ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿ 260.9 ಕೋಟಿ ರೂಪಾಯಿ ವೆಚ್ಚದಲ್ಲಿ 47 ಎಕರೆ ವಿಸ್ತೀರ್ಣದಲ್ಲಿ ಸ್ಥಾಪನೆಗೊಂಡಿರುವ ಮೆಗಾ ಡೈರಿ (Mega Diary) ಹಾಲು ಉತ್ಪಾದಕ ಘಟಕಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಉದ್ಘಾಟಿಸಿದರು. ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಆದಿಚುಂಚನಗಿರಿ ಮಠದ ಡಾ. ಶ್ರೀ ನಿರ್ಮಲಾನಂದನಾಥ ಶ್ರೀಗಳು ಸೇರಿದಂತೆ ಹಲವು ಗಣ್ಯರು ಸಾಥ್ ಕೊಟ್ಟರು.
ಈ ಮೆಗಾ ಡೈರಿಯಲ್ಲಿ ದಿನವೊಂದಕ್ಕೆ 30 ಮೆಟ್ರಿಕ್ ಟನ್ ಹಾಲಿನ ಪೌಡರ್ ಉತ್ಪಾದನೆಯಾಗಲಿದ್ದು, 4 ಮೆಟ್ರಿಕ್ ಟನ್ ಕೋವಾ, 2 ಮೆಟ್ರಿಕ್ ಟನ್ ಪನ್ನೀರ್, 12 ಮೆಟ್ರಿಕ್ ಟನ್ ತುಪ್ಪ, 10 ಮೆಟ್ರಿಕ್ ಟನ್ ಬೆಣ್ಣೆ, 10 ಲಕ್ಷ ಲೀಟರ್ ಹಾಲು ಉತ್ಪಾದನೆಯನ್ನು ಮಾಡಲಾಗುವುದು. ಈ ಮೆಗಾ ಡೈರಿ ಮೂಲಕ ಒಂದು ವರ್ಷಕ್ಕೆ 6 ಕೋಟಿ ರೂಪಾಯಿ ಹಣ ಉಳಿತಾಯವಾಗಲಿದೆ. ಇದಕ್ಕೆ ಈಗ ಅಮಿತ್ ಶಾ ಚಾಲನೆ ನೀಡಿದರು.
ಪ್ರತಿ ಲೀಟರ್ ಹಾಲಿಗೆ ೫ ರೂಪಾಯಿ ಪ್ರೋತ್ಸಾಹಧನ: ಸಿಎಂ
ಸಮಗ್ರ ಕೃಷಿಯಲ್ಲಿ ಹೈನುಗಾರಿಕೆ ಬಹಳ ಪ್ರಮುಖವಾಗಿದ್ದು, ರಾಜ್ಯದಲ್ಲಿ ನಾವು ಹೆಚ್ಚಿನ ಒತ್ತು ಕೊಟ್ಟಿದ್ದೇವೆ. ರಾಜ್ಯದಲ್ಲಿ ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ಕೊಡುವ ಕಾರ್ಯವು ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಾರಂಭ ಮಾಡಿದ್ದರು. ಈಗ ೫ ರೂಪಾಯಿವರೆಗೆ ಪ್ರತಿ ಲೀಟರ್ ಹಾಲಿಗೆ ಪ್ರೋತ್ಸಾಹ ಧನವನ್ನು ನೀಡುತ್ತಿದ್ದೇವೆ. ಈ ಕ್ಷೇತ್ರಕ್ಕೆ ಅದರದ್ದೇ ಆದ ಸವಾಲುಗಳಿದ್ದರೂ ಅವುಗಳೆಲ್ಲವನ್ನೂ ಸರಿದೂಗಿಸಿ ಮುನ್ನುಗ್ಗಲಿದೆ. ಈ ಮೆಗಾ ಡೈರಿ ಒಂದು ದಿನಕ್ಕೆ ಲಕ್ಷ ಲೀಟರ್ ಸಂಸ್ಕರಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದಕ್ಕೆ ಈಗ ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಅಮಿತ್ ಅವರಿಂದ ಚಾಲನೆ ಸಿಕ್ಕಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇದನ್ನೂ ಓದಿ | Rishabh Pant | ಅಪಘಾತದಲ್ಲಿ ಗಂಭೀರ ಗಾಯಗೊಂಡ ಪಂತ್ ಫೋಟೊಗಳು
ಕೇಂದ್ರ ಸರ್ಕಾರದಿಂದ ಸಹಕಾರ ವಲಯದ ಅಭಿವೃದ್ಧಿಗೆ ದಿಟ್ಟ ಹೆಜ್ಜೆಯನ್ನಿಡಲಾಗಿದೆ. ಸಹಕಾರ ಕ್ಷೇತ್ರವನ್ನು ಕೃಷಿ ಇಲಾಖೆಯಿಂದ ಬೇರ್ಪಡಿಸಿ, ನೂತನ ಸಚಿವಾಲಯವನ್ನು ತೆರೆಯುವ ಮೂಲಕ ಅದಕ್ಕೆ ಅಮಿತ್ ಷಾ ಅವರಂತಹ ದಕ್ಷರನ್ನು ಸಚಿವರನ್ನಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನೇಮಿಸಿದ್ದಾರೆ. ಇದರಿಂದ ಸಹಕಾರಿ ರಂಗಕ್ಕೆ ದೊಡ್ಡ ಶಕ್ತಿ ಬರಲಿದೆ. ಈಗಾಗಲೇ ಸಹಕಾರಿ ರಂಗದಲ್ಲಿ ಹತ್ತು ಹಲವು ಬದಲಾವಣೆಗಳನ್ನು ತರುವ ಮೂಲಕ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಬೆಂಗಳೂರಿನಲ್ಲಿ ಮದರ್ ಡೈರಿ ಮಾಡುವುದರಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರ ಪಾತ್ರ ಬಹಳ ದೊಡ್ಡದಿತ್ತು. ಆ ಸಂದರ್ಭದಲ್ಲಿ ಕ್ಷೀರಕ್ರಾಂತಿಯ ಪಿತಾಮಹ ಗುಜರಾತ್ ವರ್ಗಿಸ್ ಕುರಿಯನ್ ಅವರನ್ನು ದೇವೇಗೌಡರು ಭೇಟಿಯಾಗಿದ್ದರು. ಅವರೊಂದಿಗೆ ಚರ್ಚಿಸಿ ರಾಜಧಾನಿಯಲ್ಲಿ ಮದರ್ ಡೈರಿಯನ್ನು ಸ್ಥಾಪನೆ ಮಾಡಿದ್ದಾರೆ. ಇದನ್ನು ನಾವು ಎಂದೂ ಮರೆಯಲು ಸಾಧ್ಯವಿಲ್ಲ. ಅಲ್ಲಿಂದ ಪ್ರಾರಂಭವಾದ ಮೆಗಾ ಡೈರಿ ಯೋಜನೆಯು ಈಗ ರಾಜ್ಯದೆಲ್ಲಡೆ ಸ್ಥಾಪನೆಯಾಗುತ್ತಿದೆ. ಆ ಮೂಲಕ ಸ್ವತಂತ್ರವಾಗಿ ಹಾಲು ಸಂಸ್ಕರಣೆ ಮಾಡಿ, ಪ್ಯಾಕಿಂಗ್ ಮಾಡುವುದು, ಇತರ ಉತ್ಪನ್ನಗಳನ್ನು ತಯಾರಿಸುವ ಮೂಲಕ ಸ್ವತಂತ್ರವಾಗಿ ಸ್ವಾವಲಂಬನೆಯತ್ತ ಹಾಲು ಉತ್ಪಾದನಾ ಒಕ್ಕೂಟಗಳು ಮುನ್ನುಗುತ್ತಿವೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತಕ್ಕೆ ದೊಡ್ಡ ಕೊಡುಗೆಯನ್ನು ಕೊಡುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಮಂಡ್ಯ ಜಿಲ್ಲೆ ಒಕ್ಕಲುತನದಿಂದ ಕೂಡಿದೆ. ಸಕ್ಕರೆ ನಾಡು, ಭತ್ತದ ಖನಿಜವಾಗಿರುವ ಈ ಜಿಲ್ಲೆಯ ಅಭಿವೃದ್ಧಿಗಾಗಿ ಮೂಲಭೂತವಾಗಿ ಬೇಕಾಗಿರುವುದು ಇನ್ನಷ್ಟು ನೀರಾವರಿ ಮತ್ತು ಕೈಗಾರಿಕೆಯಾಗಿದೆ. ಹಾಗಾಗಿ ಸ್ಥಗಿತಗೊಂಡಿದ್ದ ಮೈಷುಗರ್ ಕಾರ್ಖಾನೆಯನ್ನು ನಾವು ಮತ್ತೆ ಪ್ರಾರಂಭ ಮಾಡಿದ್ದೇವೆ. ಇದು ಕೇವಲ ಪ್ರಾರಂಭವಾಗಿದ್ದು, ಮುಂಬರುವ ವರ್ಷದಲ್ಲಿ ಎಥೆನಾಲ್ ಘಟಕವನ್ನು ಸ್ಥಾಪನೆ ಮಾಡುವ ಮೂಲಕ ಅತ್ಯಂತ ಯಶಸ್ವಿಯಾಗಿ ಮಾಡುವ ಮೂಲಕ ರೈತರಿಗೆ ವರದಾನ ಆಗುವಂತೆ ಮಾಡಲಾಗುವುದು ಎಂದು ಸಿಎಂ ತಿಳಿಸಿದರು.
ಇದನ್ನೂ ಓದಿ | Heeraben Modi | ನಿಮ್ಮ ತಾಯಿ ನಮಗೆಲ್ಲರಿಗೂ ತಾಯಿ..ರೆಸ್ಟ್ ತೆಗೆದುಕೊಳ್ಳಿ ಮೋದಿಜಿ: ಗದ್ಗದಿತ ಮಮತಾ ಬ್ಯಾನರ್ಜಿ ಸಾಂತ್ವನ
ವಿಶ್ವೇಶ್ವರಯ್ಯ ನಾಲೆಯಂತಹ ನೀರಾವರಿ ಪ್ರದೇಶಗಳ ಕೊನೆಯ ಭಾಗದಲ್ಲಿರುವ ರೈತರಿಗೆ ಹಲವು ಯೋಜನೆಗಳನ್ನು ತಲುಪಿಸುತ್ತಿದ್ದೇವೆ. ಇನ್ನೊಂದು ವಾರದಲ್ಲಿ ಕಾರ್ಯಕ್ರಮಗಳನ್ನು ಯೋಜಿಸಲಾಗುವುದು ಎಂದು ಬೊಮ್ಮಾಯಿ ಹೇಳಿದರು.
ರೈತರಿಗೆ ಹೆಚ್ಚಿನ ಅನುಕೂಲ- ಎಸ್.ಟಿ. ಸೋಮಶೇಖರ್
ಹೈನುಗಾರಿಕೆಗೆ ಸಂಬಂಧಪಟ್ಟಂತೆ ಮಂಡ್ಯ ಜಿಲ್ಲೆಗೆ ಅನೇಕ ಪ್ರಶಸ್ತಿಗಳು ಸಿಕ್ಕಿವೆ. ಅಲ್ಲದೆ, ಡೈರಿಯು ಮಂಡ್ಯ ಜಿಲ್ಲೆಯ ಜೀವನಾಡಿಯಾಗಿದೆ. ಈಗ ಗೆಜ್ಜಲಗೆರೆಯಲ್ಲಿ ಮೆಗಾ ಡೈರಿಯನ್ನು ಉದ್ಘಾಟನೆ ಮಾಡುವ ಮೂಲಕ ರೈತರಿಗೆ ಸಿಹಿ ಸುದ್ದಿ ಕೊಡಲಾಗಿದೆ. ಇದು 1 ಲಕ್ಷ ಲೀಟರ್ ಹಾಲು ಸಂಗ್ರಹವಾಗುವ ಸಾಮರ್ಥ್ಯವನ್ನು ಹೊಂದಿದೆ. ರೈತರಿಗೆ ಇದರಿಂದ ಹೆಚ್ಚಿನ ಅನುಕೂಲ ಆಗುತ್ತದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೆಚ್ಚಿನ ಅನುದಾನ ಕೊಟ್ಟು ಹಾಲು ಉತ್ಪಾದಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು 15 ಹಾಲು ಒಕ್ಕೂಟಗಳಿದ್ದು, 100 ಕೋಟಿ ರೂಪಾಯಿ ವಹಿವಾಟು ನಡೆಸುವ ಸಾಮರ್ಥ್ಯವನ್ನು ಹೊಂದಿವೆ. ಈ ನಿಟ್ಟಿನಲ್ಲಿ ಸಿಎಂ ಬೊಮ್ಮಾಯಿ ಅವರು ಯಶಸ್ವಿ ಕೆಲಸವನ್ನು ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ಆಡಳಿತ ಮಂಡಳಿ, ಶಾಸಕರು ಸಹಕರಿಸಿದ್ದು, ಎಲ್ಲರಿಗೂ ಧನ್ಯವಾದವನ್ನು ತಿಳಿಸುವೆ ಎಂದು ಸೋಮಶೇಖರ್ ಹೇಳಿದರು.
ಇದನ್ನೂ ಓದಿ | Heeraben Modi | ಪ್ರಧಾನಿ ಮೋದಿ ಮಾತೃ ವಿಯೋಗಕ್ಕೆ ಸಾಧು ಸಂತರ ಸಂತಾಪ