Site icon Vistara News

Deepavali Gift | ಸ್ಥಳೀಯ ಜನಪ್ರತಿನಿಧಿಗಳಿಗೆ ಸಚಿವ ಆನಂದ್‌ ಸಿಂಗ್‌ ಗಿಫ್ಟ್‌: 1 ಲಕ್ಷ ರೂ. ನಗದು, ಅರ್ಧ ಕೆಜಿ ಬೆಳ್ಳಿ!

anand sing gift

ಹೊಸಪೇಟೆ (ವಿಜಯನಗರ): ವಿಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳ ಸದಸ್ಯರಿಗೆ ದೀಪಾವಳಿಯ ಬಂಪರ್‌ ಕೊಡುಗೆ ಸಿಕ್ಕಿದೆ. ಪ್ರವಾಸೋದ್ಯಮ ಸಚಿವ, ಕ್ಷೇತ್ರದ ಶಾಸಕ ಆನಂದ್‌ ಸಿಂಗ್‌ ಅವರು ಈ ಬಂಪರ್ ಕೊಡುಗೆ ನೀಡಿದ್ದಾರಂತೆ. ಇದು ರಾಜಕೀಯ ವಲಯದಲ್ಲಿ ಮತ್ತು ಕ್ಷೇತ್ರದಲ್ಲಿ ಪರ-ವಿರೋಧ ಚರ್ಚೆಗೆ‌ ಕಾರಣವಾಗಿದೆ.

ಗಿಫ್ಟ್‌ನಲ್ಲಿ ಏನೇನಿತ್ತು?

ಯಾರಿಗೆ ಎಷ್ಟು?
ನಗರಸಭೆ ಸದಸ್ಯರಿಗೆ:
ಹೊಸಪೇಟೆಯ ನಗರಸಭೆಯ 35 ಜನ ಪೈಕಿ 30 ಜನರಿಗೆ ಪಕ್ಷಾತೀತವಾಗಿ ಪ್ರತಿಯೊಬ್ಬರಿಗೆ 1 ಲಕ್ಷ ರೂ. ನಗದು, ಅರ್ಧ ಕೆಜಿ ಬೆಳ್ಳಿ, ರೇಷ್ಮೆ ಸೀರೆ, ಪಂಚೆ, ಅಂಗಿ, ಮುತ್ತಿನ ಹಾರ, ಡ್ರೈ ಫ್ರೂಟ್ ಡಬ್ಬಿ ಒಳಗೊಂಡ ಕಿಟ್ ಪ್ರತಿ ಮನೆಗೆ ತಲುಪಿಸಿದ್ದಾರೆ. ಐದು ಜನ ನಗರಸಭೆ ಸದಸ್ಯರು ತಿರಸ್ಕರಿಸಿದ್ದಾರೆಂದು ಹೇಳಲಾಗುತ್ತಿದೆ.

ಪಂಚಾಯಿತಿ ಸದಸ್ಯರಿಗೆ: ಪಂಚಾಯಿತಿಯ ಒಬ್ಬ ಸದಸ್ಯರಿಗೆ ತಲಾ ₹27 ಸಾವಿರ ನಗದು, 500 ಗ್ರಾಂ ಬೆಳ್ಳಿ, ರೇಷ್ಮೆ ಸೀರೆ, ಪಂಚೆ, ಅಂಗಿ, ಮುತ್ತಿನ ಹಾರ ಹಾಗೂ ಡ್ರೈ ಫ್ರೂಟ್ಸ್ ಡಬ್ಬಿ ಒಳಗೊಂಡ ಕಿಟ್‌ ಇದಾಗಿದೆ. ಅದರೊಂದಿಗೆ ದೀಪಾವಳಿ ಹಬ್ಬದ ಶ್ರೀ ಲಕ್ಷ್ಮಿ ಪೂಜಾ ಆಮಂತ್ರಣ ಪತ್ರಿಕೆ ಎಂದು ಬರೆದ ಆಹ್ವಾನ ಪತ್ರಿಕೆಯನ್ನೂ ನೀಡಲಾಗಿದೆ.

ಹೆಸರು ಹೇಳಲಿಚ್ಛಿಸದ ಕೆಲವು ಪಂಚಾಯಿತಿ ಸದಸ್ಯರು ಈ ವಿಷಯವನ್ನು ಶನಿವಾರ ಖಚಿತಪಡಿಸಿದ್ದಾರೆ. ಹೊಸಪೇಟೆ ತಾಲೂಕಿನಲ್ಲಿ ಒಟ್ಟು 14 ಗ್ರಾಮ ಪಂಚಾಯಿತಿಗಳಿದ್ದು 282 ಸದಸ್ಯರಿದ್ದಾರೆ. ವಿಜಯ ನಗರ ಕ್ಷೇತ್ರ ವ್ಯಾಪ್ತಿಯಲ್ಲಿ 10 ಗ್ರಾಮ ಪಂಚಾಯಿತಿಯ 182 ಸದಸ್ಯರಿಗೆ ಉಡುಗೊರೆ ನೀಡಿದ್ದಾರೆ.

ಸಚಿವರಿಂದ ಹಣ ಪಡೆದಿಲ್ಲ, ಸ್ವೀಟ್‌ ಮಾತ್ರ
‘ಸಚಿವ ಆನಂದ್‌ ಸಿಂಗ್‌ ಅವರು ದೀಪಾವಳಿ ಕೊಡುಗೆಯ ರೂಪದಲ್ಲಿ ನಗರಸಭೆಯ ಸದಸ್ಯರಿಗೆ ₹1 ಲಕ್ಷ ನಗದು, ಒಂದು ಕೆ.ಜಿ ಬೆಳ್ಳಿ, ರೇಷ್ಮೆ ಉಡುಪು ಕೊಟ್ಟಿದ್ದಾರೆ. ಆದರೆ, ನಾವು ಅದನ್ನು ತೆಗೆದುಕೊಂಡಿಲ್ಲ, ಆದರೆ ಸಿಹಿ ಅಷ್ಟೇ ಪಡೆದಿದ್ದೇವೆ’ ಎಂದು ಕೆಲ ಸದಸ್ಯರು ತಿಳಿಸಿದ್ದಾರೆ.

ಮತದಾರರಿಗೆ ದ್ರೋಹ ಮಾಡೋದಿಲ್ಲ
‘ಎಲ್ಲ ನಗರಸಭೆ ಸದಸ್ಯರು ಉಡುಗೊರೆ ಪಡೆದಿದ್ದಾರೆ ಎಂಬುದು ಸುಳ್ಳು, ಇದನ್ನು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ನಾವು ಯಾರಿಗೂ ಮಾರಾಟವಾಗುವವರು ಅಲ್ಲ. ನಮ್ಮ ವಾರ್ಡ್‌ ಮತದಾರರಿಗೆ ಎಂದೂ ಮೋಸ, ದ್ರೋಹ ಮಾಡೋದಿಲ್ಲ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.

Exit mobile version