ಬಳ್ಳಾರಿ: ಮುಸ್ಲಿಂ ಯುವಕರಿಗೆ ಶಸ್ತಾಸ್ತ್ರ ತರಬೇತಿ ಮೂಲಕ ವಿಧ್ವಂಸಕ ಕೃತ್ಯಗಳಿಗೆ ಸಂಚು ಆರೋಪದಲ್ಲಿ ನಿಷೇಧಿತ ಪಿಎಫ್‌ಐ ಸಂಘಟನೆಯ ಮಾಸ್ಟರ್‌ಮೈಂಡ್ ನೊಸ್ಸಾಮ್ ಮೊಹಮ್ಮದ್ ಯೂಸಫ್‌ನನ್ನು ರಾಷ್ಟ್ರೀಯ ತನಿಖಾ ದಳ (NIA Raid) ಬಳ್ಳಾರಿಯಲ್ಲಿ ಬಂಧಿಸಿದೆ. ನಿಜಾಮಾಬಾದ್ ಪಿಎಫ್‌ಐ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಈತ, ಆಂಧ್ರದಿಂದ ಪರಾರಿಯಾಗಿ ನಗರದಲ್ಲಿ ತಲೆಮರೆಸಿಕೊಂಡಿದ್ದ. ಹೀಗಾಗಿ ಖಚಿತ ಮಾಹಿತಿ ಮೇರೆಗೆ ಎನ್‌ಐಎ ತಂಡ ದಾಳಿ ನಡೆಸಿ ಆರೋಪಿಯನ್ನು ಸೆರೆ ಹಿಡಿದಿದೆ.
ಆಂಧ್ರ ಪ್ರದೇಶದ ನಂದ್ಯಾಲ ಮೂಲದ ಆರೋಪಿ, 2022ರಲ್ಲಿ ಎನ್ಐಎ ದಾಳಿ ವೇಳೆ ತಪ್ಪಿಸಿಕೊಂಡು ಬಳ್ಳಾರಿಯ ಕೌಲಬಜಾರ್ ಸೇರಿದ್ದ. ಇಡೀ ಕುಟುಂಬವನ್ನು ಇಲ್ಲಿಗೆ ಸ್ಥಳಾಂತರಿಸಿಕೊಂಡು ಬಂದಿದ್ದ ಆರೋಪಿ, ನಗರದಲ್ಲಿ ಬಶೀರ್ ಎಂದು ಹೆಸರು ಬದಲಿಸಿಕೊಂಡು ಪ್ಲಂಬರ್ ಕೆಲಸ ಮಾಡುತ್ತಿದ್ದ. ಹೀಗಾಗಿ ಈತನಿಗಾಗಿ ಎನ್‌ಐಎ ಹುಡುಕಾಟ ನಡೆಸುತ್ತಿತ್ತು.
ತೆಲಂಗಾಣ ಹಾಗೂ ಆಂಧ್ರದಲ್ಲಿ ಶಸ್ತ್ರಾಸ್ತ್ರ ಪೂರೈಕೆ ಜತೆಗೆ ಮುಸ್ಲಿಂ ಯುವಕರಿಗೆ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿದ್ದ ನೊಸ್ಸಾಮ್ ಮೊಹಮ್ಮದ್ ಯೂಸಫ್ ವಿರುದ್ಧ, ಕರಾಟೆ, ದೈಹಿಕ ಶಿಕ್ಷಣ ಹೆಸರಿನಲ್ಲಿ ಕತ್ತಿ, ಮಚ್ಚು, ಕಬ್ಬಿಣದ ರಾಡ್‌ಗಳಿಂದ ಹೇಗೆ ದಾಳಿ ಮಾಡಬೇಕು ಎಂಬ ಬಗ್ಗೆ ಯುವಕರಿಗೆ ತರಬೇತಿ ನೀಡುತ್ತಿದ್ದ ಎಂಬ ಆರೋಪವಿದೆ. ಈ ಮೂಲಕ ವಿಧ್ವಂಸಕ ಕೃತ್ಯಗಳಿಗೆ ಸಂಚು ರೂಪಿಸಿ, ಶಾಂತಿ-ಸುವ್ಯವಸ್ಥೆಗೆ ಧಕ್ಕೆ ತರಲು ಯತ್ನಿಸಿದ್ದ ಎನ್ನಲಾಗಿದೆ.
ಇದನ್ನೂ ಓದಿ | Psycho in Bangalore: ಬೆಂಗಳೂರಿನಲ್ಲಿ ಕಾಣಿಸಿಕೊಂಡಿದ್ದಾನೆ ವಿಕೃತ ಕಾಮಿ, ಉಡುಪು ಹುಷಾರು!
16 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್
ನಿಜಾಮಾಬಾದ್ ಪಿಎಫ್‌ಐ ಪ್ರಕರಣದಲ್ಲಿ 2022ರ ಜುಲೈ 4ರಂದು ಹೈದರಾಬಾದ್ ಪೊಲೀಸರು, 16 ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ನಂತರ ಪ್ರಕರಣ ಎನ್‌ಐಎಗೆ ವರ್ಗಾವಣೆಯಾಗಿತ್ತು, ಈಗಾಗಲೇ ಎನ್‌ಐಎ 2 ಚಾರ್ಜ್‌ಶೀಟ್ ಸಲ್ಲಿಸಿದ್ದು, ಇದೀಗ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ.
NIA ARRESTS PFI MASTER WEAPONS TRAINER LIVING UNDER FALSE IDENTITY IN KARNATAKA pic.twitter.com/U5IbMerjzN
— NIA India (@NIA_India) June 14, 2023