿಸಿದ್ದಾರೆ. ಗಂಡನ ಮನೆಯವರ ಹಿಂಸೆ, ಮಾನಸಿಕ ಒತ್ತಡ ತಡೆಯಲಾಗದೆ ಮೀರಾಬಾಯಿ ಈ ಕೃತ್ಯ ನಡೆಸಿದ್ದಾರೆ ಎಂಬ ಮಾತು ಪರಿಸರದಲ್ಲಿ ಕೇಳಿಬರುತ್ತಿದೆ. ಪೊಲೀಸರು ಈ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ತನಿಖೆ ನಡೆಸುತ್ತಿದ್ದಾರೆ.
ಎರಡು ದಿನದ ಹಿಂದಷ್ಟೇ ಬಾಗಲಕೋಟೆಯ ತಿಮ್ಮಾಪುರ ಗ್ರಾಮದಲ್ಲಿ ತಾಯಿಯೊಬ್ಬಳು ತನ್ನ ಮೂವರು ಪುಟಾಣಿ ಹೆಣ್ಣು ಮಕ್ಕಳಿಗೆ ವಿಷ ಉಣಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದರು. ಅದಕ್ಕೂ ಕೌಟುಂಬಿಕ ಕಲಹವೇ ಕಾರಣವಾಗಿತ್ತು. ರೇಖಾ ಬಗಲಿ(೨೮) ಎಂಬ ಮಹಿಳೆಯೇ ತನ್ನ ಮಕ್ಕಳಾದ ಸನ್ನಿಧಿ(೭), ಸಮೃದ್ಧಿ (೪), ಶ್ರೀನಿಧಿ(೨) ಎಂಬ ಮಕ್ಕಳಿಗೆ ವಿಷಯ ಉಣಿಸಿ ಕೊಂದು ತಾನೂ ಪ್ರಾಣ ಕಳೆದುಕೊಂಡವರು.
ಇದನ್ನೂ ಓದಿ | Mass suicide | ಮೂರು ಹೆಣ್ಣು ಮಕ್ಕಳಿಗೆ ವಿಷ ಉಣಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ