Site icon Vistara News

Road Accident: ಮಡಿಕೇರಿಯಲ್ಲಿ ಲಾರಿ-ಬೈಕ್‌ ಡಿಕ್ಕಿಯಾಗಿ ವೈದ್ಯಕೀಯ ವಿದ್ಯಾರ್ಥಿ ಸಾವು, ಮತ್ತೊಬ್ಬರಿಗೆ ಗಾಯ

Road Accident in madikeri

ಮಡಿಕೇರಿ: ಲಾರಿ ಹಾಗೂ ದ್ವಿಚಕ್ರ‌ ವಾಹನ ಡಿಕ್ಕಿಯಾಗಿ ಬೈಕ್‌ ಸವಾರ ಮೃತಪಟ್ಟು, ಮತ್ತೊಬ್ಬರು ಗಾಯಗೊಂಡಿರುವ ಘಟನೆ (Road Accident) ಮಡಿಕೇರಿ ಹೊರವಲಯದ ಕಾಟಗೇರಿ ಬಳಿ ಬುಧವಾರ ನಡೆದಿದೆ. ಉಡುಪಿ ಮೂಲದ ವೈದ್ಯಕೀಯ ವಿದ್ಯಾರ್ಥಿ ವಿಜೇಶ್(23) ಮೃತ ಯುವಕ.

ಮಡಿಕೇರಿ ಹೊರವಲಯದ ಕಾಟಗೇರಿ ಜಂಕ್ಷನ್ ಬಳಿಯ ಪ್ರಾಶಾಂತಿ ರೆಸಾರ್ಟ್ ಬಳಿ ಅಪಘಾತ ಸಂಭವಿಸಿದೆ. ಮಡಿಕೇರಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಹಾಲಿನ ಲಾರಿ ಹಾಗೂ ಮಡಿಕೇರಿ ಕಡೆಗೆ ಬರುತ್ತಿದ್ದ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಮಡಿಕೇರಿಯ ಮೆಡಿಕಲ್ ಕಾಲೇಜಿನ ಅಂತಿಮ ವರ್ಷದ ಎಂ.ಬಿ.ಬಿ.ಎಸ್ ಓದುತ್ತಿದ್ದ ವಿಜೇಶ್ ಮೂಲತಃ ಉಡುಪಿ ಜಿಲ್ಲೆಯವನಾಗಿದ್ದು, ಸ್ನೇಹಿತರೊಂದಿಗೆ ಮನೆಗೆ ತೆರಳಿ ಹಿಂತಿರುಗಿ ಕಾಲೇಜಿಗೆ ಬರುವಾಗ ದುರ್ಘಟನೆ ಸಂಭವಿಸಿದೆ. ಬೈಕ್‌ನಲ್ಲಿದ್ದ ಮತ್ತೊಬ್ಬ ವಿದ್ಯಾರ್ಥಿ ಶಿವಾನಂದ್‌ ಗಾಯಗಳಾಗಿವೆ.

ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕಣ ನಡೆದಿದ್ದು, ಸ್ಥಳಕ್ಕೆ ಮಡಿಕೇರಿ ಗ್ರಾಮ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರೈಲಿಗೆ ತಲೆ ಕೊಟ್ಟು ವ್ಯಕ್ತಿ ಆತ್ಮಹತ್ಯೆ

ಗದಗ: ರೈಲಿಗೆ ತಲೆ ಕೊಟ್ಟು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹೊಂಬಳ ರೈಲ್ವೆ ಸ್ಟೇಷನ್ ಬಳಿ ನಡೆದಿದೆ. ರಮೇಶ ಯಲ್ಲಪ್ಪ ಕುರಿ (32) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಕುಡಿತದ ಚಟದಿಂದ ಬೇಸತ್ತು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ರೈಲ್ವೆ ಹಳಿಯಲ್ಲಿ ರುಂಡ ಒಂದೆಡೆ, ಮುಂಡ ಒಂದೆಡೆ ಬಿದ್ದಿರುವುದು ಕಂಡುಬಂದಿದೆ. ಗದಗ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವ್ಯಕ್ತಿಯ ಶವ ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದ್ದು, ಗದಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಯಚೂರಿನಲ್ಲಿ ಗೃಹಿಣಿ ಅನುಮಾನಾಸ್ಪದ ಸಾವು

ರಾಯಚೂರು: ಗೃಹಿಣಿ ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ನಗರದ ನೇತಾಜಿ ನಗರದಲ್ಲಿ ನಡೆದಿದೆ. ಮನೆ ಮಹಡಿಯ ಮೇಲಿಂದ ಬಿದ್ದು ಮಹಿಳೆ ಮೃತಪಟ್ಟಿದ್ದು, ಮಹಿಳೆಯ ಗಂಡನ ಕುಟುಂಬಸ್ಥರ ವಿರುದ್ಧ ಹತ್ಯೆ (Suspicious Death) ಆರೋಪ ಕೇಳಿಬಂದಿದೆ.

ಶಿಲ್ಪಾ(28) ಮೃತ ಗೃಹಿಣಿ. ಮೃತಳ ಪತಿ ಶರತ್, ತಾಯಿ ಶಶಿಕಲಾ ಹಾಗೂ ತಂದೆ ಸುರೇಶ್‌ ವಿರುದ್ಧ ಹತ್ಯೆ ಆರೋಪ ಕೇಳಿಬಂದಿದೆ. ಮಂಗಳವಾರ ರಾತ್ರಿ ಪತಿ ಹಾಗೂ ಪೋಷಕರು ಶಿಲ್ಪಾಳನ್ನು ಕೊಂದು, ಬಳಿಕ ಎರಡನೇ ಮಹಡಿಯಿಂದ ತಳ್ಳಿ ಕೊಲೆಗೈದಿದ್ದಾರೆ ಎನ್ನಲಾಗಿದೆ. ಶಿಲ್ಪಾ ಮಹಡಿ ಮೇಲಿಂದ ಬೀಳುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ | Husband Harrassed: ಗಂಡನ ಮೇಲೆ ಮೆಣಸಿನ ಹುಡಿ ಮಿಶ್ರಿತ ಬಿಸಿ ನೀರು ಎರಚಿದ ಸಂಶಯ ಪಿಶಾಚಿ ಹೆಂಡತಿ!

ಘಟನೆ ಬಗ್ಗೆ ಆಂಧ್ರ ಮೂಲದ ಶಿಲ್ಪಾ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಪತಿ ಶರತ್ ಪರಾರಿಯಾಗಿದ್ದು, ಆತ ಬರುವವರೆಗೆ ಮೃತದೇಹ ಅಂತ್ಯ ಸಂಸ್ಕಾರ ಮಾಡಲು ಬಿಡಲ್ಲ ಎಂದು ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ. ಸ್ಥಳಕ್ಕೆ ನೇತಾಜಿ ನಗರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version