Site icon Vistara News

ತಮ್ಮ ಅವಧಿಯ ಲೆಕ್ಕ ತೆಗೆದ ಕೂಡಲೆ, ʼಅದೆಲ್ಲ ಈಗೇಕೆ?ʼ ಎಂದು ಎದ್ದುನಿಂತ ಸಿದ್ದರಾಮಯ್ಯ: ಅಶೋಕ್‌-ಸಿದ್ದು ಜಟಾಪಟಿ

Siddaramaiah assembly session

ವಿಧಾನಸಭೆ: ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ತಿಂಗಳಿಂದ ಅತಿವೃಷ್ಟಿಯಿಂದಾಗಿರುವ ಹಾನಿಯ ಕುರಿತು ಸರ್ಕಾರದ ಪರವಾಗಿ ಕಂದಾಯ ಸಚಿವ ಆರ್‌. ಅಶೊಕ್‌ ಉತ್ತರ ನೀಡುವ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪದೇಪದೆ ಎದ್ದುನಿಂತು, ಅದೆಲ್ಲ ಯಾಕೆ, ಈ ಮಾಹಿತಿ ಏನು ಉಪಯೋಗ ಎಂದು ಪ್ರಶ್ನಿಸಿದ ಪ್ರಸಂಗ ನಡೆಯಿತು.

ಕಳೆದ ವಾರಪೂರ್ತಿ ವಿಧಾನಸಭೆಯಲ್ಲಿ ಅತಿವೃಷ್ಟಿ ಕುರಿತು ಚರ್ಚೆ ನಡೆದಿದೆ. ಬಿಜೆಪಿಯಿಂದ 6 ಸದಸ್ಯರು ಒಟ್ಟು 42 ನಿಮಿಷ , ಜೆಡಿಎಸ್‌ನಿಂದ 12 ಸದಸ್ಯರು ಒಟ್ಟು 4.49 ಗಂಟೆ, ಕಾಂಗ್ರೆಸ್‌ನಿಂದ 16 ಸದಸ್ಯರು ಒಟ್ಟು 6.37 ಗಂಟೆ, ಇಬ್ಬರು ಪಕ್ಷೇತರ ಶಾಸಕರು ಒಟ್ಟು 36 ನಿಮಿಷ ಸೇರಿ ಒಟ್ಟು 36 ಸದಸ್ಯರು 12.44 ಗಂಟೆ ಚರ್ಚೆ ಮಾಡಿದ್ದಾರೆ. ಈ ಕುರಿತು ಸರ್ಕಾರದ ಪರವಾಗಿ ಕಂದಾಯ ಸಚಿವ ಆರ್‌. ಅಶೊಕ್‌ ಉತ್ತರ ನೀಡಲು ಆರಂಭಿಸಿದರು.

ಪ್ರಾರಂಭದಲ್ಲಿ, ರಾಜ್ಯದಲ್ಲಿ ಮಳೆಯಿಂದಾದ ಅನಾಹುತಗಳನ್ನು ವಿವರಿಸಿದ ಅಶೋಕ್‌, ನಂತರ ಸರ್ಕಾರ ಕೈಗೊಂಡ ಕ್ರಮಗಳನ್ನು ವಿವರಿಸಲು ಮುಂದಾದರು. ಮನೆ ಹಾನಿಗಳಿಗೆ ಪರಿಹಾರ ನೀಡಲಾಗಿದೆ. ಈ ಹಿಂದೆ ಗಂಜಿ ಕೇಂದ್ರ ಎಂದು ಹೆಸರಿತ್ತು, ಅದನ್ನು ಈಗ ಕಾಳಜಿ ಕೇಂದ್ರ ಎಂದು ಬದಲಾವಣೆ ಮಾಡಲಾಗಿದೆ. ಕಾಳಜಿ ಕೇಂದ್ರದಿಂದ ಮನೆಗೆ ಹೋಗುವಾಗ ಡ್ರೈ ಕಿಟ್‌ ನೀಡಲಾಗುತ್ತಿದೆ. ಕಾಳಜಿ ಕೇಂದ್ರಕ್ಕೆ ಬರುವವರ ಜತೆಗೆ ಕಾಳಜಿ ಕೇಂದ್ರಕ್ಕೆ ಬಾರದೆ ಅವರ ನೆಂಟರಿಷ್ಟರ ಮನೆಯಲ್ಲಿರುವವರಿಗೂ ನೀಡುತ್ತೇವೆ ಎಂದು ಅದರಲ್ಲಿ ನೀಡುತ್ತಿದ್ದ ಐಟಂ ಲಿಸ್ಟ್‌ ಓದಿದರು. ಈ ವೇಳೆ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ, ಈ ಹಿಂದೆಯೂ ಕೊಟ್ಟಿದೆ ಇದನ್ನೆಲ್ಲ ಎಂದರು.

ಪದೇಪದೆ ಸಿದ್ದರಾಮಯ್ಯ ಮಧ್ಯಪ್ರವೇಶ ಮಾಡುತ್ತಿದ್ದದ್ದನ್ನು ಗಮನಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಈ ಹಿಂದೆ ಕಾಳಜಿ ಕೇಂದ್ರಕ್ಕೆ ಬರುವವರಿಗೆ ಮಾತ್ರ ನೀಡಲಾಗುತ್ತಿತ್ತು. ಈಗ ಕಾಳಜಿ ಕೇಂದ್ರಕ್ಕೆ ಬಾರದೇ ಇರುವವರಿಗೂ ನೀಡುತ್ತಿದ್ದೇವೆ, ಆಹಾರ ಉತ್ಪನ್ನಗಳನ್ನು ಇನ್ನಷ್ಟು ಹೆಚ್ಚಳ ಮಾಡಿದ್ದೇವೆ ಎಂದು ಸಮರ್ಥನೆ ಮಾಡಿಕೊಂಡರು.

ಇದನ್ನೂ ಓದಿ | ವಿಮ್ಸ್‌ ಆಸ್ಪತ್ರೆಯಲ್ಲಿ ಮೃತಪಟ್ಟ ಮೂವರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಬೊಮ್ಮಾಯಿ

ನಂತರ, ವಿಪತ್ತು ನಿರ್ವಹಣಾ ಪರಿಹಾರದ (ಇನ್ಪುಟ್‌ ಸಬ್ಸಿಡಿ) ಕುರಿತು ಮಾಹಿತಿ ನೀಡಲು ಅಶೋಕ್‌ ಆರಂಭಿಸಿದರು. 2019ರಲ್ಲಿ 9,72, 517 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿತ್ತು, 6,71,341 ರೈತರ ಖಾತೆಗಳಿಗೆ ನೇರವಾಗಿ 1,232.22 ಕೋಟಿ ರೂ. ಪರಿಹಾರವನ್ನು ನೇರವಾಗಿ ಖಾತೆಗೆ ವರ್ಗಾವಣೆ ಮಾಡಲಾಗಿದೆ. 2020ರಲ್ಲಿ 19,68,247 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿತ್ತು, 12,00, 346 ರೈತರ ಖಾತೆಗಳಿಗೆ ನೇರವಾಗಿ 941.71 ಕೋಟಿ ರೂ. ಪರಿಹಾರವನ್ನು ನೇರವಾಗಿ ಖಾತೆಗೆ ವರ್ಗಾವಣೆ ಮಾಡಲಾಗಿದೆ. 2021ರಲ್ಲಿ 14,93,811 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿತ್ತು, 18, 56, 083 ರೈತರ ಖಾತೆಗಳಿಗೆ ನೇರವಾಗಿ 2,446.8 ಕೋಟಿ ರೂ. ಪರಿಹಾರವನ್ನು ನೇರವಾಗಿ ಖಾತೆಗೆ ವರ್ಗಾವಣೆ ಮಾಡಲಾಗಿದೆ. 2022ರಲ್ಲಿ ೧೧೬.೩೯ ಕೋಟಿ ರೂ. ಇನ್ಪುಟ್‌ ಸಬ್ಸಿಡಿ ನೀಡಲಾಗಿದೆ. ಒಟ್ಟು ನಾಲ್ಕು ವರ್ಷದಲ್ಲಿ 50,14,649 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿತ್ತು, 38,31,743 ರೈತರ ಖಾತೆಗಳಿಗೆ ನೇರವಾಗಿ 4,736.37 ಕೋಟಿ ರೂ. ಪರಿಹಾರವನ್ನು ನೇರವಾಗಿ ಖಾತೆಗೆ ವರ್ಗಾವಣೆ ಮಾಡಲಾಗಿದೆ ಎಂದು ವಿವರಣೆ ನೀಡಿದರು.

ರೈತರ ಖಾತೆಗಳಿಗೆ ಪರಿಹಾರ ನೀಡುವಲ್ಲಿ ತಮ್ಮ ಸರ್ಕಾರ ಶೀಘ್ರ ಕ್ರಮ ಕೈಗೊಂಡಿದೆ ಎನ್ನುವುದನ್ನು ವಿವರಿಸಲು ಅಶೋಕ್‌ ಮುಂದಾದರು. 2019, 2020, 2021ರಲ್ಲಿ ಮುಂಗಾರು ಹಾಗೂ ಹಿಂಗಾರು ಅತಿವೃಷ್ಟಿ ಹಾನಿ ಸಂದರ್ಭದಲ್ಲಿ ಎರಡು ತಿಂಗಳಲ್ಲಿ ಪರಿಹಾರ ನೀಡಲಾಗಿತ್ತು. ಆದರೆ ಈಗ 2022ರಲ್ಲಿ ಕೇವಲ ಒಂದು ತಿಂಗಳಲ್ಲಿ ಪರಿಹಾರ ನೀಡಿದ್ದೇವೆ ಎಂದರು. ಇಷ್ಟಕ್ಕೇ ಸುಮ್ಮನಾಗದೆ, ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಪರಹಾರವನ್ನು ನೀಡುತ್ತಿದ್ದ ಅವಧಿಯನ್ನು ವಿವರಿಸಿದರು. 2015ರಲ್ಲಿ 7 ತಿಂಗಳು, 2016ರಲ್ಲಿ 6 ತಿಂಗಳು, 2017ರಲ್ಲಿ 6 ತಿಂಗಳು, 2018ರಲ್ಲಿ 11 ತಿಂಗಳಿಗೆ ಪರಿಹಾರ ನೀಡಲಾಗಿತ್ತು. ಆದರೆ ನಮ್ಮ ಸರ್ಕಾರ ಕೇಚಲ ಒಂದು ತಿಂಗಳಲ್ಲಿ ನೀಡುತ್ತಿದೆ ಎಂದರು. ಇದು ಸಿದ್ದರಾಮಯ್ಯ ಅವರನ್ನು ಕೆರಳಿಸಿತು.

ರಾಜ್ಯದಲ್ಲಿ ಎಷ್ಟು ಬೆಳೆ ಹಾನಿ ಆಗಿದೆ, ಎಷ್ಟು ಪರಿಹಾರ ನೀಡಿದ್ದೀರ, ಎಷ್ಟು ಸರ್ವೇ ಆಗಿದೆ, ಎಷ್ಟು ಸರ್ವೇ ಬಾಕಿಯಿದೆ ಎಂಬ ಮಾಹಿತಿ ನೀಡಿದರೆ ಸಾಕು. ಹಿಂದೆ ಏನೇನು ಆಗಿತ್ತು ಎನ್ನುವುದನ್ನೆಲ್ಲ ಹೇಳಿದರೆ ಜನರಿಗೆ ಏಕೆ ಬೇಕು? ಜನರಿಗೆ ಏನು ಬೇಕೊ ಅದನ್ನು ಹೇಳಿ ಸಾಕು ಎಂದರು. ಸಿದ್ದರಾಮಯ್ಯ ಅವರ ಮಾತಿಗೆ, ಸ್ಪೀಕರ್‌ ಕುರ್ಚಿಯಲ್ಲಿದ್ದ ಕುಡಚಿ ಶಾಸಕ ಪಿ. ರಾಜೀವ್‌ ಸೇರಿ ಸದನದಲ್ಲಿದ್ದವರು ಮುಗುಳ್ನಕ್ಕು ಸುಮ್ಮನಾದರು. ಅಶೋಕ್‌ ಮಾತು ಮುಂದುವರಿಸಿದರು.

ನಾನೇನು ಅವರು ಮಾಡಿದ್ದು ತಪ್ಪು ಎನ್ನಲಿಲ್ಲ, ಸ್ಥಿತಿ ಏನಿತ್ತು ಎಂದು ಹೇಳಿದೆ ಅಷ್ಟೆ ಎಂದರು. ಈ ವೇಳೆ ಕೆಲ ಸದಸ್ಯರು ಎದ್ದು ನಿಂತು ಪ್ರಶ್ನೆ ಕೇಳಲು ಮುಂದಾದರು. ನಾನು ಒಂದಷ್ಟು ವಿಚಾರಕ್ಕೆ ಸಿದ್ಧವಾಗಿ ಬಂದಿರುತ್ತೇನೆ. ನೀವು ಮಧ್ಯೆ ಎದ್ದುನಿಂತು ಪ್ರಶ್ನೆ ಕೇಳಿದರೆ ತಪ್ಪಿಹೋಗುತ್ತದೆ, ಕೊನೆಗೆ ಪ್ರಶ್ನೆ ಕೇಳಿ, ನಾನು ಇಲ್ಲೇ ಇರುತ್ತೇನೆ ಎಂದರು. ಅಲ್ಲಿವರೆಗೆ ಸಿದ್ದರಾಮಯ್ಯ ಮಧ್ಯಪ್ರವೇಶಿಸಿದಾಗ ಅವರಿಗೆ ಹೇಳಲು ಆಗದ ಮಾತನ್ನು ಇತರೆ ಸದಸ್ಯರಿಗೆ ಹೇಳುವ ಮೂಲಕ ತಮ್ಮ ಕಾರ್ಯವನ್ನು ಸಾಧಿಸಿಕೊಂಡರು.

ಮಾತು ಮುಂದುವರಿಸಿದ ಅಶೋಕ್‌, ಕೇಂದ್ರ ವಿಪತ್ತು ಪರಿಹಾರ ನಿಧಿಯ ಕುರಿತು ಮಾಹಿತಿ ನೀಡಿದ ಅಶೋಕ್‌, 2014-15ರಲ್ಲಿ 271 ಕೋಟಿ ರೂ., 2015-16ರಲ್ಲಿ 207 ಕೋಟಿ ರೂ., 2017-18ರಲ್ಲಿ 913 ಕೋಟಿ ರೂ., 2020-21ರಲ್ಲಿ 689 ಕೋಟಿ ರೂ. ಹಾಗೂ 2021-22ರಲ್ಲಿ 1,623 ಕೋಟಿ ರೂ. ಸೇರಿ ಒಟ್ಟಾರೆ ನರೇಂದ್ರ ಮೋದಿಯವರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯಕ್ಕೆ ಒಟ್ಟು 11,630 ಕೋಟಿ ರೂ. ಪರಿಹಾರ ನೀಡಲಾಗಿದೆ. ಮನಮೋಹನ್‌ ಸಿಂಗ್‌ ಅವರ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ 3,233 ಕೋಟಿ ರೂ. ನೀಡಲಾಗಿತ್ತು, ಈಗ ಮೋದಿಯವರ ಸಮಯದಲ್ಲಿ 11,630 ಕೋಟಿ ರೂ. ನೀಡಲಾಗಿದೆ. ಇಷ್ಟೇ ವ್ಯತ್ಯಾಸ ಎಂದರು.

ಇದಕ್ಕೆ ಮತ್ತೆ ಕೋಪಗೊಂಡ ಸಿದ್ದರಾಮಯ್ಯ, ಆಗಿನ ಬಜೆಟ್‌ ಎಷ್ಟಿತ್ತು? ಆಗಿನ ತೆರಿಗೆ ಎಷ್ಟು ಸಂಗ್ರಹ ಆಗುತ್ತಿತ್ತು? ಆಗ ಹಣಕಾಸು ಆಯೋಗ ಯಾವುದಿತ್ತು? ಎಂಬುದನ್ನೆಲ್ಲ ಅವಲೋಕಿಸಬೇಕು ಎಂದರು. ಅಲ್ಲಿಗೆ ರಾಜ್ಯದ ಅತಿವೃಷ್ಟಿ ಕುರಿತು ಉತ್ತರವನ್ನು ಮುಕ್ತಾಯ ಮಾಡಿದರು.

ಇದನ್ನೂ ಓದಿ | Rain News | ಅತಿವೃಷ್ಟಿ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡ ಭೇಟಿ; 10 ದಿನದಲ್ಲಿ ಕೇಂದ್ರಕ್ಕೆ ವರದಿ

Exit mobile version