ಶಿವಮೊಗ್ಗ: ಕೆ.ಎಸ್.ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದು ಬಿಜೆಪಿಯ ನಿರ್ಧಾರವಲ್ಲ, ಇದು ಅವರ ವೈಯಕ್ತಿಕ ನಿರ್ಧಾರವಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಗುತ್ತಿಗೆದಾರ ಸಂತೋಷ್ ಪಾಟೀಲ್ ಅನುಮಾನಾಸ್ಪದ ಸಾವಿನ ಪ್ರಕರಣ ಸಂಬಂಧ ನಗರದಲ್ಲಿಂದು ಪ್ರತಿಕ್ರಿಯಿಸಿದ ಸಚಿವರು, ಪಕ್ಷಕ್ಕೆ ಮುಜುಗರ ಆಗಬಾರದೆಂದು ರಾಜೀನಾಮೆ ಕೊಡುತ್ತಿರುವುದಾಗಿ ಕೆ. ಎಸ್. ಈಶ್ವರಪ್ಪ ತಿಳಿಸಿದ್ದಾರೆ. ರಾಜೀನಾಮೆ ನೀಡುವಂತೆ ಪಕ್ಷದ ಹೈಕಮಾಂಡ್ ಇವರಿಗೆ ಒತ್ತಡ ಹೇರಿಲ್ಲ ಎಂದು ಸ್ಪಷ್ಟಪಡಿಸಿದ್ದು, ನ್ಯಾಯಯುತ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Santosh Suicide Case: ರಾಜೀನಾಮೆ ಘೋಷಿಸಿದ ಈಶ್ವರಪ್ಪ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರ ಹೆಸರನ್ನು ಉಲ್ಲೇಖಿಸಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಕಳೆದ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದರು.
ಇದು ಆಡಳಿತ ಹಾಗೂ ವಿಪಕ್ಷಗಳ ನಡುವಿನ ವಾಕ್ಸಮರಕ್ಕೂ ಕಾರಣವಾಗಿದೆ. ಇದೇ ವಿಚಾರವನ್ನಿಟ್ಟು ಕಾಂಗ್ರೆಸ್ ಪ್ರತಿಭಟನೆ ನಡೆಸುವ ಮೂಲಕ ಈಶ್ವರಪ್ಪ ಅವರ ರಾಜೀನಾಮೆಗೆ ಒತ್ತಾಯಿಸಿತ್ತು.