ಮಂಡ್ಯ: ಇಲ್ಲಿನ ಮೇಲುಕೋಟೆ ಶಾಸಕ, ಸರ್ವೋದಯ ಪಕ್ಷದ ಮುಖಂಡ ದರ್ಶನ್ ಪುಟ್ಟಣ್ಣಯ್ಯ (Darshan Puttannaiah) ಈಗ ಅಮೆರಿಕಕ್ಕೆ ಹೊರಟುನಿಂತಿದ್ದಾರೆ. ಈ ಬಗ್ಗೆ ವಿಡಿಯೊ ಮೂಲಕ ತಿಳಿಸಿದ ಅವರು, ಪತ್ನಿ ಮತ್ತು ಮಕ್ಕಳೆಲ್ಲ ಅಮೆರಿಕದಲ್ಲಿಯೇ ಇದ್ದಾರೆ. ಅವರನ್ನು ನೋಡದೆ ಐದು ತಿಂಗಳ ಮೇಲಾಯಿತು. ಹೀಗಾಗಿ ಅವರನ್ನು ನೋಡಿಕೊಂಡು ಬರುತ್ತೇನೆ. 10 ದಿನಗಳ ಕಾಲ ಅಲ್ಲಿಯೇ ಇರುತ್ತೇನೆ ಎಂದು ಹೇಳಿದ್ದಾರೆ.
ದರ್ಶನ್ ಪುಟ್ಟಣ್ಣಯ್ಯನವರು ಈ ಸಲ ಮೇಲುಕೋಟೆಯಲ್ಲಿ ಬಿಜೆಪಿಯ ಡಾ.ಇಂದ್ರೇಶ್ ಮತ್ತು ಜೆಡಿಎಸ್ನ ಸಿಎಸ್ ಪುಟ್ಟರಾಜು ಅವರ ವಿರುದ್ಧ ಗೆದ್ದು ಶಾಸಕರಾಗಿದ್ದಾರೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಹಾಕಿರಲಿಲ್ಲ, ಬದಲಿಗೆ ದರ್ಶನ್ ಪುಟ್ಟಣಯ್ಯನವರನ್ನೇ ಬೆಂಬಲಿಸಿತ್ತು. ದರ್ಶನ್ ಪುಟ್ಟಣಯ್ಯ 15 ವರ್ಷಗಳಿಂದಲೂ ಅಮೆರಿಕದಲ್ಲಿಯೇ ನೆಲೆಸಿ, ಉದ್ಯಮ ಮಾಡಿಕೊಂಡಿದ್ದವರು. ತಂದೆ ಕೆ.ಎಸ್.ಪುಟ್ಟಣಯ್ಯ ಸಾವಿನ ಬಳಿಕ ಅವರು ರಾಜಕೀಯಕ್ಕೆ ಕಾಲಿಟ್ಟು, 2018ರ ವಿಧಾನಸಭಾ ಚುನಾವಣೆಯಲ್ಲೂ ಸ್ಪರ್ಧಿಸಿ ಸೋತಿದ್ದರು. ಈ ಬಾರಿ ಮತದಾರ ಕೈಹಿಡಿದು ಗೆಲ್ಲಿಸಿದ್ದಾನೆ.
ಈ ಸಲದ ವಿಧಾನಸಭೆ ಚುನಾವಣೆ ಪೂರ್ವ ಇಲ್ಲಿಯೇ ನೆಲೆಸಿದ್ದು ಪ್ರಚಾರ ನಡೆಸಿದ್ದರು. ಇದೀಗ ಫಲಿತಾಂಶ ಬಂದು, ತಾವು ಗೆದ್ದ ಬೆನ್ನಲ್ಲೇ ಅಮೆರಿಕಕ್ಕೆ ಹೊರಟಿದ್ದಾರೆ. ಯಾರಿಗಾದರೂ, ಏನಾದರೂ ಕೆಲಸ ಕಾರ್ಯಗಳು ಆಗಬೇಕೆಂದರೆ ನನ್ನ ಫೋನ್ನಂಬರ್ಗೆ ಕರೆ ಮಾಡಿ, ಇಲ್ಲಿರುವುವರೇ ಕರೆ ಸ್ವೀಕರಿಸುತ್ತಾರೆ. ನನ್ನ ಬಳಿಯೇ ಮಾತಾಡಬೇಕು ಎಂದರೆ ಅವರೇ ನನಗೆ ಕನೆಕ್ಟ್ ಮಾಡಿಕೊಡುತ್ತಾರೆ. ಎಲ್ಲರೂ ಶಾಂತಿಯಿಂದ ಇರಿ. ನಾನು ಮತ್ತೆ ಬಂದು ಕಾಣುತ್ತೇನೆ ಎಂದು ದರ್ಶನ್ ಪುಟ್ಟಣ್ಣಯ್ಯ ಹೇಳಿದ್ದಾರೆ.
ಸುಳ್ಳು ಹೇಳ್ತಿದ್ದಾರಾ ಶಾಸಕ?
ಚುನಾವಣೆ ಸಂದರ್ಭದಲ್ಲಿ ಮಾತನಾಡಿದ್ದ ದರ್ಶನ್ ಪುಟ್ಟಣಯ್ಯ ತಾವಿನ್ನು ಇಲ್ಲಿಯೇ ನೆಲೆಸುವುದಾಗಿ ಹೇಳಿದ್ದರು. ಇನ್ನು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ನೋಡಿ ಐದು ತಿಂಗಳಾಗಿದೆ ಎನ್ನುತ್ತಿದ್ದಾರೆ. ಆದರೆ ಚುನಾವಣೆ ಸಮಯದಲ್ಲಿ ಪತ್ನಿ ಮತ್ತು ಮಕ್ಕಳು ಕ್ಯಾತನಹಳ್ಳಿಗೆ ಬಂದಿದ್ದರು. ಅವರು ಚುನಾವಣೆ ಮುಗಿದ ಬಳಿಕ ವಾಪಸ್ ಅಮೆರಿಕಕ್ಕೆ ತೆರಳಿದ್ದಾರೆ. ದರ್ಶನ್ ಪುಟ್ಟಣಯ್ಯ ಜತೆ ಅವರ ಪತ್ನಿಯೂ ಪ್ರಚಾರದಲ್ಲಿ ಭಾಗಿಯಾಗಿದ್ದರು. ಹಾಗಿದ್ದಾಗ್ಯೂ ದರ್ಶನ್ ಪುಟ್ಟಣ್ಣಯ್ಯ ಈ ಸುಳ್ಳು ಹೇಳುತ್ತಿರುವುದು ಯಾಕೆ ಎಂದು ಕ್ಷೇತ್ರದ ಕೆಲವು ಜನರೇ ಪ್ರಶ್ನೆ ಮಾಡುತ್ತಿದ್ದಾರೆ.