ಬೆಂಗಳೂರು: ಬೆಂಗಳೂರಿನ ಮೆಜೆಸ್ಟಿಕ್ ಭಾಗದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವವರು ಇನ್ನು ಮುಂದೆ ಟ್ಯಾಕ್ಸಿ ಬಳಸಬೇಕಾಗಿಲ್ಲ. ಆರಾಮವಾಗಿ ರೈಲಿನಲ್ಲಿ ಕುಳಿತು ಹೋಗಬಹುದು. ಯಾಕೆಂದರೆ, ನೈಋತ್ಯ ರೈಲ್ವೇ ಈ ಮಾರ್ಗದಲ್ಲಿ ಶುಕ್ರವಾರದಿಂದ ಮೆಮು ರೈಲು ಸೇವೆಯನ್ನು ಆರಂಭ ಮಾಡಿದೆ. 2021ರಲ್ಲಿಒಂದು ಬಾರಿ ಇದೇ ರೀತಿ ಮೆಮು ರೈಲುಗಳ ಸೇವೆಯನ್ನು ಆರಂಭ ಮಾಡಲಾಗಿತ್ತಾದರೂ ಸಮರ್ಪಕ ಸೇವೆ ನೀಡದೆ ಇರುವುದು, ಪ್ರಯಾಣಿಕರ ನಿರಾಸಕ್ತಿಯ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿತ್ತು. ಇದೀಗ ಐದು ಜೋಡಿ ರೈಲುಗಳೊಂದಿಗೆ ಮತ್ತೆ ಸಂಚಾರ ಶುರು ಮಾಡಲಾಗಿದೆ.
ಯಲಹಂಕ-ದೇವನಹಳ್ಳಿ-ಚಿಕ್ಕಬಳ್ಳಾಪುರ ಮಾರ್ಗವನ್ನು ನಾಲ್ಕು ತಿಂಗಳ ಹಿಂದೆ ವಿದ್ಯುದೀಕರಣ ಮಾಡಲಾಗಿದೆ. ಈ ವ್ಯವಸ್ಥೆಯನ್ನು ಬಳಸಿಕೊಂಡು ನೈಋತ್ಯ ರೈಲ್ವೆಯು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ರೈಲು ನಿಲ್ದಾಣದವರೆಗೆ ಐದು ಮೆಮು (ಮೈನ್‌ಲೈನ್ ಎಲೆಕ್ಟ್ರಿಕಲ್ ಮಲ್ಟಿಪಲ್ ಯುನಿಟ್) ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಹೊಸ ಸೇವೆಯಿಂದ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಜನರಿಗೆ ಅನುಕೂಲವಾಗಲಿದೆ ಎಂದು ಎಂದು ಹೇಳಲಾಗಿದೆ. ನಗರದ ಹಲವು ನಿಲ್ದಾಣಗಳಿಂದ ಕೇವಲ 10ರಿಂದ 15 ರೂ. ಪಾವತಿಸಿ ಪ್ರಯಾಣಿಸಬಹುದಾಗಿದೆ. ಭಾನುವಾರವನ್ನು ಹೊರತುಪಡಿಸಿ ಉಳಿದ ಆರು ದಿನಗಳಲ್ಲಿ ರೈಲು ಓಡಾಟವಿರಲಿದೆ.
2021ರಲ್ಲಿ ನೈಋತ್ಯ ರೈಲ್ವೆ ಮೊದಲ ಬಾರಿಗೆ ಐದು ಜೋಡಿ ಮೆಮು ರೈಲುಗಳ ಸೇವೆಯನ್ನು ವಿಮಾನ ನಿಲ್ದಾಣಕ್ಕೆ ಪರಿಚಯಿಸಲಾಯಿತು. ಆದರೆ ಜನರಿಂದ ಅದಕ್ಕೆ ಸೂಕ್ತ ಸ್ಪಂದನೆ ಸಿಕ್ಕಿರಲಿಲ್ಲ. ರೈಲ್ವೆ ಸೇವೆಯೂ ಸಮರ್ಪಕವಾಗಿಲ್ಲದ ಕಾರಣ ಮತ್ತು ಇತರ ಕಾರ್ಯಾಚರಣೆಯ ನಿರ್ಬಂಧಗಳಿಂದಾಗಿ ಸೇವೆಗಳನ್ನು ನಿಲ್ಲಿಸಲಾಯಿತು. ನಂತರ ಸಮಸ್ಯೆಗಳನ್ನು ಸರಿಪಡಿಸಿದ ನೈಋತ್ಯ ರೈಲ್ವೆ ಈಗ ಮತ್ತೆ ಮೆಮು ರೈಲುಗಳ ಸಂಚಾರಕ್ಕೆ ಮುಂದಾಗಿದೆ. ಎಲ್ಲಾ ದೋಷಗಳನ್ನು ಸರಿಪಡಿಸಲಾಗಿದ್ದು, ಸೇವೆಯಲ್ಲಿ ಯಾವುದೇ ವ್ಯತ್ಯಯ ಆಗುವುದಿಲ್ಲ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಬೆಂಗಳೂರು) ಶ್ಯಾಮ್ ಸಿಂಗ್ ತಿಳಿಸಿದ್ದಾರೆ.
ಯಾವ ಹೊತ್ತಿಗೆ ರೈಲು ಸಂಚಾರ?
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ರೈಲ್ವೆ ನಿಲ್ದಾಣ, ಬೆಂಗಳೂರು ಕಂಟೋನ್ಮೆಂಟ್ ಮತ್ತು ಯಲಹಂಕದಿಂದ ದೇವನಹಳ್ಳಿಗೆ ಡೆಮು ರೈಲುಗಳು ಓಡಾಡಲಿವೆ.
1.ರೈಲು ಸಂಖ್ಯೆ 06531 ಕೆಎಸ್‌ಆರ್ ಬೆಂಗಳೂರಿನಿಂದ ಬೆಳಿಗ್ಗೆ 4.55ಕ್ಕೆ ಹೊರಟು ಬೆಂಗಳೂರು ವಿಮಾನ ನಿಲ್ದಾಣದ ಸಮೀಪದಲ್ಲಿರುವ ರೈಲು ನಿಲ್ದಾಣವನ್ನು ಬೆಳಿಗ್ಗೆ 6.20ಕ್ಕೆ ತಲುಪುತ್ತದೆ. ವಿರುದ್ಧ ದಿಕ್ಕಿನಿಂದ, ರೈಲು ಸಂಖ್ಯೆ 06532 ಕೆಐಎ ನಿಲುಗಡೆ ನಿಲ್ದಾಣದಿಂದ ರಾತ್ರಿ 7.58ಕ್ಕೆ ಹೊರಟು 9.20ಕ್ಕೆ ಕೆಎಸ್‌ಆರ್ ಬೆಂಗಳೂರು ತಲುಪುತ್ತದೆ.
2.ರೈಲು ಸಂಖ್ಯೆ 06533 ದೇವನಹಳ್ಳಿಯಿಂದ ಬೆಳಿಗ್ಗೆ 6.30 ಕ್ಕೆ ಹೊರಟು 7 ಗಂಟೆಗೆ ಯಲಹಂಕವನ್ನು ತಲುಪುತ್ತದೆ ಮತ್ತು 06534 ಜೋಡಿ ರೈಲು 7.45ಕ್ಕೆ ಯಲಹಂಕದಿಂದ ಹೊರಟು 8.03ಕ್ಕೆ ಕೆಐಎ ನಿಲ್ದಾಣವನ್ನು ತಲುಪುತ್ತದೆ. ವಿರುದ್ಧ ದಿಕ್ಕಿನಿಂದ ರೈಲು ಸಂಖ್ಯೆ 06535 ದೇವನಹಳ್ಳಿಯಿಂದ ಬೆಳಿಗ್ಗೆ 8.50ಕ್ಕೆ ಹೊರಟು 10.10 ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪುತ್ತದೆ.
3.ರೈಲು ಸಂಖ್ಯೆ 06536 ಕಂಟೋನ್ಮೆಂಟ್‌ನಿಂದ ಮಧ್ಯಾಹ್ನ 12.20 ಕ್ಕೆ ಹೊರಡುತ್ತದೆ 1.20 ಗಂಟೆಗೆ ಕೆಐಎ ನಿಲುಗಡೆ ನಿಲ್ದಾಣವನ್ನು ತಲುಪುತ್ತದೆ. ರೈಲು ಸಂಖ್ಯೆ 06537 ಕೆಐಎ ನಿಲ್ದಾಣದಿಂದ ಮಧ್ಯಾಹ್ನ 2.07 ಗಂಟೆ ಹೊರಟು 3.15 ಕ್ಕೆ ಕಂಟೋನ್ಮೆಂಟ್ ತಲುಪುತ್ತದೆ.
4.ರೈಲು ಸಂಖ್ಯೆ 06538 ಕಂಟೋನ್ಮೆಂಟ್‌ನಿಂದ ಸಂಜೆ 4 ಗಂಟೆಗೆ ಹೊರಟು 5.14 ಕ್ಕೆ ಕೆಐಎ ನಿಲುಗಡೆ ನಿಲ್ದಾಣವನ್ನು ತಲುಪುತ್ತದೆ. ರೈಲು ಸಂಖ್ಯೆ 06539 ಕೆಐಎ ನಿಲ್ದಾಣದಿಂದ ಸಂಜೆ 5.58ಕ್ಕೆ ಹೊರಟು 6.20 ಕ್ಕೆ ಯಲಹಂಕ ತಲುಪುತ್ತದೆ, ವಿರುದ್ಧ ದಿಕ್ಕಿನಿಂದ, ರೈಲು ಸಂಖ್ಯೆ 06540 ಯಲಹಂಕದಿಂದ 7.15 ಕ್ಕೆ ಹೊರಟು 7.37 ಗಂಟೆಗೆ ಕೆಐಎ ನಿಲುಗಡೆ ನಿಲ್ದಾಣ ತಲುಪುತ್ತದೆ.
ಜನಸಾಮಾನ್ಯರಿಗೆ ಅನುಕೂಲ
ರೈಲು ಸಂಚಾರ ಆರಂಭದಿಂದ ವಿಮಾನಕ್ಕೆ ಹೋಗಬೇಕಾದ ಜನ ಸಾಮಾನ್ಯರಿಗೆ ಸ್ವಲ್ಪ ಅನುಕೂಲ ಆಗಲಿದೆ. ವಿಮಾನ ನಿಲ್ದಾಣಕ್ಕೆ ಕ್ಯಾಬ್‌ಗಳಲ್ಲಿ ಹೋಗಬೇಕು ಎಂದರೆ ಅಂದಾಜು 1000 ರೂ. ಬೇಕಾಗುತ್ತದೆ. ವಿಮಾನ ನಿಲ್ದಾಣಕ್ಕೆ ವಾಯು, ವಜ್ರ ಮೊದಲಾದ ಏರ್ ಕಂಡೀಷನ್ಡ್ ಬಸ್‌ಗಳ ಸೇವೆಗಳಿವೆ. ಇವುಗಳಿಗೆ 230 ರೂ. ದರವಿದೆ. ಆದರೆ, ಈ ಮೆಮು ರೈಲುಗಳಲ್ಲಿ ಗರಿಷ್ಠ ದರವೇ 15 ರೂ.
ಆದರೆ. ಈ ರೈಲು ಸಂಚಾರಕ್ಕೆ ಸಂಬಂಧಿಸಿ ಇರುವ ಸಮಸ್ಯೆ ಎಂದರೆ, ರೈಲು ನಿಲ್ದಾಣಕ್ಕೂ ವಿಮಾನ ನಿಲ್ದಾಣಕ್ಕೂ 3.1 ಕಿ.ಮೀ. ಅಂತರವಿದೆ. ರೈಲಿನಲ್ಲಿ ಬಂದವರು ದೊಡ್ಡ ಮೊತ್ತವನ್ನು ಕೊಟ್ಟು ಆಟೊ ರಿಕ್ಷಾಗಳಲ್ಲಿ ಪ್ರಯಾಣಿಸಬೇಕಾಗುತ್ತದೆ. ಈ ಹಿಂದೆ ರೈಲಿನಲ್ಲಿ ಓಡಾಡಲು ಜನರು ಹಿಂದೇಟು ಹಾಕಲು ಕೂಡಾ ಇದೇ ಕಾರಣವಾಗಿತ್ತು.
ಇದನ್ನೂ ಓದಿ| ದೂದ್‌ಸಾಗರ್ ರೈಲು ಹಾದಿಯಲ್ಲಿ ಶೀಘ್ರದಲ್ಲೇ ವಿಸ್ಟಾಡೋಮ್?