ಬೆಂಗಳೂರು: ರಾಜ್ಯದಲ್ಲಿ ಮಕ್ಕಳ ಅಪೌಷ್ಟಿಕತೆ ಪ್ರಮಾಣ ಹೆಚ್ಚಳವಾಗಿರುವ ವರದಿಯಾಗಿದ್ದು, ರಕ್ತಹೀನತೆ ಸೇರಿದಂತೆ ನಾನಾ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂಬ ವಿಷಯ ಸರ್ವೇಗಳಿಂದ ಬಹಿರಂಗವಾಗಿದ್ದು, ಮಧ್ಯಾಹ್ನದ ಬಿಸಿಯೂಟಕ್ಕೆ (Midday Meal Scheme) ಮುಂದಿನ ವಾರದಿಂದಲೇ ರಾಗಿ ಮುದ್ದೆ, ಜೋಳದ ರೊಟ್ಟಿಯನ್ನು ನೀಡುವ ಯೋಜನೆಗೆ ಚಾಲನೆ ಸಿಗಲಿದೆ ಎಂದು ಮೂಲಗಳು ತಿಳಿಸಿವೆ.
ಕೋವಿಡ್ ಕಾರಣದಿಂದ ಶಾಲೆಗಳು ಹಲವು ತಿಂಗಳು ಆರಂಭವಾಗಿರಲಿಲ್ಲ. ಪರಿಣಾಮ ಮಧ್ಯಾಹ್ನದ ಬಿಸಿಯೂಟಕ್ಕೂ (Midday Meal Scheme) ಬ್ರೇಕ್ ಬಿದ್ದು ಮಕ್ಕಳ ಅಪೌಷ್ಟಿಕತೆ ಹೆಚ್ಚಾಗುವಂತೆ ಮಾಡಿತ್ತು. ಮಕ್ಕಳಲ್ಲಿ ರಕ್ತಹೀನತೆ ಸೇರಿದಂತೆ ನಾನಾ ಕಾಯಿಲೆಗಳು ಇದರಿಂದ ಬಂದಿವೆ ಎಂಬ ಅಂಶವನ್ನು ಮನಗಂಡಿರುವ ಸರ್ಕಾರ ಈ ನಿಟ್ಟಿನಲ್ಲಿ ಮಕ್ಕಳಿಗೆ ಬಿಸಿ ಬಿಸಿ ರಾಗಿ ಮುದ್ದೆ ಹಾಗೂ ಜೋಳದ ರೊಟ್ಟಿ ಊಟ ನೀಡಲು ಯೋಜನೆ ರೂಪಿಸಿದೆ. ಇದಕ್ಕಾಗಿ ಪರ್ಯಾಯ ಆರ್ಥಿಕ ಬಜೆಟ್ ಮಂಡನೆಗೂ ಸಿದ್ಧತೆಗಳು ಆರಂಭವಾಗಿವೆ.
ಮಕ್ಕಳ ಪೌಷ್ಟಿಕಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಮೊಟ್ಟೆ, ಬಾಳೆಹಣ್ಣು, ಶೇಂಗಾ ಮಿಠಾಯಿ (ಚಿಕ್ಕಿ)ಯನ್ನು ನೀಡಲಾಗುತ್ತಿತ್ತು. ಆದರೆ, ಅವುಗಳಿಂದ ಅಷ್ಟಾಗಿ ಪೌಷ್ಟಿಕಾಂಶ ದೊರೆಯಲಿಲ್ಲ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಹೊಸ ಮೆಗಾ ಪ್ಲಾನ್ ಒಂದನ್ನು ಸಿದ್ಧಪಡಿಸಿದ್ದು, ಮಕ್ಕಳಿಗೆ ರಾಗಿ ಮುದ್ದೆ ಹಾಗೂ ಜೋಳದ ರೊಟ್ಟಿ ನೀಡಲು ಮುಂದಾಗಿದೆ. ಇದಕ್ಕಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು ಮೊದಲ ಹಂತದಲ್ಲಿ ಶುಕ್ರವಾರ ಸಭೆ ನಡೆಸಿ ಅಂತಿಮ ರೂಪುರೇಷೆ ಸಿದ್ಧಪಡಿಸಿದ್ದು, ಮುಂದಿನ ವಾರದಿಂದ ಬಿಸಿಯೂಟದ ಫುಡ್ ಮೆನು ಹೊಸ ರೂಪದಲ್ಲಿ ಸಿದ್ಧವಾಗಲಿದೆ ಎಂದು ಮಾಹಿತಿ ಇದೆ.
ಇದನ್ನೂ ಓದಿ | ಬಿಸಿಯೂಟದಲ್ಲಿ ರಾಗಿ ಮುದ್ದೆ, ಜೋಳದ ರೊಟ್ಟಿ ನೀಡಲು ಸರ್ಕಾರ ಚಿಂತನೆ, ಕರಾವಳಿಯಲ್ಲಿ ಅಪಸ್ವರ
ಫುಡ್ ಮೆನುವಿಗೆ ಆರಂಭದಲ್ಲೇ ಅಪಸ್ವರ
ಬೆಂಗಳೂರು, ಮೈಸೂರು, ತುಮಕೂರು, ಮಂಡ್ಯ ಸೇರಿದಂತೆ ಮುದ್ದೆ ಬಳಸುವ ಜಿಲ್ಲೆಗಳ ಮಕ್ಕಳಿಗೆ ಮುದ್ದೆ ಊಟ ನೀಡಿದರೆ, ರಾಯಚೂರು, ಧಾರವಾಡ, ಬೆಳಗಾವಿ, ಹುಬ್ಬಳ್ಳಿ, ಕಲಬುರಗಿ ಸೇರಿದಂತೆ ರೊಟ್ಟಿ ತಿನ್ನುವ ಜಿಲ್ಲೆಗಳ ಮಕ್ಕಳಿಗೆ ರೊಟ್ಟಿ ಊಟ ನೀಡಲಾಗುತ್ತದೆ. ಈಗಾಗಲೇ ಈ ಬಗ್ಗೆ ಆರ್ಥಿಕ ಲೆಕ್ಕಚಾರ ಹಾಕಿರುವ ಶಿಕ್ಷಣ ಇಲಾಖೆ ಪೌಷ್ಠಿಕಾಂಶಯುಕ್ತ ಆಹಾರಕ್ಕಾಗಿ ಪರ್ಯಾಯ ಆರ್ಥಿಕ ಬಜೆಟ್ ಮಂಡನೆಗೆ ಯೋಜನೆ ರೂಪಿಸಿದೆ. ಆದರೆ ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಗೆ ಆರಂಭದಲ್ಲೇ ಅಪಸ್ವರ ಕೇಳಿಬರುತ್ತಿದ್ದು ಮಂಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿದಂತೆ ಮುದ್ದೆ-ರೊಟ್ಟಿ ತಿನ್ನದ ಜಿಲ್ಲೆಗಳ ಮಕ್ಕಳ ಪೋಷಕರು ನಮ್ಮ ಮಕ್ಕಳು ಮುದ್ದೆ-ರೊಟ್ಟಿ ತಿನ್ನುವುದಿಲ್ಲ. ನಿಮ್ಮ ಆಹಾರ ಪದ್ಧತಿ ಸರಿಯಿಲ್ಲ ನಿಮ್ಮ ಯೋಜನೆಯನ್ನು ಜಾರಿಮಾಡಬೇಡಿ. ಇದರಿಂದ ನಮ್ಮ ಮಕ್ಕಳಿಗೆ ತೊಂದರೆಯಾಗುತ್ತದೆ ಎನ್ನುತ್ತಿದ್ದಾರಂತೆ.
ಇದಕ್ಕೆ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಆಯಾ ಭಾಗಕ್ಕೆ ಅನುಗುಣವಾದ ಆಹಾರ ಕೊಡಲಾಗುವುದು ಎಂದಿದ್ದಾರೆ. ಮುಂದಿನ ವಾರದಿಂದ ಸರ್ಕಾರಿ ಶಾಲೆ ಮಕ್ಕಳ ಮಧ್ಯಾಹ್ನದ ಬಿಸಿಯೂಟದ ಮೆನು ಚೇಂಜ್ ಆಗಲಿದ್ದು, ರಾಗಿ ಮುದ್ದೆ-ಜೋಳದ ರೊಟ್ಟಿ ಜತೆ ತರಕಾರಿ ರೈಸ್ ಬಾತ್ ಅನ್ನು ಸಹ ಮಕ್ಕಳಿಗೆ ಊಟಕ್ಕೆ ನೀಡಲಿದ್ದಾರೆ.
ಇದನ್ನೂ ಓದಿ | ಮಕ್ಕಳ ಬಿಸಿಯೂಟಕ್ಕೆ ನೀಡಿದ್ದ 11 ಕೋಟಿಗೂ ಅಧಿಕ ಹಣ ಕಬಳಿಸಿದ ಶಿಕ್ಷಕರು; ಎಫ್ಐಆರ್ ದಾಖಲು