Site icon Vistara News

Mekedatu project | ಮುಂದಿನ ವಾರದೊಳಗೆ ಅಂತಿಮ ತೀರ್ಪು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸಿಎಂ ಬೊಮ್ಮಾಯಿ

ಮಂಡ್ಯ: ಮೇಕೆದಾಟು ಯೋಜನೆ (Mekedatu project) ಸಂಬಂಧ ಸುಪ್ರೀಂ ಕೋರ್ಟ್‌ನಿಂದ ಅಂತಿಮ ತೀರ್ಪು ಮುಂದಿನ ವಾರದೊಳಗೆ ಹೊರಬೀಳುವ ಸಾಧ್ಯತೆಯಿದೆ. ರಾಜ್ಯ ಸಿದ್ಧಪಡಿಸಿರುವ ಡಿಪಿಆರ್‌ಗೆ ಅನುಮೋದನೆ ದೊರೆತ ಬಳಿಕ ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯಕ್ಕೆ ಬುಧವಾರ ಮಾತನಾಡಿದ ಅವರು, ಈ ಯೋಜನೆಯಿಂದ ಮಂಡ್ಯ ಹಾಗೂ ಬೆಂಗಳೂರು ಜನರ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಸಾಧ್ಯವಾಗುತ್ತದೆ. ಯೋಜನೆಗೆ ಚಾಲನೆ ನೀಡಲು ಬೇಕಾದ ಅನುಮತಿ ಪಡೆದುಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಮೈಸೂರು, ಮಂಡ್ಯ, ಹಾಸನ ಭಾಗದ ರೈತರಿಗೆ ನೀರಾವರಿ ಯೋಜನೆಗಳ ಸಮರ್ಪಕ ಬಳಕೆಯಿಂದ 15 ಲಕ್ಷ ಎಕರೆ ಭೂಮಿಗೆ ನೀರಾವರಿ ಒದಗಿಸಿದ್ದು, ಇದನ್ನು ವಿಸ್ತರಿಸಲಾಗುವುದು. ನಮ್ಮದು ರೈತರಿಗೆ ಸ್ಪಂದಿಸುವ ಸರ್ಕಾರ ಈ ಭಾಗದ ಸಮಗ್ರ ಅಭಿವೃದ್ಧಿಗೆ ಪಕ್ಷಾತೀತವಾಗಿ ಕೆಲಸ ಮಾಡಬೇಕಿದೆ. ಸಮರ್ಪಣಾ ಭಾವನೆಯಿಂದ ನಾವು ಕೆಲಸ ಮಾಡಿದಾಗ ಜನ ನಮ್ಮನ್ನು ನೆನಪಿನಲ್ಲಿಡುತ್ತಾರೆ ಎಂದರು.

ಮೈಶುಗರ್ ಕಾರ್ಖಾನೆ ಆಗಸ್ಟ್‌ನಲ್ಲಿ ಪ್ರಾರಂಭ
ರೈತರ ಜೀವಾಳವಾಗಿರುವ ಸರ್ಕಾರಿ ಸ್ವಾಮ್ಯದ ಮೈಶುಗರ್ ಕಾರ್ಖಾನೆಯನ್ನು ಆಗಸ್ಟ್ 2-3ನೇ ವಾರದಲ್ಲಿ ಪ್ರಾರಂಭಿಸಲು ತೀರ್ಮಾನಿಸಲಾಗಿದೆ. ರೈತರ ಜೀವಾಳವಾಗಿರುವ ಮೈಶುಗರ್ ಕಾರ್ಖಾನೆಯ ಬಗ್ಗೆ ಸಭೆ ನಡೆಸಿ, ಸರ್ಕಾರಿ ಸ್ವಾಮ್ಯದ ಈ ಕಾರ್ಖಾನೆಯನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಬೇಕಾಗಿರುವ ಬಂಡವಾಳ ವೆಚ್ಚ, ದುಡಿಯುವ ಬಂಡವಾಳವನ್ನು ಸರ್ಕಾರವೇ ನೀಡಲಿದೆ. ಈ ವರ್ಷವೇ ಸರ್ಕಾರ ಮೈ ಶುಗರ್ ಕಾರ್ಖಾನೆಯನ್ನು ಪ್ರಾರಂಭಿಸಿ, ರೈತರಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು.

ಇದನ್ನೂ ಓದಿ | ಕೇಂದ್ರ ಸರ್ಕಾರ ಜಿಎಸ್‌ಟಿ ನಷ್ಟವನ್ನು ಭರಿಸುವುದಿಲ್ಲ: ಸಿಎಂ ಬಸವರಾಜ ಬೊಮ್ಮಾಯಿ

ವಿಶ್ವೇಶ್ವರಯ್ಯ ನಾಲೆಯ ನೀರು ರೈತರಿಗೆ ಒದಗಿಸಲಾಗುವುದು
ವಿಶ್ವೇಶ್ವರಯ್ಯ ನಾಲೆಯ ಅಭಿವೃದ್ಧಿಗೆ 560 ಕೋಟಿ ರೂ. ಒದಗಿಸಿ ಶಾಖಾ ಕಾಲುವೆಗಳನ್ನು ನಿರ್ಮಿಸಲಾಗಿದೆ. ಮದ್ದೂರು ಶಾಖಾ ಕಾಲುವೆ, ಸಾಹುಕಾರ್ ಚೆನ್ನಯ್ಯ ಶಾಖಾ ಕಾಲುವೆ ಸೇರಿ ಉಳಿದ ಬ್ರ್ಯಾಂಚ್ ಕೆನಾಲ್‍ಗಳಿಗೆ ನೀರು ಪೂರೈಸಲು ಸಾಧ್ಯವಾಗಿದೆ. ಈ ವರ್ಷದ ಯೋಜನೆಯಲ್ಲಿ ವಿಶ್ವೇಶ್ವರಯ್ಯ ನಾಲೆಯ ನೀರು ರೈತರಿಗೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ವಿಶ್ವೇಶ್ವರಯ್ಯ ನಾಲೆಯ ಅಂತಿಮ ಹಂತದ ಸಬ್ ಡಿಸ್ಟ್ರಿಬ್ಯೂಟರಿ ಲ್ಯಾಟರ್‌ಗಳನ್ನು ಪೂರ್ಣಗೊಳಿಸುವುದು ಸೇರಿದಂತೆ ಕಬಿನಿ ಹಾಗೂ ಹಾರಂಗಿ ಶಾಖಾ ಕಾಲುವೆಗಳ 300 ಕಿ.ಮೀ. ಆಧುನೀಕರಣ ಕಾಮಗಾರಿಯನ್ನು ಈ ವರ್ಷವೇ ಕೈಗೆತ್ತಿಕೊಳ್ಳಲಾಗುವುದು. ಆಧುನೀಕರಣಕ್ಕಾಗಿ 480 ಕೋಟಿ ರೂ.ಗಳನ್ನು ಮೀಸಲಿರಿಸಿದೆ ಎಂದು ಸಿಎಂ ತಿಳಿಸಿದರು.

ಕಾವೇರಿ ಸಂಸ್ಕೃತಿ ಹುಟ್ಟುಹಾಕಿದ ಜೀವನದಿ
ಕಾವೇರಿ ಜಲಾನಯನ ಪ್ರದೆಶದ ನಾಲ್ಕು ಜಲಾಶಯಗಳು ತುಂಬಿರುವ ಅಪರೂಪದ ವರ್ಷ ಇದಾಗಿದೆ. ನಾಡಿನಾದ್ಯಂತ ಉತ್ತಮ ಮಳೆಯಾಗಿದೆ. ರಾಜ್ಯದ ಬಹುತೇಕ ಎಲ್ಲ ಜಲಾಶಯಗಳು ತುಂಬಿವೆ. ಈ ಸುಸಂದರ್ಭದಲ್ಲಿ ಬಾಗಿನ ಅರ್ಪಿಸಿರುವುದು ನನ್ನ ಸುಯೋಗ. ಕಾವೇರಿ ತಾಯಿ ರಾಜ್ಯದ ಜೀವನದಿ. ಒಂದು ನದಿ ಮನುಷ್ಯನ ಬೇಕುಬೇಡಗಳನ್ನು ಪೂರೈಸುವ ಜತೆಗೆ ಒಂದು ಸಂಸ್ಕತಿಯನ್ನು ಹುಟ್ಟುಹಾಕುತ್ತದೆ. ಇಂತಹ ಪವಿತ್ರವಾದ ಕಾವೇರಿ ನದಿಯ ಸದುಪಯೋಗ ಮಾಡಿಕೊಳ್ಳಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಮೈಸೂರಿನ ಮಹಾರಾಜರು ಕನ್ನಂಬಾಡಿ ಕಟ್ಟೆಯನ್ನು ಕಟ್ಟುವಲ್ಲಿನ ಅವರ ಶ್ರಮ, ತ್ಯಾಗ ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ. ಸರ್.ಎಂ.ವಿಶ್ವೇಶ್ವರಯ್ಯ ಅವರನ್ನು ಈ ಸುದಿನದಂದು ನೆನೆಯಬೇಕಿದೆ ಎಂದರು.

ಕೆಆರ್‍ಎಸ್‍ನ 61 ಕ್ರೆಸ್ಟ್ ಗೇಟ್‍ಗಳ ಬದಲಾವಣೆಗೆ ಕ್ರಮ
ಕೆಆರ್‌ಎಸ್ ಜಲಾಶಯವನ್ನು ಉತ್ತಮವಾಗಿ ನಿರ್ವಹಿಸಬೇಕಾಗಿದೆ. 2008ರಲ್ಲಿ ನೀರಾವರಿ ಸಚಿವನಾಗಿದ್ದಾಗ ಕೆಆರ್‌ಎಸ್ ಕ್ರೆಸ್ಟ್ ಗೇಟ್‌ನಿಂದ ನೀರು ವ್ಯರ್ಥವಾಗಿ ಪೋಲಾಗುತ್ತಿರುವುದನ್ನು ತಡೆಗಟ್ಟಲು ಗೇಟ್‌ಗಳನ್ನು ಬದಲಿಸಲಾಯಿತು. ಜಲಾಶಯದ ಒಟ್ಟು 136 ಗೇಟ್‍ಗಳಲ್ಲಿ ಉಳಿದ 61 ಗೇಟ್‌ಗಳನ್ನು ಒಂದು ವರ್ಷದೊಳಗೆ ಬದಲಿಸಿ ಪುನಃ ನಿರ್ಮಿಸಲು ಈಗಾಗಲೇ ಆದೇಶ ನೀಡಲಾಗಿದ್ದು, 160 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ಕ್ರೆಸ್ಟ್ ಗೇಟ್‌ಗಳ ಬದಲಾವಣೆ ಮಾಡಲಾಗುವುದು ಎಂದು ತಿಳಿಸಿದರು.

ಕೆಆರ್‌ಎಸ್ ಉದ್ಯಾನವನ ಆಧುನೀಕರಣ
ನೀರಿನ ಸದ್ಬಳಕೆ ಮಾಡಲು ಸೂಕ್ಷ್ಮ ನೀರಾವರಿಯನ್ನು ಪ್ರಾರಂಭಿಸಲಾಗಿದೆ. ಪುರಗಾಲಿ ಏತನೀರಾವರಿ ಯೋಜನೆ ಕೈಗೆತ್ತಿಕೊಳ್ಳಲು ಮರು ಅಂದಾಜು ಮಾಡಿ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು. ಮೊರೆಕೊಪ್ಪಲಿನ ಕೃಷಿ ಭೂಮಿಯನ್ನು ಕೆಆರ್‌ಡಿಬಿ ತೆಗೆದುಕೊಳ್ಳಬಾರದೆಂಬ ಬೇಡಿಕೆಯನ್ನು ಪರಿಶೀಲಿಸಿ ಸೂಕ್ತ ನಿರ್ಧಾರವನ್ನು ಕೈಗೊಳ್ಳಲಾಗುವುದು. ವಿಶ್ವವಿಖ್ಯಾತ ಕೆಆರ್‌ಎಸ್‍ನ ಉದ್ಯಾನವನದ ಆಧುನೀಕರಣ ಯೋಜನೆಗೆ ಅನುದಾನ ನೀಡಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಇದನ್ನೂ ಓದಿ | ಈ ಬಾರಿ ಸಾಂಪ್ರದಾಯಿಕ, ಅದ್ಧೂರಿ ದಸರಾ; ಸಿಎಂ ಬಸವರಾಜ ಬೊಮ್ಮಾಯಿ

Exit mobile version