ಚಿತ್ರದುರ್ಗ: ಶಾಸಕ ಬಿ.ವೈ. ವಿಜಯೇಂದ್ರ ಅವರ ತಂದೆ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರೇ ಮುಖ್ಯಮಂತ್ರಿಯಾಗಿದ್ದಾಗ ಮೊದಲ ಬಾರಿಗೆ ಅಧಿಕಾರ ಪೂರೈಸಲಿಲ್ಲ. ಅವರೇ ಅಧಿಕಾರ ಹಸ್ತಾಂತರ ಮಾಡುವಾಗ ಕಣ್ಣೀರು ಹಾಕಿದ್ದರು. ನಿಮ್ಮಪ್ಪ ಅಧಿಕಾರ ಬಿಟ್ಟುಕೊಡುತ್ತಾರೆ ಎಂಬ ಗ್ಯಾರಂಟಿ ನಿಮಗೆ ಇತ್ತಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವಧಿ ಪೂರೈಸುವುದಿಲ್ಲ ಎಂಬ ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ಹೇಳಿಕೆಗೆ ಸಚಿವ ಎಂ.ಬಿ. ಪಾಟೀಲ (MB Patil) ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್, ದೆಹಲಿಯಲ್ಲಿ ಹೈಕಮಾಂಡ್ ನಾಯಕರು ಸುದ್ದಿಗೋಷ್ಠಿ ಮಾಡಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹುದ್ದೆ ಸೇರಿದಂತೆ ಸರ್ಕಾರದ ಬಗ್ಗೆ ಎಲ್ಲವನ್ನೂ ಹೇಳಿದ್ದಾರೆ. ನಾನು ಅದರ ಬಗ್ಗೆ ಹೆಚ್ಚು ಮಾತನಾಡಲು ಹೋಗುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ: Political News : ನಿಮ್ಮ ಶಾಸಕರು ಬೆಂಗಳೂರಿನಲ್ಲಿ ಎಲ್ಲಿ ಸಿಗುತ್ತಾರೆ ಗೊತ್ತೇ? ಇಲ್ಲಿದೆ ಮಾಹಿತಿ!
ಬಿಜೆಪಿ ನಾಯಕರಿಗೆ ಮಾತನಾಡುವ ಅರ್ಹತೆಯೇ ಇಲ್ಲ. ಜನ ಬಿಜೆಪಿಯವರು 40% ಸರ್ಕಾರ ಎಂದು ಮನೆಗೆ ಕಳಿಸಿದ್ದಾರೆ. ಜನರಿಗೆ ಏನು ಬೇಕೋ ಅದನ್ನು ನಾವು ಕೊಟ್ಟಿದ್ದೇವೆ. ಗೃಹ ಜ್ಯೋತಿ ಯೋಜನೆಯಲ್ಲಿ 200 ಯುನಿಟ್ ವಿದ್ಯುತ್ ಕೊಟ್ಟಿದ್ದೇವೆ. 12 ತಿಂಗಳ ಸರಾಸರಿ ಪಡೆದುಕೊಂಡು ಅದರ ಮೇಲೆ ವಿದ್ಯುತ್ ಕೊಡುತ್ತಿದ್ದೇವೆ. ದುರುಪಯೋಗ ಆಗಬಾರದು ಎಂಬ ನಿಟ್ಟಿನಲ್ಲಿ ನಾವು ಮಿತಿಯನ್ನು ನಿಗದಿ ಮಾಡಿದ್ದೇವೆ. ರಾಜ್ಯದ ಹಿತದೃಷ್ಟಿಯಿಂದ ಈ ನಿಯಮವನ್ನು ನಾವು ಜಾರಿ ಮಾಡಿದ್ದೇವೆ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದರು.
ಸಂಸದ ನಾರಾಯಣಸ್ವಾಮಿಗೆ ತಿರುಗೇಟು
ಡಕೋಟಾ ಬಸ್‌ನಲ್ಲಿ ಉಚಿತ ಪ್ರಯಾಣ ಎಂಬ ಸಂಸದ ನಾರಾಯಣಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವ ಎಂ.ಬಿ. ಪಾಟೀಲ್, ರಾಜ್ಯದಲ್ಲಿ ನೀವು ಅಧಿಕಾರದಲ್ಲಿ ಇದ್ದಾಗ ಶೇಕಡಾ 94ರಷ್ಟು ಕೆಎಸ್‌ಆರ್‌ಟಿಸಿ (KSRTC) ಡಕೋಟಾ ಬಸ್ ಆಗಿದ್ದವು. ಈಗ ಮಾತ್ರ ನಿಮಗೆ ಅವು ಡಕೋಟಾ ಬಸ್ ರೀತಿ ಕಾಣಿಸುತ್ತಿವೆಯೇ? ನನ್ನ ಹೆಂಡತಿ ಸಹ ಆ ಬಸ್‌ನಲ್ಲಿ ಹೋಗಬಹುದು, ನಿಮ್ಮ ಹೆಂಡತಿಯೂ ಉಚಿತವಾಗಿ ಬಸ್‌ನಲ್ಲಿ ಹೋಗಬಹುದು ಎಂದು ಹೇಳಿದರು.
ಈಗ ಬಿಜೆಪಿಯವರಿಗೆ ಹೇಳುವುದಕ್ಕೆ, ಕೇಳುವುದಕ್ಕೆ ಏನೂ ಇಲ್ಲ. ಅದಕ್ಕಾಗಿಯೇ ಹೀಗೆ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಯುವನಿಧಿ ಬಗ್ಗೆ ನಮ್ಮ ಪ್ರಣಾಳಿಕೆಯಲ್ಲಿ 2022, 2023ರ ಸಾಲಿನಲ್ಲಿ ನಿರುದ್ಯೋಗಿ ಯುವಕರಿಗೆ ಧನಸಹಾಯ ಮಾಡುತ್ತೇವೆ ಎಂದು ಹೇಳಿದ್ದೇವೆ. ಉದ್ಯೋಗ ಸಿಕ್ಕ ಮೇಲೆ ಅಂಥವರು ಈ ಯೋಜನೆಯಿಂದ ಹಿಂದೆ ಸರಿಯಬೇಕು. ಸರ್ಕಾರದ ಹಣ ಅಂದ್ರೆ ದಾನ, ಧರ್ಮ ಮಾಡುವ ಹಣ ಅಲ್ಲ ಎಂದು ಎಂ.ಬಿ. ಪಾಟೀಲ್ ಹೇಳಿದರು.
ಬಿಜೆಪಿ ನಾಯಕರು ಭಯ ಬಿದ್ದಿದ್ದಾರೆ
ಕಾಂಗ್ರೆಸ್ ಗ್ಯಾರಂಟಿಗಳಿಂದ ರಾಜ್ಯದ ಜನರನ್ನು ಬಿಕ್ಷಾಟನೆಗೆ ತಳ್ಳಲಾಗುತ್ತಿದೆ ಎಂಬ ಸಂಸದ ನಾರಾಯಣಸ್ವಾಮಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಎಂ.ಬಿ. ಪಾಟೀಲ್, ನಾವು ಭರವಸೆ ಕೊಟ್ಟಾಗ ಸಹ ಬಿಜೆಪಿಯವರು ಟೀಕೆ ಮಾಡಿದ್ದರು. ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಆಗ ಭರವಸೆ ಕೊಟ್ಟಾಗ ಜನರನ್ನು ಭಿಕ್ಷಾಟಣೆಗೆ ತಳ್ಳಿದರು ಎಂದು ನಾವು ಹೇಳಬಹುದಿತ್ತು ಅಲ್ಲವೇ? ಬಿಜೆಪಿಯವರು ಎಷ್ಟು ಭರವಸೆ ಈಡೆರಿಸಿದ್ದಾರೆ ಎಂದು ಈಗ ಮಾತನಾಡುತ್ತಾರೆ? ನಮ್ಮ ಗ್ಯಾರಂಟಿ ಜಾರಿಯಿಂದ ಬಿಜೆಪಿ ನಾಯಕರು ಭಯ ಬಿದ್ದಿದ್ದಾರೆ. ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಣ ಕ್ರೋಢೀಕರಣದ ಬಗ್ಗೆ ಗೊತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: BBMP Election: ಫ್ರೀ ಬಸ್ ಮೇಲೇರಿ BBMP ಗೆಲ್ಲಲು ಹೊರಟ ಕಾಂಗ್ರೆಸ್: ಚುನಾವಣೆಗೆ ಕಾರ್ಯತಂತ್ರ ಜೋರು
ಸಚಿವ ಆದ ಬಳಿಕ ಮೊದಲ ಬಾರಿಗೆ ಮುರುಘಾ ಮಠಕ್ಕೆ ಬಂದಿದ್ದೇನೆ. ಮುರುಘಾ ಮಠ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಶತಮಾನಗಳ ಮಠ ಅಂದರೆ ಅದು ಚಿತ್ರದುರ್ಗ ಮಠವಾಗಿದೆ. ನಾನು ಇಂದು ಗದ್ದುಗೆಯ ಆಶೀರ್ವಾದ ಪಡೆದಿದ್ದೇನೆ. ಎಲ್ಲ ಮಠಗಳಿಗೆ ನಾನು ಭೇಟಿ ಕೊಟ್ಟಿದ್ದೇನೆ ಎಂದು ಎಂ.ಬಿ. ಪಾಟೀಲ್ ಹೇಳಿದರು.