ಬಳ್ಳಾರಿ: ನಾನು ಲಿಂಗಾಯತ ಪ್ರಚಾರ ಸಮಿತಿ ಅಧ್ಯಕ್ಷನಲ್ಲ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ. ಎಲ್ಲ ಸಮಾಜಗಳ ಮಠ, ದೇವಸ್ಥಾನ, ಚರ್ಚ್, ಮಸೀದಿಗಳಿಗೆ ಭೇಟಿ ನೀಡಿದ್ದೇನೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ತಿಳಿಸಿದರು.
ಎಬಿಲಿಟಿ ಅಥವಾ ಕಮ್ಯುನಿಟಿಯಿಂದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಕ ಮಾಡಿದ್ದಾರಾ ಎಂಬ ಪ್ರಶ್ನೆಗೆ ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿ, ಈ ಬಾರಿ ಚುನಾವಣೆಯಲ್ಲಿ ಶೇ.50ರಿಂದ 75ರಷ್ಟು ಲಿಂಗಾಯತ ಸಮಾಜದವರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಲಿದ್ದಾರೆ ಎಂದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಹಂಚಿಕೆಗೆ ನೇರವಾಗಿ ಪಕ್ಷವೇ ಸರ್ವೇ ಮಾಡುತ್ತಿದೆ. ಸ್ಥಳೀಯ ನಾಯಕರ ಅಭಿಪ್ರಾಯ, ಸಾಮಾಜಿಕ ನ್ಯಾಯ ಮತ್ತು ಪಕ್ಷ ನಡೆಸುತ್ತಿರುವ ಸರ್ವೇ ಆಧಾರದ ಮೇಲೆಯೇ ಟಿಕೆಟ್ ಹಂಚಿಕೆ ಮಾಡಲಾಗುತ್ತಿದೆ ಎಂದರು.
ಇದನ್ನೂ ಓದಿ | ಸಿಎಂ ಬೊಮ್ಮಾಯಿಗೆ ಕರೆ ಮಾಡಿ ಅಭಿನಂದಿಸಿದ ಯೋಗಿ ಆದಿತ್ಯನಾಥ್ !: ಬಿ.ಕೆ. ಹರಿಪ್ರಸಾದ್ ವ್ಯಂಗ್ಯ
ನೀರಾವರಿಗೆ 1.50 ಸಾವಿರ ಕೋಟಿ ರೂಪಾಯಿ ಅನುದಾನ ಕೊಡುತ್ತೇನೆ, ಇದನ್ನು ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದರು. ಆದರೆ ಎಷ್ಟು ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ ಅವರು, 2018ರಲ್ಲಿ ಕಾಂಗ್ರೆಸ್‌ಗೆ ಅಧಿಕಾರ ನೀಡದಿದ್ದಕ್ಕೆ ರಾಜ್ಯದ ಜನತೆ ಈಗ ಪಶ್ಚತಾಪ ಪಡುತ್ತಿದ್ದಾರೆ. ಈ ಬಾರಿಯು ಖಚಿತವಾಗಿಯೇ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ, 140 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಇರುವುದರಿಂದ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ ಎಂದರು.
ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದು ಬಂದಿತ್ತು, ಆದರೆ ಮಂಗಳೂರಿನ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಜನರಿಗೆ ದುಡ್ಡು ಕೊಟ್ಟು ಕರೆತಂದಿದ್ದರು. ಬಿಜೆಪಿಯವರು ಆರ್‌ಎಸ್ಎಸ್ ಅಜೆಂಡಾವನ್ನು ಜಾರಿಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ, ಮನುಸ್ಮೃತಿ ಸಂವಿಧಾನ ಆಗಬೇಕೆಂಬ ಆಶಯ ಆರ್‌ಎಸ್‌ಎಸ್‌ನವರದ್ದಾಗಿದೆ. ಬಿಜೆಪಿಯ ಹೃದಯ ಮತ್ತು ಮಿದಳು ಆರ್‌ಎಸ್‌ಎಸ್ ಆಗಿದೆ ಎಂದು ಲೇವಡಿ ಮಾಡಿದರು.
ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಎಂ.ದಿವಾಕರಬಾಬು, ಶಾಸಕರಾದ ಬಿ.ನಾಗೇಂದ್ರ, ತುಕಾರಾಂ, ಗಣೇಶ್, ಮಾಜಿ ಶಾಸಕರಾದ ಅನಿಲ್ ಲಾಡ್, ಬಿ.ಎಂ.ನಾಗರಾಜ್, ಮೇಯರ್ ರಾಜೇಶ್ವರಿ, ಉಪಮೇಯರ್ ನಂದೀಶ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಫೀಕ್, ಮಂಜುಳಾ, ಮುಖಂಡರಾದ ನಾರಾಭರತರೆಡ್ಡಿ, ಮುಂಡರಗಿ ನಾಗರಾಜ್, ಅಸುಂಡಿ ನಾಗರಾಜ್ ಇತರರು ಇದ್ದರು.
ಇದನ್ನೂ ಓದಿ | Election 2023 | ಕಟೀಲ್ ಟೀಂ ಒಂದು ಕಡೆ, CM-BSY ಟೀಂ ಮತ್ತೊಂದು ಕಡೆ: ಪ್ರವಾಸಕ್ಕೆ ಸಜ್ಜಾದ BJP