Site icon Vistara News

ಪ್ರತ್ಯೇಕ ರಾಜ್ಯವೆಂಬ ಹಗುರ ಮಾತು ಬೇಡ : ಕತ್ತಿ ಹೇಳಿಕೆಗೆ ಸಚಿವ ಅಶ್ವತ್ಥ್‌ ನಾರಾಯಣ ಅಸಮಾಧಾನ

ಆಶ್ವತ್ಥನಾರಾಯಣ

ಹಾಸನ: ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ಪ್ರತ್ಯೇಕ ರಾಜ್ಯ ಇನ್ನೊಂದು ಮತ್ತೊಂದು ಅಂತ ಹಗುರವಾಗಿ ಮಾತನಾಡಬಾರದು. ಅರಣ್ಯ ಸಚಿವ ಉಮೇಶ್ ಕತ್ತಿ ಅವರ ಪ್ರತ್ಯೇಕ ರಾಜ್ಯ ಹೇಳಿಕೆಯನ್ನು ಆರೂವರೆ ಕೋಟಿ ಜನರ ಪರವಾಗಿ ಖಂಡಿಸುತ್ತೇನೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಹೇಳಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅವರು ಇಂತಹ ಹೇಳಿಕೆಯನ್ನು ಕೊಡಬಾರದು. ರಾಜ್ಯವನ್ನು ನಾವು ನೀವು ರಚನೆ ಮಾಡಿರುವುದಲ್ಲ, ನಾಡಿನ ಹಿರಿಯರು ಹರಿದು ಹಂಚಿಹೋಗಿದ್ದ ಪ್ರದೇಶಗಳನ್ನು ಒಂದುಗೂಡಿಸಿ ಕರ್ನಾಟಕ ನಿರ್ಮಾಣ ಮಾಡಿದ್ದಾರೆ ಎಂದರು.

ಕತ್ತಿ ಅವರು ಮೊದಲಿನಿಂದಲೂ ಇಂತಹ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಇಂತಹ ಚಿಂತನೆ ಇಲ್ಲ. ಅವರದೇನಿದ್ದರೂ ಸಮಾಜ ಉತ್ತಮಗೊಳಿಸುವ ಆಲೋಚನೆ. ಕನ್ನಡನಾಡಿನ ವಿಭಜನೆ ಎನ್ನುವ ಪ್ರಶ್ನೆ ಇಲ್ಲ. ದಯವಿಟ್ಟು ಮಾತಿನಲ್ಲಿ ಪ್ರಧಾನಿ ಹೆಸರು ತರುವ ಪ್ರಯತ್ನ ಮಾಡುವುದು ಬೇಡ ಎಂದು ಮನವಿ ಮಾಡಿದರು.

ಎಚ್‌ಡಿಕೆ ಹೇಳಿಕೆಗೂ ವಾಸ್ತವಕ್ಕೂ ಸಂಬಂಧವಿಲ್ಲ

ಪ್ರಧಾನಮಂತ್ರಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಖರ್ಚು ಮಾಡಿದ ಹಣದಲ್ಲಿ ಒಂದು ಗ್ರಾ.ಪಂ ಉದ್ಧಾರ ಮಾಡಬಹುದಿತ್ತು ಎಂಬ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಪ್ರಧಾನಮಂತ್ರಿ ರಾಜ್ಯಕ್ಕೆ ಬರುವುದನ್ನು ಕೆಲವರು ಪ್ರಶ್ನೆ ಮಾಡುತ್ತಾರೆ, ಇವರು ಯಾವ ಪ್ರಜಾಪ್ರಭುತ್ವದಲ್ಲಿ ಇದ್ದಾರೆ ಅಂತ ಅರ್ಥ ಮಾಡಿಕೊಳ್ಳಲಿ. ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ದೇಶದ ಸುಧಾರಣೆ, ಬದಲಾವಣೆಗಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂಚೂಣಿಯಲ್ಲಿ ನಿಂತಿದ್ದಾರೆ ಎಂದು ನಾಡಿನ ಜನತೆಗೆ ಗೊತ್ತಿದೆ ಎಂದರು.

ಯಾರಾದರೂ ಜವಾಬ್ದಾರಿಯುತವಾಗಿ ಹೇಳಿಕೆ ಕೊಟ್ಟರೆ ಪ್ರತಿಕ್ರಿಯಿಸಬಹುದು. ಇಂತಹ ಹೇಳಿಕೆಗೆ ಏನೆಂದು ಪ್ರತಿಕ್ರಿಯಿಸಲಿ. ಮಾನ್ಯ ದೇವೇಗೌಡರಿಗೆ ಗೌರವ ಕೊಟ್ಟು, ಪ್ರತಿಯೊಂದು ವಿಚಾರದಲ್ಲೂ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವನ್ನು ಪ್ರಧಾನಿ ಮಾಡಿದ್ದಾರೆ. ದೇವೇಗೌಡರ ಜತೆ ಆತ್ಮೀಯತೆ, ಗೌರವ, ವಿಶ್ವಾಸವನ್ನು ಕೊಟ್ಟು ಉತ್ತಮವಾಗಿ ಆಡಳಿತ ನಡೆಸುತ್ತಿದ್ದಾರೆ. ಕುಮಾರಸ್ವಾಮಿ ಹೇಳಿಕೆಗೂ ವಾಸ್ತವಿಕತೆಗೂ ಸಂಬಂಧವಿಲ್ಲ. ಇಂತಹ ಹೇಳಿಕೆ ಕೊಡುವುದನ್ನು ಕುಮಾರಸ್ವಾಮಿ ಅವರು ನಿಲ್ಲಿಸಬೇಕು ಎಂದರು.

ಇದನ್ನೂ ಓದಿ | ಕರ್ನಾಟಕದಲ್ಲಿ ಕ್ಯಾಂಪಸ್‌ ತೆರೆಯಲು ವಿದೇಶಿ ವಿವಿಗಳ ಆಸಕ್ತಿ: ಸಚಿವ ಅಶ್ವತ್ಥನಾರಾಯಣ

Exit mobile version