ಬೆಂಗಳೂರು: ನಮ್ಮ ಮೆಟ್ರೋ ಕಾಮಗಾರಿ ವೇಳೆ ಪಿಲ್ಲರ್ ಕುಸಿದು ಮಹಿಳೆ ಮತ್ತು ಮಗು ದುರಂತ ಸಾವಿಗೀಡಾದ ಘಟನೆಗೆ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದ್ದು, ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಂಡಿದೆ.
ಮಾಧ್ಯಮಗಳ ಸುದ್ದಿ ಆಧರಿಸಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ ಕೋರ್ಟ್ ಪೀಠ, ಇದರಲ್ಲಿ ಸರ್ಕಾರ, ಬಿಎಂಆರ್‌ಸಿಎಲ್, ಬಿಬಿಎಂಪಿ ಹಾಗೂ ಕಾಮಗಾರಿ ಗುತ್ತಿಗೆದಾರರನ್ನು ಪ್ರತಿವಾದಿಯಾಗಿಸಿದೆ. ನಿನ್ನೆ ಮೆಟ್ರೋ ಮಾರ್ಗದಲ್ಲಿ ರಸ್ತೆಗೆ ಗುಂಡಿ ಬಿದ್ದಿದೆ. ಈ ಘಟನೆಗಳು ರಸ್ತೆ ಸುರಕ್ಷತೆ ಬಗ್ಗೆ ಚಿಂತೆಗೀಡು ಮಾಡಿವೆ ಎಂದು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ, ನ್ಯಾ. ಅಶೋಕ್ ಎಸ್.ಕಿಣಗಿಯವರಿದ್ದ ಪೀಠ ಅಭಿಪ್ರಾಯಪಟ್ಟಿದೆ.
ಸಾರ್ವಜನಿಕ ಹಿತದೃಷ್ಟಿಯಿಂದ ಏನು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ? ಟೆಂಡರ್ ದಾಖಲೆಗಳಲ್ಲಿ ಸುರಕ್ಷತಾ ಕ್ರಮ ಒಳಗೊಂಡಿದೆಯೇ? ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆಯೇ? ಸರ್ಕಾರ ಸುರಕ್ಷತಾ ಕ್ರಮ ಸಂಬಂಧ ಆದೇಶ ಹೊರಡಿಸಿದೆಯೇ? ಗುತ್ತಿಗೆದಾರರು, ಅಧಿಕಾರಿಗಳ ಮೇಲೆ ಹೊಣೆಗಾರಿಕೆ ನಿಗದಿಪಡಿಸಲಾಗಿದೆಯೇ? ಮತ್ತಿತರ ವಿಚಾರಗಳ ಬಗ್ಗೆ ಸರ್ಕಾರದಿಂದ ಪೀಠ ಮಾಹಿತಿ ಕೇಳಿದೆ. ಈ ಬಗ್ಗೆ ರಿಟ್ ಅರ್ಜಿ ಸಲ್ಲಿಸಲು ರಿಜಿಸ್ಟ್ರಾರ್ ಜನರಲ್‌ಗೆ ಸಿಜೆ ಸೂಚಿಸಿದ್ದು, ಈ ವಿಚಾರಕ್ಕೆ ಸೂಕ್ತ ಸಂಬಂಧಿಸಿದ ವ್ಯಕ್ತಿ ಅರ್ಜಿ ಸಲ್ಲಿಸಬಹುದು ಎಂದಿದ್ದಾರೆ.
ಇದನ್ನೂ ಓದಿ | ವಿಸ್ತಾರ ಸಂಪಾದಕೀಯ | ಮೆಟ್ರೊ ಪಿಲ್ಲರ್ ದುರಂತಕ್ಕೆ ಹೊಣೆಗೇಡಿ ಅಧಿಕಾರಿಗಳೇ ಕಾರಣ