Site icon Vistara News

ಮೈಚಾಂಗ್‌ ಚಂಡಮಾರುತ; ಭಾರಿ ಮಳೆಗೆ ತಮಿಳುನಾಡಿನಲ್ಲಿ ಇಬ್ಬರ ಸಾವು, ಬೆಂಗಳೂರಿಗೂ ಎಫೆಕ್ಟ್?

Michaung Cyclone

Michaung Cyclone: 2 dead in Chennai amid heavy rain, will affect Bengaluru?

ಚೆನ್ನೈ: ಮೈಚಾಂಗ್‌ ಚಂಡಮಾರುತಕ್ಕೆ ತಮಿಳುನಾಡು ತತ್ತರಿಸಿ ಹೋಗಿದೆ. ಚಂಡಮಾರುತದಿಂದಾಗಿ ತಮಿಳುನಾಡಿನಲ್ಲಿ (Tamil Nadu) ಭಾರಿ ಮಳೆಯಾಗಿದ್ದು, ಚೆನ್ನೈ ಜಲಾವೃತಗೊಂಡಿದೆ. ಅದರಲ್ಲೂ, ಚನ್ನೈನ ಕಣತೂರ್‌ನಲ್ಲಿ ಭಾರಿ ಮಳೆಗೆ ಇತ್ತೀಚೆಗಷ್ಟೇ ಕಟ್ಟಿದ ಗೋಡೆ ಕುಸಿದು ಇಬ್ಬರು ಮೃತಪಟಿದ್ದಾರೆ. ಮತ್ತೊಬ್ಬರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟ ಇಬ್ಬರೂ ಜಾರ್ಖಂಡ್‌ನವರು ಎಂದು ತಿಳಿದುಬಂದಿದೆ. ಮತ್ತೊಂದೆಡೆ, ಮೈಚಾಂಗ್‌ ಚಂಡಮಾರುತದ (Maichaung Cyclone) ಅಬ್ಬರ ಜೋರಾಗಿರುವುದರಿಂದ ಬೆಂಗಳೂರಿನಲ್ಲೂ ಭಾರಿ ಮಳೆಯಾಗುವ ಸಾಧ್ಯತೆ ಇದೆ.

ಬಂಗಾಳ ಕೊಲ್ಲಿಯಲ್ಲಿ ಮೈಚಾಂಗ್‌ ಚಂಡಮಾರುತ ರೂಪುಗೊಂಡಿರುವ ಕಾರಣ ತಮಿಳುನಾಡಿನ ಬಹುತೇಕ ಕಡೆ ಭಾರಿ ಮಳೆಯಾಗುತ್ತಿದೆ. ಆಂಧ್ರಪ್ರದೇಶದಲ್ಲೂ ಭಾರಿ ಮಳೆಯಾಗುತ್ತಿರುವ ಕಾರಣ ಎರಡೂ ರಾಜ್ಯಗಳಲ್ಲಿ ಸೋಮವಾರ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಆಂಧ್ರಪ್ರದೇಶ ಹಾಗೂ ತಮಿಳುನಾಡು ಕರ್ನಾಟಕದ ನೆರೆಯ ರಾಜ್ಯಗಳಾಗಿರುವ ಕಾರಣ ಕರ್ನಾಟಕದಲ್ಲೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಬೆಂಗಳೂರಿನಲ್ಲಿ ಈಗಾಗಲೇ ಮೋಡ ಕವಿದ ವಾತಾವರಣ ಇದೆ.

ಕೆರೆಯಂತಾದ ಚೆನ್ನೈ ಏರ್‌ಪೋರ್ಟ್‌

ನಿರಂತರವಾಗಿ ಸುರಿದ ಮಳೆಯಿಂದಾಗಿ ಚೆನ್ನೈ ವಿಮಾನ ನಿಲ್ದಾಣವು ಜಲಾವೃತಗೊಂಡಿದೆ. ವಿಮಾನ ನಿಲ್ದಾಣದ ರನ್‌ವೇ, ಪಾರ್ಕಿಂಗ್‌ ಜಾಗವು ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಮತ್ತೊಂದೆಡೆ, ಚೆನ್ನೈ ವಿಮಾನ ನಿಲ್ದಾಣಕ್ಕೆ ತೆರಳಬೇಕಿದ್ದ 11 ವಿಮಾನಗಳನ್ನು ಬೆಂಗಳೂರಿನಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಮಾಡಲಾಗಿದೆ. ಮುಂದಿನ 24 ಗಂಟೆಗಳವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ವಿಮಾನಗಳ ಹಾರಾಟ ಕಷ್ಟ ಸಾಧ್ಯ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Karnataka Weather : ನಾಳೆಯಿಂದ ಡಿ. 9ರ ವರೆಗೆ ಸಾಧಾರಣದಿಂದ ಭಾರಿ ಮಳೆ ಸಾಧ್ಯತೆ

ವರ್ಕ್‌ ಫ್ರಂ ಹೋಮ್‌ಗೆ ಸೂಚನೆ

ತಮಿಳುನಾಡಿನಲ್ಲಿ ಗಂಟೆಗೆ 90-100 ಕಿಲೋ ಮೀಟರ್‌ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಮಳೆಯೂ ಅಷ್ಟೇ ಜೋರಾಗಿದೆ. ಇದರಿಂದಾಗಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಿರುವ ಜತೆಗೆ ಚೆನ್ನೈ, ತಿರುವಳ್ಳೂರ್‌, ಕಾಂಚಿಪುರಂ ಹಾಗೂ ಚೆಂಗಲ್‌ಪಟ್ಟು ನಗರಗಳಲ್ಲಿ ಖಾಸಗಿ ಕಂಪನಿಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ (ವರ್ಕ್‌ ಫ್ರಂ ಹೋಮ್)‌ ಮಾಡುವಂತೆ ಸೂಚಿಸಿವೆ. ಭಾರಿ ಮಳೆಯಿಂದಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆ ನಾಶವಾಗಿದೆ ಎಂದು ತಿಳಿದುಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version