| ಶಶಿಧರ್ ಮೇಟಿ, ವಿಸ್ತಾರ ನ್ಯೂಸ್ ಬಳ್ಳಾರಿ
ಗಣಿಬಾಧಿತರ ಬದುಕು ಹಸನುಗೊಳಿಸುವ ಸಾವಿರಾರು ಕೋಟಿ ಹಣ ಬಳಕೆಗೆ (Mining Fund) ಒಂದೂವರೆ ದಶಕದ ನಂತರ ಕಾಲ ಕೂಡಿಬಂದಿದೆ. ಈವರೆಗೆ ಸುಮಾರು 7584 ಕೋಟಿ ರೂ.ಗಳ 317 ಕಾಮಗಾರಿಗೆ ಅನುಮೋದನೆ ಸಿಕ್ಕಿದೆ. ಸಿಂಹಪಾಲು ಹಣ 2662 ಕೋಟಿ ರೂ.ಗಳನ್ನು ಸಾರಿಗೆ ಮತ್ತು ಸಂಪರ್ಕ (Transport and Connectivity) ಅಭಿವೃದ್ಧಿ ಮತ್ತು ಪರಿಸರ ಪುನಶ್ಚೇತನ ಮತ್ತು ಪುನರ್ ನಿರ್ಮಾಣಕ್ಕೆ ಮೀಸಲಿಟ್ಟಿದೆ.
ಕಬ್ಬಿಣ ಗಣಿಗಾರಿಕೆಯ (Iron ore Mining) ಜಿಲ್ಲೆಗಳ ಅಭಿವೃದ್ಧಿಗೆ ಸಾವಿರಾರು ಕೋಟಿ ಹಣ ಹರಿದು ಬರಲಿದೆ. ಇದರಿಂದ ಜಿಲ್ಲೆಗಳಲ್ಲಿ ಕಂಡರಿಯದ ಅಭಿವೃದ್ಧಿ ಮಾಡಬಹುದೆಂಬ ಲೆಕ್ಕಾಚಾರ ಬಹುತೇಕರಲ್ಲಿದೆ. ಇಂತಹ ಲೆಕ್ಕಾಚಾರಕ್ಕೆ ಸುಪ್ರೀಂಕೋರ್ಟ್‌ನಿಂದ ನೇಮಕಗೊಂಡಿರುವ ನ್ಯಾ.ಸುದರ್ಶನ ರೆಡ್ಡಿ ನೇತೃತ್ವದ ಓವರ್ ಸೈಟ್ ಅಥಾರಿಟಿ (Oversight Authority-OA) ಮತ್ತು ರಾಜ್ಯ ಸರ್ಕಾರ ಕೆಎಂಇಆರ್‌ಸಿಯು 10 ಸಭೆಗಳನ್ನು ನಡೆಸಿ ಈವರೆಗೆ 317 ಕಾಮಗಾರಿಯನ್ನು ಅನುಮೋದಿಸಿದೆ.
ಅನುಮೋದಿತ ಕಾಮಗಾರಿಗಳ ಪಟ್ಟಿಯಲ್ಲಿ ಯಾವ ಜಿಲ್ಲೆಗೆ ಎಷ್ಟು ಹಣ ಮೀಸಲಿಟ್ಟಿದೆ, ಯಾವ ಕೆಲಸಗಳಿಗೆ ಆದ್ಯತೆ ನೀಡಿದೆ, ಎಷ್ಟು ಕಾಮಗಾರಿಗಳು ಕೈಗೆತ್ತಿ ಕೊಳ್ಳಲಿದೆ ಎಂಬ ಕುತೂಹಲದ ಸಂಗತಿಯನ್ನು ವಿಸ್ತಾರ ನ್ಯೂಸ್ ಈ ವರದಿಯಲ್ಲಿ ವಿಸ್ತಾರವಾಗಿ ತಿಳಿಸುವ ಮೂಲಕ ಜನರ ಕುತೂಹಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದೆ.
ಅವಳಿ ಜಿಲ್ಲೆಗೆ 4234 ಕೋಟಿ ರೂ. ಕಾಮಗಾರಿ
ಅದಿರು ಮಾರಾಟದಿಂದ ಗಣಿ ಮಾಲೀಕರಿಂದ ಇಲ್ಲಿಯವರೆಗೆ ಸುಮಾರು 25 ಸಾವಿರ ಕೋಟಿ ರೂ.ಗಳು ಸಂಗ್ರಹವಾಗಿದೆ. ಈವರೆಗೆ ಓವರ್ ಸೈಟ್ ಅಥಾರಿಸಿ ನಡೆಸಿರುವ ಹತ್ತು ಸಭೆಗಳಲ್ಲಿ 317 ಕಾಮಗಾರಿಗಳ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ಬಳ್ಳಾರಿ ಮತ್ತು ವಿಜಯನಗರ ಅವಳಿಗೆ ಜಿಲ್ಲೆಗೆ ಸುಮಾರು 4234 ಕೋಟಿ ರೂ.ಗಳ 139 ಕಾಮಗಾರಿಗಳು (ಬಳ್ಳಾರಿಯ 94 ಕಾಮಗಾರಿ, ವಿಜಯನಗರದ 45 ಕಾಮಗಾರಿಗಳು), ಚಿತ್ರದುರ್ಗ ಜಿಲ್ಲೆಯ 1986 ಕೋಟಿ ರೂ.ಗಳ 104 ಕಾಮಗಾರಿಗಳಿಗೆ, ತುಮಕೂರು ಜಿಲ್ಲೆಯ 1363 ಕೋಟಿ ರೂ.ಗಳ 72 ಕಾಮಗಾರಿಗಳಿಗೆ ಅನುಮೋದನೆ ನೀಡಿದೆ.
ಪರಿಸರ ಪುನಶ್ಚೇತನದ ಉದ್ದೇಶದಿಂದ ಗಣಿಬಾಧಿತ ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಯ ಗಣಿಗಾರಿಕೆಯಿಂದ ಹಾನಿಯಾದ ಪರಿಸರ ಪುನಚ್ಚೇತನ, ಸಾರಿಗೆ ಮತ್ತು ಸಂಪರ್ಕ, ಶಿಕ್ಷಣ, ಕೃಷಿ ಮತ್ತು ಪೂರಕ ಚಟುಚಟಿಕೆ ಆದ್ಯತೆ ನೀಡಲಾಗಿದೆ. ಅಕ್ರಮ ಗಣಿಗಾರಿಕೆಯಿಂದಾಗಿ ಪರಿಸರಕ್ಕೆ ಸಾಕಷ್ಟು ಹಾನಿಯಾಗಿರುವ ವರದಿಗಳ ಹಿನ್ನಲೆಯಲ್ಲಿ ಈವರೆಗೆ ಅನುಮೋದಿತ ಕಾಮಗಾರಿಗಳಲ್ಲಿ ಸುಮಾರು 1204 ಕೋಟಿಗಳ ಹಣವನ್ನು ಪರಿಸರ ಪುನಶ್ಚೇತನಕ್ಕೆ ಮೀಸಲಿಟ್ಟಿದೆ, ಇಲ್ಲಿನ ಅರಣ್ಯ ಮತ್ತು ಗಣಿ ಬಾಧಿತ ಹಳ್ಳಿಗಳ ಪರಿಸರ ಪುನಶ್ಚೇತನಕ್ಕೆ ಆದ್ಯತೆ ನೀಡಲಾಗಿದೆ.
ಸಾರಿಗೆ ಸಂಪರ್ಕಕ್ಕೆ 1400 ಕೋಟಿ ಮೀಸಲು
ಅದಿರು ಲಾರಿಗಳ ಸಂಚಾರದಿಂದ ರಸ್ತೆಗಳು ಹದಗೆಟ್ಟಿರುವ ಜತೆಗೆ ಧೂಳಿನಿಂದಾಗಿ ಪರಿಸರದ ಹಾನಿಯೊಂದಿಗೆ ಜನರ ಆರೋಗ್ಯದ ಮೇಲೆ ಗಾಢ ಪರಿಣಾಮ ಬೀರಿತ್ತು. ಅಸ್ತಮಾ ಸೇರಿದಂತೆ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿತ್ತು. ಗ್ರಾಮಗಳ ಮನೆಗಳು ಸೇರಿದಂತೆ ಗಿಡ ಮರಗಳ ಬಣ್ಣ ಹಸಿರು ಬದಲಾಗಿ ಕೆಂಧೂಳಿನಿಂದ ಕೂಡಿತ್ತು. ಈ ಕಾರಣಕ್ಕಾಗಿ ಆದ್ಯತೆಯ ಮೇರೆಗೆ ಸುಮಾರು 1458 ಕೋಟಿ ರೂ.ಗಳನ್ನು ಸಾರಿಗೆ ಸಂಪರ್ಕ ಸುಧಾರಿಸಲು ಮೀಸಲಿಟ್ಟಿದೆ.
ಶಿಕ್ಷಣ ಮತ್ತು ಕೃಷಿಗೆ ಆದ್ಯತೆ
ಶಿಕ್ಷಣದಿಂದ ಇಲ್ಲಿನ ಜನರ ಬದುಕು ಸುಧಾರಿಸಲು ಸಾಧ್ಯವೆಂದು ಮೂರನೇ ಆದ್ಯತೆಯನ್ನು ಶಿಕ್ಷಣಕ್ಕೆ ನೀಡಿದೆ. ಸುಮಾರು 826 ಕೋಟಿಯನ್ನು ಈಗಿರುವ ಶಾಲಾ-ಕಾಲೇಜುಗಳ ಗುಣಾತ್ಮಕತೆ ಹೆಚ್ಚಿಸಲು ಆದ್ಯತೆ ನೀಡ ಲಾಗಿದೆ. ಕೃಷಿ ಮತ್ತು ಕೃಷಿಯ ಪೂರಕ ಚಟುವಟಿಕೆಗೆ 685 ಕೋಟಿ ರೂ.ಗಳು, ರೈಲ್ಬೆ ಸೌಲಭ್ಯಕ್ಕಾಗಿ 535 ಕೋಟಿ ರೂ.ಗಳು, ಅಂತರ್ಜಲ ಮಟ್ಟ ಸುಧಾರಿಸಲು, ನೀರಾವರಿಯನ್ನು ಪ್ರೋತ್ಸಾಹಿಸಲು ನೀರಾವರಿಗೆ 577 ಕೋಟಿ ರೂ.ಗಳನ್ನು ನೀಡಲಾಗಿದೆ.
ಯಾವ ವಲಯಕ್ಕೆ ಎಷ್ಟು ಮೀಸಲು?
ಅನುಮೋದಿತ ಕಾಮಗಾರಿಗಳಲ್ಲಿ ಬೇರೆ ಬೇರೆ ಕ್ಷೇತ್ರಗಳಿಗೆ ಅನುದಾನ ಮೀಸಲು ಇಡಲಾಗಿದೆ.
- ಆರೋಗ್ಯಕ್ಕೆ 414 ಕೋಟಿ ರೂ.ಗಳು
- ಕುಡಿಯುವ ನೀರಿಗೆ 270. ಕೋಟಿ ರೂ.ಗಳು
- ಗ್ರಾಮೀಣ ರಸ್ತೆ ಅಭಿವೃದ್ಧಿಗೆ 400 ಕೋಟಿ ರೂ.ಗಳು
- ಪಶುಸಂಗೋಪನೆಗೆ 235 ಕೋಟಿ ರೂ.ಗಳು
- ಗಣಿ ಬಾಧಿತರಿಗೆ ಸೂರೊದಗಿಸಲು 285 ಕೋಟಿ ರೂ.
- ಕೌಶಲ್ಯ ಅಭಿವೃದ್ಧಿಗೆ 150 ಕೋಟಿ ರೂ.ಗಳು
- ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೆ 307 ಕೋಟಿ ರೂ.
- ನೈರ್ಮಲ್ಯಕ್ಕೆ 118. ಕೋಟಿ ರೂ.ಗಳು
- ಮೀನುಗಾರಿಕೆ ಉತ್ತೇಜಿಸಲು 81 ಕೋಟಿ ರೂ.ಗಳು
- ತೋಟಗಾರಿಕೆಗೆ 28 ಕೋಟಿ ರೂ.ಗಳು
- ಜನಸಂಖ್ಯೆ ನಿಯಂತ್ರಣಕ್ಕೆ 9 ಕೋಟಿ ರೂ.
ಇದನ್ನೂ ಓದಿ: Mining fund : ಗಣಿ ನಿಧಿ ಬಳಕೆಗೆ OA ಹದ್ದಿನ ಕಣ್ಣು; ಪ್ರತಿ ಕಾಮಗಾರಿ ಮೇಲೆ ಡಿಸಿ ನಿಗಾ
ಹಂತ ಹಂತವಾಗಿಯೇ ಸಂಗ್ರಹಗೊಂಡಿರುವ ಹಣವನ್ನು ಸಿಇಸಿ ಮತ್ತು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನೀಡಿರುವ ಆದೇಶದ ಮಾರ್ಗಸೂಚಿಯಂತೆ ಬಳಕೆ ಮಾಡಿಕೊಂಡು ಹೋಗುವ ಕೆಲಸವನ್ನು ಓಎ ಮತ್ತು ಕೆಎಂಇಆರ್‌ಸಿ ಮಾಡಲಿದೆ.