Site icon Vistara News

Midday Meal Scheme Protest | ಸಿಎಂ ಭರವಸೆಗೆ ಪ್ರತಿಭಟನೆ ಕೈಬಿಟ್ಟ ಬಿಸಿಯೂಟ ನೌಕರರು

Midday Meal Scheme Protest

ಬೆಂಗಳೂರು: ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆಕೊಟ್ಟಿದ್ದ ಬಿಸಿಯೂಟ ನೌಕರರ ಪ್ರತಿಭಟನೆ 2ನೇ ದಿನಕ್ಕೆ ಮುಕ್ತಾಯಗೊಂಡಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರ ಭರವಸೆ ಮೇರೆಗೆ ನೌಕರರು ಮುಷ್ಕರವನ್ನು ಕೈಬಿಟ್ಟಿದ್ದಾರೆ.

ಏಕಾಏಕಿ ಕೆಲಸದಿಂದ ತೆಗೆದ ಬಿಸಿಯೂಟ ನೌಕರರಿಗೆ (Midday Meal Scheme Protest) ಪರಿಹಾರ ಕೊಡುವಂತೆ ಆಗ್ರಹಿಸಿ ಫ್ರೀಡಂ ಪಾರ್ಕ್‌ನಲ್ಲಿ ಸೋಮವಾರ ಪ್ರತಿಭಟನೆ ನಡೆಸುತ್ತಿದ್ದರು. ರಾತ್ರಿಯಿಡೀ ಚಳಿಯನ್ನು ಲೆಕ್ಕಿಸದೆ ಬಿಸಿಯೂಟ ನೌಕರರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಮೊದಲ ದಿನ ಸಮಸ್ಯೆ ಆಲಿಸಲು ಸರ್ಕಾರದ ಯಾವೊಬ್ಬ ಅಧಿಕಾರಿಯಾಗಲಿ, ಸಚಿವರಾಗಲಿ ಬಾರದ್ದಕ್ಕೆ ಬಿಸಿಯೂಟ ಸಿಬ್ಬಂದಿ ಕೆರಳಿ ಕೆಂಡವಾಗಿದ್ದರು. ನಮ್ಮ ಮೇಲೆ ಯಾಕಿಷ್ಟು ತಾತ್ಸಾರ ಎಂದು ಪ್ರಶ್ನಿಸಿ, ನಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು ಅಲ್ಲಿಯವರೆಗೆ ನಾವು ಇಲ್ಲಿಂದ ಹೋಗಲಾರೆವು ಎಂದು ಸರ್ಕಾರಕ್ಕೆ ಡೆಡ್‌ಲೈನ್ ಕೊಟ್ಟಿದರು.

ಪ್ರತಿಭಟನೆ ಬಿಸಿ ಹೆಚ್ಚುತ್ತಿದ್ದಂತೆ ಪ್ರತಿಭಟನೆಯ ನೇತೃತ್ವ ವಹಿಸಿದ್ದ ವರಲಕ್ಷ್ಮಿ ತಂಡ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. 60 ಕೋಟಿ ರೂ. ಮಂಜೂರು ಮಾಡುವಂತೆ ಮನವಿ ಮಾಡಿದರು. ಈ ವೇಳೆ ಬಸವರಾಜ ಬೊಮ್ಮಾಯಿ ಬಿಸಿಯೂಟ ಕಾರ್ಯಕರ್ತೆಯರ ಬೇಡಿಕೆ ಸ್ಪಂದಿಸಿದ್ದು, 15 ದಿನದ ಒಳಗಡೆ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ. ಎರಡನೇ ದಿನವಾದ ಮಂಗಳವಾರ ಪ್ರತಿಭಟನಾ ಸ್ಥಳಕ್ಕೆ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಭೇಟಿ ನೀಡಿ ಎಲ್ಲ ಬೇಡಿಕೆಗಳ ಬಗ್ಗೆ ಚರ್ಚೆ ಮಾಡಿದ್ದಾರೆ.

ಎಲ್ಲರ ಮಾತಿಗೆ ಬಿಸಿಯೂಟ ಕಾರ್ಯಕರ್ತೆಯರು ಪ್ರತಿಭಟನೆ ವಾಪಸ್‌ ಪಡೆದಿದ್ದು, ಸರ್ಕಾರ 15 ದಿನ ಒಳಗಡೆ ಭರವಸೆ ಈಡೇರಿಸಿಲ್ಲ ಎಂದರೆ ಮುಂದಿನ ದಿನದಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ | ಬಿಸಿಯೂಟದಲ್ಲಿ ರಾಗಿ ಮುದ್ದೆ, ಜೋಳದ ರೊಟ್ಟಿ ನೀಡಲು ಸರ್ಕಾರ ಚಿಂತನೆ, ಕರಾವಳಿಯಲ್ಲಿ ಅಪಸ್ವರ

Exit mobile version