Site icon Vistara News

Suicide case | ಲಿಂಬಾವಳಿ ಬಗ್ಗೆ ತನಿಖೆ ನಡೆಸಬಹುದು, ತಪ್ಪಿಲ್ಲದೆ ಬಂಧಿಸಲು ಸಾಧ್ಯವಿಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ

Araga jnanendra Limbavali

ಶಿವಮೊಗ್ಗ: ಬೆಂಗಳೂರಿನ ಉದ್ಯಮಿ ಪ್ರದೀಪ್ ಆತ್ಮಹತ್ಯೆ (Suicide case) ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಅರವಿಂದ ಲಿಂಬಾವಳಿಯವರನ್ನು ತನಿಖೆಗೆ ಒಳಪಡಿಸಲಾಗುವುದು. ಆದರೆ ತಪ್ಪಿಲ್ಲದೆ ಅವರನ್ನು ಬಂಧಿಸಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಬುಧವಾರ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರವಿಂದ ಲಿಂಬಾವಳಿಯವರು ಶಾಸಕರಾಗಿರಲಿ, ಸಾಮಾನ್ಯ ವ್ಯಕ್ತಿಯಾಗಿರಲಿ. ಕಾನೂನು ಪ್ರಕಾರವೇ ಕ್ರಮ ತೆಗೆದುಕೊಳ್ಳಲಾಗುತ್ತದೆ. ಯಾವ ಒತ್ತಡವೂ ಇಲ್ಲ. ಆದರೆ ಕಾಂಗ್ರೆಸ್ಸಿಗರು ಈ ವಿಷಯಕ್ಕೆ ಸಂಬಂಧಿಸಿದಂತೆ ಅಭಿಯಾನ ಮಾಡುವುದಾದರೆ ಮಾಡಲಿ. ಡೆತ್‍ನೋಟ್‍ನಲ್ಲಿ ಅವರ ಹೆಸರು ಬರೆದಿಟ್ಟ ಮಾತ್ರಕ್ಕೆ ಬಂಧಿಸಲು ಆಗುವುದಿಲ್ಲ. ಹಾಗೆಯೇ ತಪ್ಪಿತಸ್ಥರನ್ನು ಬಂಧಿಸದೆ ಇರಲೂ ಕೂಡ ಸಾಧ್ಯವಿಲ್ಲ. ಇದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುವುದು ಎಂದರು.

ಉದ್ಯಮಿ ಪ್ರದೀಪ್‌ ಎಂಬವರು ಅರವಿಂದ ಲಿಂಬಾವಳಿ ಸೇರಿದಂತೆ ಆರು ಮಂದಿಯ ಹೆಸರನ್ನು ಡೆತ್‌ ನೋಟ್‌ನಲ್ಲಿ ಬರೆದಿಟ್ಟು ಕಾರಿನಲ್ಲಿ ಗುಂಡು ಹಾರಿಸಿಕೊಂಡು ಪ್ರಾಣ ಕಳೆದುಕೊಂಡಿದ್ದರು. ಪೊಲೀಸರು ತಯಾರಿಸಿದ ಎಫ್‌ಐಆರ್‌ನಲ್ಲಿ ಅರವಿಂದ ಲಿಂಬಾವಳಿ ಅವರನ್ನು ಮೂರನೇ ಆರೋಪಿ ಎಂದು ಗುರುತಿಸಲಾಗಿದೆ. ಇದು ಕಾಂಗ್ರೆಸ್‌ ಕೈಗೆ ಒಂದು ಅಸ್ತ್ರವಾಗಿ ದೊರಕಿದೆ. ಈ ಹಿನ್ನೆಲೆಯಲ್ಲಿ ಸಚಿವರ ಹೇಳಿಕೆ ಮಹತ್ವ ಪಡೆದಿದೆ.

ಪೊಲೀಸ್‌ ಅಧಿಕಾರಿಗಳ ವೇತನ ವ್ಯತ್ಯಾಸ
ಹಿರಿಯ ಪೊಲೀಸ್ ಅಧಿಕಾರಿಗಳ ವೇತನದಲ್ಲಿ ವ್ಯತ್ಯಾಸ ಇರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಔರಾದ್ಕರ್ ಅವರ ವರದಿಯ ಪ್ರಕಾರ ಸ್ವಲ್ಪ ವ್ಯತ್ಯಾಸ ಇರುವುದು ನಿಜ. ಆದರೆ ಶೇ.80ರಷ್ಟು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಲಾಭ ಸಿಕ್ಕಿದೆ. ಅನ್ಯಾಯ ಆದವರಿಗೆ ಭತ್ಯೆಯಲ್ಲಿ ಸರಿಪಡಿಸಲಾಗುವುದು ಎಂದರು.

ವಿಜಯಪುರದ ಶ್ರೀ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ನಿಧನರಾದ ನಂತರ ಶಾಂತಿ ಕಾಪಾಡುವುದಕ್ಕಾಗಿ 1500 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಜನರ ಭಾವೋದ್ವೇಗದ ಸಂದರ್ಭದಲ್ಲಿ ಶಾಂತಿ ಕಾಪಾಡಬೇಕೆಂಬುದು ಇದರ ಉದ್ದೇಶವಾಗಿತ್ತು. ಇದಕ್ಕಾಗಿ ಸಹಕರಿಸಿದ ಪೊಲೀಸರಿಗೆ ಅಭಿನಂದನೆ ಎಂದರು.

ಮುರುಘಾ ಶ್ರೀ ತನಿಖೆಯಲ್ಲಿ ಹಸ್ತಕ್ಷೇಪವಿಲ್ಲ
ಮುರುಘಾಶ್ರೀಗಳ ವಿರುದ್ಧ ಸಾಕ್ಷ್ಯಾಧಾರ ಇಲ್ಲ ಎಂಬ ವಿಷಯ ನನಗೆ ಗೊತ್ತಿಲ್ಲ. ಅಂತೆಕಂತೆಗಳ ವಿಷಯ ಬೇಡ. ಈಗಾಗಲೇ ಶ್ರೀಗಳ ಬಂಧನವಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ. ಪ್ರಭಾವ ಕೂಡ ಬೀರುವುದಿಲ್ಲ. ಪೊಲೀಸರಿಗೆ ಮುಕ್ತ ಅವಕಾಶ ನೀಡಲಾಗಿದೆ. ತನಿಖೆ ಕೂಡ ಸರಿಯಾದ ಹಾದಿಯಲ್ಲಿದೆ ಎಂದರು. ಮುರುಘಾಶ್ರೀಗಳು ಸಂತ್ರಸ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿರುವ ಬಗ್ಗೆ ಯಾವುದೇ ವೈದ್ಯಕೀಯ ದಾಖಲೆಗಳಿಲ್ಲ ಎಂದು ವರದಿಯಾದ ಹಿನ್ನೆಲೆಯಲ್ಲಿ ಸಚಿವರು ಈ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ | Araga Jnanendra | ಆರಂಭದಲ್ಲಿ ಸ್ವಲ್ಪ ಮುಜುಗರ ಆಗಿದ್ದು ನಿಜ, ಈಗ Expert ಆಗಿದ್ದೇನೆ ಎಂದ ಗೃಹ ಸಚಿವ ಆರಗ ಜ್ಞಾನೇಂದ್ರ

Exit mobile version