Site icon Vistara News

ವಿಸ್ತಾರ ಸಂಪಾದಕೀಯ | ಬೆಳಗಾವಿ ಚಳಿಗಾಲದ ಅಧಿವೇಶನ ಫಲಪ್ರದವಾಗಲಿ

belgavi session

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಭುಗಿಲೆದ್ದ ಸಂದರ್ಭದಲ್ಲೇ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನವು ಸೋಮವಾರದಿಂದ 10 ದಿನಗಳ ಕಾಲ ನಡೆಯಲಿದೆ. ಬೆಳಗಾವಿ ಕನ್ನಡ ನಾಡಿನ ಅವಿಭಾಜ್ಯ ಅಂಗ ಎನ್ನುವುದನ್ನು ಗಟ್ಟಿಯಾಗಿ ಹೇಳಲು ಈ ಸಂದರ್ಭವು ವೇದಿಕೆಯನ್ನು ಒದಗಿಸಿದೆ. ಹಾಗಾಗಿ, ನಮ್ಮೆಲ್ಲ ರಾಜಕೀಯ ಪಕ್ಷಗಳು ಏಕದನಿಯಲ್ಲಿ ಈ ಕುರಿತು ಹೊರ ಜಗತ್ತಿಗೆ ಸಂದೇಶವನ್ನು ರವಾನಿಸುವ ಕೆಲಸವನ್ನು ಮಾಡಬೇಕು. ರಾಜ್ಯ ವಿಧಾನಸಭೆ ಚುನಾವಣೆಗೆ ನಾಲ್ಕೈದು ತಿಂಗಳು ಬಾಕಿ ಇರುವುದರಿಂದ ಸಹಜವಾಗಿಯೇ ಈ ಅಧಿವೇಶನದಲ್ಲೂ ಆಡಳಿತ-ಪ್ರತಿ ಪಕ್ಷಗಳು ಸಂಘರ್ಷಕ್ಕೆ ಇಳಿಯುವುದು ಸಹಜ. ಅದಕ್ಕೆ ಬೇಕಾದ ರಂಗಸಜ್ಜಿಕೆಯನ್ನು ಈಗಾಗಲೇ ಪಕ್ಷಗಳು ಸಿದ್ಧತೆ ಮಾಡಿಕೊಂಡಿರುವಂತಿದೆ. ಆದರೆ, ಈ ರಾಜಕೀಯ ಮೇಲಾಟದಲ್ಲಿ ಉತ್ತರ ಕರ್ನಾಟಕದಲ್ಲಿ ನಡೆಸಲಾಗುವ ಅಧಿವೇಶನದ ಮುಖ್ಯ ಉದ್ದೇಶವನ್ನು ಮರೆಯಬಾರದು. ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಹಣೆಪಟ್ಟಿಯನ್ನು ಅಂಟಿಸಿಕೊಂಡಿರುವ ಈ ಭಾಗದ ಬೆಳವಣಿಗೆಗಾಗಿ ಅಧಿವೇಶನವನ್ನು ಫಲಪ್ರದಗೊಳಿಸಬೇಕಾದ ಜವಾಬ್ದಾರಿಯನ್ನು ಜನಪ್ರತಿನಿಧಿಗಳು ಮರೆಯಬಾರದು.

ಬೆಂಗಳೂರು ಶಕ್ತಿಕೇಂದ್ರದಿಂದ ಉತ್ತರ ಕರ್ನಾಟಕ ನಿರ್ಲಕ್ಷಕ್ಕೆ ಒಳಗಾಗಿದೆ ಎಂಬ ಆರೋಪವನ್ನು ನೀಗಿಸುವುದಕ್ಕಾಗಿ ಹತ್ತು ವರ್ಷಗಳ ಹಿಂದೆ ಬೆಳಗಾವಿಯಲ್ಲಿ 4.38 ಕೋಟಿ ರೂ. ವೆಚ್ಚದಲ್ಲಿ ಸುವರ್ಣ ವಿಧಾನಸೌಧವನ್ನು ನಿರ್ಮಿಸಲಾಯಿತು. ಆದರೆ, ಉದ್ದೇಶ ಈಡೇರಿದೆಯೇ ಎಂಬ ಪ್ರಶ್ನೆಗೆ ನಿರಾಶಾದಾಯಕ ಉತ್ತರ ದೊರೆಯುತ್ತದೆ. ಈ ಹತ್ತು ವರ್ಷದಲ್ಲಿ ಸುಮಾರು 80 ದಿನಗಳ ಕಾಲ ಮಾತ್ರವೇ ಅಧಿವೇಶನ ನಡೆದಿದೆ. ಅದರಲ್ಲೂ, ಸಂಪೂರ್ಣವಾಗಿ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ಚರ್ಚೆ ನಡೆದಿದ್ದು ತೀರಾ ಕಡಿಮೆ. ಬಹುತೇಕ ಚಳಿಗಾಲದ ಅಧಿವೇಶನವು ಆಡಳಿತ-ಪ್ರತಿಪಕ್ಷಗಳು ಸಂಘರ್ಷದ ವೇದಿಕೆಯಾಗಿಯೇ ಮಾರ್ಪಟ್ಟಿರುವುದು ದುರದೃಷ್ಟಕರ. ಹಾಗಾಗಿ, ಈ ಬಾರಿ ಅದು ಮರುಕಳಿಸದಂತೆ ನೋಡಿಕೊಳ್ಳಬೇಕು.

ಪ್ರಸಕ್ತ ಅಧಿವೇಶನದಲ್ಲಿ ಪ್ರಮುಖ ವಿಧೇಯಕಗಳು ಮಂಡನೆಗೆ ಕಾದು ಕುಳಿತಿವೆ. ಈಗಾಗಲೇ ಸುಗ್ರೀವಾಜ್ಞೆ ಹೊರಡಿಸಲಾಗಿರುವ ಎಸ್‌ಸಿ-ಎಸ್‌ಟಿ ಮೀಸಲಾತಿ ಹೆಚ್ಚಳವನ್ನು ಕಾಯ್ದೆಯಾಗಿ ಪರಿವರ್ತಿಸಬೇಕಿದೆ. ಅದರ ಜತೆಗೆ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ, ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ ವಿಧೇಯಕ, ಭೂ ಕಂದಾಯ ಕಾಯಿದೆ ತಿದ್ದುಪಡಿ ವಿಧೇಯಕ, ಕರ್ನಾಟಕ ಪ್ರದೇಶ ವಿಶೇಷ ಹೂಡಿಕೆ ಪ್ರದೇಶ ವಿಧೇಯಕ, ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ವಿಧೇಯಕಗಳನ್ನು ಮಂಡನೆ ಮಾಡಲಾಗುತ್ತದೆ. ಇವುಗಳ ಜತೆಗೆ, ಗಲಾಟೆಗೂ ಕಾರಣವಾಗುವ ವಿಧೇಯಕಗಳ ಮಂಡನೆಗೆ ಸರ್ಕಾರ ಮುಂದಾಗುವ ಸಾಧ್ಯತೆಗಳಿವೆ. ಶಾಸನಸಭೆ ಇರುವುದೇ ಕಾನೂನುಗಳನ್ನು ರೂಪಿಸಲು. ಚರ್ಚೆ, ಸಂವಾದಗಳ ಮೂಲಕ ನಿರ್ಣಯಗಳನ್ನು ಮಾಡಬೇಕು. ಆದರೆ, ಬಹಳಷ್ಟು ಸಾರಿ ಗದ್ದಲ, ಗೌಜಿನ ನಡುವೆಯೇ ಯಾವುದೇ ಚರ್ಚೆ ಇಲ್ಲದೇ ವಿಧೇಯಕಗಳನ್ನು ಪಾಸು ಮಾಡಿಕೊಳ್ಳಲಾಗುತ್ತದೆ. ಈ ಕೆಟ್ಟ ಸಂಪ್ರದಾಯವನ್ನು ಮುರಿಯುವ ಪ್ರಯತ್ನ ಈ ಬಾರಿಯಾದರೂ ಆಗಲಿ.

ಇನ್ನು ಉತ್ತರ ಕರ್ನಾಟಕದ ಹೆಗ್ಗುರುತಾಗಿರುವ ಸುವರ್ಣ ವಿಧಾನಸಭೆಯ ಸದ್ಬಳಕೆಯಾಗದ ಬಗ್ಗೆ ಮೊದಲಿನಿಂದಲೂ ಆರೋಪಗಳಿವೆ. ವರ್ಷಕ್ಕೆ 10 ದಿನಗಳ ಅಧಿವೇಶನ ಕೈಗೊಳ್ಳುವುದಕ್ಕೆ ಮಾತ್ರವೇ ಸುವರ್ಣ ವಿಧಾನಸೌಧ ಸಿಮೀತವಾಗಬಾರದು. ವರ್ಷದ ಎಲ್ಲ ದಿನಗಳಲ್ಲೂ ಸೌಧ ಬಳಕೆಯಾಗಬೇಕು ಎಂಬುದು ಕನ್ನಡಿಗರ ಆಗ್ರಹ. ಆ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ಜವಾಬ್ದಾರಿಗಳನ್ನು ಹೊಂದಿರುವ ಇಲಾಖೆಗಳು ಜತೆಗೆ, ಇತರ ಪ್ರಮುಖ ಸಚಿವಾಲಯಗಳನ್ನು ಸ್ಥಳಾಂತರಿಸಬೇಕು ಎಂಬ ಬೇಡಿಕೆ ಇನ್ನೂ ಈಡೇರಿಲ್ಲ. ಹೆಸರಿಗೆ ಮಾತ್ರ, ಬೆಳಗಾವಿ ಜಿಲ್ಲಾ ಮಟ್ಟದ ಒಂದಿಷ್ಟು ಕಚೇರಿಗಳನ್ನು ಸೌಧಕ್ಕೆ ಸ್ಥಳಾಂತರಿಸಲಾಗಿದೆ. ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಸರ್ಕಾರಕ್ಕೆ ಪ್ರಾಮಾಣಿಕ ಕಾಳಜಿ ಇದ್ದರೆ, ಕೂಡಲೇ ಇಲಾಖೆಗಳನ್ನು ಸ್ಥಳಾಂತರಿಸಬೇಕು. ಆದರೆ, ಉನ್ನತ ಅಧಿಕಾರಿಗಳ ಲಾಬಿಗೆ ಮಣಿದು ಆ ಕೆಲಸವಾಗುತ್ತಿಲ್ಲ ಎಂಬುದು ವಾಸ್ತವ.

ಗಂಭೀರ ಚರ್ಚೆಗಳಿಗೆ ಸಾಕಷ್ಟು ವಿಷಯಗಳಿವೆ; ಕನ್ನಡಿಗರ ಒಗ್ಗಟ್ಟು ಪ್ರದರ್ಶಿಸುವ ಸಂದರ್ಭವೂ ಎದುರಾಗಿದೆ. ಇದಕ್ಕೆಲ್ಲ ಸಕಾರಾತ್ಮಕ ಸಂದೇಶವನ್ನು ಕಳುಹಿಸಲು ಈ ಚಳಿಗಾಲದ ಅಧಿವೇಶನವಾಗಿ ಅತ್ಯುತ್ತಮ ವೇದಿಕೆಯಾಗಿದ್ದು, ಆಡಳಿತ-ಪ್ರತಿಪಕ್ಷಗಳು ಬಳಸಿಕೊಳ್ಳಬೇಕು. ಯಾಕೆಂದರೆ, ಬೆಳಗಾವಿಯಲ್ಲಿ ಅಧಿವೇಶನ ಕೈಗೊಳ್ಳಲು ದಿನಕ್ಕೆ ಹೆಚ್ಚು ಕಡಿಮೆ ಒಂದೂವರೆ ಕೋಟಿ ರೂ. ವೆಚ್ಚವಾಗುತ್ತದೆ. ಕನ್ನಡಿಗರ ತೆರಿಗೆ ಹಣ ಪೋಲಾಗದಂತೆ, ಅಧಿವೇಶನವನ್ನು ಹೆಚ್ಚು ಫಲಪ್ರದಗೊಳಿಸುವುದು ಎಲ್ಲರ ಜವಾಬ್ದಾರಿಯಾಗಿದೆ.

ಇದನ್ನೂ ಓದಿ | ಸಂಪಾದಕೀಯ: ಪ್ರಧಾನಿ ಬಗ್ಗೆ ಪಾಕ್‌ ಸಚಿವನ ಮಾತು ಅತಿರೇಕದ್ದು

Exit mobile version