ಚಿಕ್ಕೋಡಿ: ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿ ಬೇಕೆಂಬ ಕೂಗು ದಿನೇದಿನೆ ಕಾವು ಪಡೆದುಕೊಳ್ಳುತ್ತಿದ್ದು, ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬೃಹತ್ ಸಮಾವೇಶಕ್ಕೆ ಚಾಲನೆ ಸಿಕ್ಕಿದೆ. ಅದಕ್ಕೂ ಮೊದಲು ಹುಕ್ಕೇರಿಯಲ್ಲಿ ಪಂಚಮಸಾಲಿ ಸಮುದಾಯದವರು ಬೈಕ್ ರ‍್ಯಾಲಿ, ಮೆರವಣಿಗೆ ಮಾಡುವ ಮೂಲಕ ಶಕ್ತಿ ಪ್ರದರ್ಶನ ತೋರಿದರು.
೨ಎ ಮೀಸಲಾತಿಗಾಗಿ ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿರುವ ಪಂಚಮಸಾಲಿ ಸಮುದಾಯವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಶಿಗ್ಗಾಂವಿ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಬೆನ್ನಲ್ಲೇ ಈಗ ಸರ್ಕಾರದ ವಿರುದ್ಧ ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿದೆ. ಈ ಮೂಲಕ ಸಮಾಜದ ಬಲಪ್ರದರ್ಶನಕ್ಕೆ ಮುಂದಾಗಿರುವ ಜಯಮೃತ್ಯುಂಜಯ ಸ್ವಾಮೀಜಿ, ನೇಗಿಲನ್ನು ಹಿಡಿದು ಸಾರೋಟಿಯಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿಗೆ ಚಾಲನೆ ನೀಡಿದರು.
ಸರ್ಕಾರಕ್ಕೆ ಬಹಿರಂಗ ಎಚ್ಚರಿಕೆ
ಹುಕ್ಕೇರಿ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಪ್ರತಿಭಟನಾ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿದ್ದು, ಅಡವಿಸಿದ್ದೇಶ್ವರ ದೇವಸ್ಥಾನದಿಂದ ಚಾಲನೆ ದೊರೆತಿದೆ. ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಪಂಚಮಸಾಲಿ ಸಮುದಾಯದವರು ಸೇರಿದ್ದಾರೆ. ಕುಂಭ ಹೊತ್ತ ಮಹಿಳೆಯರು ಹಾಗೂ ವಾದ್ಯಮೇಳಗಳೊಂದಿಗೆ ರ‍್ಯಾಲಿ ಸಾಗುತ್ತಿದೆ. ತೆರೆದ ಸಾರೋಟಿನಲ್ಲಿ ಜಯಮೃತ್ಯುಂಜಯ ಸ್ವಾಮೀಜಿ ಆಸೀನರಾಗಿದ್ದಾರೆ. ರ‍್ಯಾಲಿ ಬಳಿಕ ಸ್ವಾಮೀಜಿ ನೇತೃತ್ವದಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ಈ ವೇಳೆ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ. ಈ ಮೂಲಕ ಸರ್ಕಾರದ ಮೇಲೆ ಒತ್ತಡ ಹಾಕಲು ಮುಂದಾಗಲಾಗುತ್ತದೆ. ಈ ಸಮಾವೇಶದಲ್ಲಿ ೫೦ ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗುವ ನಿರೀಕ್ಷೆ ಇದೆ.
ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ದಿನಾಂಕ ನಿರ್ಧಾರ?
ಈ ಸಮಾವೇಶದಲ್ಲಿ ಅಂತಿಮ ಹೋರಾಟದ ರೂಪುರೇಷೆಗಳು ನಿರ್ಧಾರವಾಗಲಿದ್ದು, ಸುಮಾರು ೨೫ ಲಕ್ಷ ಮಂದಿಯೊಂದಿಗೆ ವಿಧನಾಸೌಧಕ್ಕೆ ಮುತ್ತಿಗೆ ಹಾಕುವ ಕುರಿತು ತೀರ್ಮಾನ ಕೈಗೊಂಡು ದಿನಾಂಕ ನಿಗದಿ ಮಾಡಲಿದ್ದಾರೆ. ಈ ಮೂಲಕ ಸರ್ಕಾರಕ್ಕೆ ಗಡುವು ನೀಡಲು ನಿರ್ಧಾರ ಮಾಡಲಾಗಿದೆ ಎಂದು ಹೇಳಲಾಗಿದೆ. ಇನ್ನು ಈ ಭಾಗದ ಪಂಚಮಸಾಲಿ ಮುಖಂಡ, ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ರಾಜ್ಯ ನಾಯಕರೇ ಅಲ್ಲ ಎಂದು ಬಿಜೆಪಿ ರಾಷ್ಟ್ರೀಯ ನಾಯಕ ಅರುಣ್ ಸಿಂಗ್ ನೀಡಿರುವ ಹೇಳಿಕೆ ವಿಚಾರವನ್ನು ಸಹ ಇಲ್ಲಿ ಪ್ರಸ್ತಾಪಿಸುವ ಸಾಧ್ಯತೆ ಇದ್ದು, ಅವರನ್ನು ಸಮಾಜದ ಪ್ರಬಲ ನಾಯಕ ಎಂದು ಬಿಂಬಿಸಲು ಮುಂದಾಗಲಾಗಿದೆ.
ಇದನ್ನೂ ಓದಿ | Reservation | ಪಂಚಮಸಾಲಿ ಮೀಸಲಾತಿಗಾಗಿ ವಚನಾನಂದ ಸ್ವಾಮೀಜಿಯಿಂದ ಜನ ಜಾಗೃತಿ ಯಾತ್ರೆ