ಬೆಂಗಳೂರು: ರಾಜ್ಯದಲ್ಲಿ ಮರಳು, ಗಣಿ ಮಾಫಿಯಾದ (Mining Mafia) ಅಟ್ಟಹಾಸ ಜೋರಾಗಿದೆ. ಕೆಲವು ದಿನಗಳ ಹಿಂದಷ್ಟೇ ಕಲಬುರಗಿ ಜಿಲ್ಲೆಯ ಅಫಜಲಪುರದಲ್ಲಿ ಮರಳು ಮಾಫಿಯಾದ ದುಷ್ಟರು ಹೆಡ್ ಕಾನ್ಸ್ಟೇಬಲ್ ಮಯೂರ್ ಚೌಹಾಣ್ ಎಂಬವರನ್ನು ಟ್ರ್ಯಾಕ್ಟರ್ ಹತ್ತಿಸಿ ಕೊಲೆ ಮಾಡಿದ್ದರು. ಇನ್ನೊಂದು ಕಡೆ ಅಧಿಕಾರಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಓಡಿದ ಜೆಸಿಬಿಯೊಂದು ಬೋರ್‌ವೆಲ್ ಕೆಲಸ ಮುಗಿಸಿ ಜಮೀನಿನಲ್ಲಿ ಮಲಗಿದ್ದ ಮೂವರು ಕಾರ್ಮಿಕರನ್ನು ಬಲಿ ಪಡೆದಿತ್ತು. ಇದೀಗ ಚಿಕ್ಕಬಳ್ಳಾಪುರದಲ್ಲಿ ಇನ್ನೊಂದು ಘಟನೆ ನಡೆದಿದ್ದು, ಗಣಿ ಮಾಫಿಯಾ ಒಬ್ಬ ರೈತನನ್ನು ಬಲಿ (Farmer killed) ಪಡೆದಿದೆ.
ಚಿಕ್ಕಬಳ್ಳಾಪುರ ತಾಲ್ಲೂಕಿನ ಗುಮ್ಮಲಾಪುರ ಬೆಟ್ಟದ ತಪ್ಪಲಿನಲ್ಲಿ ಗಣಿಗಾರಿಕೆ ದಂಧೆಕೋರರು ಅಟ್ಟಹಾಸ ಮೆರೆದಿದ್ದು, ಅಡ್ಡಗಲ್ಲು ಗ್ರಾಮದ ಎಬಿ ರಾಘವೇಂದ್ರ ಎಂಬವರನ್ನು ಕೊಲೆ ಮಾಡಿದ್ದಾರೆ ಎಂಬ ಸಂಶಯವಿದೆ.
ಇತ್ತೀಚೆಗೆ ಅವರ ಮೇಲೆ ಗಣಿಗಾರಿಕೆ ಲಾರಿಯನ್ನು ಹತ್ತಿಸಲಾಗಿತ್ತು. ಜೂನ್ 17ರಂದು ನಡೆದ ಘಟನೆಯ ಬಳಿಕ ಅವರು ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಪ್ರಾಣ ಕಳೆದುಕೊಂಡಿದ್ದಾರೆ. ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಸೋಮವಾರ ರಾತ್ರಿ ಅವರು ಮೃತಪಟ್ಟಿದ್ದಾರೆ.
ತಮ್ಮ ಜಮೀನಿನಲ್ಲಿ ಗಣಿಗಾರಿಕೆ ಲಾರಿ ಹೋಗಬಾರದೆಂದು ಅಡ್ಡಿಪಡಿಸಿದ್ದಕ್ಕಾಗಿ ಅವರನ್ನು ಲಾರಿ ಹತ್ತಿಸಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಅಫಜಲಪುರದಲ್ಲಿ ಆಗಿದ್ದೇನು?
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ನಾರಾಯಣಪುರ ಬಳಿ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ ಟ್ರ್ಯಾಕ್ಟರ್ ಹರಿದು ಕರ್ತವ್ಯ ನಿರತ ಪೊಲೀಸ್ ಪೇದೆ ಸ್ಥಳದಲ್ಲೇ ಮೃತಪಟ್ಟಿದ್ದರು.
ಚೌಡಾಪುರ ತಾಂಡಾ ನಿವಾಸಿಯಾಗಿರುವ ಮಯೂರ ಅವರು ನೆಲೋಗಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಗುರುವಾರ ರಾತ್ರಿ 10.45 ರ ಸುಮಾರಿಗೆ ಕರ್ತವ್ಯದಲ್ಲಿದ್ದಾಗ ನೆಲೋಗಿಯ ಬಳಿ ಟ್ರ್ಯಾಕ್ಟರ್ ಹರಿದು ಮೃತಪಟ್ಟಿರುವ ಘಟನೆ ನಡೆದಿದೆ. ಇದು ಅಪಘಾತವೇ ಅಥವಾ ಅಕ್ರಮ ಮರಳು ಸಾಗಾಟಗಾರರು ಹತ್ಯೆ ಮಾಡಿದ್ದರು.
ಎಸ್‌ಪಿ ಇಷಾಪಂತ್ ಅವರ ಪ್ರಕಾರ, ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ಪೆಟ್ರೋಲಿಂಗ್ ಹಾಕಲಾಗಿತ್ತು. ಪೆಟ್ರೋಲಿಂಗ್‌ಗಾಗಿ ಹೆಡ್ ಕಾನ್ಸ್ಟೇಬಲ್ ಮಯೂರ್ ಮತ್ತು ಪಿಸಿ ಪ್ರಮೋದ್ ಅವರನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿತ್ತು. ಅಕ್ರಮ ಮರಳು ಟ್ರ್ಯಾಕ್ಟರ್ ಬರುತ್ತಿದ್ದಾಗ ಪೊಲೀಸರು ನಿಲ್ಲಿಸಲು ಹೇಳಿದ್ದಾರೆ. ಆದರೂ ಮರಳುಕೋರರು ಟ್ರ್ಯಾಕ್ಟರ್ ಓಡಿಸಿಕೊಂಡು ಹೋಗಿದ್ದಾರೆ. ಈ ವೇಳೆ ಬೈಕ್ ಮೂಲಕ ಮಯೂರ್ ಮತ್ತು ಪ್ರಮೋದ್ ಇಬ್ಬರು ಟ್ರ್ಯಾಕ್ಟರ್ ಅನ್ನು ಬೆನ್ನಟ್ಟಿದ್ದಾರೆ. ಈ ವೇಳೆ ಹೆಡ್ ಕಾನ್ಸ್ಟೇಬಲ್ ಮಯೂರ್ ಮೇಲೆ ಟ್ರ್ಯಾಕ್ಟರ್ ಹರಿದು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಟ್ರ್ಯಾಕ್ಟರ್ ಚಾಲಕನನ್ನು ಮೊದಲು ಬಂಧಿಸಲಾಗಿತ್ತು. ಇದಾದ ಮೇಲೆ ಮಾಲೀಕ ಸಾಯಿಬಣ್ಣನನ್ನು ಬಂಧಿಸಿ ಕರೆ ತರುತ್ತಿದ್ದಾಗ ಆತ ಪೊಲೀಸರ ಮೇಲೆಯೇ ದಾಳಿ ಮಾಡಿದ್ದ. ಆಗ ಆತನ ಮೇಲೆ ಫೈರಿಂಗ್ ಮಾಡಲಾಗಿತ್ತು.
ಕಲಬುರಗಿಯ ಈ ವಿದ್ಯಮಾನದ ಬಗ್ಗೆ ರಾಜಕೀಯ ಆರೋಪ ಪ್ರತ್ಯಾರೋಪಗಳು ನಡೆದಿದ್ದು, ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಮಾಫಿಯಾಗಳು ಚಿಗಿತುಕೊಂಡಿವೆ ಎಂಬ ಆರೋಪ ಕೇಳಿಬಂದಿತ್ತು.
ಇದನ್ನೂ ಓದಿ : Sand Mafia: ಕಾನ್ಸ್ಟೇಬಲ್ ಹತ್ಯೆ ಪ್ರಕರಣ; ಕರ್ತವ್ಯ ಲೋಪದಲ್ಲಿ 3 ಪೊಲೀಸರ ಅಮಾನತು