ಬೆಂಗಳೂರು/ಮಂಡ್ಯ: ಕೃಷಿ ಸಚಿವ ಚಲುವರಾಯಸ್ವಾಮಿ (Minister Chaluvarayaswamy) ಅವರು ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ಸ್ವತಃ ಕೃಷಿ ಇಲಾಖೆಯ ಅಧಿಕಾರಿಗಳು (Agriculture department officers) ನೇರವಾಗಿ ರಾಜ್ಯಪಾಲರಿಗೇ ದೂರು (Complaint to Governor) ನೀಡಿರುವ ಪ್ರಕರಣವನ್ನು ಚಲುವರಾಯಸ್ವಾಮಿ ತಳ್ಳಿಹಾಕಿದ್ದು, “ಇದೊಂದು ಫೇಕ್ ಲೆಟರ್” ಎಂದು ಹೇಳಿದ್ದಾರೆ. ಅಲ್ಲದೆ, ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ತನಿಖೆ ಮಾಡಿಸೋಣ ಬಿಡಿ ಎಂದು ರಾಗ ಎಳೆದಿದ್ದಾರೆ.
ಸಚಿವ ಚಲುವರಾಯಸ್ವಾಮಿ ಈಗ ಇನ್ನೊಂದು ಹಗರಣದಲ್ಲಿ ಸಿಕ್ಕಿಬಿದ್ದಂತಾಗಿದೆ. ಬಸ್ ಚಾಲಕನ ಆತ್ಮಹತ್ಯೆ, ಬೆದರಿಕೆ ಕರೆ ಮತ್ತಿತರ ಕಾರಣಕ್ಕೆ ಸುದ್ದಿಯಲ್ಲಿದ್ದ ಸಚಿವರ ಮೇಲೆ ಈಗ ಲಂಚ ಬೇಡಿಕೆಯಂತಹ ಗಂಭೀರ ಆರೋಪ ಕೇಳಿಬಂದಿದೆ. ಕೃಷಿ ಸಚಿವರು ಲಂಚಕ್ಕಾಗಿ ಪೀಡಿಸುತ್ತಿದ್ದಾರೆ ಎಂದು ಸ್ವತಃ ಕೃಷಿ ಇಲಾಖೆಯ ಅಧಿಕಾರಿಗಳು ನೇರವಾಗಿ ರಾಜ್ಯಪಾಲರಿಗೆ ಪತ್ರ ಬರೆದು ದೂರು (Complaint to Governor) ನೀಡಿದ್ದಾರೆ. ಇದು ಸರ್ಕಾರಕ್ಕೆ ಮುಜುಗರ ತಂದಿರುವ ಜತೆಗೆ ವಿರೋಧ ಪಕ್ಷಗಳ ಕೈಗೆ ಹೊಸ ಅಸ್ತ್ರವನ್ನು ಕೊಟ್ಟಂತೆ ಆಗಿದೆ. ರಾಜ್ಯಪಾಲರು ಈ ಬಗ್ಗೆ ಕ್ರಮಕ್ಕಾಗಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆದರೆ, ಇದನ್ನು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅಲ್ಲಗಳೆದಿದ್ದರೆ, “ತನಿಖೆ ಮಾಡಿಸೋಣ ಬಿಡಿ” ಎಂದು ಡಿಸಿಎಂ ಡಿಕೆಶಿ ಹೇಳಿದ್ದಾರೆ.
ಇದನ್ನೂ ಓದಿ: Dattatreya Hosabale: ಸಿದ್ಧಾಂತಕ್ಕಾಗಿ ವೈಯಕ್ತಿಕ ದ್ವೇಷ ಸಲ್ಲದು: ದತ್ತಾತ್ರೇಯ ಹೊಸಬಾಳೆ
ಇದೊಂದು ಫೇಕ್ ಲೆಟರ್: ಚಲುವರಾಯಸ್ವಾಮಿ
ಕೃಷಿ ಅಧಿಕಾರಿಗಳಿಂದ ರಾಜ್ಯಪಾಲರಿಗೆ ಪತ್ರ ಬರೆದ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ, ಈ ಸಂಬಂಧ ಜಂಟಿ ಕೃಷಿ ನಿರ್ದೇಶಕರು (ಜೆಡಿ) ಬಳಿ ಈಗ ಮಾತನಾಡಿದ್ದೇನೆ. ನಾನು ಯಾರ ಬಳಿಯೂ ಮಾತನಾಡಿಲ್ಲ. ಇದೊಂದು ಫೇಕ್ ಲೆಟರ್ ಎಂದು ಹೇಳಿದ್ದಾರೆ. ಪಾಪ ಬಹಳ ಹುಡುಕಿ ಹುಡುಕಿ ಏನೇನೋ ಮಾಡುತ್ತಿರುತ್ತಾರೆ. ಹಾಗೇನಾದರೂ ಇದ್ದರೆ ನಮ್ಮ ಇಲಾಖೆಯ ಕಾರ್ಯದರ್ಶಿಗಳಿಗೆ ತನಿಖೆ ಮಾಡಲು ಹೇಳುತ್ತೇನೆ ಎಂದು ಮಂಡ್ಯದಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿ ನೀಡಿದ್ದಾರೆ.
ಇದೊಂದು ಫೇಕ್ ಲೇಟರ್ ಇರಬಹುದು ಎಂದು ಜೆಡಿ ಹೇಳಿದ್ದಾರೆ. ನಮ್ಮಲ್ಲಿ ಆ ರೀತಿಯ ಯಾರೂ ಇಲ್ಲ ಎಂದು ಹೇಳುತ್ತಿದ್ದಾರೆ. ಜೆಡಿ ಅವರು ನಾನು ಯಾರ ಬಳಿ ಹಣ ಕೇಳಿಲ್ಲ ಎನ್ನುತ್ತಿದ್ದಾರೆ. ಈ ಬಗ್ಗೆ ತನಿಖೆ ಮಾಡಿಸುತ್ತೇವೆ. ಮೊದಲು ಇದು ಸತ್ಯನಾ, ಅಸತ್ಯಾನ ಎಂದು ತಿಳಿದು ತನಿಖೆ ಮಾಡಿಸುತ್ತೇವೆ. ಈ ರೀತಿ ನಮ್ಮ ಮೇಲೆ ಆರೋಪ ಮಾಡುತ್ತಿದ್ದರೆ ಹೆಚ್ಚು ಪ್ರಕಾಶಮಾನವಾಗಿರಲು ಸಾಧ್ಯ. ಕಲ್ಲನ್ನು ಕೆತ್ತಿದರೇ ತಾನೇ ವಿಗ್ರಹ ಆಗುವುದು. ವರದಿ ಬಂದ ನಂತರ ಮಾತನಾಡುತ್ತೇನೆ ಎಂದು ಚಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ನನಗೆ ಮಾಹಿತಿ ಬಂದ ತಕ್ಷಣ ಜಂಟಿ ಕೃಷಿ ನಿರ್ದೇಶಕರ ಬಳಿ ಮಾತನಾಡಿದ್ದೇನೆ ನೀವು ಯಾರ ಬಳಿಯಾದರೂ ಹಣ ಕೊಡಿ ಎಂದು ಮಾತನಾಡಿದ್ದೀರಾ ಎಂದು ಕೇಳಿದ್ದೇನೆ. ನಾನು ಯಾವ ಸಹಾಯಕ ಕೃಷಿ ನಿರ್ದೇಶಕರನ್ನೂ ಭೇಟಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಯಾರೋ ನನ್ನನ್ನು ಟಾರ್ಗೆಟ್ ಮಾಡಬೇಕು ಎಂದು ತಿಂಡಿ, ಊಟ ಮಾಡದೇ ಕೆಲಸ ಮಾಡುತ್ತಿದ್ದಾರೆ. ಅದರ ಬಗ್ಗೆ ಬೇಜಾರು ಮಾಡಿಕೊಳ್ಳುವುದಿಲ್ಲ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ.
ತನಿಖೆ ಮಾಡಿಸೋಣ ಬಿಡಿ: ಡಿ.ಕೆ. ಶಿವಕುಮಾರ್
ಸಚಿವ ಚಲುವರಾಯಸ್ವಾಮಿ ವಿರುದ್ಧ ಅಧಿಕಾರಿಗಳ ದೂರಿನ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ತನಿಖೆ ಮಾಡಿಸೋಣ ಬಿಡಿ. ನನ್ನ ವಿರುದ್ಧ ಅಶ್ವಥ್ ನಾರಾಯಣ ತನಿಖೆ ಮಾಡಿಸಿ ಅಂತ ಹೇಳಿದ್ದರು. ಮುನಿರತ್ನ ವಿರುದ್ಧ ಆರೋಪಗಳನ್ನು ತನಿಖೆ ಮಾಡಿಸಿ ಅಂದಿದ್ದರು. ಬಿಬಿಎಂಪಿಯದ್ದು ತನಿಖೆ ಮಾಡಿಸುತ್ತೇವೆ. ರಾಜಕೀಯದಲ್ಲಿ ಪಾಪ ಅವರಿಗೆ ಏಳಕ್ಕೆ ಆರು ಸೀಟು ಗೆದ್ದಿದ್ದು ತಡೆದುಕೊಳ್ಳಲು ಆಗುತ್ತಿಲ್ಲ. ಹೊಟ್ಟೆಕಿಚ್ಚಿಗೆ ಮೆಡಿಸಿನ್ ಇಲ್ಲ. ಎಲ್ಲವನ್ನೂ ತನಿಖೆ ಮಾಡಿಸೋಣ ಎಂದು ಹೇಳಿದ್ದಾರೆ.
ನಾವು ಕೆಂಪಣ್ಣ ಆರೋಪದ ಮೇಲೆ ತಾನೇ ತನಿಖೆ ಮಾಡುತ್ತಾ ಇರೋದು? ಬಿಬಿಎಂಪಿಯಲ್ಲಿ ಕೆಲಸ ಯಾರು ಕೊಟ್ಟರು ಗೊತ್ತಿಲ್ಲ ಟೆಂಡರ್ ಆಗಿಲ್ಲ ಆದರೂ ಕಾಮಗಾರಿ ಮಾಡಿದ್ದಾರೆ. 25 ದಿನಕ್ಕೆ, 15 ದಿನಕ್ಕೆ ಬಿಲ್ ಆಗಿಬಿಡುತ್ತಾ? ಹದಿನೈದೇ ದಿನಕ್ಕೆ ಇಲ್ಲಿ ಕೆಲಸ ಆಗಿಬಿಡುತ್ತಾ? ಅದಕ್ಕಾಗಿಯೇ ಪರಿಶೀಲನೆಗೆ ಅಧಿಕಾರಿಗಳನ್ನು ಹಾಕಿದ್ದೇನೆ. ನಮ್ಮ ಹಳ್ಳಿಗಳಲ್ಲಿ ಮೂರು ವರ್ಷಗಳಿಂದ ಕೆಲಸ ಆಗಿಲ್ಲ. ಇಲ್ಲಿ ಆಗಿಬಿಡುತ್ತದೆಯಾ? ನಮ್ಮ ಜಲಸಂಪನ್ಮೂಲ ಇಲಾಖೆಯಲ್ಲಿ ದುಡ್ಡು ಇರೋದು 600 ಕೋಟಿ ರೂಪಾಯಿ. ಬಿಲ್ ಬಂದಿರೋದು 25 ಸಾವಿರ ಕೋಟಿ ರೂಪಾಯಿಗೆ. ನಾನು ಯಾರಿಗೆ ಅಂತ ಹಣವನ್ನು ಬಿಡುಗಡೆ ಮಾಡಲಿ? ಗುತ್ತಿಗೆದಾರರು ನೊಂದಿದ್ದಾರೆ ಪಾಪ, ನಮಗೂ ಜವಾಬ್ದಾರಿ ಇದೆ. ಇದೇ ಅಶ್ವತ್ಥನಾರಾಯಣ ಸದನದಲ್ಲಿ ತನಿಖೆ ಮಾಡಿಸಿ ಅಂತ ಆಗ್ರಹಿಸಿರಲಿಲ್ವಾ? ಅವರ ನುಡಿಮುತ್ತುಗಳನ್ನು ನಾವು ಕೇಳಲೇಬೇಕಲ್ಲವೇ ಎಂದು ಪರೋಕ್ಷವಾಗಿ ಚಲುವರಾಯಸ್ವಾಮಿ ವಿರುದ್ಧದ ದೂರಿನ ಹಿಂದೆ ರಾಜಕೀಯ ಇದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಏನಿದು ದೂರು?
ಮಂಡ್ಯ ಜಿಲ್ಲೆಯ 7 ಸಹಾಯಕ ಕೃಷಿ ನಿರ್ದೇಶಕರು ನೇರವಾಗಿ ರಾಜಭವನಕ್ಕೆ ದೂರು ಸಲ್ಲಿಸಿದ್ದಾರೆ. ಕೃಷಿ ಸಚಿವರು 6 ರಿಂದ 8 ಲಕ್ಷ ರೂ. ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಅವರ ಕಿರಿಕಿರಿ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ನೇರವಾಗಿ ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಈ ರೀತಿ ಅಧಿಕಾರಿಗಳೇ ನೇರವಾಗಿ ರಾಜಭವನಕ್ಕೆ ದೂರು ಸಲ್ಲಿಸಿರುವುದು ಅತ್ಯಂತ ವಿಶೇಷವಾಗಿದೆ. ಅಷ್ಟೇ ಅಲ್ಲ, ಲಂಚದ ಅನಿಷ್ಟ ಪದ್ಧತಿಗೆ ಕಡಿವಾಣ ಹಾಕದಿದ್ದರೆ ಅಧಿಕಾರಿಗಳು ಕುಟುಂಬ ಸಮೇತ ವಿಷಕುಡಿಯುವುದಾಗಿ ದೂರಿನ ಹೇಳಲಾಗಿದೆ.
ದೂರು ಕೊಟ್ಟವರು ಯಾರು?
ಮಂಡ್ಯ, ಜಿಲ್ಲೆಯ ಮಂಡ್ಯ, ಮಳವಳ್ಳಿ, ಕೃಷ್ಣರಾಜಪೇಟೆ, ಪಾಂಡವಪುರ, ನಾಗಮಂಗಲ, ಶ್ರೀರಂಗಪಟ್ಟಣ ಮತ್ತು ಮದ್ದೂರು ತಾಲೂಕಿನ ಕೃಷಿ ಸಹಾಯಕ ನಿರ್ದೇಶಕರು ಮತ್ತು ಸಿಬ್ಬಂದಿಗಳು ಈ ಅರ್ಜಿಯನ್ನು ಸಲ್ಲಿಸಿದ್ದಾರೆ.
ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಂದ ತಲಾ 6ರಿಂದ 8 ಲಕ್ಷ ರೂ.ಗಳಿಗಾಗಿ ಬೇಡಿಕೆ ಇಡಲಾಗಿದೆ. ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಮೂಲಕ ಒತ್ತಡ ಹೇರಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Spandana Vijay Raghavendra : ಮಂಗಳವಾರ ಮುಂಜಾನೆ ಸ್ಪಂದನಾ ಪಾರ್ಥಿವ ಶರೀರ ಬೆಂಗಳೂರಿಗೆ, ಅಂತಿಮ ದರ್ಶನಕ್ಕೆ ಸಿದ್ಧತೆ
ರಾಜಭವನದಿಂದ ಸರ್ಕಾರಕ್ಕೆ ಪತ್ರ
ರಾಜಭವನವು ಈ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯಪಾಲರ ಕಚೇರಿಯಿಂದ ಸರ್ಕಾರಕ್ಕೆ ಈ ಬಗ್ಗೆ ಪತ್ರ ಬರೆಯಲಾಗಿದೆ. ರಾಜ್ಯಪಾಲರ ಅಧೀನ ಕಾರ್ಯದರ್ಶಿಗಳು ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ಈ ಪತ್ರದ ಬಗ್ಗೆ ಕ್ರಮವಹಿಸುವಂತೆ ಸೂಚಿಸಲಾಗಿದೆ.