ಬೀದರ್: 1995ರ ಸೆಪ್ಟೆಂಬರ್ 21ರಂದು ಇಡೀ ದೇಶದಲ್ಲಿ ಒಂದು ವಿಷಯ ದೊಡ್ಡ ಸದ್ದು ಮಾಡಿತ್ತು. ಅದೇನೆಂದರೆ, ಗಣೇಶ ಹಾಲು ಕುಡಿದ (Ganesha Drank Milk)! ದಕ್ಷಿಣ ದೆಹಲಿಯ ದೇವಸ್ಥಾನವೊಂದರ (Temple in Delhi) ಗಣೇಶ ವಿಗ್ರಹದ ಸೊಂಡಿಲಿನ ಮುಂದೆ ಚಮಚದಲ್ಲಿ ಹಾಲು ಹಿಡಿದಾಗ (Milk Miracle) ಗಣೇಶ ಹಾಲು ಕುಡಿದನಂತೆ. ಈ ಸುದ್ದಿ ಸೋಷಿಯಲ್ ಮೀಡಿಯಾ, ಫೋನ್‌ಗಳ ಅಬ್ಬರವಿಲ್ಲದ ಆ ಕಾಲದಲ್ಲೂ ಬಿರುಗಾಳಿಯಂತೆ ಇಡೀ ರಾಷ್ಟ್ರವನ್ನು ಹರಡಿತ್ತು. ಒಂದು ಕಡೆ ಆ ದೇವಸ್ಥಾನಕ್ಕೆ ಜನ ಸಾಲುಗಟ್ಟಿ ನಿಂತರೆ ರಾಷ್ಟ್ರದ ಬೇರೆ ಬೇರೆ ಭಾಗಗಳಲ್ಲೂ ನಮ್ಮ ಗಣೇಶ ಹಾಲು ಕುಡಿಯುತ್ತಾನಾ ಎನ್ನುವ ಪ್ರಯೋಗ ನಡೆದಿತ್ತು. ಅಚ್ಚರಿ ಎಂದರೆ ಇನ್ನೂ ಹಲವು ಕಡೆ ಗಣೇಶನ ಮೂರ್ತಿಗಳು ಹಾಲು ಕುಡಿದವು. ಜನರು ಭಕ್ತಿ ಭಾವದಿಂದ ಹಾಲು ತಂದು ಕುಡಿದರು. ಗಣೇಶನ ಪವಾಡದ ಬಗ್ಗೆ ಮಾತನಾಡಿದರು. ಈ ನಡುವೆ ಇನ್ನೂ ಕೆಲವು ದೇವರ ಮೂರ್ತಿಗಳು ಹಾಲು ಕುಡಿಯುವ ಘಟನೆಗಳು ನಡೆದವು. ಈಗ ಬೀದರ್ ಜಿಲ್ಲೆಯ ಹುಲಸೂರ ಪಟ್ಟಣದಲ್ಲೂ ದೇವರು ಹಾಲು ಕುಡಿಯುವ ಘಟನೆ ನಡೆದಿದೆಯಂತೆ.
ಇಲ್ಲಿ ಹಾಲು ಕುಡಿದದ್ದು ಗಣೇಶನಲ್ಲ. ಬದಲಿಗೆ ಬಸವಣ್ಣ. ಹೌದು ಹುಲಸೂರು ಪಟ್ಟಣದ (Hulasuru Town) ಲದ್ದಿ ಸೋಮಣ್ಣ ದೇವಸ್ಥಾನ ಮತ್ತು ಮಹದೇವ ದೇವಸ್ಥಾನದಲ್ಲಿ ಬಸವಣ್ಣ ಹಾಲು ಕುಡಿಯುತ್ತಿರುವ ದೃಶ್ಯಗಳು ಕಂಡುಬಂದಿದ್ದು, ಜನರು ಸಾಲು ಸಾಲಾಗಿ ದೇವಸ್ಥಾನಕ್ಕೆ ಹೋಗುತ್ತಿದ್ದಾರೆ.
ಹುಲಸೂರ ಪಟ್ಟಣ ಶರಣರ ನೆಲೆಯಾಗಿ ಗಮನ ಸೆಳೆದಿದೆ. 12ನೇ ಶತಮಾನದ ಶರಣರಲ್ಲಿ ಒಬ್ಬರಾದ ಶರಣ ಲದ್ದಿ ಸೋಮಣ್ಣನವರ ದೇವಾಸ್ಥಾನದಲ್ಲಿನ ಪವಾಡವನ್ನು ನೋಡಲು ಮಹಿಳೆಯರು ಮುಗಿಬಿದ್ದಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಮಹಿಳೆಯರು ದೇವಸ್ಥಾನದತ್ತ ಧಾವಿಸುತ್ತಿದ್ದು, ಹಾಲು ಕುಡಿಸುತ್ತಿದ್ದಾರೆ. ಈ ಭಾಗದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಅಷ್ಟಾದರೂ ಜನರು ಅದನ್ನು ಲೆಕ್ಕಿಸದೆ ದೇವಸ್ಥಾನದತ್ತ ಧಾವಿಸುತ್ತಿದ್ದಾರೆ.
ಹಾಲು ಕುಡಿಯುವ ಬಸವಣ್ಣನ ವಿಸ್ಮಯ ನೋಡಿ ದಂಗಾದ ಪಟ್ಟಣದ ಮಹಿಳೆಯರು ಮನೆಯಿಂದ ಹಾಲು ತಂದು, ಚಮಚದಿಂದ ಕುಡಿಸುತ್ತಿದ್ದಾರೆ.
ಏನಿದು ಹಾಲು ಕುಡಿಯುವ ವಿಸ್ಮಯ?
1995ರಲ್ಲಿ ಮೊದಲ ಬಾರಿಗೆ ಗಣೇಶ ಹಾಲು ಕುಡಿಯುವುದನ್ನು ಕಂಡಾಗ ಇದೊಂದು ದೇವರ ಪವಾಡವೆಂದು ಭಕ್ತರು ನಂಬಿದ್ದರು. ಆದರೆ, ಬಳಿಕ ಎಲ್ಲ ದೇವರ ಮೂರ್ತಿಗಳು ಹಾಲು ಕುಡಿಯಲು ಆರಂಭಿಸಿದ ಬಳಿಕ ಇದಕ್ಕೆ ಬೇರಾವುದೋ ಕಾರಣವಿದೆ ಎಂದು ನಂಬಲಾಯಿತು. ಬಳಿಕ ಇದರ ಹಿಂದಿನ ವೈಜ್ಞಾನಿಕ ವಿಚಾರಗಳು ಮುನ್ನೆಲೆಗೆ ಬಂದ. ಹಾಲಿನ ಮೇಲ್ಮೈ ಒತ್ತಡದ ಕಾರಣ ಮತ್ತು ಮೂರ್ತಿಯ ಒಳಗಿನ ಖಾಲಿ ಜಾಗದಲ್ಲಿ ಉಂಟಾಗುವ ನಿರ್ವಾತದ ಒಟ್ಟು ಪರಿಣಾಮವಾಗಿ ಇಂಥ ವಿದ್ಯಮಾನಗಳು ನಡೆಯುತ್ತವೆ ಎಂದು ವಿವರಿಸಲಾಯಿತು.
ಇದನ್ನೂ ಓದಿ: Koragajja Miracle: ಕರಾವಳಿಯಲ್ಲಿ ಕೊರಗಜ್ಜನ ಪವಾಡ; ಕಳೆದುಹೋದ ಹಣ ಕೆಲವೇ ಹೊತ್ತಿನಲ್ಲಿ ಸಿಕ್ಕಿತು