ಬೆಂಗಳೂರು: ಕೇಂದ್ರ ಸಚಿವರಾದ ಕುಮಾರಸ್ವಾಮಿ ಅವರು ಮೇಕೆದಾಟು ಯೋಜನೆಗೆ (Mekedatu Project) ಅನುಮತಿ ಕೊಡಿಸಿದರೆ ಅಣೆಕಟ್ಟು ನಿರ್ಮಾಣ ಕಾರ್ಯ ಆರಂಭಿಸಲು ನಮ್ಮ ಸರ್ಕಾರ ಸಿದ್ಧವಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಮಂಡ್ಯ ಸಂಸದರು ಹಾಗೂ ಕೇಂದ್ರ ಸಚಿವರಾದ ಕುಮಾರಸ್ವಾಮಿ ಮೇಕೆದಾಟು ಅನುಮತಿ ಕೊಡಿಸಬೇಕು. ಮೇಕೆದಾಟು ಯೋಜನೆ ಜಾರಿಯಿಂದ ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡಬಹುದು. ವಿದ್ಯುತ್ ಅನ್ನು ಸಹ ಉತ್ಪಾದಿಸಬಹುದು. ಮಳೆಗಾಲದಲ್ಲಿ ಸಮುದ್ರ ಸೇರುವ ನೀರನ್ನು ಸಂಗ್ರಹಿಸಿಟ್ಟು, ಜಲಾಶಯಗಳಲ್ಲಿ ನೀರಿನ ಕೊರತೆಯಿದ್ದಾಗ ತಮಿಳುನಾಡಿಗೂ ನೀರು ಬಿಡಬಹುದು ಎಂದು ತಿಳಿಸಿದ್ದಾರೆ.
ಮಂಡ್ಯದ ಸಂಸದ ಕುಮಾರಸ್ವಾಮಿ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಅವರು ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಿದರೆ ಅಣೆಕಟ್ಟು ನಿರ್ಮಾಣ ಕಾರ್ಯ ಆರಂಭಿಸಲು ನಮ್ಮ ಸರ್ಕಾರ ಸಿದ್ಧವಿದೆ ಎಂದು ತಿಳಿಸಿದ್ದಾರೆ.
ತಮಿಳುನಾಡು ಜತೆ ಮಾತುಕತೆಗೆ ತಯಾರಿದ್ದೇವೆ
ಸೋಮವಾರ ಕೆಆರ್‌ಎಸ್‌ಗೆ ಬಾಗಿನ ನೀಡುವ ವೇಳೆ ಕೂಡ ಮೇಕೆದಾಟು ಯೋಜನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದರು. ಮೆಟ್ಟೂರು ಅಣೆಕಟ್ಟು ತುಂಬಿ ನೀರು ವ್ಯರ್ಥವಾಗುತ್ತಿದ್ದು, ಈ ಬಗ್ಗೆ ತಮಿಳುನಾಡು ಸರ್ಕಾರದೊಂದಿಗೆ ನಾವು ಮಾತನಾಡಲು ತಯಾರಿದ್ದೇವೆ. ಮೇಕೆದಾಟು ಯೋಜನೆಯಿಂದ ಅವರಿಗೆ ತೊಂದರೆಯಾಗದಿದ್ದರೂ ಮಾತನಾಡಲು ಅವರು ಸಿದ್ಧರಿಲ್ಲ. ಕೇಂದ್ರ ಸರ್ಕಾರ ಅನುಮೋದನೆ ಕೊಟ್ಟರೇ ನಾವು ನಿರ್ಮಾಣ ಮಾಡಲು ಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದರು.
ರಾಜ್ಯದ ಮಹತ್ವಾಕಾಂಕ್ಷಿ ಯೋಜನೆಯಾದ ಮೇಕೆದಾಟು ಅಣೆಕಟ್ಟೆ ನಿರ್ಮಿಸಲು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಕೇಂದ್ರ ಸರ್ಕಾರದಿಂದ ಅನುಮತಿ ಕೊಡಿಸಬೇಕು. ಕೇಂದ್ರ ಈವರೆಗೆ ಮೇಕೆದಾಟು ಯೋಜನೆಗೆ ಮಂಜೂರಾತಿ ಕೊಟ್ಟಿಲ್ಲ. ಇದನ್ನು ಕೇಳಿದರೆ ವಿಪಕ್ಷದವರು ನಮ್ಮ ಮೇಲೆ ಮುಗಿಬೀಳುತ್ತಾರೆ. ಮೇಕೆದಾಟು ಯೋಜನೆ ನಿರ್ಮಾಣವಾದರೆ ತಮಿಳುನಾಡಿಗೆ ಹೆಚ್ಚು ಉಪಯೋಗವಾಗುತ್ತದೆ. ಆದರೆ, ಈ ವಿಚಾರದಲ್ಲಿ ತಮಿಳುನಾಡು ಮತ್ತೆ ಮತ್ತೆ ಕ್ಯಾತೆ ತೆಗೆಯುತ್ತಿದೆ. ಯೋಜನೆ ನಿರ್ಮಾಣವಾಗುತ್ತಿರುವುದು ನಮ್ಮ ರಾಜ್ಯದಲ್ಲಿ, ಹಾಗಾಗಿ ಈ ಯೋಜನೆ ನಮ್ಮ ಹಕ್ಕು ಎಂದು ಕಾರ್ಯಕ್ರಮದಲ್ಲಿ ಸಿಎಂ ಹೇಳಿದ್ದರು.
ಇದನ್ನೂ ಓದಿ | Wayanad Landslide: ಕೇರಳದ ಭೂಕುಸಿತ ದುರಂತಕ್ಕೆ ಶೋಕ ವ್ಯಕ್ತಪಡಿಸಿದ ಕೇಂದ್ರ ಸಚಿವ ಎಚ್‌ಡಿಕೆ
ದೇವೇಗೌಡರ ಕುಟುಂಬ ಪಡೆದಿರುವ ನಿವೇಶನಗಳ ಲೆಕ್ಕ ಕೊಡಲೇ?
ನಾನು ಮುಡಾದಿಂದ ಯಾವುದೇ ನಿವೇಶನ ಪಡೆದಿಲ್ಲ. ಮುಡಾ ನಿವೇಶನ ಸಿಗದಿರುವುದೇ ನನ್ನ ಅದೃಷ್ಟ ಎಂದುಕೊಳ್ಳುತ್ತೇನೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿರುವುದಕ್ಕೆ ಸಿಎಂ ಕಿಡಿಕಾರಿದ್ದಾರೆ. ಕೇಂದ್ರ ಸಚಿವ ಕುಮಾರಸ್ವಾಮಿ 40 ವರ್ಷದ ಹಿಂದೆಯೇ ಮುಡಾ ಸೈಟ್ ಪಡೆದಿದ್ದಾರೆ ಎಂದು ತಿಳಿಸಿರುವ ಸಿದ್ದರಾಮಯ್ಯ ಅವರು, 40 ವರ್ಷಗಳ ಹಿಂದೆಯೇ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಮುಡಾ ಸೈಟ್ ಸಿಕ್ಕಿದೆ. ಅದರ ಸ್ವಾಧೀನ ಪತ್ರವನ್ನು ಪಡೆದುಕೊಂಡು ಈಗ ಸೈಟ್ ಕೊಟ್ಟಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ದೇವೇಗೌಡರ ಕುಟುಂಬದವರು ಪಡೆದಿರುವ ನಿವೇಶನಗಳ ಲೆಕ್ಕ ಕೊಡಲೇ ಹೇಳಿದ್ದಾರೆ.