ಬೆಂಗಳೂರು: ರಾಜ್ಯದಲ್ಲಿ ನಂದಿನಿ ಹಾಲಿನ ದರದಲ್ಲಿ ಏರಿಕೆ ಆಗುವ ಸಾಧ್ಯತೆ ದಟ್ಟವಾಗಿದೆ. ಹಾಲಿನ ದರದಲ್ಲಿ ಏರಿಕೆ ಮಾಡುವಂತೆ ಸರ್ಕಾರಕ್ಕೆ ಕೆಎಂಎಫ್ (Milk Price Hike) ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ, ರಾಜ್ಯ ಸರ್ಕಾರ ಈ ಬಗ್ಗೆ ಇದುವರೆಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಒಂದು ವೇಳೆ ಬೆಲೆ ಏರಿಕೆ ಮಾಡಿದರೆ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳಲಿದೆ.
ಈಗಾಗಲೇ ತೈಲ ದರ ಸೇರಿದಂತೆ ಹಲವು ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ಜನತೆಗೆ ನಿತ್ಯ ಬಳಕೆಯ ಹಾಲಿನ ದರವೂ ಏರಿಕೆ ಸಂಕಷ್ಟ ಎದುರಾಗಲಿದೆ. ಆದರೆ, ಹಾಲಿನ ದರ ಏರಿಕೆಗೆ 14 ಜಿಲ್ಲೆಗಳ ಹಾಲಿನ ಒಕ್ಕೂಟದವರು ಒತ್ತಡ ಹಾಕುತ್ತಿದ್ದಾರೆ. ಹೀಗಾಗಿ ಕೆಎಂಎಫ್ ಹತ್ತಾರು ಬಾರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತಾ ಬಂದಿದೆ. ಆದರೆ, ಇಂಧನ, ಬೆಲೆಗಳ ಏರಿಕೆ ಸೇರಿದಂತೆ ನಾನಾ ಕಾರಣಕ್ಕಾಗಿ ರಾಜ್ಯ ಸರ್ಕಾರ ಮುಂದೂಡುತ್ತಾ ಬರುತ್ತಿದೆ.
ಲೀಟರ್ ಹಾಲಿಗೆ 3 ರೂಪಾಯಿ ಹೆಚ್ಚಳ?
ಪ್ರಸ್ತುತ ನಂದಿನಿ ಹಾಲು ಕನಿಷ್ಠ ಬೆಲೆಯಲ್ಲಿ ಗ್ರಾಹಕರಿಗೆ ಸಿಗುತ್ತಿದೆ. ಕರ್ನಾಟಕದಲ್ಲಿ ನಂದಿನಿ ಹಾಲು ಹೊರತುಪಡಿಸಿ ಬೇರೆ ಹಾಲಿನ ದರ ಕನಿಷ್ಠ 3 ರಿಂದ 12 ರೂಪಾಯಿವರೆಗೂ ಹೆಚ್ಚಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿರುವ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಸತೀಶ್, ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ದರ ಏರಿಕೆಗೆ ಮನವಿ ಮಾಡಲಾಗಿದೆ. 1 ಲೀಟರ್ ಹಾಲಿಗೆ 3 ರೂಪಾಯಿ ಹೆಚ್ಚು ಮಾಡುವಂತೆ ಕೋರಿದ್ದೆೇವೆ. ಹಾಲಿನ ದರ ಹೆಚ್ಚಳ ಮಾಡಿದರೆ ಆ ಹಣ ರೈತರಿಗೆ ಸೇರುತ್ತದೆ ಎಂದು ವಿವರಣೆ ನೀಡಿದ್ದೇವೆ ಎಂದು ತಿಳಿಸಿದರು.
ನೆರವು ವಿಳಂಬ
ರೈತರಿಗೆ ನೀಡುವ ನೆರವು ಹಣ ಬಿಡುಗಡೆ ವಿಳಂಬವಾಗುತ್ತಿರುವ ಸಂಬಂಧ ಪ್ರತಿಕ್ರಿಯಿಸಿದ ಸತೀಶ್, ಸದ್ಯದಲ್ಲೇ ಮೂರು ಕಂತಿನ ಹಣ ಬಿಡುಗಡೆ ಮಾಡಲಾಗುತ್ತದೆ. 200 ಕೋಟಿ ರೂಪಾಯಿ ಹಣವನ್ನು ಈಗಾಗಲೇ ರೈತರಿಗೆ ನೀಡಲಾಗಿದೆ ಎಂದು ವಿವರಣೆ ನೀಡಿದರು.
ಗ್ರಾಹಕರ ತುಟಿ ಸುಡಲಿದೆ ಟೀ-ಕಾಫಿ
ಒಂದು ವೇಳೆ ನಂದಿನಿ ಹಾಲಿನ ದರ ಏರಿಕೆಯಾದರೆ ಇತ್ತ ಹೋಟೆಲ್ ಉದ್ಯಮಗಳು ಟೀ-ಕಾಫಿ ದರವನ್ನು ಏರಿಕೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಹೀಗಾದಲ್ಲಿ ಹೋಟೆಲ್‌ಗಳಲ್ಲಿ ಟೀ- ಕಾಫಿ ಕುಡಿಯುವವರ ತುಟಿ ಸುಡಲಿದೆ ಎಂಬ ಮಾತುಗಳೂ ಕೇಳಿಬಂದಿವೆ.