ಬಳ್ಳಾರಿ: ಒಡ ಹುಟ್ಟಿದ ಅಕ್ಕ ಎಷ್ಟೇ ಗೋಗರೆದರೂ ಕೇಳದೆ ವಿಡಿಯೊ ಕಾಲ್‌ನಲ್ಲಿ ಆಕೆಯ ಕಣ್ಣ ಮುಂದೆಯೇ ವೈದ್ಯಕೀಯ ವಿದ್ಯಾರ್ಥಿಯೊಬ್ಬ ನೇಣಿಗೆ ಶರಣಾದ ಘಟನೆ ಬಳ್ಳಾರಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಬೀದರ್ ಜಿಲ್ಲೆಯ ಜಿಲ್ಲೆಯ ಬಸವ ಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದ ಶ್ರೇಯಸ್ ಜೋಶಿ (25) ಮೃತ ಯುವಕ. ವಿಮ್ಸ್ ಹಾಸ್ಟೆಲ್‌ನಲ್ಲಿ ವಾಸವಾಗಿದ್ದ ಆತ ಇತ್ತೀಚೆಗೆ ಎಂಬಿಬಿಎಸ್ ಅಂತಿಮ ವರ್ಷದ ಅಧ್ಯಯನ ಮುಗಿಸಿದ್ದ. ಇನ್ನೇನು ಕೆಲವೇ ದಿನದಲ್ಲಿ ಮನೆಗೆ ಮರಳಬೇಕು ಎನ್ನುವಷ್ಟರಲ್ಲಿ ಈ ಅತಿರೇಕದ ಕ್ರಮಕ್ಕೆ ಮುಂದಾಗಿದ್ದಾನೆ.
ಬೈಪೋಲಾರ್ ಡಿಸಾರ್ಡರ್ ಕಾಯಿಲೆಯಿಂದ ನರಳುತ್ತಿದ್ದ ಆತ ಸ್ವಲ್ಪ ಮಟ್ಟಿಗೆ ಖಿನ್ನನಾಗಿಯೇ ಇದ್ದ. ರಾತ್ರಿ ಹಾಸ್ಟೆಲ್ ಕೋಣೆಯಲ್ಲಿ ಒಬ್ಬನೇ ಇದ್ದಾಗ ಈ ಕೃತ್ಯಕ್ಕೆ ಮುಂದಾಗಿದ್ದಾನೆ. ಅದಕ್ಕಿಂತ ಮೊದಲು ತನ್ನ ಅಕ್ಕ ಶ್ರದ್ಧಾ ಜೋಶಿ ಅವರಿಗೆ ಫೋನ್ ಕರೆ ಮಾಡಿದ್ದ ಆತ, ಇನ್ನು ತಾನು ಬದುಕುವುದಿಲ್ಲ ಎಂದು ಹೇಳಿಕೊಂಡು ಅತ್ತಿದ್ದಾನೆ. ಇದು ತನ್ನ ಕೊನೆಯ ಕಾಲ್ ಆಗಿರಬಹುದು, ನಾಳೆ ಬೆಳಗ್ಗೆ ಬಂದು ಹೆಣವನ್ನು ಕೊಂಡು ಹೋಗಬೇಕಾದೀತು ಎಂದೂ ಹೇಳಿದ್ದಾನೆ.
ತುಂಬ ಹೊತ್ತು ತಮ್ಮನೊಂದಿಗೆ ಮಾತನಾಡಿದ ಅಕ್ಕ ನಾನಾ ರೀತಿಯಲ್ಲಿ ಆತನನ್ನು ಸಮಾಧಾನ ಮಾಡಿದ್ದಾರೆ. ಯಾವುದೇ ಸಮಸ್ಯೆ ಇದ್ದರೂ ಪರಿಹಾರ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ. ಆದರೆ, ಅಕ್ಕನ ಯಾವುದೇ ಮಾತು ಕೇಳದ ಶ್ರೇಯಸ್ ಸಾಯುವುದೇ ಖಚಿತ ಎಂದಿದ್ದಾನೆ.
ವಿಡಿಯೊ ಕಾಲ್ ಮಾಡಲು ಒತ್ತಡ
ತಮ್ಮನ ವರ್ತನೆಯಿಂದ ಆತಂಕಗೊಂಡ ಅಕ್ಕ ಫೋನ್ ಬದಲು ವಿಡಿಯೊ ಕಾಲ್ ಮಾಡುವಂತೆ ತಿಳಿಸಿದ್ದಾರೆ. ತಮ್ಮ ಹೇಗಿದ್ದಾನೆ ಎಂದು ತಿಳಿದು ಮುಖಾಮುಖಿ ಸಮಾಧಾನ ಹೇಳಬಹುದು ಎನ್ನುವುದು ಆಕೆಯ ಉದ್ದೇಶವಾಗಿತ್ತು. ಆದರೆ, ಶ್ರೇಯಸ್ ಹಲವು ಬಾರಿ ವಿಡಿಯೊ ಕಾಲ್ ಮಾಡಿದರೂ ಎತ್ತಲಿಲ್ಲ. ಕೊನೆಗೆ ರಿಸೀವ್ ಮಾಡಿದ ಆತ ತಾನು ನೇಣಿಗೆ ಕೊರಳೊಡ್ಡಿರುವುದನ್ನು ತೋರಿಸಿದ್ದಾನೆ. ಆ ಹಂತದಲ್ಲೂ ಅಕ್ಕ ಯಾವ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬೇಡ, ಉರುಳು ತೆಗಿ ಎಂದು ಪರಿಪರಿಯಾಗಿ ಮನವಿ ಮಾಡಿಕೊಂಡಿದ್ದಾರೆ. ಅದಾದ ಕೂಡಲೇ ಶ್ರೇಯಸ್ ಕಾಲ್ ಕಟ್ ಮಾಡಿದ್ದಾನೆ.
ಇದಾದ ತಕ್ಷಣವೇ ಅಕ್ಕ ಶ್ರೇಯಸ್‌ನ ಸ್ನೇಹಿತರಿಗೆ ಕರೆ ಮಾಡಿ ತಿಳಿಸಿದ್ದಾರೆ. ಅವರೆಲ್ಲ ಹಾಸ್ಟೆಲ್ ಕೋಣೆಗೆ ಧಾವಿಸಿದಾಗ ಆತ ನೇಣು ಬಿಗಿದುಕೊಂಡಾಗಿತ್ತು. ಗೆಳೆಯರು ಕೂಡಲೇ ಆತನನ್ನು ಬೈಒನೇಣಿನಿಂದ ಕೆಳಗಿಳಿಸಿ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಆತ ಚಿಕಿತ್ಸೆ ಫಲಿಸದೆ ಶನಿವಾರ ಬೆಳಗ್ಗೆ 6.30ರ ಹೊತ್ತಿಗೆ ಪ್ರಾಣ ಕಳೆದುಕೊಂಡಿದ್ದಾನೆ.
ಇದನ್ನೂ ಓದಿ | ಬಟ್ಟೆ ಒಣಗಲು ಹಾಕುವಾಗ ವಿದ್ಯುತ್ ಸ್ಪರ್ಶ, ತಾಯಿ, ಇಬ್ಬರು ಮಕ್ಕಳು ದಾರುಣ ಮರಣ
ಸಮಸ್ಯೆಯಿಂದ ನರಳುತ್ತಿದ್ದ
ಶ್ರೇಯಸ್ ಕಳೆದ ಕೆಲವು ವರ್ಷಗಳಿಂದ ಬೈಪೋಲಾರ್ ಡಿಸಾರ್ಡರ್ ಎಂಬ ಮನೋರೋಗದಿಂದ ಬಳಲುತ್ತಿದ್ದ, ಆತನ ಪಾಲಕರು ಹೈದರಾಬಾದ್, ನಾಂದೇಡ, ಪುಣೆ ಮೊದಲಾದ ಕಡೆಗಳಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ಆದರೂ ಸಮಸ್ಯೆ ಪರಿಹಾರವಾಗಿರಲಿಲ್ಲ.
ಏನಿದು ಬೈಪೋಲಾರ್ ಡಿಸಾರ್ಡರ್?
ಬೈಪೋಲಾರ್ ಡಿಸಾರ್ಡರ್ ಎನ್ನುವುದು ಒಂದು ಮಾನಸಿಕ ರೋಗವಾಗಿದ್ದು, ಇದಕ್ಕೆ ವಂಶವಾಹಿ, ಪರಿಸರ ಮತ್ತಿತರ ಹಲವು ಕಾರಣಗಳು ಇರಬಹುದು ಎನ್ನುತ್ತದೆ ಮನೋವಿಜ್ಞಾನ. ಈ ರೋಗಕ್ಕೆ ತುತ್ತಾದವರು ಒಮ್ಮೊಮ್ಮೆ ತೀವ್ರ ಖಿನ್ನತೆಯನ್ನು ಅನುಭವಿಸಿದರೆ, ಇನ್ನೊಮ್ಮೆ ಖುಷಿಯ ಉತ್ತುಂಗದಲ್ಲಿದ್ದಂತೆ ಭಾಸವಾಗುತ್ತಾರೆ. ಅತ್ಯಧಿಕ ಮೂಡ್ ಸ್ವಿಂಗ್ ಅನುಭವಿಸುವ ಇವರು, ತಾವು ಯಾವುದಕ್ಕೂ ಸಲ್ಲದ ವ್ಯರ್ಥ ಜೀವಿಗಳು ಎಂಬ ನಕಾರಾತ್ಮಕ ಭಾವನೆ ಅನುಭವಿಸುತ್ತಿರುತ್ತಾರೆ. ದೈನಂದಿನ ಚಟುವಟಿಕೆಗಳಲ್ಲಿ ಆಸಕ್ತಿ ಕಳೆದುಕೊಳ್ಳುವ ಇವರು ತಪ್ಪಿತಸ್ಥ ಭಾವನೆಯೊಂದಿಗೆ ಖಿನ್ನರಾಗಿರುತ್ತಾರೆ.
ಇದನ್ನೂ ಓದಿ | ರಥೋತ್ಸವ ವೇಳೆ ವಿದ್ಯುತ್ ತಗುಲಿ ಮಕ್ಕಳೂ ಸೇರಿ 11 ಮಂದಿ ಸಾವು: ತಂಜಾವೂರಿನಲ್ಲಿ ದುರ್ಘಟನೆ