Site icon Vistara News

Murugha seer ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ | ಬಾಲಕಿಯರ ಮೇಲೆ ಅತ್ಯಾಚಾರವೇ ನಡೆದಿಲ್ಲ ಎನ್ನುತ್ತಿದೆ ವೈದ್ಯಕೀಯ ವರದಿ!

murugha Seer Gets bail in sexual harrassment Case

ಬೆಂಗಳೂರು: ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾಶರಣರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ (Murugha seer) ನಡೆಸಿದ್ದಾರೆ ಎಂದು ಆರೋಪಿಸಿದ್ದ ಇಬ್ಬರು ಸಂತ್ರಸ್ತ ಬಾಲಕಿಯರ ಮೇಲೆ ಯಾವುದೇ ಅತ್ಯಾಚಾರ ನಡೆದಿರುವ ಬಗ್ಗೆ ವೈದ್ಯಕೀಯ ದಾಖಲೆಗಳಿಲ್ಲ ಎಂದು ತಿಳಿದುಬಂದಿದೆ.

ದೂರುದಾರ ಇಬ್ಬರು ಬಾಲಕಿಯರ ಕನ್ಯಾಪೊರೆಗೆ ಹಾನಿಯಾಗಿಲ್ಲ. ಅವರ ಖಾಸಗಿ ಭಾಗದೊಳಗೆ ಯಾವುದೇ ಲೈಂಗಿಕ ಭಾಗಗಳ ಒಳನುಗ್ಗುವಿಕೆ (Sexual penetration) ನಡೆದಿರುವ ಬಗ್ಗೆ ಮಾಹಿತಿ ದೊರೆತಿಲ್ಲ ಎಂದು ನ್ಯಾಯಾಲಯಕ್ಕೆ ನೀಡಲಾಗಿರುವ ವೈದ್ಯಕೀಯ ವರದಿಯಲ್ಲಿ ತಿಳಿಸಲಾಗಿದೆ ಎಂದು ತಿಳಿದುಬಂದಿದೆ.

ಚಿತ್ರದುರ್ಗದ ಮುರುಘಾಶರಣರ ವಿರುದ್ಧ ಕಳೆದ ಆಗಸ್ಟ್‌ ೨೭ರಂದು ಮೈಸೂರಿನ ನಜರಾಬಾದ್‌ ಪೊಲೀಸ್‌ ಠಾಣೆಯಲ್ಲಿ ಇಬ್ಬರು ಬಾಲಕಿಯರು ಲೈಂಗಿಕ ದೌರ್ಜನ್ಯದ ದೂರು ನೀಡಿದ್ದರು. ಮುರುಘಾಶ್ರೀಗಳು ತಮ್ಮ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು, ಹಾಸ್ಟೆಲ್‌ ವಾರ್ಡನ್‌ ಆಗಿರುವ ರಶ್ಮಿ ಅವರು ಇದಕ್ಕೆ ಸಹಕಾರ ನೀಡುತ್ತಿದ್ದಾರೆ ಎಂದು ಆಪಾದಿಸಲಾಗಿತ್ತು. ಜತೆಗೆ ಇತರ ಮೂವರನ್ನೂ ಆರೋಪಿಗಳೆಂದು ಗುರುತಿಸಲಾಗಿದೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ ೧ರಂದು ಶ್ರೀಗಳನ್ನು ಬಂಧಿಸಿದ್ದು ಅಂದಿನಿಂದ ಜೈಲಿನಲ್ಲೇ ಇದ್ದಾರೆ.

ಲೈಂಗಿಕ ದೌರ್ಜನ್ಯದ ದೂರನ್ನು ಮೈಸೂರಿನ ನಜರಾಬಾದ್‌ ಠಾಣೆಯಿಂದ ಚಿತ್ರದುರ್ಗದ ಗ್ರಾಮಾಂತರ ಪೊಲೀಸ್‌ ಠಾಣೆಗೆ ವರ್ಗಾಯಿಸಿ ತನಿಖೆ ಮುಂದುವರಿಸಲಾಗಿತ್ತು. ಈ ವೇಳೆ, ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಯಲ್ಲಿ ಮುಖ್ಯ ವೈದ್ಯಾಧಿಕಾರಿಗಳು ಬಾಲಕಿಯರ ವೈದ್ಯಕೀಯ ಪರೀಕ್ಷೆಯನ್ನು ನಡೆಸಿದ್ದರು. ಒಬ್ಬ ಬಾಲಕಿಯ ವೈದ್ಯಕೀಯ ಪರೀಕ್ಷೆ ಆಗಸ್ಟ್‌ ೨೮ರಂದು ನಡೆದಿದ್ದರೆ, ಇನ್ನೊಬ್ಬಳ ಪರೀಕ್ಷೆ ಸೆಪ್ಟೆಂಬರ್‌ ೨೯ರಂದು ನಡೆದಿತ್ತು.

ವೈದ್ಯಕೀಯ ವರದಿ ಹೇಳಿದ್ದೇನು?
ವಿಸ್ತಾರ ನ್ಯೂಸ್‌ಗೆ ಲಭ್ಯವಿರುವ ಮಾಹಿತಿ ಪ್ರಕಾರ, ಇಬ್ಬರೂ ವಿದ್ಯಾರ್ಥಿನಿಯರ ವೈದ್ಯಕೀಯ ಪರೀಕ್ಷೆ ನಡೆಸಿದ ವೈದ್ಯಾಧಿಕಾರಿಗಳು ಇಬ್ಬರೂ ಮಕ್ಕಳ ಯೋನಿ ಪೊರೆಗೆ ಯಾವುದೇ ಹಾನಿಯಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ.

ಆದರೆ, ತನಿಖಾಧಿಕಾರಿಗಳು ಮತ್ತು ಆಪ್ತ ಸಮಾಲೋಚಕರ ಮುಂದೆ ಬಾಲಕಿಯರು ನೀಡಿದ ಹೇಳಿಕೆಯಲ್ಲಿ, ಮುರುಘಾಶರಣರು ನಿರಂತರವಾಗಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರು. ತಮ್ಮ ಖಾಸಗಿ ಭಾಗಗಳ ಒಳಗೆ ಅವರ ಖಾಸಗಿ ಅಂಗಗಳನ್ನು ಹಾಕುತ್ತಿದ್ದರು (Sexual penetration) ಎಂದು ಹೇಳಿರುವುದು ದಾಖಲಾಗಿದೆ.

ಇಬ್ಬರು ಬಾಲಕಿಯರ ಪೈಕಿ ಒಬ್ಬಳು ಆರಂಭದಲ್ಲಿ ಯಾವುದೇ ವೈದ್ಯಕೀಯ ಪರೀಕ್ಷೆಗೆ ಒಳಗಾಗಲು ಒಪ್ಪಿರಲಿಲ್ಲ. ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಪ್ರಮಾಣ ಮಾಡಿದ್ದ ಆಕೆ ಕೆಲವು ದಿನಗಳ ಸಮಾಲೋಚನೆಗಳ ಬಳಿಕ ಪರೀಕ್ಷೆಗೆ ಒಪ್ಪಿಗೆ ಕೊಟ್ಟಿದ್ದಳು. ಆದರೆ, ಆಗ ತನ್ನ ಖಾಸಗಿ ಭಾಗಗಳ ಒಳಗೆ ಶ್ರೀಗಳು ಖಾಸಗಿ ಅಂಗವನ್ನು ಹಾಕಿಲ್ಲ ಎಂದು ಬಳಿಕ ಆಕೆ ಹೇಳಿರುವುದು ದಾಖಲೆಯಲ್ಲಿ ಸ್ಪಷ್ಟವಾಗಿದೆ ಎನ್ನಲಾಗಿದೆ.

ಹಾಗಂತ ಶ್ರೀಗಳು ತಪ್ಪಿಸಿಕೊಳ್ಳುವಂತಿಲ್ಲ
ಬಾಲಕಿಯರ ಖಾಸಗಿ ಅಂಗಗಳ ಒಳಗೆ ತಮ್ಮ ಖಾಸಗಿ ಭಾಗಗಳನ್ನು ಹಾಕಿ ಲೈಂಗಿಕ ದೌರ್ಜನ್ಯ ನಡೆಸಿಲ್ಲ ಎನ್ನುವ ಈ ವರದಿ ಶ್ರೀಗಳನ್ನೇನೂ ದೋಷಮುಕ್ತಗೊಳಿಸುವುದಿಲ್ಲ. ಇದು ಕೇವಲ ಪೆನೆಟ್ರೇಟಿವ್‌ ಸೆಕ್ಸ್‌ ವಿಷಯವನ್ನು ಮಾತ್ರ ಉಲ್ಲೇಖಿಸಿದೆ. ಬೇರೆ ರೂಪದಲ್ಲಿ ನಡೆಸಿರುವ ಲೈಂಗಿಕ ದೌರ್ಜನ್ಯಗಳ ವಿಚಾರ ಹಾಗೆಯೇ ಇದೆ.

ಪೋಕ್ಸೋ ಪ್ರಕರಣದಡಿ ಒಬ್ಬ ವ್ಯಕ್ತಿ ಅಪ್ರಾಪ್ತರ ಮೇಲೆ ಪೆನೆಟ್ರೇಟಿವ್‌ ಸೆಕ್ಸ್‌ ನಡೆಸಿದ್ದರೆ ಆತನಿಗೆ ಜೀವನಪೂರ್ತಿ ಜೈಲು ಶಿಕ್ಷೆ ಅಥವಾ ಕನಿಷ್ಠ ೨೦ ವರ್ಷ ಜೈಲು ಶಿಕ್ಷೆ ನೀಡಲು ಅವಕಾಶವಿದೆ. ಒಂದೊಮ್ಮೆ ಪೆನೆಟ್ರೇಟಿವ್‌ ಸೆಕ್ಸ್‌ ಅಲ್ಲದೆ ಬೇರೆ ರೂಪದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ್ದರೆ ಮೂರರಿಂದ ಐದು ವರ್ಷ ಜೈಲು ಶಿಕ್ಷೆ ನೀಡಬಹುದಾಗಿದೆ.

ಪಿತೂರಿಯ ಆರೋಪವೂ ತನಿಖೆಯಲ್ಲಿದೆ
ಒಂದು ಕಡೆ ಮುರುಘಾಶ್ರೀಗಳ ಗೋಮುಖ ವ್ಯಾಘ್ರತನ, ತಮ್ಮದೇ ಶಾಲೆಯ, ಹಾಸ್ಟೆಲ್‌ನ ಮಕ್ಕಳನ್ನು ತಮ್ಮ ಕಾಮತೃಷೆಗೆ ಅವರು ಬಳಸಿಕೊಳ್ಳುತ್ತಿದ್ದರು ಎಂಬ ಗಂಭೀರ ಆರೋಪ ನಾಡಿನೆಲ್ಲೆಡೆ ಸುದ್ದಿಯಾಗಿದ್ದರೆ, ಇನ್ನೊಂದು ಕಡೆ ಇದೊಂದು ಪಿತೂರಿ ಎನ್ನುವ ಚರ್ಚೆಯೂ ಇದ್ದು, ಇದರ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಮಠದ ಮಾಜಿ ಆಡಳಿತಾಧಿಕಾರಿಯಾಗಿರುವ, ಮಾಜಿ ಶಾಸಕ ಎಸ್‌.ಕೆ. ಬಸವರಾಜನ್‌ ಮತ್ತು ಅವರ ಪತ್ನಿ ಸೌಭಾಗ್ಯ ಅವರು ಬಾಲಕಿಯರನ್ನು ಪ್ರಚೋದಿಸಿ, ಆಮಿಷ ಒಡ್ಡಿ ಮುರುಘಾ ಶ್ರೀಗಳ ವಿರುದ್ಧ ಸುಳ್ಳು ದೂರು ನೀಡುವಂತೆ ಒತ್ತಡ ಹಾಕಿದ್ದಾರೆ ಎಂಬ ಆರೋಪದ ಬಗ್ಗೆಯೂ ತನಿಖೆ ನಡೆದಿದೆ. ಈ ಬಗ್ಗೆ ಒಂದು ಆಡಿಯೊ ಕ್ಲಿಕ್‌ ವೈರಲ್‌ ಆದ ಬಳಿಕ ಮಠದ ಶಿಕ್ಷಕನೊಬ್ಬನನ್ನು ಬಂಧಿಸಲಾಯಿತು. ಆತ ಈ ಘಟನಾವಳಿಗಳ ಹಿಂದೆ ಎಸ್‌.ಕೆ. ಬಸವರಾಜನ್‌ ಇರುವ ಬಗ್ಗೆ ಬಾಯಿ ಬಿಟ್ಟ ಹಿನ್ನೆಲೆಯಲ್ಲಿ ಅವರನ್ನೂ ಬಂಧಿಸಲಾಗಿತ್ತು. ಈಗ ಅವರು ಜಾಮೀನಿನಲ್ಲಿದ್ದಾರೆ.

ಇದನ್ನೂ ಓದಿ | Murugha Seer | ಮುರುಘಾ ಶ್ರೀಗಳ ಮೇಲೆ ಪಿತೂರಿ ಪ್ರಕರಣ; ಎಸ್‌.ಕೆ. ಬಸವರಾಜನ್‌ ಬಿಡುಗಡೆ

Exit mobile version