Site icon Vistara News

MB Patil: ಸಂತೋಷ್‌ಗೆ ಬೈದ್ರೆ ಬ್ರಾಹ್ಮಣರಿಗೆ ಬೈದಂಗಾ?; ಪ್ರತಾಪ್‌ ಸಿಂಹ ಚೇಲಾ ಎಂದ ಎಂ.ಬಿ ಪಾಟೀಲ್‌

Pratap Simha MB Patil

#image_title

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ (BL Santhosh) ಅವರಿಗೆ ಬೈದರೆ ಅದು ಬ್ರಾಹ್ಮಣರಿಗೆ ಬೈದಂಗೆ ಹೇಗಾಗುತ್ತದೆ? ಇದಕ್ಕೆ ಲಾಜಿಕ್‌ ಇದ್ಯಾ?- ಎಂದು ಪ್ರಶ್ನೆ ಮಾಡಿದ್ದಾರೆ ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ (MB Patil).

ಸದಾಶಿವನಗರದ ನಿವಾಸದಲ್ಲಿ ಮಾಧ್ಯಮ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸೋಮವಾರ ಮೈಸೂರಿನಲ್ಲಿ ಪ್ರತಾಪ್‌ಸಿಂಹ (MP Pratapsimha) ಅವರು ಮಾಡಿದ ಆರೋಪಗಳಲ್ಲಿ ಕೆಲವಕ್ಕೆ ಉತ್ತರ ನೀಡಿದ್ದರು. ʻಎಂ.ಬಿ. ಪಾಟೀಲರಿಗೆ ಬ್ರಾಹ್ಮಣರನ್ನು ಕಂಡರೆ ಯಾಕಿಷ್ಟು ಸಿಟ್ಟು? ಬ್ರಾಹ್ಮಣರ ಮೇಲೆ ಇಷ್ಟೆಲ್ಲ ಸಿಟ್ಟು ಮಾಡಿಕೊಳ್ಳುವ ಅವರು ನಿಜಕ್ಕೂ ಲಿಂಗಾಯತರಾʼʼ ಎಂದು ಕೇಳಿದ್ದರು. ಅದರ ಜತೆಗೆ ಎಂ.ಬಿ. ಪಾಟೀಲ್‌ ಅವರು ಸಿದ್ದರಾಮಯ್ಯ ಅವರ ಚೇಲಾ, ಅವರಿಗೆ ಏನು ಹೇಳಬೇಕೋ ಅದನ್ನು ಎಂ.ಬಿ ಪಾಟೀಲ್‌ ಬಾಯಿಯಲ್ಲಿ ಹೇಳಿಸುತ್ತಾರೆ ಎಂದು ಆಪಾದಿಸಿದ್ದರು.

ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ಎಂ.ಬಿ. ಪಾಟೀಲ್‌ ಅವರು ಪ್ರತಾಪ್‌ಸಿಂಹ ಅವರು ಚೇಲಾ ಅಂತಾರೆ, ಬಿ.ಎಲ್‌. ಸಂತೋಷ್‌ ಚೇಳು ಅಂತಾರೆ. ಬೆಂಕಿ ಹಚ್ಚುವ ಕೆಲಸ ಮಾಡುತ್ತಾರೆ ಎಂದರು.

ನಾನೆಂದೂ ಬ್ರಾಹ್ಮಣರಿಗೆ ಅಪಮಾನ ಮಾಡಿಲ್ಲ

ʻʻಸಂಸದ ಪ್ರತಾಪ ಸಿಂಹ ಹೇಳಿಕೆ ಗಮನಿಸಿದ್ದೇನೆ. ಬಿ.ಎಲ್ ಸಂತೋಷ ಅವರನ್ನು ಟೀಕೆ ಮಾಡಿದ್ದೆ. ಆ ಟೀಕೆಯನ್ನು ಒಂದು ಸಮಾಜದತ್ತ ತೆಗೆದುಕೊಂಡು ಹೋಗಿದ್ದಾರೆ. ದಿನಾ ಬೆಳಗಾದ್ರೆ ಬ್ರಾಹ್ಮಣರನ್ನು ಬೈಯೋದು ಬೇಡ ಎಂದು ಹೇಳಿದ್ದಾರೆ. ನಿಜ ಅಂದ್ರೆ ಸಿದ್ದರಾಮಯ್ಯ ಅವರು ಎಂ.ಬಿ ಪಾಟೀಲ್‌ ಹೆಗಲ ಮೇಲೆ ಬಂದೂಕು ಇಟ್ಟು ಶೂಟ್ ಮಾಡ್ತಾ ಇದ್ದಾರೆ ಎಂದು ಹೇಳಿದ್ದು ಪ್ರತಾಪ್‌ ಸಿಂಹ. ಹಾಗಿದ್ದರೆ ಅದನ್ನು ಪ್ರತಾಪ್‌ ಸಿಂಹ ಅವರು ಲಿಂಗಾಯತರಿಗೆ ಬೈದರು ಎಂದು ವ್ಯಾಖ್ಯಾನ ಮಾಡಬಹುದು. ನಿಜವೆಂದರೆ ಎಂಬಿ ಪಾಟೀಲ್‌ ಟೀಕೆ ಮಾಡಿದರೆ ಲಿಂಗಾಯತರಿಗೆ ಬೈದಂಗೆ ಅಲ್ಲ… ಸಂತೋಷ ಅವರಿಗೆ ಟೀಕೆ ಮಾಡಿದ್ರೆ ಬ್ರಾಹ್ಮಣ ಸಮುದಾಯಕ್ಕೆ ಬೈದಂಗೆ ಅಲ್ಲ ಎನ್ನುವುದು ಸರಳ ಸತ್ಯ. ಹಾಗಿದ್ದರೆ ಸಮುದಾಯವನ್ನು ಎತ್ತಿಕಟ್ಟುತ್ತಿರುವ ಪ್ರತಾಪ ಸಿಂಹ ಅವರು ಉದ್ದೇಶ ಏನುʼʼ ಎಂದು ಎಂ.ಬಿ. ಪಾಟೀಲ್‌ ಪ್ರಶ್ನಿಸಿದರು.

ʻʻಬ್ರಾಹ್ಮಣ ಸಮಾಜಕ್ಕೆ ನಾನು ಎಂದೂ ಅಪಮಾನ ಮಾಡುವ ಕೆಲಸ ಮಾಡಿಲ್ಲ. ಹೋಗಿ ನಮ್ಮ ವಿಜಯಪುರ ಜಿಲ್ಲೆಯಲ್ಲಿ ವಿಚಾರಿಸಿ. ಒಂದು ಲಕ್ಷಕ್ಕೂ ಅಧಿಕ ಬ್ರಾಹ್ಮಣ ಸಮುದಾಯ ಜನ ಇದಾರೆ. ಇವರಲ್ಲಿ 90% ಜನ ನನಗೆ ಮತ ಹಾಕಿ ಗೆಲ್ಲಿಸಿದ್ದಾರೆ. ನಾನು ಅವರ ಕೆಲಸಗಳನ್ನು ಯಾವುದನ್ನೂ ನಿರಾಕರಿಸದೆ ಮಾಡುತ್ತಲೇ ಬಂದಿದ್ದೇನೆ. ನನ್ನ ಮತ್ತು ಬ್ರಾಹ್ಮಣ ಸಮುದಾಯದ ನಡುವೆ ಒಂದೊಳ್ಳೆ ಬಾಂಧವ್ಯ ಇದೆʼʼ ಎಂದು ಹೇಳಿದರು.

ಜನರನ್ನು ದಿಕ್ಕು ತಪ್ಪಿಸುವ ಹುನ್ನಾರ

ನನ್ನ ಮತ್ತು ಬ್ರಾಹ್ಮಣ ಸಮುದಾಯದ ನಡುವೆ ಇರುವ ಬಾಂಧವ್ಯವನ್ನು ಹಾಳುಗೆಡವಲು ಪ್ರತಾಪ್‌ಸಿಂ ಹೀಗೆ ಮಾಡಿದ್ದಾರೆ. ಜನರನ್ನು ದಿಕ್ಕುತಪ್ಪಿಸಿ ಜಾತಿಗಳ ನಡುವೆ ಬೆಂಕಿ ಹಚ್ಚುವ ಪ್ರಯತ್ನ ಮಾಡಿದ್ದಾರೆ. ಪ್ರತಾಪ್‌ ಸಿಂಹ ಅವರ ಮಾನಸಿಕ ಸ್ಥಿತಿಯೇ ಹಾಗಿದೆ. ಇದನ್ನು ಅವರು ಎಲ್ಲಿಂದ ಕಲಿತಿದ್ದಾರೋ ಗೊತ್ತಿಲ್ಲ ಎಂದರು ಎಂ.ಬಿ. ಪಾಟೀಲ್.

‌ನಾನಾಗಿಯೇ ಹೋಗಿ ಸಂತೋಷ್‌ ಅವರನ್ನು ಕೂಡಾ ಟೀಕೆ ಮಾಡಿಲ್ಲ. ನಾನು ಅದಾನಿ ಕಂಪನಿಗೂ ರಾಜ್ಯದಲ್ಲಿ ಅವಕಾಶವಿದೆ ಎಂದು ಟ್ವೀಟ್‌ ಮಾಡಿದ್ದಕ್ಕೆ ಪ್ರತಿಯಾಗಿ ಬಿ.ಎಲ್‌ ಸಂತೋಷ್‌ ಅವರು ʻʻರಾಹುಲ್ ಗಾಂಧಿ ಅವರಿಗೆ ಜಾಗ ತೋರಿಸಿದ್ದಾರೆʼ ಅಂತ ಟೀಕಿಸಿದರು. ನಾನು ಅದಕ್ಕೆ ಪ್ರತಿಕ್ರಿಯಿಸಿದ್ದೆ. ಇದೇ ಕಾರಣಕ್ಕೆ ಬ್ರಾಹ್ಮಣರ ವಿರುದ್ಧ ಟೀಕೆ ಅಂತ ಪ್ರತಾಪ್ ಸಿಂಹ ಬಣ್ಣ ಕಟ್ಟಿದ್ದಾರೆ. ನಾನು ಪ್ರತೀ ದಿನ ಟೀಕೆ ಮಾಡ್ತಿದ್ದೀನಿ ಅಂತ ಹೇಳಿದ್ದಾರೆ. ಎಲ್ಲಿ ಪ್ರತಿದಿನ ಟೀಕೆ ಮಾಡಿದ್ದೇನೆ ಎಂದು ತೋರಿಸಲಿ ಎಂದು ಸವಾಲು ಹಾಕಿದರು.

ʻʻನನ್ನ ಬೃಹತ್‌ ಕೈಗಾರಿಕಾ ಖಾತೆಯನ್ನು ಚಿಲ್ಲರೆ ಖಾತೆ ಅಂತ ಟೀಕೆ ಮಾಡಿದ್ದಾರೆ. ಹೋಗಿ ನರೇಂದ್ರ ಮೋದಿ ಅವರನ್ನೇ ಕೇಳಲಿ. ಚಿಲ್ಲರೆ ಖಾತೆ ಯಾವುದು ಅಂತ. ಖಾತೆ ಯಾವುದು ಅನ್ನೋದು ಮುಖ್ಯ ಅಲ್ಲ. ಖಾತೆಯಲ್ಲಿ ಏನು ಕೆಲಸ ಮಾಡುತ್ತೇವೆ ಅನ್ನೋದು ಮುಖ್ಯʼʼ ಎಂದರು ಎಂ.ಬಿ. ಪಾಟೀಲ್‌.

ಸಿದ್ದರಾಮಯ್ಯ ತಮ್ಮ ಚೇಲಾಗಳ ಮೂಲಕ ಪೂರ್ಣಾವಧಿ ಸಿಎಂ ಹೇಳಿಕೆ ಕೊಡಿಸುತ್ತಾರೆ ಎಂಬ ಸಂಸದ ಪ್ರತಾಪ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ʻʻಪ್ರತಾಪ್ ಸಿಂಹ ಅವರಿಗೆ ಚೇಲಾಗಿರಿ ಮಾಡಿ ರೂಢಿ ಇರಬೇಕು. ಇವರು ಚೇಲಾ ಅಂತಾರೆ, ಬಿ.ಎಲ್ ಸಂತೋಷ್ ಚೇಳು ಅಂತಾರೆ. ಬಹುಶಃ ಸಂತೋಷ್ ಬುಟ್ಟಿಯಲ್ಲಿ ಇಂಥ ಚೇಳುಗಳೇ ಬಹಳ ಇರಬೇಕು. ಇವತ್ತು ಅವರಿಗೆ ಕಡಿಯಿರಿ, ನಾಳೆ ಇವರಿಗೆ ಕಡಿಯಿರಿ ಅಂತ ಸಂತೋಷ್ ಚೇಳು ಬಿಡ್ತಾರೆ ಅನಿಸುತ್ತದೆʼʼ ಎಂದು ಗೇಲಿ ಮಾಡಿದರು.

ಇದನ್ನೂ ಓದಿ: Siddaramaiah: ಸಿದ್ದರಾಮಯ್ಯಗೆ ತಾವೇ ಪೂರ್ಣಾವಧಿ ಸಿಎಂ ಎನ್ನಲು ಪುಕ್ಕಲು; ಕೈ ಗೆಲ್ಲಲು ಡಿಕೆಶಿ ಪಾತ್ರ ದೊಡ್ಡದು: ಪ್ರತಾಪ್‌ ಸಿಂಹ

Exit mobile version