Site icon Vistara News

Electricity Bill: ನೇಕಾರರಿಗೆ ಶಾಕ್!‌ 90 ರೂಪಾಯಿ ಮಿನಿಮಮ್ ಚಾರ್ಜ್‌ 140ಕ್ಕೆ ಏರಿಕೆ; ಇದು ಗ್ಯಾರಂಟಿ ಎಫೆಕ್ಟಾ?

weavers Minimum charge hike in Electricity Bill

ಬೆಳಗಾವಿ: ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು (Congress guarantee) ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಸಾಕಷ್ಟು ಕಸರತ್ತು ಮಾಡುತ್ತಿರುವ ರಾಜ್ಯ ಸರ್ಕಾರ ಈಗ ಆದಾಯದ ಮೂಲಗಳನ್ನು ಹುಡುಕುತ್ತಿವೆ. ಇದರ ಬೆನ್ನಲ್ಲೇ ನೇಕಾರರಿಗೆ ಶಾಕ್ ನೀಡಿದ ರಾಜ್ಯ ಸರ್ಕಾರವು, ಏಕಾಏಕಿ ವಿದ್ಯುತ್ ಬಿಲ್‌ನ (Electricity Bill) ಕನಿಷ್ಠ ಶುಲ್ಕವನ್ನು ಹೆಚ್ಚಿಸಿ ಆದೇಶಿಸಿದೆ.

ವಿದ್ಯುತ್ ಮಗ್ಗಗಳಿಗಿದ್ದ ಕನಿಷ್ಠ 90 ರೂಪಾಯಿ ಮಿನಿಮಮ್ ಚಾರ್ಜ್‌ ಅನ್ನು 140ಕ್ಕೆ ಏರಿಕೆ ಮಾಡಲಾಗಿದೆ. ಅಂದರೆ ಒಂದೇ ಬಾರಿ 50 ರೂಪಾಯಿ ಹೆಚ್ಚಳ ಮಾಡಿದಂತೆ ಆಗಿದೆ. ಇದರಿಂದ ಬೀದಿಗಿಳಿದ ವಿದ್ಯುತ್ ಮಗ್ಗದ ಮಾಲೀಕರು, ಕಾರ್ಮಿಕರು ತಮಗೆ ನ್ಯಾಯ ಬೇಕೇ ಬೇಕು ಎಂದು ಪಟ್ಟುಹಿಡಿದಿದ್ದಾರೆ. ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ಆಶ್ರಯದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಗಿದ್ದು, ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ.

ಬೆಳಗಾವಿಯ ಚೆನ್ನಮ್ಮ ವೃತ್ತದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗಿದ್ದು, ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿದ್ದಾರೆ. ಮೊದಲೇ ನೇಕಾರರು ಸಂಕಷ್ಟದಲ್ಲಿದ್ದಾರೆ. ಸಾಲದ ಹೊರಗೆ ಬೇಸತ್ತು ರಾಜ್ಯದ 42 ನೇಕಾರರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ‌ ಕುಟುಂಬಕ್ಕೆ ರಾಜ್ಯ ಸರ್ಕಾರ 10 ಲಕ್ಷ ರೂಪಾಯಿ ‌ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: Congress Guarantee: ʼಗೃಹಲಕ್ಷ್ಮಿʼಗೂ ಮಗನ ಐಟಿಗೂ ಸಂಬಂಧ ಇಲ್ಲ; ಉಲ್ಟಾ ಹೊಡೆದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌

ಪ್ರವಾಹ, ಕೋವಿಡ್ ಕಾರಣಕ್ಕೆ ನೇಕಾರ ಸಮುದಾಯ ಸಂಕಷ್ಟದಲ್ಲಿದ್ದು, ಮಿನಿಮಮ್ ಚಾರ್ಜ್‌ ಅನ್ನು ತಕ್ಷಣವೇ ಇಳಿಸಬೇಕು. ಈ ಕ್ರಮವನ್ನು ತುರ್ತಾಗಿ ಕೈಬಿಟ್ಟು, 10 ಎಚ್‌ಪಿವರೆಗೆ ಫ್ರೀ ವಿದ್ಯುತ್ ನೀಡಬೇಕು. ಅಧಿಕಾರಕ್ಕೆ ಬಂದರೆ ನೇಕಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ಭರವಸೆಯನ್ನು ಮುಖ್ಯಮಂತ್ರಿಗಳಾದ ನೀವು ನೀಡಿದ್ದಿರಿ. ಈಗ ನಿಮ್ಮದೇ ಸರ್ಕಾರ ಬಂದಿದ್ದು, ತಾವು ನೀಡಿದ ಭರವಸೆ ಈಡೇರಿಸುವಂತೆ ಸಿಎಂ ಸಿದ್ದರಾಮಯ್ಯ ಅವರನ್ನು ನೇಕಾರರು ಆಗ್ರಹಿಸಿದ್ದಾರೆ.

Exit mobile version