ರಾಮನಗರ: ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ 1 ಸಾವಿರ ಕೋಟಿ ರೂಪಾಯಿ ಅನುದಾನವನ್ನು ನೀಡಿದೆ. ಆದರೆ, ಈವರೆಗೂ ಯಾವುದೇ ಬಳಕೆ ಆಗಿಲ್ಲ. ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಬಹುದಿತ್ತು. ಇದರ ಬಗ್ಗೆ ಅವರಿಗೆ ಯಾವುದೇ ಗಮನವಿಲ್ಲ. ವಿಶೇಷವಾಗಿ ಬೆಂಗಳೂರಿಗೆ ಕುಡಿಯುವ ನೀರು ಬೇಕು. ಮೇಕೆದಾಟು ಯೋಜನೆ (Mekedatu Project) ಆಗಲೇಬೇಕು. ನಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿಯೂ ಈ ವಿಚಾರ ಇರಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಮೇಕೆದಾಟು ಯೋಜನೆ ವಿಚಾರವಾಗಿ ರಾಜ್ಯ ಬಿಜೆಪಿ ಸಂಸದರ ಮೌನದ ವಿಚಾರಕ್ಕೆ ಕನಕಪುರದಲ್ಲಿ ಪ್ರತಿಕ್ರಿಯಿಸಿದ ಅವರು, 8-10 ಬಿಜೆಪಿ ಸಂಸದರು ಮತ್ತೆ ನಾವು ಚುನಾವಣೆಗೆ ನಿಲ್ಲುವುದೇ ಇಲ್ಲ ಎನ್ನುತ್ತಿದ್ದಾರೆ. ಅವರಿಗೆ ಧ್ವನಿಯಿಲ್ಲದಂತಾಗಿ ಅವಮಾನದಿಂದ ಚುನಾವಣೆಗೆ ನಿಲ್ಲುವುದಿಲ್ಲ ಎನ್ನುತ್ತಿದ್ದಾರೆ. ನಮಗೆ ಕೇಂದ್ರದಲ್ಲಿ ಧ್ವನಿಯೇ ಇಲ್ಲದಂತಾಗಿದೆ ಎಂದು ಕೆಲ ಸಂಸದರು ಹೇಳಿದ್ದಾರೆ. ಪಟ್ಟಿ ಬೇಕಾದರೆ ಹೇಳುತ್ತೇನೆ. ಸದ್ಯಕ್ಕೆ ಇಷ್ಟು ಹೇಳಿದ್ದೀನಿ, ಉಳಿದದ್ದು ಯಾರು ಎಂದು ಪಟ್ಟಿ ಬಿಡುಗಡೆ ಮಾಡುವೆ ಎಂದು ಹೇಳಿದರು.
ನಾನು ಮಂಡ್ಯ ಜಿಲ್ಲೆಯ ಪ್ರವಾಸ ಮಾಡುತ್ತಿದ್ದೇನೆ. ಬೆಳಗ್ಗೆ ಸಹ ಮೀಟಿಂಗ್ ಮಾಡಿದ್ದೇನೆ. ಕಾವೇರಿ ಹೆಚ್ಚುವರಿ ನೀರನ್ನು ನಾವು ಪಡೆದುಕೊಳ್ಳಬೇಕು. ಮಂಡ್ಯ, ಮೈಸೂರು, ಚಾಮರಾಜನಗರ ರೈತರು ಬಳಕೆ ಮಾಡಿಕೊಳ್ಳಬೇಕು. 400 ಟಿಎಂಸಿ ನೀರು ಸಮುದ್ರದ ಪಾಲಾಗುತ್ತಿದೆ. ಹಿಂದಿನ ಅಧಿಕಾರಿಗಳನ್ನು ಕರೆದು ಸಭೆ ಮಾಡಿದ್ದೇನೆ. ಈಗಾಗಲೇ ತಮಿಳುನಾಡಿನವರು ನಮ್ಮ ಅನುಮತಿಯಿಲ್ಲದೇ ಕೆಲ ಯೋಜನೆ ಮಾಡಿಕೊಳ್ಳುತ್ತಿದ್ದಾರೆ. ನಮ್ಮ ಸರ್ಕಾರ ಈಗ ಜಾಗರೂಕವಾಗಬೇಕು, ಹೆಚ್ಚುವರಿ ನೀರನ್ನು ಬಳಕೆ ಮಾಡಿಕೊಳ್ಳಬೇಕು. ನಮ್ಮ ರೈತರಿಗೆ ಅನುಕೂಲ ಮಾಡಿಕೊಡಬೇಕು. ಈ ಬಗ್ಗೆ ನಮ್ಮ ಪಕ್ಷ ಕೂಡ ಗಮನಹರಿಸಲಿದೆ ಎಂದು ತಿಳಿಸಿದರು.
2023ಕ್ಕೆ ಬಿಜೆಪಿ ಸರ್ಕಾರ ಬಂದರೆ ಬ್ರಾಹ್ಮಣ ಸಿಎಂ ಆಗುತ್ತಾರೆ ಎಂಬ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ನನಗೆ ಭವಿಷ್ಯ ಗೊತ್ತಿಲ್ಲ, ಅವರ ಭವಿಷ್ಯ ಆಡಳಿತ ಸಹ ಗೊತ್ತಿಲ್ಲ. ನಮ್ಮ ಕಾಂಗ್ರೆಸ್ ಪಕ್ಷದ ಭವಿಷ್ಯ ಮಾತ್ರ ಗೊತ್ತು. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ನಮ್ಮ ಕಾಲ ಮೇಲೆ ಸರ್ಕಾರ ರಚನೆ ಮಾಡಿ ಒಳ್ಳೇ ಆಡಳಿತ ಕೊಡುತ್ತೇವೆ ಎಂದು ಹೇಳಿದರು.
ಮಲೈಮಹದೇಶ್ವರ ಬೆಟ್ಟಕ್ಕೆ ಹೋಗುವ ಭಕ್ತರಿಗೆ ಭದ್ರತೆ ನೀಡಿ
ಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ಮಲೈ ಮಹದೇಶ್ವರ ಬೆಟ್ಟದ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಕಾಲ್ನಡಿಗೆಯಲ್ಲಿ ಹೋಗುತ್ತಾರೆ. ಅವರಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಕಾಡು ಪ್ರಾಣಿಗಳಿಂದ ರಕ್ಷಣೆ ಒದಗಿಸಬೇಕು ಎಂದು ಕಾವೇರಿ ನೀರಾವರಿ ನಿಗಮಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪತ್ರ ಬರೆದಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ರಾಮನಗರ ಜಿಲ್ಲೆಗಳಿಂದ ಲಕ್ಷಾಂತರ ಭಕ್ತಾದಿಗಳು ಪ್ರತಿ ವರ್ಷ ಶ್ರೀ ಮಲೈ ಮಹದೇಶ್ವರ ಬೆಟ್ಟದ ದೇವಸ್ಥಾನಕ್ಕೆ ಕಾಲ್ನಡಿಗೆಯಲ್ಲಿ ಹೋಗುತ್ತಾರೆ. ಈ ಬಾರಿಯೂ ಫೆ. 13 ಮತ್ತು 14ರಂದು ಭಕ್ತರು ಸಂಗಮ, ಬೊಮ್ಮಸಂದ್ರದ ಕಾಲ್ಕಡ ಮಾರ್ಗವಾಗಿ ಹೋಗುವುದರಿಂದ ಅವರಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಕಾಡು ಪ್ರಾಣಿಗಳಿಂದ ರಕ್ಷಣೆ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ | ಜಾತಿ ಹೆಸರನ್ನು ಹಿಡಿದು ಆರೋಪ ಮಾಡುವುದು ಸರಿಯಲ್ಲ: ಎಚ್.ಡಿ. ಕುಮಾರಸ್ವಾಮಿ ಮಾತಿಗೆ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ
ಕಳೆದ ವರ್ಷದಲ್ಲಿ ಉಂಟಾದ ಅವಘಡದಲ್ಲಿ ಐದು ಮಂದಿ ಕಾವೇರಿ ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಹೀಗಾಗಿ ಇಂತಹ ಘಟನೆಗಳು ಮರುಕಳಿಸದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.